Site icon Vistara News

Pralhad Joshi: ರಾಜ್ಯದಲ್ಲಿ ಹತ್ಯೆ, ಆತ್ಮಹತ್ಯೆಗಳೇ ಅಧಿಕ, ಅಭಿವೃದ್ಧಿ ಸಮಾಧಿ: ಪ್ರಲ್ಹಾದ್‌ ಜೋಶಿ ಟೀಕೆ

Pralhad Joshi

ಹುಬ್ಬಳ್ಳಿ: ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತದಲ್ಲಿ ಹತ್ಯೆ, ಆತ್ಮಹತ್ಯೆ ಕೃತ್ಯಗಳೇ ಅಧಿಕವಾಗಿದ್ದು, ಅಭಿವೃದ್ಧಿ ಸಮಾಧಿಯಾಗಿದೆ. ರಾಜ್ಯದಲ್ಲಿ ಅಪರಾಧ ಪ್ರಕರಣಗಳು ತೀವ್ರವಾಗಿವೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಬರೋಬ್ಬರಿ 490 ಕೊಲೆಗಳಾಗಿವೆ. 600 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಆಕ್ರೋಶ ವ್ಯಕ್ತಪಡಿಸಿದರು.

ಬಿಹಾರ ಪ್ರಚಾರಕ್ಕೆ ತೆರಳಿದ್ದ ಸಚಿವರು ಭಾನುವಾರ ಹುಬ್ಬಳ್ಳಿಗೆ ಬರುತ್ತಲೇ ನೇರ ಅಂಜಲಿ ಮನೆಗೆ ತೆರಳಿ ಕುಟುಂಬಕ್ಕೆ ಸಾಂತ್ವನ ಹೇಳಿ, ಸರ್ಕಾರದ ವಿರುದ್ಧ ಹರಿ ಹಾಯ್ದರು. ಹುಬ್ಬಳ್ಳಿಯಲ್ಲಿ ನೇಹಾ ಹತ್ಯೆ ಬಳಿಕ ಈಗ ಮತ್ತೊಬ್ಬ ಯುವತಿ ಭೀಕರವಾಗಿ ಕೊಲೆಯಾಗಿದ್ದಾಳೆ. ಅಂಜಲಿ ಅಜ್ಜಿ ಮತ್ತು ‌ಸಹೋದರಿಯರು‌ ಹೇಳಿದ್ದನ್ನು ಕೇಳಿದ್ರೆ ಭಯ ಹುಟ್ಟುತ್ತದೆ. ಈ ಹಿಂದೆಯೆ ಆರೋಪಿ ಬಗ್ಗೆ ದೂರು ನೀಡಿದ್ದರೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂಬುದು ಅವರ ಆರೋಪ. ಆ ಸಂದರ್ಭ ಯಾವ ಅಧಿಕಾರಿಗಳಿದ್ದರು‌? ಅವರ ಬಗ್ಗೆಯೂ‌ ತನಿಖೆಯಾಗಬೇಕು ಎಂದು ಸಚಿವ ಜೋಶಿ ಆಗ್ರಹಿಸಿದರು.

ಇದನ್ನೂ ಓದಿ | Ebrahim Raisi: ಪತನದ ಬಳಿಕ ಹೆಲಿಕಾಪ್ಟರ್‌ ನಾಪತ್ತೆ; ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಸಾವು?

ನೇಹಾ ಹತ್ಯೆಯಾದಾಗ ಬಹುದೊಡ್ಡ ಜನಾಂದೋಲನವೇ ಆಯಿತು. ಆ ವೇಳೆ ಸಿಎಂ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಪರಮೇಶ್ವರ ಅವರ ಹೇಳಿಕೆ‌ ಕೃತ್ಯ ನಡೆಸುವವರಿಗೆ‌ ಪ್ರೋತ್ಸಾಹ ನೀಡಿದಂತಾಗಿದೆ. ಸಿಎಂ‌ ಸಿದ್ದರಾಮಯ್ಯನವರು ಹೊಣೆಗೇಡಿತನದ ಹೇಳಿಕೆ‌‌ ನೀಡಿದ್ದರ ಪರಿಣಾಮ‌ ಈಗ ಇಂಥ ಕೃತ್ಯಗಳು ಮರುಕಳಿಸುತ್ತಿವೆ. ರಾಜ್ಯ ಸರ್ಕಾರಕ್ಕೆ ಗಂಭೀರತೆಯೆ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ನಡೆದ ಅಪರಾಧ ಕೃತ್ಯಗಳ ಬಗ್ಗೆ ಪ್ರಶ್ನೆ ಮಾಡಿದರೆ, ಬಿಜೆಪಿ ಸರ್ಕಾರದ ಅವಧಿಯಲ್ಲಿ ಎಷ್ಟು ಪ್ರಕರಣಗಳಾಗಿವೆ ಎಂಬುದನ್ನು ಹುಡುಕಲು ಅಧಿಕಾರಿಗಳನ್ನು ನೇಮಿಸುತ್ತಾರೆ ಎಂದು ಕಿಡಿಕಾರಿದರು.

ಅಧಿಕಾರಿಗಳ ವರ್ಗಾವಣೆ ದಂಧೆ

ರಾಜ್ಯದಲ್ಲಿ ಅಧಿಕಾರಿಗಳ ವರ್ಗಾವಣೆಗೆ ಸಿಕ್ಕಾಪಟ್ಟೆ ಹಣ ತೆಗೆದುಕೊಳ್ತಾರೆ. ಗಾಂಜಾ‌, ಅಫೀಮು‌ ಚಟುವಟಿಕೆಗಳಿಗೆ‌ ಕಡಿವಾಣ ಹಾಕಲು ಆಗ್ತಿಲ್ಲ. ಕಾನೂನು‌ ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ. ಅಭಿವೃದ್ದಿಯು ಸಮಾಧಿಯಾಗಿದೆ ಎಂದು ಸಚಿವ ಜೋಶಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಪಾಲಕರಲ್ಲಿ ಭಯ

ರಾಜ್ಯದಲ್ಲಿ ಕಡುಬಡ‌ವರು ಹೆಣ್ಣು ಮಕ್ಕಳನ್ನು ಕಾಲೇಜಿಗೆ ಶಾಲೆಗೆ ಕಳುಹಿಸಲು ಭಯಪಡುತ್ತಿದ್ದಾರೆ. ಜನರು ಬೀದಿಗಿಳಿಯುವ ಪರಿಸ್ಥಿತಿಯನ್ನ‌ ಸರ್ಕಾರ ತಂದುಕೊಳ್ಳಬಾರದು. ಕೊಲೆ, ಹತ್ಯೆ, ಆತ್ಮಹತ್ಯೆ ಪ್ರಕರಣಗಳಲ್ಲಿ ಸರ್ಕಾರ ಗಂಭೀರ ಕ್ರಮ ತೆಗೆದುಕೊಳ್ಳಬೇಕು. ಅದು ಬಿಟ್ಟು ಯಾರೋ ಒಬ್ಬ ಅಧಿಕಾರಿ‌ಯನ್ನು ಅಮಾನತ್ತು ಮಾಡಿ ಕೈ ತೊಳೆದುಕೊಳ್ಳಬಾರದು ಎಂದು ಹೇಳಿದರು.

ಅಂಜಲಿ ಭಾವಚಿತ್ರಕ್ಕೆ ಪುಷ್ಪ ನಮನ

ದುಷ್ಕರ್ಮಿಯಿಂದ ಹತ್ಯೆಗೀಡಾದ ಹುಬ್ಬಳ್ಳಿ ವೀರಾಪುರ ಓಣಿಯ ಅಂಜಲಿ ಅಂಬಿಗೇರ ಭಾವಚಿತ್ರಕ್ಕೆ ಸಚಿವರು ಪುಷ್ಪಾರ್ಚನೆ ಮಾಡಿ ನಮನ ಸಲ್ಲಿಸಿದರು.

ಇದನ್ನೂ ಓದಿ | R Ashok: ರಾಜ್ಯದಲ್ಲಿ ಮಳೆಗಿಂತ ಹೆಚ್ಚಾಗಿ ಕೊಲೆಗಳೇ ನಡೆಯುತ್ತಿವೆ: ಆರ್‌.ಅಶೋಕ್‌ ಕಿಡಿ

ಈ‌ ಸಂದರ್ಭದಲ್ಲಿ ಮಾಜಿ ಶಾಸಕರಾದ ಅಶೋಕ‌ ಕಾಟವೆ, ಅಂಬಿಗೇರ ಸಮಾಜದ ಮುಖಂಡರಾದ ಮಾರುತಿ ಕಬ್ಬೇರ, ಪಕ್ಷದ ಪ್ರಮುಖರಾದ ಶಿವು ಮೆಣಸಿನಕಾಯಿ, ಪ್ರಭು ನವಲಗುಂದಮಠ, ಚಂದ್ರಶೇಖರ ಗೋಕಾಕ, ಬಸವರಾಜ ಅಮ್ಮಿನಬಾವಿ, ಶಶಿ ಬಿಜುವಾಡ, ಅನೂಪ್ ಬಿಜುವಾಡ, ರಾಜು ಜರ್ತಾರಘರ್, ಶಿವಯ್ಯ ಹಿರೇಮಠ ಹಾಗೂ ಪ್ರಮುಖರು ಉಪಸ್ಥಿತರಿದ್ದರು.

Exit mobile version