ಬೆಂಗಳೂರು: ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣದಿಂದ (Prajwal Revanna Case) ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಸಾಕಷ್ಟು ಇರಿಸುಮುರಿಸು ಉಂಟಾಗಿದೆ. ಪದ್ಮನಾಭನಗರದ ನಿವಾಸದ ಗೇಟ್ ಮುಂಭಾಗ ಪ್ರಕರಣದ ಬಗ್ಗೆ ಪ್ರಶ್ನಿಸಿದ ಮಾಧ್ಯಮಗಳ ವಿರುದ್ಧ ಗರಂ ಆಗಿರುವ ಅವರು, ಪದೇಪದೇ ಏನು ಕೇಳುತ್ತೀರಿ, ನಿಮಗೆ ಏನು ಕೆಲಸ, ಇಲ್ಲಿ ಯಾಕೆ ಬಂದಿದ್ದೀರಾ? ಸುದ್ದಿ ಬಿಡುವವರ ಜತೆ ಹೋಗಿ ಎಂದು ಕಿಡಿಕಾರಿದ್ದಾರೆ.
ನೆನ್ನೆ ಡ್ರೈವರ್ ಒಬ್ಬ ವಿಡಿಯೋ ಮಾಡಿ ಹೇಳಿದನಲ್ಲಾ? ಯಾರು ಆ ವಿಡಿಯೊ ಮಾಡಿದ್ದು? ಇಲ್ಲಿ ಚಿಲ್ಲರೆ ಅಣ್ಣ ತಮ್ಮ ಇದ್ದಾರಲ್ಲವೇ? ಅವರು ಏನ್ ಹೇಳಿದರು? ಕುಮಾರಸ್ವಾಮಿ ಬಿಟ್ಟಿದ್ದು ಎನ್ನುತ್ತಾರೆ. ಡ್ರೈವರ್ ಕಾರ್ತಿಕ್ ಎಲ್ಲಿದ್ದಾನೆ ಈಗ? ಮಲೇಷ್ಯಾದಲ್ಲಿ ಇದಾನೆ, ಆತನನ್ನು ಮಲೇಷ್ಯಾಗೆ ಕಳುಹಿಸಿದ್ದು ಯಾರು ಎಂದು ಪ್ರಶ್ನಿಸಿದ್ದಾರೆ.
ಆ ಡ್ರೈವರ್ ಕಾರ್ತಿಕ್ ಏನು ಹೇಳಿಕೆ ಕೊಟ್ಟಾ? ದೇವರಾಜೇಗೌಡ ಕೈಯಲ್ಲಿ ಪೆನ್ ಡ್ರೈವ್ ಕೊಟ್ಟಿದ್ದೆ ಅಂತ ಹೇಳಿದ್ದ. ಇಂದು ಬೆಳಗ್ಗೆ ಈ ಚಿಲ್ಲರೆ ಅಣ್ಣ ತಮ್ಮ ಇದಾರಲ್ವಾ (ಡಿಕೆಶಿ ಹಾಗೂ ಡಿ.ಕೆ ಸುರೇಶ್), ಕುಮಾರಸ್ವಾಮಿನೇ ಬಿಟ್ಟಿರಬೇಕು ಅಂತ ಹೇಳಿಕೆ ಕೊಟ್ಟಿದ್ದಾರೆ. ಕುಮಾರಸ್ವಾಮಿಯನ್ನು ಈ ಮೊದಲು ದೇವರಾಜೇಗೌಡ ಭೇಟಿಯಾಗಿದ್ದ ಎಂದು ಈ 420ಗಳು ಹೇಳಿದ್ದಾರೆ. ಹಾಗಾದರೆ ಎಲ್ಲಿದ್ದಾನೆ ಈ ಕಾರ್ತಿಕ್? ಯಾರು ಕಳುಹಿಸಿದರು? ಎಲ್ಲಿಂದ ವಿಡಿಯೋ ಮಾಡಿ ಬಿಟ್ಟದ್ದಾನೆ, ಅದನ್ನು ಮೊದಲು ತಿಳಿದುಕೊಳ್ಳಿ. ನನ್ನ ಕೆಣಕಿದ್ದಾರೆ, ಸುಮ್ಮನೆ ಬಿಡಲ್ಲ ನಾನು ಎಂದು ಡಿಕೆ ಬ್ರದರ್ಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ | Prajwal Revanna Case: ಸಿಂಗಾಪುರ ಮಾಧ್ಯಮಗಳಲ್ಲೂ ಪ್ರಜ್ವಲ್ ರೇವಣ್ಣ ಕೇಸ್ ಸದ್ದು!
ವಿದೇಶಕ್ಕೆ ಹಾರಿದ್ರಾ ಪ್ರಜ್ವಲ್ ಮಾಜಿ ಕಾರು ಚಾಲಕ ಕಾರ್ತಿಕ್?
ಎಸ್‌ಐಟಿಯಿಂದ ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣ ತನಿಖೆ ವೇಗ ಪಡೆದ ಬೆನ್ನಲ್ಲೇ ಪ್ರಜ್ವಲ್ ಮಾಜಿ ಕಾರು ಚಾಲಕ, ಪೆನ್ ಡ್ರೈವ್ ಕಿಂಗ್ ಪಿನ್ ಕಾರ್ತಿಕ್ ವಿದೇಶಕ್ಕೆ ಹಾರಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಎಸ್‌ಐಟಿ ತನಿಖೆಗೆ ಹಾಜರಾಗುತ್ತಿದ್ದೇನೆ ಎಂದು ಕಾರ್ತಿಕ್ ವಿಡಿಯೊ ಮಾಡಿ ಹರಿಬಿಟ್ಟಿದ್ದರು. ಆದರೆ, ಈಗ ತನಿಖೆ ದಿಕ್ಕು ತಪ್ಪಿಸಲು ಕಾರ್ತಿಕ್ ವಿಡಿಯೊ ಮಾಡಿದ್ದರಾ ಎಂಬ ಅನುಮಾನಗಳು ಮೂಡಿವೆ.
ವಕೀಲ ದೇವರಾಜೇಗೌಡರಿಗೆ ಮಾತ್ರ ವಿಡಿಯೋ ನೀಡಿದ್ದಾಗಿ ಕಾರ್ತಿಕ್ ಹೇಳಿಕೆ ಕೊಟ್ಟಿದ್ದರು. ಆದರೆ ನನಗಿಂತ ಮೊದಲೇ ಡಿ.ಕೆ.ಶಿವಕುಮಾರ್‌ಗೆ ಕಾರ್ತಿಕ್ ವಿಡಿಯೊ ತಲುಪಿಸಿದ್ದ ಎಂದು ವಕೀಲ ಹೇಳಿದ್ದರು. ಈ ಮೂಲಕ ವಿಡಿಯೊ ಹರಿಬಿಟ್ಟ ಆರೋಪದಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ.
ಪ್ರಜ್ವಲ್ ಅವರದ್ದು ಎನ್ನಲಾದ ವಿಡಿಯೊವನ್ನು ಪ್ರಥಮವಾಗಿ ತನ್ನ ಬಳಿಯೇ ಕಾರ್ತಿಕ್ ಇಟ್ಟುಕೊಂಡಿದ್ದರು. ಇದೀಗ ವೀಡಿಯೊ ವೈರಲ್ ಆದ ನಂತರ ಎಸ್ಕೇಪ್ ಆಗಲು ಯತ್ನಿಸಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ. ಚುನಾವಣೆ ಮತದಾನದ ಸಂದರ್ಭದಲ್ಲೇ ವಿಡಿಯೊಗಳು ವೈರಲ್ ಆಗಿದ್ದವು. ಹೀಗಾಗಿ ಯಾರು ವಿಡಿಯೊ ಹರಿಬಿಟ್ಟರು ಎಂಬ ಬಗ್ಗೆ ತಿಳಿಯಲು ಎಸ್‌ಐಟಿ ತನಿಖೆ ತೀವ್ರಗೊಳಿಸಿದೆ.