ಚಿಕ್ಕೋಡಿ: ಶುಕ್ರವಾರದ ನಮಾಜ್‌ಗಾಗಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಸಮಯವನ್ನು ರಾಜ್ಯ ಸರ್ಕಾರ ಬದಲಾಯಿಸಿದೆ. ಕೆಲವೇ ಕೆಲವು ಮುಸ್ಲಿಂ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗಾಗಿ ಲಕ್ಷಾಂತರ ಹಿಂದೂ ವಿದ್ಯಾರ್ಥಿಗಳ ಮೇಲೆ ಇದನ್ನು ಹೇರಲಾಗುತ್ತಿದೆ ಎಂದು ಶ್ರೀರಾಮ ಸೇನೆ ಮುಖಂಡ ಪ್ರಮೋದ್ ಮುತಾಲಿಕ್ (Pramod Mutalik) ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಳಗಾವಿ ಜಿಲ್ಲೆ ಹುಕ್ಕೇರಿ ಪಟ್ಟಣದಲ್ಲಿ ಅವರು ಮಾತನಾಡಿ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಔರಂಗಜೇಬನ ಕಾಲವನ್ನು ಪುನಃ ಸೃಷ್ಟಿ ಮಾಡುತ್ತಿದೆ ಎಂದು ಕಿಡಿ ಕಾರಿದರು. ಕರ್ನಾಟಕದಲ್ಲಿ ಮತ್ತೆ ಮುಸ್ಲಿಂ ತುಷ್ಟೀಕರಣವನ್ನು ಶಿಕ್ಷಣ ಕ್ಷೇತ್ರದಲ್ಲೂ ಕಾಂಗ್ರೆಸ್ ತೋರುತ್ತಿರುವುದು ನಾಚಿಕೆಗೇಡಿನ ಸಂಗತಿ. ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದ ಹಿಡಿದು ಕರ್ನಾಟಕದಲ್ಲಿ ಮೇಲಿಂದ ಮೇಲೆ ಔರಂಗಜೇಬನ ಪುನಃಸೃಷ್ಟಿ ಮಾಡುತ್ತಿರುವುದು ಎದ್ದು ಕಾಣಿಸುತ್ತಿದೆ ಎಂದಿದ್ದಾರೆ.
ಮುಸ್ಲಿಂ ಓಟಿಗಾಗಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಪರೀಕ್ಷೆಯಲ್ಲೂ ವೇಳಾಪಟ್ಟಿ ಬದಲಿಸಲಾಗಿದೆ. ಫೆ.26ರಿಂದ ಮಾರ್ಚ 2ರ ವರೆಗೆ SSLC ಪರೀಕ್ಷೆ ದಿನಾಂಕಗಳನ್ನು ಘೋಷಣೆ ಮಾಡಿದ್ದಾರೆ. ಎಲ್ಲ ಪರಿಕ್ಷೆಗಳೂ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1.30ರ ವರೆಗೆ ನಡೆಯುತ್ತವೆ ಎಂದು ಸಮಯ ನಿಗದಿಪಡಿಸಿದ್ದಾರೆ. ಅದರಲ್ಲಿ ಮಾರ್ಚ್ 1ನೇ ದಿನಾಂಕ ಶುಕ್ರವಾರ ಇದೆ. ಅಂದು ಮಧ್ಯಾಹ್ನ 2 ಗಂಟೆಯಿಂದ ಪರೀಕ್ಷೆ ಪ್ರಾರಂಭವಾಗುವಂತೆ ನಿಗದಿಪಡಿಸಲಾಗಿದೆ. ಇದು ನಮಾಜು ಮಾಡುವುದಕ್ಕಾಗಿ ಎಂದು ಮತಾಲಿಕ್ ಆರೋಪಿಸಿದ್ದಾರೆ.
ಕೆಲವೇ ಮಂದಿ ಮುಸ್ಲಿಮರಿಗೋಸ್ಕರ ಇಡೀ ಶಿಕ್ಷಣ ವ್ಯವಸ್ಥೆ ಬದಲಾವಣೆ ಮಾಡಿದ್ದಾರೆ. ಕೆಲವೇ ಕೆಲವು ಮುಸ್ಲಿಂ ವಿದ್ಯಾರ್ಥಿ- ಶಿಕ್ಷಕರಿಗೋಸ್ಕಸ ಸಮಯ ಬದಲಾವಣೆ ಮಾಡಿದ್ದಾರೆ. ಲಕ್ಷಾಂತರ ಹಿಂದು ವಿದ್ಯಾರ್ಥಿಗಳ ಮೇಲೆ ಇದನ್ನು ಹೇರಲಾಗುತ್ತಿದೆ. ಸರ್ಕಾರ ಕೂಡಲೆ ಇದನ್ನು ವಾಪಾಸ್ ತಗೊಂಡು ಸಮಯ ಬದಲಾವಣೆ ಮಾಡಬೇಕು. ಇಲ್ಲದಿದ್ದರೆ ಹೋರಾಟ ಮಾಡಬೇಕಾಗುತ್ತೆ ಎಂದು ಪ್ರಮೋದ ಮುತಾಲಿಕ ಎಚ್ಚರಿಕೆ ನೀಡಿದ್ದಾರೆ.
ಇದೇ ಮಾದರಿಯಲ್ಲಿ ಪರೀಕ್ಷೆ ಸಮಯದಲ್ಲಿ ಹಿಜಾಬ್‌ಗೆ ಅನುಮತಿ ನೀಡಿದಿರಿ. ಹಿಂದೂ ಹುಡುಗಿಯರ ಉಂಗುರ- ತಾಳಿಯನ್ನು ತೆಗೆಸಿದವರು ನೀವು. ಮುಸ್ಲಿಂ ಸಮ್ಮೇಳನದಲ್ಲಿ 10 ಸಾವಿರ ಕೋಟಿ ಕೊಡುತ್ತೆವೆ ಎಂದು ಘೋಷಣೆ ಮಾಡಿದಿರಿ. ಕರಸೇವಕರ ಹಳೆ ಕೇಸ್‌ಗಳನ್ನು ಓಪನ್ ಮಾಡಿ ತೊಂದರೆ ಕೊಟ್ಟಿರಿ. ಹೀಗೆ ಅನೇಕ ಪ್ರಸಂಗಗಳನ್ನು ಇವತ್ತು ಸೃಷ್ಟಿ ಮಾಡುತ್ತಿರುವುದು ಎದ್ದು ಕಾಣಿಸುತ್ತಿದೆ. ಟಿಪ್ಪು ಸುಲ್ತಾನ್, ಔರಂಗಜೇಬ, ಬಾಬರ್‌ನ ಆಡಳಿತ ಮತ್ತೆ ಪುನಃ ಆರಂಭ ಮಾಡುವ ನಿಮ್ಮ ಸಂಚು ಎದ್ದು ಕಾಣಿಸುತ್ತಿದೆ ಎಂದು ಮುತಾಲಿಕ್ ಟೀಕಿಸಿದ್ದಾರೆ.
ಇದನ್ನೂ ಓದಿ: ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯುಸಿ ಪರೀಕ್ಷಾ ನಿಯಮ ತಿದ್ದುಪಡಿ, ವಿದ್ಯಾರ್ಥಿಸ್ನೇಹಿ ನಿಯಮ ಜಾರಿ