ರಾಮನಗರ/ಮೈಸೂರು: ಹಿಂದು ಹುಡುಗಿಯರು ಎಚ್ಚರಿಕೆ ವಹಿಸಬೇಕು. ಆತುರದಲ್ಲಿ ಪ್ರೀತಿಗೆ ಬಿದ್ದು ಮೋಸ ಹೋಗಿ ಪೀಸ್ ಪೀಸ್ ಆಗಬೇಡಿ ಎಂದು ಶ್ರೀರಾಮ ಸೇನೆ ಸ್ಥಾಪಕ ಪ್ರಮೋದ್ ಮುತಾಲಿಕ್ (Pramod muthalik) ಹೇಳಿದ್ದಾರೆ. ರಾಮನಗರ ಮತ್ತು ಮೈಸೂರಿಗೆ ಭೇಟಿ ನೀಡಿದ ವೇಳೆ ಮಾತನಾಡಿದ ಅವರು ದೆಹಲಿ ಶ್ರದ್ಧಾ ಹತ್ಯೆ ಪ್ರಕರಣದ ಬಳಿಕವಾದರೂ ಎಚ್ಚೆತ್ತುಕೊಳ್ಳಿ ಎಂದು ಸಲಹೆ ನೀಡಿದರು.
ಪ್ರೀತಿ ಮಾಡುವ ಮುನ್ನ ಹೆಣ್ಮಕ್ಕಳು ಯೋಚಿಸಬೇಕು, ಪೋಷಕರು ಕೂಡಾ ಈ ಬಗ್ಗೆ ಜಾಗೃತಿ ವಹಿಸಬೇಕು ಎಂದು ಹೇಳಿದ ಅವರು, ಸರಕಾರ ಲವ್ ಜಿಹಾದ್ ನಿಯಂತ್ರಣಕ್ಕೆ ಪ್ರತ್ಯೇಕ ಕಾಯ್ದೆ ರೂಪಿಸಬೇಕು ಎಂದು ಆಗ್ರಹಿಸಿದರು.
ʻʻರಾಜ್ಯದಲ್ಲಿ ಲವ್ ಜಿಹಾದ್ ದಿನೇದಿನೆ ಹೆಚ್ಚಾಗುತ್ತಿದೆ. ಲವ್ ಜಿಹಾದ್ ವಿರುದ್ದ ಮೊದಲು ದ್ನನಿ ಎತ್ತಿದವನೇ ನಾನು.
ಸಾವಿರ ಹೆಣ್ಣು ಮಕ್ಕಳನ್ನು ಲವ್ ಜಿಹಾದ್ ನಿಂದ ನಾವು ಪಾರು ಮಾಡಿದ್ದೇವೆʼʼ ಎಂದು ಹೇಳಿಕೊಂಡ ಮುತಾಲಿಕ್, ʻಹಿಂದು ಹೆಣ್ಣು ಮಕ್ಕಳು ಪ್ರೀತಿ ಮಾಡುವಾಗ ಅಬ್ದುಲ್ಲಾ-ಅಶೋಕ್ ವ್ಯತ್ಯಾಸ ಅರಿತು ಪ್ರೀತಿ ಮಾಡಬೇಕು. ಇಲ್ಲವಾದರೆ ದೆಹಲಿಯಲ್ಲಿ ನಡೆದಂತೆ ಹಿಂದೂ ಹೆಣ್ಣು ಮಕ್ಕಳು ತುಂಡು ತುಂಡಾಗಿ ಬಲಿಯಾಗುತ್ತಾರೆ. ನಿಮ್ಮ ಜತೆಗೆ ಹಿಂದೂ ಧರ್ಮವನ್ನೂ ಬಲಿ ಕೊಡಬೇಡಿʼʼ ಎಂದು ಕೇಳಿಕೊಂಡರು.
ಕನಕಪುರದಲ್ಲಿ ಮತಾಂತರ
ʻʻರಾಮನಗರ ಜಿಲ್ಲೆಯಲ್ಲಿ ಕ್ರೈಸ್ತ ಧರ್ಮೀಯರಿಂದ ಮತಾಂತರ ಎಗ್ಗಿಲ್ಲದೆ ನಡೆಯುತ್ತಿದೆ. ಇದಕ್ಕೆ ಕಾಂಗ್ರೆಸ್ ಕುಮ್ಮಕ್ಕು ನೀಡುತ್ತಿದೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮೆಚ್ಚಿಸಲು ಮತಾಂತರ ಮಾಡಲಾಗುತ್ತಿದೆ. ಈ ಭಾಗದಲ್ಲಿ ಕಾನೂನು ಬಾಹಿರ ಚರ್ಚ್ ಗಳು ತಲೆ ಎತ್ತುತ್ತಿವೆ. ಅವರಿಗೆ ಕುಮ್ಮಕ್ಕು ನೀಡಲು ಕಪಾಲಿ ಬೆಟ್ಟದಲ್ಲಿ ಏಸು ಪ್ರತಿಮೆ ಮಾಡಲು ಹೊರಟಿದ್ದಾರೆʼʼ ಎಂದು ಆರೋಪಿಸಿದ ಮುತಾಲಿಕ್, ಇಷ್ಟಾದರೂ ಸರ್ಕಾರ ಈ ಬಗ್ಗೆ ಯಾವುದೇ ಕ್ರಮ ವಹಿಸಿಲ್ಲ. ಈ ಬಗ್ಗೆ ಎಸ್ಪಿ, ಡಿಸಿಗಳಿಗೆ ದೂರು ನೀಡಿದರೂ ಯಾವುದೇ ಪ್ರಯೋಜನ ಆಗಿಲ್ಲʼʼ ಎಂದು ನುಡಿದರು.
ʻʻರೇಷನ್ ಕಾರ್ಡ್ ಹಿಂದೆಯೂ ಯೇಸು ಫೋಟೊ ಪ್ರಿಂಟ್ ಮಾಡಿದ್ದಾರೆʼʼ ಎಂದು ಆಪಾದಿಸಿದ ಮುತಾಲಿಕ್, ʻʻಕನಕಪುರ ತಹಸೀಲ್ದಾರ್ ಅವರೇ ರಾಜಕಾರಣಿಗಳ ಚೇಲಾ ಆಗಬೇಡಿ. ಕಾನೂನಿನ ಪ್ರಕಾರ ಕೆಲಸ ಮಾಡಿ. ಕ್ರೈಸ್ತ ಧರ್ಮದ ಚಟುವಟಿಕೆಗಳ ಮೇಲೆ ಕಣ್ಣಿಡಬೇಕು. ಮತಾಂತರ ಮಾಡುವವರನ್ನ ಹದ್ದುಬಸ್ತಿನಲ್ಲಿಡಿ. ಇಲ್ಲದಿದ್ದರೇ ನಾವೇ ಆ ಕೆಲಸ ಮಾಡಬೇಕಾಗುತ್ತೆʼʼ ಎಂದು ಎಚ್ಚರಿಸಿದರು.
ಹಿಂದುತ್ವಕ್ಕೆ ನ್ಯಾಯ ಕೊಡಿಸಲು ಸ್ಪರ್ಧೆ
ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದನ್ನು ಖಚಿತಪಡಿಸಿದ ಮುತಾಲಿಕ್, ಹಿಂದೂಗಳ ಹಿತದೃಷ್ಟಿಯಿಂದ ಸ್ಪರ್ಧೆ ಮಾಡ್ತಾ ಇದೇನೆ. ಬಿಜೆಪಿಯ ಒಂದೆ ಒಂದು ಹಿಂದೂ ಕಾರ್ಯಕರ್ತರ ರೌಡಿ ಶೀಟರ್ ರದ್ದು ಮಾಡಲಾಗಿಲ್ಲ. ಹಿಂದೆ ಕಾಂಗ್ರೆಸ್ ನವರು ರೌಡಿ ಶೀಟರ್ ಪಟ್ಟಿಗೆ ಹೆಸರು ಸೇರಿಸಿದ್ರು. ಗೋರಕ್ಷಣೆ ಮಾಡಿದವ್ರನ್ನೂ ರೌಡಿ ಶೀಟರ್ ಅಂದ್ರು.. ಇವರಿಗೆಲ್ಲ ನ್ಯಾಯ ಕೊಡಿಸಲು ಸ್ಪರ್ಧೆ ಮಾಡುತ್ತೇನೆ ಎಂದರು.
ʻʻನಾನು ಎಂದೂ ಬಿಜೆಪಿ ಪರವಾಗಿ ಮಾತನಾಡಿಲ್ಲ. ಬಿಜೆಪಿ ಪರವಾಗಿ ಸಾಫ್ಟ್ ಕರ್ನರ್ ತೋರಿಸಿಲ್ಲ. ಸಿದ್ದರಾಮಯ್ಯ ಅವರಿಗಿಂತ ಹೆಚ್ಚು ಬೈದವನು ನಾನು. ಬಿಜೆಪಿಯನ್ನು ಮೊದಲಿನಿಂದಲೂ ಟೀಕಿಸುತ್ತಾ ಬಂದಿದ್ದೇನೆ. ಕೇವಲ ಹಿಂದುತ್ವದ ವಿಚಾರವಾಗಿ ಗಟ್ಟಿ ಧ್ವನಿಯಲ್ಲಿ ಮಾತಾಡುತ್ತಿದ್ದೀನಿʼʼ ಎಂದು ಮುತಾಲಿಕ್ ಸ್ಪಷ್ಟಪಡಿಸಿದರು.
ಇದನ್ನೂ ಓದಿ | Election 2023 | 25 ಕ್ಷೇತ್ರಗಳಲ್ಲಿ ಶ್ರೀರಾಮ ಸೇನೆಯ ಪ್ರಖರ ಹಿಂದುತ್ವವಾದಿಗಳ ಸ್ಪರ್ಧೆ: ಮುತಾಲಿಕ್ ಘೋಷಣೆ