Site icon Vistara News

Pramod Muthalik | ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಮುತಾಲಿಕ್‌ ನಿರ್ಧಾರ, ಪಕ್ಷ ಯಾವುದು?

pramod muthalik

ಧಾರವಾಡ: ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್‌ ಮುತಾಲಿಕ್‌ ಅವರು ೨೦೨೩ರ ಚುನಾವಣೆಯಲ್ಲಿ ಕಣಕ್ಕಿಳಿಯಲು ನಿರ್ಧಿರಿಸಿದ್ದಾರೆ. ಆದರೆ, ಕ್ಷೇತ್ರ ಯಾವುದು ಎನ್ನವುದು ಇನ್ನು ತೀರ್ಮಾನ ಆಗಿಲ್ಲ.

ಈ ವಿಚಾರವನ್ನು ಸ್ವತಃ ಪ್ರಮೋದ್‌ ಮುತಾಲಿಕ್‌ ಅವರು ವಿಸ್ತಾರ ನ್ಯೂಸ್‌ಗೆ ತಿಳಿಸಿದ್ದಾರೆ. ಇದು ಕೊನೆಯ ಬಾರಿಯ ಅದೃಷ್ಟ ಪರೀಕ್ಷೆ ಎಂದು ಅವರು ಹೇಳಿಕೊಂಡಿದ್ದಾರೆ. ಹಿಂದೂ ನಾಯಕ ಎಂದು ಗುರುತಿಸಿಕೊಂಡಿರುವ ಪ್ರಮೋದ್‌ ಮುತಾಲಿಕ್‌ ಅವರು ದೊಡ್ಡ ಮಟ್ಟದ ಅಭಿಮಾನಿ ಬಳಗವನ್ನು, ಬೆಂಬಲಿಗರನ್ನು ಹೊಂದಿದ್ದಾರೆ. ಆದರೆ, ಚುನಾವಣೆ ರಾಜಕೀಯದಲ್ಲಿ ಅವರಿಗೆ ದೊಡ್ಡ ಮಟ್ಟದ ಗೆಲುವು ಸಿಕ್ಕಿಲ್ಲ.

ʻʻಈ ಬಾರಿ ಚುನಾವಣೆಯಲ್ಲಿ ಸ್ಪರ್ಧೆ ಮಾಡೋ ತೀರ್ಮಾನ ಮಾಡಿದ್ದೇನೆ. ಅದು ಎಲ್ಲಿಂದ ಅನ್ನೋದು ಇನ್ನು ನಿರ್ಧಾರ ಆಗಿಲ್ಲ. ಎಲ್ಲ ಕಡೆಯಿಂದಲೂ ಅಲ್ಲಿನ ಕಾರ್ಯಕರ್ತರಿಂದ ಒತ್ತಡ ಹೆಚ್ಚಿದೆ. ರಾಜ್ಯದ ಎಲ್ಲ ಪ್ರಮುಖರ ಜೊತೆ ಚರ್ಚೆ ಮಾಡಿ ತೀರ್ಮಾನ ಕೈಗೊಳ್ಳುತ್ತೇನೆ. ಡಿಸೆಂಬರ್ ಮೊದಲ ವಾರದಲ್ಲೇ ಕ್ಷೇತ್ರದ ಆಯ್ಕೆ ಮಾಡಲಾಗುತ್ತದೆʼʼ ಎಂದು ಮುತಾಲಿಕ್‌ ಹೇಳಿದರು.

ಬಿಜೆಪಿ ನಂಗೆ ಟಿಕೆಟ್‌ ಕೊಡಲ್ಲ ಅಂತ ಗೊತ್ತು!
ಯಾವ ಪಕ್ಷದಿಂದ ಸ್ಪರ್ಧೆ ಮಾಡುತ್ತೀರಿ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ʻʻಬಿಜೆಪಿ ನನಗೆ ಟಿಕೆಟ್ ಕೊಡುವ ಸ್ಥಿತಿಯಲ್ಲಿ ಇಲ್ಲ. ಇಲ್ಲಿಯವರೆಗೆ ಯಾವುದೇ ಸಂಪರ್ಕ ಮಾಡಿಲ್ಲ, ಮಾಡುವುದೂ ಇಲ್ಲ. ಬಿಜೆಪಿಯ ಮಾನಸಿಕತೆಯನ್ನು ನಾನು ಅರ್ಥ ಮಾಡಿಕೊಂಡಿದ್ದೇನೆ. ನನ್ನಂಥವರಿಗೆ ಬಿಜೆಪಿ ಟಿಕೆಟ್ ಕೊಡುವುದಿಲ್ಲʼʼ ಎಂದು ಹೇಳಿದರು. ʻʻಹೀಗಾಗಿ ನಾನು ಸ್ವತಂತ್ರವಾಗಿಯೇ ಸ್ಪರ್ಧೆ ಮಾಡಲು ನಿರ್ಧರಿಸಿದ್ದೇನೆʼʼ ಎಂದರು.

ಯಾವ ಕ್ಷೇತ್ರ?
ʻʻಉಡುಪಿ, ಪುತ್ತೂರು, ಕಾರ್ಕಳ, ತೆರದಾಳ, ಧಾರವಾಡ ಸೇರಿದಂತೆ ಶೃಂಗೇರಿಯಲ್ಲಿ ಬೇಕಾದರೂ ನಿಲ್ಲಬಹುದು. 8ರಿಂದ 10 ಕ್ಷೇತ್ರಗಳಲ್ಲಿ ನಿಲ್ಲುವಂತೆ ಒತ್ತಡ ಇದೆ ಅದರಲ್ಲಿ ಒಂದನ್ನು ಆಯ್ಕೆ ಮಾಡಲಾಗುತ್ತದೆ” ಎಂದರು.

ಗೆಲ್ಲಲೇ ಇಲ್ಲ ಮುತಾಲಿಕ್‌
ಪ್ರಮೋದ್‌ ಮುತಾಲಿಕ್‌ ಅವರು ಹಿಂದೂ ನಾಯಕನಾದರೂ ಬಿಜೆಪಿಗೂ ಅವರಿಗೂ ಆತ್ಮೀಯತೆಯೇನೂ ಇಲ್ಲ. ಹೆಚ್ಚಿನ ಸಂದರ್ಭದಲ್ಲಿ ಅವರು ಬಿಜೆಪಿಯನ್ನೂ ಟೀಕಿಸುತ್ತಾರೆ. ೨೦೧೪ರ ಮಾರ್ಚ್‌ ೨೩ರಂದು ಮುತಾಲಿಕ್‌ ಅವರನ್ನು ಒಮ್ಮೆ ಬಿಜೆಪಿಗೆ ಸೇರಿಸಿಕೊಳ್ಳಲಾಗಿತ್ತಾದರೂ ಕೆಲವೇ ಗಂಟೆಗಳಲ್ಲಿ ಕಿತ್ತುಹಾಕಲಾಗಿತ್ತು.

ಇದರಿಂದ ಸಿಟ್ಟಿಗೆದ್ದ ಮುತಾಲಿಕ್‌ ಅವರು ೨೦೧೪ರ ಚುನಾವಣೆಯಲ್ಲಿ ಬೆಂಗಳೂರು ದಕ್ಷಿಣ ಮತ್ತು ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಿದ್ದರು. ಆದರೆ, ಎರಡು ಕಡೆ ಠೇವಣಿ ಕಳೆದುಕೊಂಡಿದ್ದರು. ತನ್ನನ್ನು ಪಕ್ಷದಿಂದ ಕಿತ್ತು ಹಾಕಿಸುವಲ್ಲಿ ಎಚ್‌.ಎನ್‌. ಅನಂತಕುಮಾರ್‌ ಪಾತ್ರವಿದೆ ಎಂದು ಭಾವಿಸಿದ್ದ ಮುತಾಲಿಕ್‌ ಬೆಂಗಳೂರು ದಕ್ಷಿಣದಲ್ಲಿ ಅವರ ವಿರುದ್ಧ ಕಣಕ್ಕಿಳಿದರು. ಆದರೆ, ಅವರಿಗೆ ಸಿಕ್ಕಿದ್ದು ೪೨೪೭ ಮತ ಮತ್ತು ಐದನೇ ಸ್ಥಾನ. ಧಾರವಾಡದಲ್ಲಿ ಅವರಿಗೆ ಸಿಕ್ಕಿದ್ದು ೫,೪೬೫ ಮತ ಮತ್ತು ಆರನೇ ಸ್ಥಾನ. ಎರಡೂ ಕಡೆ ಇವರಿಗಿಂತ ಹೆಚ್ಚು ನೋಟಾ ಮತಗಳಿದ್ದವು.

ಇದನ್ನೂ ಓದಿ | Pramod Muthalik : ಕೈ ಕತ್ತರಿಸುತ್ತೇವೆಂದು ಮುತಾಲಿಕ್ ಎಚ್ಚರಿಕೆ ಕೊಟ್ಟಿದ್ಯಾರಿಗೆ?

Exit mobile version