ಬೆಂಗಳೂರು: ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ವಿದೇಶಕ್ಕೆ ಪರಾರಿಯಾಗಿದ್ದ ಹಾಸನ ಸಂಸದ ಪ್ರಜ್ವಲ್ ರೇವಣ್ಣ (Prajwal Revanna Case) ಒಂದು ತಿಂಗಳ ಬಳಿಕ ಕೊನೆಗೂ ಬೆಂಗಳೂರಿನತ್ತ ಆಗಮಿಸುತ್ತಿದ್ದಾರೆ. ಜರ್ಮನಿಯ ಮ್ಯೂನಿಕ್ ವಿಮಾನ ನಿಲ್ದಾಣದಲ್ಲಿ (Munich Airport) ವಿಮಾನ ಹತ್ತಿರುವ ಪ್ರಜ್ವಲ್ ರೇವಣ್ಣ ಇಂದು ರಾತ್ರಿ (ಮೇ 31) 12.30ಕ್ಕೆ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. ಬೆಂಗಳೂರಿಗೆ ಆಗಮಿಸುತ್ತಲೇ ಅವರನ್ನು ಎಸ್‌ಐಟಿ ಅಧಿಕಾರಿಗಳು ವಶಪಡಿಸಿಕೊಳ್ಳಲಾಗುತ್ತದೆ ಎಂದು ತಿಳಿದುಬಂದಿದೆ.
ಏರ್‌ಪೋರ್ಟ್‌ಗೆ ಎಸ್‌ಐಟಿ ಅಧಿಕಾರಿಗಳ ಲಗ್ಗೆ
ಬೆಂಗಳೂರು ವಿಮಾನ ನಿಲ್ದಾಣಕ್ಕೆ ಈಗಾಗಲೇ ಎಸ್‌ಐಟಿ ಅಧಿಕಾರಿಗಳು ತೆರಳಿದ್ದಾರೆ. ಇಮಿಗ್ರೇಷನ್ ಡೆಸ್ಕ್ ಬಳಿ ಎಸ್‌ಐಟಿ ಅಧಿಕಾರಿಗಳು ತೆರಳಿದ್ದಾರೆ. ವಿಮಾನ ಲ್ಯಾಂಡಿಂಗ್ ಕುರಿತು, ವಿಮಾನದಲ್ಲಿ ಯಾರಿದ್ದಾರೆ ಎಂಬುದು ಸೇರಿ ವಿವಿಧ ಮಾಹಿತಿಯನ್ನು ಎಸ್‌ಐಟಿ ಅಧಿಕಾರಿಗಳು ಪಡೆಯುತ್ತಿದ್ದಾರೆ. ಪ್ರಜ್ವಲ್ ರೇವಣ್ಣ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಲೇ ಅವರ ಡಿಪ್ಲೋಮ್ಯಾಟಿಕ್ ಪಾಸ್‌ಪೋರ್ಟ್‌ಗೆ ಇಮಿಗ್ರೇಷನ್ ಅಧಿಕಾರಿಗಳು ಸ್ಟ್ಯಾಂಪ್ ಹಾಕುತ್ತಾರೆ. ಸ್ಟ್ಯಾಂಪ್ ಹಾಕಿ, ಪರಿಶೀಲನೆ ಮುಗಿದ ಬಳಿಕವೇ ಎಸ್‌ಐಟಿ ಅಧಿಕಾರಿಗಳು ಪ್ರಜ್ವಲ್ ರೇವಣ್ಣ ಅವರನ್ನು ವಶಕ್ಕೆ ಪಡೆಯಲಿದ್ದಾರೆ ಎಂದು ತಿಳಿದುಬಂದಿದೆ.
ಪ್ರಜ್ವಲ್ ಕರೆದೊಯ್ಯಲು ಎಸ್‌ಐಟಿ 4 ಪ್ಲಾನ್
ಪ್ರಜ್ವಲ್ ರೇವಣ್ಣ ಬೆಂಗಳೂರಿಗೆ ಆಗಮಿಸುತ್ತಲೇ ಮಹಿಳೆಯರ ಪ್ರತಿಭಟನೆ, ಬೆಂಬಲಿಗರ ಘೋಷಣೆ, ಪತ್ರಕರ್ತರು ಹಾಗೂ ವಕೀಲರ ಕಣ್ತಪ್ಪಿಸಿ ಕರೆದುಕೊಂಡು ಹೋಗಲು ಎಸ್‌ಐಟಿ 4 ಪ್ಲಾನ್ ಮಾಡಿದೆ ಎಂದು ತಿಳಿದುಬಂದಿದೆ. ಟರ್ಮಿನಲ್ 2 ಆಗಮನದ ಗೇಟ್, ಟರ್ಮಿನಲ್ 2 ವಿಐಪಿ ಎಕ್ಸಿಟ್ ಗೇಟ್, ಟರ್ಮಿನಲ್ 2 ಒಳಭಾಗದಿಂದ ಟರ್ಮಿನಲ್ 1ರ ಮೂಲಕ ಹೊರತರುವುದು ಇಲ್ಲವೇ ಟರ್ಮಿನಲ್ 1 ಬಳಿಯ ಆಲ್ಫಾ ಗೇಟ್‌ನಿಂದ ಪ್ರಜ್ವಲ್ ರೇವಣ್ಣ ಅವರನ್ನು ಕರೆದುಕೊಂಡು ಹೋಗಲು ಎಸ್‌ಐಟಿ ಯೋಜನೆ ರೂಪಿಸಿದೆ ಎಂದು ಮೂಲಗಳು ತಿಳಿಸಿವೆ.
ನಾಳೆ ಜಾಮೀನು ಅರ್ಜಿ ವಿಚಾರಣೆ
ಲೈಂಗಿಕ ದೌರ್ಜನ್ಯ, ಸಂತ್ರಸ್ತೆಯ ಅಪಹರಣ ಸೇರಿ ಎಫ್‌ಐಆರ್ ದಾಖಲಾಗಿರುವ ಮೂರು ಪ್ರಕರಣಗಳಲ್ಲಿ ನಿರೀಕ್ಷಣಾ ಜಾಮೀನು ನೀಡಬೇಕು ಎಂಬುದಾಗಿ ಪ್ರಜ್ವಲ್ ರೇವಣ್ಣ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಮೇ 31ರಂದು ಅರ್ಜಿಯ ವಿಚಾರಣೆ ನಡೆಯಲಿದೆ. ಇನ್ನು, ಭವಾನಿ ರೇವಣ್ಣ ಸಲ್ಲಿಸಿರುವ ನಿರೀಕ್ಷಣಾ ಜಾಮೀನು ಅರ್ಜಿಯ ಕುರಿತ ತೀರ್ಪು ಕೂಡ ಶುಕ್ರವಾರವೇ ಹೊರಬೀಳಲಿದೆ. ಇದರಿಂದಾಗಿ ಶುಕ್ರವಾರವು ಎಚ್.ಡಿ.ರೇವಣ್ಣ ಕುಟುಂಬಕ್ಕೆ ಬಿಗ್ ಡೇ ಆಗಿದೆ.
ಇದನ್ನೂ ಓದಿ: Prajwal Revanna Case: ಪ್ರಜ್ವಲ್ ರೇವಣ್ಣ ಬಂಧಿಸಲು ಆಗ್ರಹಿಸಿ ಹಾಸನದಲ್ಲಿ ಬೃಹತ್ ಪ್ರತಿಭಟನೆ