ಬೆಂಗಳೂರು: ಸಿಎಂ ಸಿದ್ದರಾಮಯ್ಯ (CM Siddaramaiah) ಅವರಿಂದ ಈಡಿಗ- ಬಿಲ್ಲವ- ದೀವರ ಸಮುದಾಯದ ಕಡೆಗಣನೆ ಕುರಿತು ಕಾಂಗ್ರೆಸ್ ಮುಖಂಡ ಬಿ.ಕೆ ಹರಿಪ್ರಸಾದ್ (BK Hariprasad) ಅವರು ಆಡಿದ ಮಾತುಗಳಿಗೆ ಬ್ರಹ್ಮಶ್ರೀ ನಾರಾಯಣ ಗುರು ಪೀಠದ ಶ್ರೀ ಪ್ರಣವಾನಂದ ಸ್ವಾಮೀಜಿ ಅವರು ದನಿಗೂಡಿಸಿದ್ದು, ಸಿಎಂ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
2013ರಿಂದ 2018ರವರೆಗೆ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದರು. ಈ ಸಮಯದಲ್ಲಿ ಅವರ ಸಮುದಾಯಕ್ಕೆ ಎಷ್ಟು ಅನುದಾನ ಕೊಟ್ಟಿದ್ದಾರೆ, ಎಷ್ಟು ಹಣ ಖರ್ಚು ಮಾಡಿದ್ದಾರೆ ಅಂತ ನಮ್ಮ ಬಳಿ ದಾಖಲೆ ಇದೆ. ಎಲ್ಲರಿಗೂ ಕೊಡಲಿ, ನಾವು ಯಾರಿಗೂ ಕೊಡಬೇಡಿ ಅಂತ ಹೇಳಿಲ್ಲ. ಆದರೆ ನಮ್ಮ ಸಮುದಾಯಕ್ಕೆ ಯಾಕೆ ಕೊಡಲಿಲ್ಲ ಎಂದು ಸಿಎಂ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಿನ್ನೆಯಷ್ಟೇ ಈಡಿಗ ಸಮುದಾಯದ ಪ್ರಣವಾನಂದ ಸ್ವಾಮೀಜಿ ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಸಿಎಂ ವಿರುದ್ಧ ಹರಿಪ್ರಸಾದ್ ಗುಡುಗಿದ್ದರು. ಇಂದು ಸೆವೆನ್ ಮಿನಿಸ್ಟರ್ ಕ್ವಾರ್ಟ್ರಸ್‌ನ ಅವರ ಸರ್ಕಾರಿ ನಿವಾಸಕ್ಕೆ ಸ್ವಾಮೀಜಿ ದಿಡೀರ್ ಭೇಟಿ ನೀಡಿ, ಮಾಧ್ಯಮಗಳ ಮುಂದೆ ಈ ಹೇಳಿಕೆ ನೀಡಿದ್ದಾರೆ.
2004ರಲ್ಲಿ ನಮ್ಮ ಕುಲವೃತ್ತಿ ಬಂದ್ ಮಾಡಿಸಿದ್ದು ಇವರೇ. ಆಗ ಅಬಕಾರಿ ಸಚಿವರಾಗಿದ್ದರು, ಡಿಸಿಎಂ ಆಗಿದ್ದರು, ಇವರೇ ಬಂದ್ ಮಾಡಿಸಿದರು. 2013ರಲ್ಲಿ ಮತ್ತೆ ನಮ್ಮ ಕುಲವೃತ್ತಿ ಆರಂಭ ಮಾಡುವ ವಿಚಾರ ಬಂದಾಗಲೂ ಅದಕ್ಕೆ ಅಡ್ಡಿ ಪಡಿಸಿದ್ದು ಕೂಡ ಇವತ್ತಿನ ಮುಖ್ಯಮಂತ್ರಿಗಳೇ. ಕುಲಕಸುಬಿನಿಂದ ಹಣ ಬಂದು, ಅದರಿಂದ ಮತ್ತೆ ಮುಖ್ಯಮಂತ್ರಿ ಸ್ಥಾನಕ್ಕೆ ಹೋಗುತ್ತೇವೆ ಅಂತ ಇವರಿಗೆ ಹೆದರಿಕೆ ಇದೆ. ಈಡಿಗ- ಬಿಲ್ಲವರ ರಾಜಕೀಯ ಭವಿಷ್ಯ ಮುಗಿಸಲೇಬೇಕು ಎಂದು ಕೆಲವರು ಇದ್ದಾರೆ ಎಂದು ಪ್ರಣವಾನಂದ ಶ್ರೀ ಕಿಡಿ ಕಾರಿದ್ದಾರೆ.
ಬಿ.ಕೆ ಹರಿಪ್ರಸಾದ್ ಯಾವುದೇ ಜಾತಿ ರಾಜಕಾರಣ ಮಾಡಿಲ್ಲ. ರಾಜ್ಯದಲ್ಲಿ ಸರ್ಕಾರ ಬರಲು ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ಹಾಗೂ ಹರಿಪ್ರಸಾದ್ ಪ್ರಮುಖ ಕಾರಣರು. ಅವರು ಪರಿಷತ್‌ನ ವಿರೋಧ ಪಕ್ಷದ ನಾಯಕರಾಗಿದ್ದರು. ಆದರೆ ಹರಿಪಸ್ರಾದ್‌ಗೆ ಸಚಿವ ಸ್ಥಾನ ನೀಡಬೇಕಿತ್ತು. ಈ ವಿಷಯವನ್ನು ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಗಮನಕ್ಕೆ ತಂದಿದ್ದೇನೆ ಎಂದು ಪ್ರಣವಾನಂದ ಶ್ರೀ ಹೇಳಿದ್ದಾರೆ.
ಅವರು ಬೇರೆ ಪಕ್ಷದಿಂದ ಹಾರಿ ಬಂದವರಲ್ಲ. ಕಾಂಗ್ರೆಸ್ ಪಕ್ಷದಲ್ಲೇ ಹಲವು ದಶಕಗಳಿಂದ ಕೆಲಸ ಮಾಡುತ್ತಿರುವವರು. 49 ವರ್ಷದ ಸುದೀರ್ಘ ಅನುಭವ ಹೊಂದಿರುವ ರಾಜಕಾರಣಿ. ಜನಾರ್ದನ ಪೂಜಾರಿ, ಹೆಚ್.ಜಿ ರಾಮುಲು, ಜಾಲಪ್ಪರನ್ನು ಮುಗಿಸಿದರು. ಈಗ ಹರಿಪ್ರಸಾದ್ ಅವರ ಧ್ವನಿ ಕುಗ್ಗಿಸುವ ಕೆಲಸ ನಡೆಯುತ್ತಿದೆ. ಪಕ್ಷ ಸೂಕ್ತ ಸ್ಥಾನಮಾನ ಕೊಡದೇ ಇರುವುದು ಬೇಸರ ತಂದಿದೆ. ಅವರ ಧ್ವನಿ ಕಸಿಯುವ ಕೆಲಸ ಮಾಡಲಾಗುತ್ತಿದೆ ಎಂದು ಶ್ರೀ ಕಿಡಿ ಕಾರಿದ್ದಾರೆ.
ಸೆ.10ರಂದು ಈಡಿಗ, ದೀವರ ಸಮುದಾಯದ ಪೂರ್ವಭಾವಿ ಸಭೆ ಮಾಡಲಿದ್ದೇವೆ. ನಂತರ ಸ್ವಾಭಿಮಾನ ಸಮಾವೇಶ ಮಾಡುತ್ತೇವೆ. ಕಾರವಾರ, ಉಡುಪಿ, ಶಿವಮೊಗ್ಗ, ಮಂಗಳೂರು ಜಿಲ್ಲೆಗಳಲ್ಲಿ ಈಡಿಗ ಸಮುದಾಯ ಜನಸಂಖ್ಯೆ ಹೆಚ್ಚಿದೆ. ರಾಜಕೀಯವಾಗಿ ಬಳಸಿಕೊಂಡು ಸಮುದಾಯದ ನಾಯಕನಿಗೆ ಅನ್ಯಾಯ ಮಾಡಿದ್ದಾರೆ. ಹರಿಪ್ರಸಾದ್ ಹಿಂದೆ ನಾವು ಬೆನ್ನೆಲುಬಾಗಿ ನಿಂತಿದ್ದೇವೆ. 104 ಜಾತಿಗಳು ಹಿಂದುಳಿದ ವರ್ಗಕ್ಕೆ ಬರುತ್ತವೆ. ಎಲ್ಲವೂ ನಮ್ಮ ಬೆಂಬಲಕ್ಕಿವೆ ಎಂದು ಪ್ರಣವಾನಂದ ಶ್ರೀಗಳು ಗುಡುಗಿದ್ದಾರೆ.
ಆಡಿದ ಮಾತಿಗೆ ಬದ್ಧ: ಬಿ.ಕೆ ಹರಿಪ್ರಸಾದ್
ನಾನು ಒಂದು ಸರಿ ಹೇಳಿದ ಮಾತು ವಾಪಸ್ ತಗೆದುಕೊಳ್ಳುವುದಿಲ್ಲ. ನಾನು ಹೇಳಿದ ಮಾತಿಗೆ ಬದ್ಧನಾಗಿರುತ್ತೇನೆ. ನಿನ್ನೆ ನಾನು ಹೇಳಿದ ಮಾತು ನಿಜ ಎಂದು ಬಿ.ಕೆ ಹರಿಪ್ರಸಾದ್ ಹೇಳಿದ್ದಾರೆ.
ಅಸಮಾಧಾನದ ಬಗ್ಗೆ ನಾನು ಮಾತನ್ನಾಡುವುದಿಲ್ಲ. ನಾನು ಹೇಳದ ಮೇಲೆ ನನ್ನ ಮಾತಲ್ಲ. ನಿನ್ನೆ ಸಭೆಗೆ ಕರೆದಿದ್ದರು, ಹೋಗಿದ್ದೆ. ಅಲ್ಲಿ ಕ್ಯಾಮರಾಗಳು ಇರಲಿಲ್ಲ , ಹೀಗಾಗಿ ಮಾತಾಡಿದ್ದೇನೆ. ಕ್ಯಾಮರಾಗಳು ಇದ್ದಿದ್ದರೆ ಮಾತಾಡುತ್ತಿರಲಿಲ್ಲ. ನಾವು ಹಿಂದುಳಿದವರು, ಅಷ್ಟೆಲ್ಲಾ ಗಮನಿಸಿಲ್ಲ. ಯಾರೋ ಹಾಕಿರುತ್ತಾರೆ. ಕಾದು ನೋಡಿ ರಾಜಕಾರಣ ಏನೇನು ಆಗುತ್ತೆ ಎಂದು ಹರಿಪ್ರಸಾದ್ ಹೇಳಿದ್ದಾರೆ.
ಈಡಿಗ- ಬಿಲ್ಲವ- ದೀವ ಸಮುದಾಯದ ಕಡೆಗಣನೆಯ ಬಗ್ಗೆ ಹರಿಪ್ರಸಾದ್ ಸಮುದಾಯದ ಸಭೆಯಲ್ಲಿ ಅಸಮಾಧಾನ ತೋಡಿಕೊಂಡಿದ್ದರು. ʼʼನನಗೆ ಸಿಎಂ ಮಾಡಲೂ ಗೊತ್ತು, ಕೆಳಗಿಳಿಸಲೂ ಗೊತ್ತುʼʼ ಎಂದು ಹೇಳಿದ್ದರು.
ಇದನ್ನೂ ಓದಿ: Karnataka Cabinet: ಸಿಎಂ ಮಾಡೋದೂ ಇಳಿಸೋದೂ ಗೊತ್ತಿದೆ! ಸಿದ್ದರಾಮಯ್ಯ ವಿರುದ್ಧ ತೊಡೆ ತಟ್ಟಿದ ಬಿ.ಕೆ ಹರಿಪ್ರಸಾದ್!