Site icon Vistara News

Prajwal Revanna Case: ಕೆ ಆರ್‌ ನಗರ ಸಂತ್ರಸ್ತೆ ಕಿಡ್ನ್ಯಾಪ್‌ ಕೇಸ್‌; ಭವಾನಿ ರೇವಣ್ಣ ಕಾರು ಚಾಲಕನಿಗೆ‌ SIT ಸಮನ್ಸ್

Prajwal Revanna Case SIT summons Bhavani Revanna car driver in KR Nagar victim kidnapped case

ಬೆಂಗಳೂರು: ಹಾಸನ ಸಂಸದ ಪ್ರಜ್ವಲ್‌ ರೇವಣ್ಣ (Prajwal Revanna Case) ಅವರದ್ದು ಎನ್ನಲಾದ ಅಶ್ಲೀಲ ವಿಡಿಯೊ ಕೇಸ್‌ನಲ್ಲಿ ಮೈಸೂರಿನ ಕೆ.ಆರ್.‌ ನಗರ ಸಂತ್ರಸ್ತೆಯನ್ನು ಕಿಡ್ನ್ಯಾಪ್‌ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಯ ತಾಯಿ ಭವಾನಿ ರೇವಣ್ಣ (Bhavani Revanna) ಅವರ ಕಾರು ಚಾಲಕನಿಗೆ ಎಸ್ಐಟಿ ಪೊಲೀಸರಿಂದ ಸಮನ್ಸ್ ಜಾರಿಯಾಗಿದೆ.

ಕಾರು ಚಾಲಕ ಅಜಿತ್‌ಗೆ ಎಸ್ಐಟಿ ಸಮನ್ಸ್ ಜಾರಿ ಮಾಡಿದ್ದು, ವಿಚಾರಣೆಗೆ ಹಾಜರಾಗಲು ಸೂಚಿಸಿದೆ. ಸಂತ್ರಸ್ತೆ ಅಪಹರಣ ಕೇಸ್‌ಗೆ ಸಂಬಂಧಪಟ್ಟಂತೆ ಈಗಾಗಲೇ ಅಜಿತ್‌ಗೆ ಎರಡು ಬಾರಿ ಸಮನ್ಸ್ ಜಾರಿ ಮಾಡಲಾಗಿದೆ. ಆದರೆ, ಆತ ಪತ್ತೆ ಇಲ್ಲದ ಕಾರಣ, ಹೊಳೆನರಸೀಪುರದಲ್ಲಿರುವ ಅಜಿತ್ ನಿವಾಸಕ್ಕೆ ತೆರಳಿ ಸಮನ್ಸ್ ನೀಡಲಾಗಿದೆ.

ಕಿಡ್ನ್ಯಾಪ್‌ ಪ್ರಕರಣ ದಾಖಲಾದ ಬಳಿಕ ಕಾರು ಚಾಲಕ ಅಜಿತ್ ತಲೆಮರೆಸಿಕೊಂಡಿದ್ದು, ಆತನಿಗಾಗಿ ಹುಡುಕಾಟ ನಡೆದಿದೆ. ಕಾರಣ, ಸಂತ್ರಸ್ತೆಯನ್ನು ಈತನೇ ಕಾರಿನಲ್ಲಿ ಕರೆದೊಯ್ದಿದ್ದ ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಅಜಿತ್‌ಗೆ ಸಮನ್ಸ್‌ ಜಾರಿ ಮಾಡಲಾಗಿದೆ.

400 ಮಹಿಳೆಯರ ಮೇಲೆ ಪ್ರಜ್ವಲ್‌ ಮಾಸ್‌ ರೇಪ್‌ ಆರೋಪ; ರಾಹುಲ್ ಗಾಂಧಿ ವಿರುದ್ಧ ಡಿಜಿಗೆ ಜೆಡಿಎಸ್‌ ದೂರು

ನಾನೂರು ಮಹಿಳೆಯರ ಮೇಲೆ ಪ್ರಜ್ವಲ್ ರೇವಣ್ಣ ಮಾಸ್ ರೇಪ್ ಮಾಡಿದ್ದಾರೆ ಎಂದು ಬಹಿರಂಗ ಸಭೆಗಳ ಭಾಷಣದಲ್ಲಿ ಹೇಳಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ವಿರುದ್ಧ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಜೆಡಿಎಸ್ (JDS Karnataka) ದೂರು ನೀಡಿದೆ. ಈ ಸಂಬಂಧ ರಾಹುಲ್ ಗಾಂಧಿ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ಪಕ್ಷ ಒತ್ತಾಯ ಮಾಡಿದೆ.

ಜವಾಬ್ದಾರಿಯುತ ಸ್ಥಾನದಲ್ಲಿರುವ ರಾಹುಲ್ ಗಾಂಧಿ ಅವರು ಶಿವಮೊಗ್ಗ ಹಾಗೂ ರಾಯಚೂರಿನಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಬಹಿರಂಗ ಸಭೆಗಳಲ್ಲಿ ಮಾಸ್ ರೇಪ್ ಬಗ್ಗೆ ಹೇಳಿದ್ದರು. ಇದೇ ಮಾಹಿತಿಯನ್ನು ಮಾಧ್ಯಮಗಳ ಮುಂದೆಯೂ ನೀಡಿದ್ದಾರೆ. ಹೀಗಾಗಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ರಾಹುಲ್‌ ಗಾಂಧಿಗೆ ಎಸ್‌ಐಟಿ ಸಮನ್ಸ್ ಜಾರಿ ಮಾಡಬೇಕು ಎಂದು ಜೆಡಿಎಸ್ ಒತ್ತಾಯ ಮಾಡಿದೆ.

ಜೆಡಿಎಸ್ ನಗರ ಘಟಕದ ಅಧ್ಯಕ್ಷ ಎಚ್.ಎಂ. ರಮೇಶ್ ಗೌಡ, ವಿಧಾನ ಪರಿಷತ್ ಸದಸ್ಯ ಕೆ.ಎ. ತಿಪ್ಪೇಸ್ವಾಮಿ, ಮಂಜೇಗೌಡ, ಪರಿಷತ್ ಮಾಜಿ ಸದಸ್ಯ ಚೌಡರೆಡ್ಡಿ ತೂಪಲ್ಲಿ, ಜೆಡಿಎಸ್ ಕಾನೂನು ಘಟಕದ ರಾಜ್ಯಾಧ್ಯಕ್ಷ ಎ.ಪಿ. ರಂಗನಾಥ್, ಬೆಂಗಳೂರು ನಗರದ ಘಟಕದ ಮಹಾ ಪ್ರಧಾನ ಕಾರ್ಯದರ್ಶಿ ಎಸ್.ರಮೇಶ್ ಅವರಿದ್ದ ನಿಯೋಗ ಬುಧವಾರ ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್ ಅವರನ್ನು ಭೇಟಿಯಾಗಿ ದೂರು ಸಲ್ಲಿಸಿದರು.

ದೂರಿನಲ್ಲಿ ಇನ್ನೇನು ಇದೆ?

ಎಚ್.ಎಂ. ರಮೇಶ್ ಗೌಡ ಸಹಿ ಹಾಕಿರುವ ದೂರಿನಲ್ಲಿ ರಾಹುಲ್ ಗಾಂಧಿ ವಿರುದ್ಧ ಅನೇಕ ಗಂಭೀರ, ಗುರುತರ ಆರೋಪಗಳನ್ನು ಮಾಡಲಾಗಿದೆ.

ಕಾಂಗ್ರೆಸ್ ನಾಯಕ, ವಯನಾಡು ಲೋಕಸಭಾ ಕ್ಷೇತ್ರದ ಸಂಸದ ರಾಹುಲ್ ಗಾಂಧಿ ಅವರು, ಪ್ರಜ್ವಲ್ ರೇವಣ್ಣ 400 ಮಹಿಳೆಯರ ಮೇಲೆ ಮಾಸ್ ರೇಪ್ ಮಾಡಿ ಅದನ್ನು ವಿಡಿಯೊ ಚಿತ್ರೀಕರಣ ಮಾಡಿಕೊಂಡಿದ್ದಾರೆ. ಇದು ಕೇವಲ ಅತ್ಯಾಚಾರ ಅಷ್ಟೇ ಅಲ್ಲ, ಇದೊಂದು ಸಾಮೂಹಿಕ ಅತ್ಯಾಚಾರ. ಒಬ್ಬ ಮಾಸ್ ರೇಪಿಸ್ಟ್ ಪರ ಪ್ರಧಾನಿ ನರೇಂದ್ರ ಮೋದಿ ಅವರು ಮತ ಯಾಚಿಸಿರುವುದು ಇಡೀ ಜಗತ್ತಿಗೆ ಗೊತ್ತಾಗಿದೆ ಎಂದು ಇದೇ ಮೇ 2ರಂದು ಹೇಳಿಕೆ ನೀಡಿದ್ದರು.

ರಾಹುಲ್ ಗಾಂಧಿ ಅವರ ಹೇಳಿಕೆ, ಭಾಷಣ ಎಲ್ಲವೂ ವಿದ್ಯುನ್ಮಾನ ಮಾಧ್ಯಮಗಳಲ್ಲಿ ಪ್ರಸಾರವಾಗಿದೆ. ಮುದ್ರಣ ಮಾಧ್ಯಮದಲ್ಲಿಯೂ ವರದಿಯಾಗಿದೆ ಎಂದು ಪೊಲೀಸ್ ಮಹಾ ನಿರ್ದೇಶಕರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದ್ದು, ಅದಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಸಲ್ಲಿಸಿದೆ.

400 ಮಹಿಳೆಯರ ಮಾಹಿತಿ ರಾಹುಲ್‌ ಗಾಂಧಿಗೆ ಇದೆ!

ನೊಂದ ಮಹಿಳೆಯರ ನ್ಯಾಯ ಕೊಡಿಸುವುದನ್ನು ಕಡೆಗಣಿಸಿ ಒಬ್ಬ ಜನಪ್ರತಿನಿಧಿಯಾಗಿ ರಾಹುಲ್ ಗಾಂಧಿ ಅವರು ಇಂಥ ಹೇಳಿಕೆ ನೀಡಿರುವುದು ಕಾನೂನು ಉಲ್ಲಂಘನೆ ಆಗಿರುತ್ತದೆ. ನಾನೂರು ಮಹಿಳೆಯರ ಮೇಲೆ ಮಾಸ್ ರೇಪ್ ಆಗಿರುವ ಬಗ್ಗೆ ರಾಹುಲ್ ಗಾಂಧಿ ಅವರಿಗೆ ಎಲ್ಲ ಮಾಹಿತಿ ಇದೆ. ಜತೆಗೆ ಅತ್ಯಾಚಾರಕ್ಕೆ ತುತ್ತಾದ ಅಷ್ಟೂ ಮಹಿಳೆಯರ ಮಾಹಿತಿ ಅವರಲ್ಲಿ ಇದೆ ಎನ್ನುವುದು ಅವರದೇ ಹೇಳಿಕೆಯಿಂದ ಸ್ಪಷ್ಟವಾಗಿದೆ. ಈ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಅವರ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 1860ರ ಅಡಿಯಲ್ಲಿ ಕೇಸ್ ದಾಖಲಿಸಬೇಕು ಎಂದು ಪೊಲೀಸ್ ಮಹಾ ನಿರ್ದೇಶಕರಲ್ಲಿ ಜೆಡಿಎಸ್ ಪಕ್ಷ ಒತ್ತಾಯ ಮಾಡಿದೆ.

ರಾಜ್ಯ ಸರ್ಕಾರವೂ ಈ ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡ (SIT) ರಚನೆ ಮಾಡಿದ್ದು, ಕೂಡಲೇ ಈ ತಂಡವು ರಾಹುಲ್ ಗಾಂಧಿ ಅವರಿಗೆ ಸಮನ್ಸ್ ಜಾರಿ ಮಾಡಿ ಇಲ್ಲಿಗೆ ಕರೆಸಬೇಕು. ನಾನೂರು ಮಹಿಳೆಯರು ಎಂದು ತಪ್ಪು ಮಾಹಿತಿ ನೀಡಿ, ಸಮಾಜಕ್ಕೆ ಕೆಟ್ಟ ಸಂದೇಶ ಹೋಗುವಂತೆ ಮಾಡಿದ ಅವರ ವಿರುದ್ಧ ಕೂಡಲೇ ಸೆಕ್ಷನ್ 202, 1860ರ ಅಡಿಯಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಜೆಡಿಎಸ್ ಆಗ್ರಹಪಡಿಸಿದೆ.

ಇದನ್ನೂ ಓದಿ: Nandini Milk: ಹಾಲು ಉತ್ಪಾದಿಸಿದ ರೈತರಿಗಿಲ್ಲ ಹಣ; ವಿದೇಶಿ ಕ್ರಿಕೆಟ್‌ ಟೀಂಗೆ ಪ್ರಾಯೋಜಕತ್ವ: ಸರ್ಕಾರದ ವಿರುದ್ಧ ಅಶೋಕ್‌ ಗರಂ

ಅಲ್ಲದೆ, ಪೆನ್ ಡ್ರೈವ್ ಹಂಚಿಕೆಯ ಬಗ್ಗೆಯೂ ಜೆಡಿಎಸ್ ಡಿಜಿ ಅವರ ಜತೆ ಮಾತುಕತೆ ನಡೆಸಿತು. ಎಸ್‌ಐಟಿ ಏಕಪಕ್ಷೀಯವಾಗಿ ತನಿಖೆ ನಡೆಸುತ್ತಿದೆ. ಪ್ರಜ್ವಲ್ ಪ್ರಕರಣಕ್ಕೆ ಸಂಬಂಧಿಸಿ ನಮ್ಮ ಪಕ್ಷದ ಕಾರ್ಯಕರ್ತರಿಗೆ ವಿನಾಕಾರಣ ಕಿರುಕುಳ ನೀಡುತ್ತಿದೆ. ಆದರೆ, ಪೆನ್ ಡ್ರೈವ್ ಹಂಚಿಕೆ ಆರೋಪಿಗಳ ಬಗ್ಗೆ ಮೌನ ವಹಿಸಿದೆ. ನ್ಯಾಯಾಲಯ ಜಾಮೀನು ನಿರಾಕರಿಸಿದ್ದರೂ ಈವರೆಗೆ ಅವರನ್ನು ಎಸ್ ಐಟಿ ಬಂಧನ ಮಾಡಿಲ್ಲ ಎಂದು ನಿಯೋಗ ದೂರಿತು.

Exit mobile version