Site icon Vistara News

Pramod Muthalik : ರಾಜ್ಯದಲ್ಲಿ 3 ವರ್ಷದಲ್ಲಿ 40 ಸಾವಿರ ಮಹಿಳೆಯರು ನಿಗೂಢ ಕಣ್ಮರೆ; 45 ಸಾವಿರ ಬಾಲಕಿಯರಿಗೆ ಅಕ್ರಮ ಗರ್ಭ!

Pramod Muthalik

ಹುಬ್ಬಳ್ಳಿ: ರಾಜ್ಯದಲ್ಲಿ ಕಳೆದ ಮೂರು ವರ್ಷಗಳಲ್ಲಿ 18ರಿಂದ 30 ವಯಸ್ಸಿನ 40 ಸಾವಿರ ಮಹಿಳೆಯರು ಕಾಣೆಯಾಗಿದ್ದಾರೆ (Woman Missing). 25 ಸಾವಿರ ಮಕ್ಕಳು ನಿಗೂಢವಾಗಿ ಕಣ್ಮರೆಯಾಗಿದ್ದಾರೆ. 45 ಸಾವಿರ ಅಪ್ರಾಪ್ತ ವಯಸ್ಸಿನ ಹುಡುಗಿಯರು ಅಕ್ರಮವಾಗಿ ಗರ್ಭ ಧರಿಸಿದ್ದಾರೆ- ಹೀಗೊಂದು ಆಘಾತಕಾರಿ ಅಂಕಿ ಅಂಶವನ್ನು ಬಿಚ್ಚಿಟ್ಟಿದ್ದಾರೆ ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ (Pramod Muthalik).

ಅವರ ಹುಬ್ಬಳ್ಳಿಯಲ್ಲಿ ಮಾತನಾಡಿ, ಇಂಥ ಆಘಾತಕಾರಿ ಘಟನೆಗಳಲ್ಲಿ ಹೆಚ್ಚಿನವು ಲವ್‌ ಜಿಹಾದ್‌ ಪ್ರಕರಣಗಳು ಎಂದು ಹೇಳಿದರು. ಇಷ್ಟಾದರೂ ಸರ್ಕಾರ ಈ ಬಗ್ಗೆ ಗಮನ ಹರಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ವಿಶೇಷ ಮಹಿಳಾ ಆಯೋಗ‌ ರಚನೆ ಮಾಡಬೇಕು ಎಂದು ಆಗ್ರಹಿಸಿದರು.

ಮುರುಡೇಶ್ವರದಲ್ಲಿ 2010ರಲ್ಲಿ ಯಮುನಾ ನಾಯಕ್ ಎಂಬ ಮಹಿಳೆ ಮುಸ್ಲಿಂ ಮನೆಗೆ ಕೆಲಸಕ್ಕೆ ಹೋಗುತ್ತಿದ್ದಳು. ಈ ವೇಳೆ ಆಕೆಯನ್ನು ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿತ್ತು. ಪ್ರಕರಣದಲ್ಲಿ ವೆಂಕಟೇಶ ಹರಿಕಾಂತ ಎಂಬಾತನನ್ನು ಬಂಧಿಸಲಾಯಿತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ಕೋರ್ಟ್‌ ಯಾವುದೇ ಸಾಕ್ಷಿ ಇಲ್ಲ ಎಂದು ವೆಂಕಟೇಶನನ್ನು ಬಿಡುಗಡೆ ಮಾಡಿತ್ತು. ಈ ರೀತಿ ಯಾರ‍್ಯಾರನ್ನೋ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿ ಪ್ರಕರಣದ ದಾರಿ ತಪ್ಪಿಸಲಾಗುತ್ತಿದೆ ಎಂದರು. ಪೊಲೀಸರ ನಿರ್ಲಕ್ಷ್ಯದಿಂದ, ಸಗಣಿ ತಿನ್ನುವ ಬುದ್ದಿಯಿಂದ ಘಟನೆ ಮರುಕಳಿಸುತ್ತಿವೆ ಎಂದು ಹೇಳಿದರು.

ಧರ್ಮಸ್ಥಳದಲ್ಲಿ ನಡೆದ ಸೌಜನ್ಯ ಕೊಲೆ ಪ್ರಕರಣಕ್ಕೂ ಯಮುನಾ ಕೊಲೆ ಪ್ರಕರಣಕ್ಕೂ ತಳುಕು ಹಾಕಿದ ಮುತಾಲಿಕ್‌, ಇಲ್ಲಿ ಕೂಡಾ ಸಂತೋಷ್ ರಾವ್ ನಿರ್ದೋಷಿ ಆಗಿದ್ದಾರೆ. ಹಾಗಿದ್ದರೆ ಕೊಲೆ ಮಾಡಿದವರು ಯಾರು ಎನ್ನುವುದು ಪತ್ತೆಯಾಗಬೇಕು ಎಂದಿದ್ದಾರೆ.

ಸೌಜನ್ಯ ಮನೆಯಿಂದ ಕಾಲೇಜಿಗೆ ಹೋಗುವಾಗ ಉಪವಾಸದಿಂದ ಹೋಗಿದ್ದಳು. ಆದರೆ ಪೊಸ್ಟ್ ಮಾರ್ಟಂನಲ್ಲಿ ಸೌಜನ್ಯ ಹೊಟ್ಟೆಯಲ್ಲಿ ಅಜೀರ್ಣ ಆಹಾರ ಇತ್ತು ಅಂತಾ ವರದಿಯಿದೆ. ಇದು ಏನು ಆಹಾರ? ವಿಷಾನಾ ಅಂತಾ ಸ್ಪಷ್ಟಪಡಿಸಿಲ್ಲ. ಸೌಜನ್ಯ ಶವ ಸಿಕ್ಕಾಗ ಮಳೆಯಲ್ಲಿ ಕೊಲೆ ಮಾಡಲಾಗಿದೆ ಎನ್ನಲಾಗಿದೆ. ಆದರೆ ಆಕೆಯ ಪಠ್ಯ ಪುಸ್ತಕ ನೆನೆದಿಲ್ಲ. ಸೌಜನ್ಯ ಮನೆಗೆ ಬಂದು ಆಕೆಯ ಒಳ ಉಡುಪುಗಳನ್ನು ತೆಗೆದುಕೊಂಡು ಹೋಗಲಾಗಿದೆ. ಈ ಎಲ್ಲ ಅಂಶಗಳು ಅನುಮಾನಕ್ಕೆ ಕಾರಣವಾಗಿದೆ ಎಂದು ಮುತಾಲಿಕ್‌ ನುಡಿದರು.

ಸಂತೋಷ ರಾವ್ ಕುಟುಂಬ ಸಾಕಷ್ಟು ಸಂಕಷ್ಟದಲ್ಲಿದೆ, ಅವರಿಗೆ 25 ಲಕ್ಷ ಪರಿಹಾರ ನೀಡಬೇಕು, ಸೌಜನ್ಯ ಕುಟುಂಬಸ್ಥರಿಗೆ ಜೀವ ಬೆದರಿಕೆಯಿದೆ. ಹೀಗಾಗಿ ಸೂಕ್ತ ರಕ್ಷಣೆ ನೀಡಬೇಕು ಎಂದು ಅವರು ಆಗ್ರಹಿಸಿದರು.

ಇದನ್ನೂ ಓದಿ : Woman missing : ಮನೆಯಿಂದ ಹೊರಹೋದ ಮಹಿಳೆ ಮರಳಿ ಬಂದಿಲ್ಲ, ಮಾನಸಿಕ ಖಿನ್ನತೆಯೇ ಕಾರಣ?

Exit mobile version