ಬೆಂಗಳೂರು: ಹಾಸನ ಪೆನ್‌ಡ್ರೈವ್ ಪ್ರಕರಣಕ್ಕೆ (Prajwal Revanna Case) ಸಂಬಂಧಿಸಿ ಇಬ್ಬರು ಆಪ್ತರನ್ನು ಬಂಧಿಸಿರುವ ಬಗ್ಗೆ ಮಾಜಿ ಶಾಸಕ ಪ್ರೀತಂ ಗೌಡ ಅವರು ಮೊದಲ ಬಾರಿ ಮಾಧ್ಯಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ನಮಗೂ ವಿಡಿಯೊಗೂ ಸಂಬಂಧ ಇಲ್ಲ, ನೆನ್ನೆ ಅಮಾಯಕರ ಬಂಧನ ಆಗಿದೆ. ಹಾಸನದಲ್ಲಿ ಯುವಕರಿಂದ ಮುದುಕರವರೆಗೆ ಎಲ್ಲರ ಬಳಿಯೂ ವಿಡಿಯೊಗಳಿವೆ. ಪೆನ್‌ಡ್ರೈವ್ ಇದೆ, ವಿಡಿಯೊ ಇದೆ ಅಂತ ವಶಕ್ಕೆ ತೆಗೆದುಕೊಳ್ಳುತ್ತಾ ಹೋದರೆ ಹಾಸನದಲ್ಲಿ ಅಂತಹ 1.5 ಲಕ್ಷ ಜನರನ್ನು ವಶಕ್ಕೆ ತೆಗೆದುಕೊಳ್ಳಬೇಕಾಗುತ್ತದೆ ಎಂದು ಮಾಜಿ ಶಾಸಕ ಪ್ರೀತಂ ಗೌಡ ತಿಳಿಸಿದ್ದಾರೆ.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಾಸನದಲ್ಲಿ ಹೀಗಾಗಬಾರದಿತ್ತು ಎಂದು ಹಲವರು ಹೇಳುತ್ತಾರೆ. ನಾನು ಕೂಡ ವಿಡಿಯೊ ಸಿಕ್ಕಿದರೆ ಸರ್ಕ್ಯುಲೇಟ್ ಮಾಡಬೇಡಿ, ಇಟ್ಟುಕೊಳ್ಳಬೇಡಿ, ಅದು ನೀಚ ಕೆಲಸ ಎಂದು ಹೇಳುತ್ತಿರುತ್ತೇನೆ. ನಮಗೆ ಜವಾಬ್ದಾರಿ ಇದೆ, ವಿಡಿಯೊ ಹಂಚಬೇಡಿ, ಡಿಲೀಟ್ ಮಾಡಿ ಎಂತಲೇ ನಮ್ಮ ಕಾರ್ಯಕರ್ತರಿಗೂ ಹೇಳಿದ್ದೀನಿ ಎಂದು ಹೇಳಿದರು.
ಇದನ್ನೂ ಓದಿ | Prajwal Revanna Case: ಪ್ರಜ್ವಲ್ ಪೆನ್‌ಡ್ರೈವ್ ಕೇಸ್; ಸಿಬಿಐಗೆ ಏಕೆ ಕೊಡಲ್ಲ ಎಂದು ಕಾರಣ ಬಿಚ್ಚಿಟ್ಟ ಸಿಎಂ ಸಿದ್ದರಾಮಯ್ಯ
ಹಾಸನದಲ್ಲಿ ಬಹಳ ಜನರ ಬಳಿ ವಿಡಿಯೊ ಹರಿದಾಡುತ್ತಿದೆ. ವಿಡಿಯೊ ಇದ್ದವರನ್ನೆಲ್ಲ ಬಂಧನ ಮಾಡಕ್ಕಾಗುತ್ತಾ? ಚೇತನ್ ಗೌಡ ಬೇರೆ, ಚೇತನ್ ಬೇರೆ. ನಮ್ಮ ಕಚೇರಿಯಲ್ಲಿ 24 ವರ್ಷದ ಆ ಯುವಕ ಇದ್ದ, ಆತ ಅಮಾಯಕ. ಅವನ ಬಳಿ ಹೇಗೋ ವಿಡಿಯೋ ಬಂದಿರುತ್ತೆ, ಅದೇ ಅಪರಾಧ ಅಂದರೆ, ಹಾಸನದಲ್ಲಿ ಯುವಕರಿಂದ ಮುದುಕರವರೆಗೆ ಎಲ್ಲರ ಬಳಿಯೂ ಇದೆ. ವಿಡಿಯೊ, ಪೆನ್‌ಡ್ರೈವ್ ಇದೆ ಅನ್ನೋದೇ ಮಾನದಂಡವಾದರೆ ವಿಡಿಯೊ ಇರೋರೆಲ್ಲ ತಪ್ಪಿತಸ್ಥರಾ ಎಂದು ಪ್ರಶ್ನಿಸಿದ್ದಾರೆ.
ಏ.23 ರಂದು ಲಾಯರ್ ಪೆನ್‌ಡ್ರೈವ್ ತಂದು ಕೊಟ್ಟರು. ಹಾಗಂತ ಆ ಲಾಯರ್ ಮೇಲೆ ಕೇಸ್ ಹಾಕಲು ಆಗುತ್ತಾ? ಎಲೆಕ್ಷನ್ ಏಜೆಂಟ್ ಪೆನ್‌ಡ್ರೈವ್ ಸಿಕ್ಕಿತು ಎಂದು ತಂದುಕೊಟ್ಟರು, ಹಾಗಂತ ಅವರ ಮೇಲೂ ಕೇಸ್ ಮಾಡಕ್ಕಾಗುತ್ತಾ? ಆ ರೀತಿಯಾದರೆ ಹದಿನೈದು ಲಕ್ಷ ಜನರ ಮೇಲೆ ಕೇಸ್ ಹಾಕಬೇಕಾಗುತ್ತದೆ. ಈ ವಿಚಾರದಲ್ಲಿ ಅಮಾಯಕರು ಬಂಧನ ಆಗಬಾರದು ಎಂದು ತಿಳಿಸಿದ್ದಾರೆ.
ನನ್ನನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಹೇಳಲ್ಲ, ಆದರೆ ತನಿಖೆ ದಿಕ್ಕು ಸರಿಯಾಗಿ ನಡೆಯಲಿ. ಪ್ರಜ್ವಲ್ ಪ್ರಕರಣದಲ್ಲಿ ನನ್ನದು ಯಾವಾಗಲೂ ನೋ ಕಾಮೆಂಟ್. ವಿಡಿಯೊ ಬಗ್ಗೆ ಮೊದಲು ಯಾರು ಮಾಹಿತಿ ಕೊಟ್ಟರೋ ಅವರನ್ನೇ ಕೇಳಲಿ. ಯಾರು ಮಾಹಿತಿ ಕೊಟ್ಟು? ವಿಡಿಯೊ ಮಾಡಿಕೊಂಡವರು ಯಾರು? ಎಂಬುವುದು ತಿಳಿಯಬೇಕು. ಒಂದು ವರ್ಷದಿಂದಲೇ ವಿಡಿಯೊ ಹರಿದಾಡುತ್ತಿದೆ ಎಂದು ಹೇಳಲಾಗುತ್ತಿದೆ. ಒಂದು ವರ್ಷದ ಹಿಂದೆಯೇ ಕ್ರಮ ಕೈಗೊಳ್ಳಬೇಕಿತ್ತು. ಈಗ ಚರ್ಚೆ ಮಾಡಿದರೆ ಏನು ಪ್ರಯೋಜನ? ಸಂತ್ರಸ್ತರ ಬಗ್ಗೆಯೂ ಯೋಚಿಸಬೇಕು. ಯಾವ ದಿಕ್ಕಿನಲ್ಲಿ ತನಿಖೆ ಆಗಬೇಕೋ ಆ ದಿಕ್ಕಿನಲ್ಲಿ ಆಗಲಿ ಎಂದು ಹೇಳಿದರು.
ಇದನ್ನೂ ಓದಿ | Prajwal Revanna Case: ಪೆನ್ ಡ್ರೈವ್ ಹಂಚಿಕೆ ಆರೋಪ ಮಾಡಿದ್ದ ನವೀನ್ ಗೌಡ ಮೇಲೆ ಶಾಸಕ ಮಂಜು ದೂರು
ಹಾಸನದಲ್ಲಿ ಇಂಥ ಪ್ರಕರಣ ಆಗಬಾರದಿತ್ತು, ಆಗಿ ಹೋಗಿದೆ. ಎಲ್ಲರೂ ಸಾಮಜಿಕ ಬದ್ಧತೆ ತೋರಿಸಬೇಕು. ಯಾರೂ ಅಶ್ಲೀಲ ವಿಡಿಯೊ ಹಂಚಬಾರದು ಎಂದು ಪ್ರೀತಂ ಗೌಡ ತಿಳಿಸಿದ್ದಾರೆ.