ಇಂದೋರ್: ದೇಶದಲ್ಲಿ 2040ರ ವೇಳೆಗೆ ತಲಾ ವಿದ್ಯುತ್ ಬಳಕೆ ದ್ವಿಗುಣಗೊಳ್ಳಲಿದ್ದು, ಹೆಚ್ಚಿನ ಕಲ್ಲಿದ್ದಲು ಉತ್ಪಾದನೆಗೆ(Coal Production) ಕೇಂದ್ರ ಸರ್ಕಾರ ಒತ್ತು ನೀಡುತ್ತಿದೆ. ಕಲ್ಲಿದ್ದಲು ಕ್ಷೇತ್ರವನ್ನು ಖಾಸಗಿ ವಲಯಕ್ಕೂ ಮುಕ್ತಗೊಳಿಸುವ ಮೂಲಕ ಹೆಚ್ಚಿನ ಉತ್ಪಾದನೆಗೆ ಗಮನಹರಿಸಲಾಗಿದೆ ಎಂದು ಕೇಂದ್ರ ಕಲ್ಲಿದ್ದಲು ಮತ್ತು ಗಣಿ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು.
ನಗರದಲ್ಲಿ ಕಲ್ಲಿದ್ದಲು ಸಚಿವಾಲಯದಿಂದ ಬುಧವಾರ ಆಯೋಜಿಸಿದ್ದ ಕಲ್ಲಿದ್ದಲು ಗಣಿಗಾರಿಕೆ ಹೂಡಿಕೆದಾರರ ಸಮಾವೇಶದಲ್ಲಿ ಮಾತನಾಡಿ, ಕೇಂದ್ರ ಸರ್ಕಾರದ ಕ್ರಮಗಳಿಂದ ಕಲ್ಲಿದ್ದಲು ಆಮದನ್ನು ಶೇ.2 ಇಳಿಕೆಯಾಗಿದೆ. ಕಲ್ಲಿದ್ದಲು ಉತ್ಪಾದನೆಯಲ್ಲಿ ಭಾರತ ಆತ್ಮನಿರ್ಭರದತ್ತ ಸಾಗುತ್ತಿದೆ ಎಂದು ತಿಳಿಸಿದರು.
ಇದನ್ನೂ ಓದಿ | Lotus In G-20 Logo | ಜಿ-20 ಶೃಂಗಸಭೆ ಲೋಗೊದಲ್ಲಿ ಕಮಲ, ಬಿಜೆಪಿ-ಕಾಂಗ್ರೆಸ್ ಮಧ್ಯೆ ಕೋಲಾಹಲ
ವಿದ್ಯುತ್ ಬಳಕೆ ದ್ವಿಗುಣಗೊಳ್ಳುವ ಸಂದರ್ಭದಲ್ಲಿ ಕಲ್ಲಿದ್ದಲು ಉತ್ಪಾದನೆ ಹೆಚ್ಚಬೇಕಿದೆ. ಈ ನಿಟ್ಟಿನಲ್ಲಿ 6ನೇ ಹಂತದ 133 ಕಲ್ಲಿದ್ದಲು ಗಣಿಗಳ ಹರಾಜು ಪ್ರಕ್ರಿಯೆ ಆರಂಭಿಸಲಾಗಿದೆ. ಈಗಾಗಲೇ 5ನೇ ಹಂತದ 64 ಕಲ್ಲಿದ್ದಲು ಗಣಿಗಳನ್ನು ಯಶಸ್ವಿಯಾಗಿ ಹರಾಜು ಮಾಡಲಾಗಿದೆ. ಅಲ್ಲದೇ 5ನೇ ಹಂತದ ಸೆಕೆಂಡ್ ಅಟೆಂಪ್ಟ್‌ನಲ್ಲಿ 8 ಗಣಿಗಳ ಹರಾಜು ಪ್ರಾರಂಭಿಸಲಾಗಿದೆ ಎಂದು ತಿಳಿಸಿದರು.
ಕಲ್ಲಿದ್ದಲು ಸಚಿವಾಲಯದಲ್ಲಿ ಸಂಪೂರ್ಣ ಪಾರದರ್ಶಕತೆ ತರಲಾಗಿದ್ದು, ಉದ್ಯಮ ಸ್ನೇಹಿ ವಾತಾವರಣ ರೂಪಿಸಲಾಗಿದೆ. ಹೂಡಿಕೆದಾರರು ಹೂಡಿಕೆ ಮಾಡಲು ಕಲ್ಲಿದ್ದಲು ಗಣಿಗಾರಿಕೆ ಕ್ಷೇತ್ರದಲ್ಲಿ ಉತ್ತಮ ಅವಕಾಶವಿದೆ. ಮುಂದಿನ 25 -30 ವರ್ಷಗಳವರೆಗೆ ಕಲ್ಲಿದ್ದಲಿಗೆ ಬೇಡಿಕೆ ಹೆಚ್ಚುತ್ತಲೇ ಹೋಗಲಿದೆ ಎಂದು ಅಭಿಪ್ರಾಯ ಪಟ್ಟರು.
ಇತರ ಅಭಿವೃದ್ಧಿ ಹೊಂದಿದ ಆರ್ಥಿಕತೆಗೆ ಹೋಲಿಸಿದರೆ ಭಾರತವು ಪ್ರಸ್ತುತ ತಲಾ ವಿದ್ಯುತ್ ಬಳಕೆಯ ಹತ್ತನೇ ಒಂದು ಭಾಗವನ್ನು ಹೊಂದಿಲ್ಲ. 2040ರ ವೇಳೆಗೆ ತಲಾ ಬಳಕೆ ದ್ವಿಗುಣಗೊಳ್ಳಲಿದೆ, ಇದಕ್ಕಾಗಿ ಕಲ್ಲಿದ್ದಲು ಅಗತ್ಯವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಮಾರ್ಗದರ್ಶನದಲ್ಲಿ ಉತ್ತಮ ತಾಂತ್ರಿಕ ಪ್ರಕ್ರಿಯೆಗಳನ್ನು ಅಳವಡಿಸಿಕೊಳ್ಳಲಾಗುತ್ತಿದೆ ಎಂದು ಜೋಶಿ ಹೂಡಿಕೆದಾರರಿಗೆ ಮಾಹಿತಿ ನೀಡಿದರು.
ನಿಶ್ಯಕ್ತ ಗಣಿಗಳನ್ನು ಮುಚ್ಚಲು ಕ್ರಮ
2030ರ ವೇಳೆಗೆ 1.3- 1.5 ಶತಕೋಟಿ ಟನ್ ನಿರೀಕ್ಷಿತ ಬೇಡಿಕೆಯೊಂದಿಗೆ ಭಾರತದ ಇಂಧನ ಭದ್ರತೆಗೆ ಕಲ್ಲಿದ್ದಲು ಅನಿವಾರ್ಯವಾಗಿದೆ. ವಿದ್ಯುತ್ ಉತ್ಪಾದನೆಗೆ ಕಲ್ಲಿದ್ದಲು ಅನಿವಾರ್ಯ. ಹೀಗಾಗಿ ಕಲ್ಲಿದ್ದಲು ಉತ್ಪಾದನೆಯತ್ತ ಪ್ರಧಾನಿ ನರೇಂದ್ರ ಮೋದಿ ಅವರ ಮಾರ್ಗದರ್ಶನದಲ್ಲಿ ಹೆಚ್ಚು ಒತ್ತು ನೀಡಲಾಗುತ್ತಿದೆ. ಅಲ್ಲದೇ ನಿಶ್ಯಕ್ತ ಕೆಲವು ಗಣಿಗಳನ್ನು ಮುಚ್ಚಲು ಕ್ರಮ ಕೈಗೊಳ್ಳಲಾಗುತ್ತಿದೆ. ಟ್ರಾನ್ಸಿಶನ್ ಪ್ರಿನ್ಸಿಪಲ್ಸ್ ಆಧಾರಿತ ಪ್ಯಾನ್-ಇಂಡಿಯಾ ಮೈನ್ ಕ್ಲೋಸರ್ ಫ್ರೇಮ್‌ವರ್ಕ್ ಅನ್ನು ಅಳವಡಿಸಿಕೊಳ್ಳಲು ಒತ್ತು ನೀಡಲಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ | Union Cabinet | 11 ವರ್ಷದ ಬಳಿಕ ಟಿವಿ ಚಾನೆಲ್‌ಗಳ ಅಪ್‌ಲಿಂಕಿಂಗ್, ಡೌನ್‌ಲಿಂಕಿಂಗ್ ಮಾರ್ಗಸೂಚಿ ಬದಲು, ಏನಿದೆ ವಿಶೇಷ?