Site icon Vistara News

ಸಂಸದ ಪ್ರತಾಪ ಸಿಂಹ, ದಿನೇಶ್‌ ಅಮೀನ್‌ ಮಟ್ಟು ನಡುವೆ ʻರೈಲುʼ ಫೈಟ್‌: ಸೋಷಿಯಲ್‌ ಮೀಡಿಯಾದಲ್ಲಿ ಬೈದಾಟ

dinesh amin mattu-pratap simha

ಬೆಂಗಳೂರು: ಮೈಸೂರು ಸಂಸದ ಪ್ರತಾಪ ಸಿಂಹ ಮತ್ತು ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಮಾಧ್ಯಮ ಸಲಹೆಗಾರರಾಗಿದ್ದ, ಪತ್ರಕರ್ತ ದಿನೇಶ್‌ ಅಮೀನ್‌ ಮಟ್ಟು ಮಧ್ಯೆ ಜಾಲತಾಣದಲ್ಲಿ ʻರೈಲುʼ ಫೈಟ್‌ ಆರಂಭಗೊಂಡಿದೆ. ದಿನೇಶ್‌ ಅಮೀನ್‌ ಮಟ್ಟು ಅವರು ಫೇಸ್‌ ಬುಕ್‌ನಲ್ಲಿ ಕೆಣಕ್ಕಿದ್ದಕ್ಕೆ ಪ್ರತಾಪ್‌ ಸಿಂಹ ಅವರು ಟ್ವಿಟರ್‌ನಲ್ಲಿ ಉತ್ತರ ನೀಡಿದ್ದಾರೆ. ಈ ಜಗಳಕ್ಕೆ ಇಬ್ಬರೂ ಬಳಸಿಕೊಂಡಿದ್ದು ಟಿವಿಯಲ್ಲಿ ಬಂದಿರುವ ಸಂದರ್ಶನ, ಮಾತುಕತೆಯ ಕ್ಲಿಪ್‌ಗಳನ್ನು.

ದಿನೇಶ್‌ ಅಮೀನ್‌ ಮಟ್ಟು ಹೇಳಿದ್ದೇನು?
ವಿಚಾರವನ್ನು ಮೊದಲು ಎತ್ತಿದ್ದು ದಿನೇಶ್‌ ಅಮೀನ್‌ ಮಟ್ಟು. ʻʻಕೊಡಗಿನ ಮಹಾಜನರೇ ದಯವಿಟ್ಟು ನಿಮ್ಮ ಸಂಸದ ಕಾಗೆ ಹಾರಿಸಿದ್ದನ್ನು ಕೇಳಿ ಬಿಡಿ. ಕೊಡಗಿಗೆ ರೈಲು ತರದೆ ಇದ್ದರೆ ಮುಂದಿನ ಚುನಾವಣೆಗೆ ಸ್ಪರ್ಧೆನೇ ಮಾಡೋದಿಲ್ಲ ಎಂದು ಹೇಳಿ ಬೆತ್ತಲಾಗಿದೆ ಸಿಂಹʼʼ ಎನ್ನುವ ವಿವರಣೆಯೊಂದಿಗೆ ಹಳೆಯ ಟಿವಿ ಸಂದರ್ಶನದ ತುಣುಕೊಂದನ್ನು ಇಟ್ಟಿದ್ದಾರೆ. ಈ ಸಂದರ್ಶನದಲ್ಲಿ ಪ್ರತಾಪ್‌ ಸಿಂಹ ಅವರು ʻʻಐದು ವರ್ಷದೊಳಗೆ ಕೊಡಗಿಗೆ ರೈಲು ತರದಿದ್ದರೆ ಮುಂದಿನ ಚುನಾವಣೆಗೆ ಸ್ಪರ್ಧಿಸುವುದಿಲ್ಲʼʼ ಎಂದು ಸವಾಲು ಹಾಕುತ್ತಾರೆ. ಆಗ ಸಂದರ್ಶಕರು ʻʻನೀವು ಜನರ ಮುಂದೆ ಈ ಮಾತು ಹೇಳುತ್ತಿದ್ದೀರಿʼʼ ಎನ್ನುವುದನ್ನು ನೆನಪಿಸುತ್ತಾರೆ. ಆಗಲೂ ಸಂಸದ ಪ್ರತಾಪ್‌ಸಿಂಹ ಅವರು ಈ ಮಾತನ್ನು ಸಮರ್ಥಿಸುತ್ತಾರೆ.

ದಿನೇಶ್‌ ಅಮೀನ್‌ ಮಟ್ಟು ಅವರು ಹಳೆ ಕಥೆಯನ್ನು ನೆನಪಿಸುತ್ತಾ ಪ್ರತಾಪ ಸಿಂಹ ಅವರನ್ನು ಕುಟುಕುತ್ತಾರೆ.

ಪ್ರತಾಪ್‌ ಸಿಂಹ ಪ್ರತಿಕ್ರಿಯೆ ಏನು?
ಇದಕ್ಕೆ ಪ್ರತಿಯಾಗಿ ಪ್ರತಾಪ್‌ ಸಿಂಹ ಅವರು ಟ್ವಿಟರ್‌ನಲ್ಲಿ ಉತ್ತರಿಸಿದ್ದಾರೆ. ʻʻದಿನೇಶ್ ಅಮೀನ್ ಮಟ್ಟು ಎಂಬ ಈ ಮಾಜಿ ಪತ್ರಕರ್ತ “ಪ್ರಜಾವಾಣಿ”ಯಂಥ ಪ್ರತಿಷ್ಠಿತ ಪತ್ರಿಕೆಯಲ್ಲಿ ಕೆಲಸ ಮಾಡಿದ್ದಾರೆಂಬ ಕಾರಣಕ್ಕೆ ಅವರ ಅಜ್ಞಾನವನ್ನು ಹೋಗಲಾಡಿಸಲು ಈ ಸ್ಪಷ್ಟೀಕರಣ ನೀಡುತ್ತಿದ್ದೇನೆ.ʼʼಎಂದು ವಿವರಣೆ ನೀಡಿ ಒಂದು ವಿಡಿಯೊವನ್ನು ಟ್ಯಾಗ್‌ ಮಾಡಿದ್ದಾರೆ. ಇದು ಕೂಡಾ ಒಂದು ಟಿವಿ ಚಾನೆಲ್‌ನಲ್ಲಿ ನಡೆದ ಕಾರ್ಯಕ್ರಮದ ಒಂದು ತುಣುಕು.
ಅದರಲ್ಲಿ ಪ್ರತಾಪ್‌ ಸಿಂಹ ಅವರು ರೈಲು ತರುವುದಕ್ಕೆ ಬೇಕಾದ ಪೂರ್ವ ಸಿದ್ಧತೆಗಳು, ಅನುಮತಿಗಳು, ಭೂಸ್ವಾಧೀನ ಮೊದಲಾದ ಹಲವು ವಿಚಾರಗಳನ್ನು ಪ್ರಸ್ತಾಪಿಸಿ ಇದುವರೆಗೆ ಆಗಿರುವ ಬೆಳವಣಿಗೆಗಳ ವಿವರಣೆಯನ್ನು ನೀಡಿದ್ದಾರೆ. ೨೦೧೮ರ ಹೊತ್ತಿಗೇ ಕೇಂದ್ರ ಸರಕಾರದಿಂದ ತಾವು ಕೇಂದ್ರದಿಂದ ಅನುಮತಿಯನ್ನು ಪಡೆದಿರುವುದನ್ನು ಉಲ್ಲೇಖಿಸಿದ್ದಾರೆ. ಆದರೆ, ರಾಜ್ಯ ಸರಕಾರದ ವತಿಯಿಂದ ನಡೆಯಬೇಕಾಗಿರುವ ಭೂಸ್ವಾಧೀನ ಪ್ರಕ್ರಿಯೆ ವಿಳಂಬವಾಗಿರುವುದನ್ನು ವಿವರಿಸಿದ್ದಾರೆ. ರಾಜ್ಯ ಸರಕಾರ ಭೂಸ್ವಾಧೀನ ಪ್ರಕ್ರಿಯೆ ಮಾಡಿದರಷ್ಟೇ ರೈಲ್ವೇ ಟ್ರ್ಯಾಕಿಂಗ್‌ ಮತ್ತು ನಿಲ್ದಾಣಗಳ ಸ್ಥಾಪನೆ ಸಾಧ್ಯ ಎಂದು ಹೇಳಿದ್ದಾರೆ. ಇದರ ಮಧ್ಯೆ ತಾವು ಮೈಸೂರಿನಲ್ಲಿ ಇದಕ್ಕೆ ಪೂರಕವಾಗಿ ರೈಲು ನಿಲ್ದಾಣ ನಿರ್ಮಾಣ ಕಾರ್ಯ ಕೈಗೊಂಡಿರುವುದಾಗಿ ವಿವರಿಸಿದ್ದಾರೆ.

ಇದಕ್ಕೆ ದಿನೇಶ್‌ ಅಮೀನ್‌ ಮಟ್ಟು ಹೇಳಿದ್ದೇನು?
ರೈಲು ವಿಚಾರದಲ್ಲಿ ಆರಂಭಗೊಂಡ ಪ್ರತಾಪಸಿಂಹ ಮತ್ತು ದಿನೇಶ್‌ ಅಮೀನ್‌ ಮಟ್ಟು ಫೈಟ್‌ ಪ್ರತಾಪಸಿಂಹ ಅವರ ಪ್ರತಿಕ್ರಿಯೆ ಬಳಿಕ ಬೇರೊಂದು ದಿಕ್ಕಿಗೆ ತಿರುಗಿದೆ. ಎರಡನೇ ಪೋಸ್ಟ್‌ನಲ್ಲಿ ಮಟ್ಟು ಅವರು, ರೈಲ್ವೇ ಲೈನ್‌ಗೆ ಸಂಬಂಧಿಸಿ ಪ್ರತಾಪಸಿಂಹ ಅವರು ನೀಡಿದ ಪ್ರತಿಕ್ರಿಯೆಯ ಬಗ್ಗೆ ಹೆಚ್ಚೇನೂ ಮಾತನಾಡಿಲ್ಲ. ಅವರು ತಮ್ಮನ್ನು ಮಾಜಿ ಪತ್ರಕರ್ತ ಎಂದು ಉಲ್ಲೇಖಿಸಿದ್ದಕ್ಕೆ ಸಿಡಿಮಿಡಿಯಾಗಿದ್ದಾರೆ.

ʻʻನಾನು ನಿನ್ನೆ ಶೇರ್ ಮಾಡಿದ್ದ, ಸಂಸದ ಪ್ರತಾಪಸಿಂಹ ಕೊಡಗಿಗೆ ರೈಲು ಬಿಟ್ಟ ವಿಡಿಯೋ ವೈರಲ್ ಆದ ನಂತರ ಅವರು ತನ್ನ ಟ್ವಿಟರ್ ಖಾತೆಯಲ್ಲಿ ಸ್ಪಷ್ಟೀಕರಣ ನೀಡಿದ್ದಾರಂತೆ. ಅದರಲ್ಲಿ ನನ್ನನ್ನು ಮಾಜಿ ಪತ್ರಕರ್ತನೆಂದು ಕರೆದು ತನ್ನ ಆತ್ಮಕ್ಕೆ ತಾನೇ ಶಾಂತಿ‌ಕೋರಿಕೊಂಡಿದ್ದಾರಂತೆ ಇರಲಿ. ನಾನು ಮಾಜಿನೋ, ಹಾಲಿಯೋ ಓದುಗರು ನಿರ್ಧರಿಸುತ್ತಾರೆ. ಆದರೆ ನಾನು ಪ್ರತಾಪ ಸಿಂಹನಂತೆ, ತಾನು‌ ಮಾಡಿದ ವಾಂತಿಯನ್ನು ತಾನೇ ತಿನ್ನುವ ಮಾರಿಕೊಂಡ ಪತ್ರಕರ್ತ ಖಂಡಿತ ಅಲ್ಲ. ತಾನು ಸಂಸದನಾಗುವ ಮೂರು ವರ್ಷ ಮೊದಲು ಈತ ‘ಮೈನಿಂಗ್ ಮಾಫಿಯಾ’ ಎಂಬ ಪುಸ್ತಕ ಬರೆದ. ಅದರಲ್ಲಿ ಯಡಿಯೂರಪ್ಪನವರಿಂದ ಹಿಡಿದು ಅನಂತ್ ಕುಮಾರ್, ಸುಷ್ಮಾ, ರಾಮುಲು, ರೆಡ್ಡಿ, ರೇಣುಕಾಚಾರ್ಯ ಎಲ್ಲರನ್ನೂ ವಾಚಾಮಗೋಚರ ಬೈದು ವಾಂತಿ‌ ಮಾಡಿದ್ದ. ಕೊನೆಗೆ ಅದೇ ಯಡಿಯೂರಪ್ಪ, ಅನಂತಕುಮಾರ್ ಕಾಲು ಹಿಡಿದು ಟಿಕೆಟ್ ಪಡೆದುಕೊಂಡ. ಆ ಪುಸ್ತಕಗಳಲ್ಲಿ ಈತ ಉದುರಿಸಿದ್ದ ಆಣಿಮುತ್ತುಗಳಲ್ಲಿ ಕೆಲವನ್ನು‌ ಇಲ್ಲಿ ಹಾಕಿದ್ದೇನೆ. ಇನ್ನೂ ಇದೆʼ ಎಂದು ಬರೆದುಕೊಂಡು ಪುಸ್ತಕದ ಕೆಲವು ತುಣುಕುಗಳನ್ನು ಹಾಕಿದ್ದಾರೆ. ಇದಕ್ಕೆ ಪ್ರತಾಪ್‌ಸಿಂಹ ಯಾವ ಪ್ರತಿಕ್ರಿಯೆ ನೀಡುತ್ತಾರೆ ಎಂದು ಕಾದು ನೋಡಬೇಕಾಗಿದೆ.

ಇದನ್ನೂ ಓದಿ| ದೇವಸ್ಥಾನಕ್ಕೆ ಮಾಂಸ ಸೇವಿಸಿ ಹೋಗ್ತಾರ ಸಿದ್ದರಾಮಯ್ಯ ಹೆಂಡತಿ?: ಸಂಸದ ಪ್ರತಾಪ್‌ ಸಿಂಹ ಪ್ರಶ್ನೆ

Exit mobile version