ಬೆಳ್ಳಾರೆ (ಸುಳ್ಯ ತಾಲೂಕು, ದಕ್ಷಿಣ ಕನ್ನಡ): ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ತಲಶ್ಶೇರಿಯಲ್ಲಿ ಪೊಲೀಸರು ವಶಕ್ಕೆ ಪಡೆದಿರುವ ಅಬೀದ್‌ಗೂ ಈಗಾಗಲೇ ಬಂಧನಲ್ಲಿರುವ ಬೆಳ್ಳಾರೆಯ ಶಫೀಕ್ ಮತ್ತು ಸವಣೂರಿನ ಝಾಕಿರ್‌ಗೂ ಸಂಪರ್ಕವಿದೆ ಎಂಬ ಮಹತ್ವ ಅಂಶವನ್ನು ಪೊಲೀಸರು ಕಂಡುಕೊಂಡಿದ್ದಾರೆ ಎನ್ನಲಾಗಿದೆ.
ಕೇರಳದ ತಲಶ್ಶೇರಿ ಪ್ಯಾರಾಲ್ ನಿವಾಸಿ ಅಬೀದ್‌ನನ್ನು ಪೊಲೀಸರು ಶನಿವಾರ ರಾತ್ರಿ ವಶಕ್ಕೆ ಪಡೆದಿದ್ದರು. ಆತ ಅಲ್ಲಿನ ಕೋಳಿ ಅಂಗಡಿಯೊಂದರಲ್ಲಿ ಕೆಲಸಕ್ಕೆ ಮಾಡುತ್ತಿದ್ದ. ಶಫೀಕ್ ಮತ್ತು ಝಾಕಿರ್‌ನ ವಿಚಾರಣೆ ವೇಳೆ ಅಬೀದ್‌ನ ಬಗ್ಗೆ ಮಾಹಿತಿ ಸಿಕ್ಕಿತ್ತು ಎನ್ನಲಾಗಿದೆ. ಅಬೀದ್‌ನನ್ನು ವಿಚಾರಣೆ ನಡೆಸಿದ ಸಂದರ್ಭದಲ್ಲಿ ಶಫೀಕ್ ಮತ್ತು ಝಾಕಿರ್ ಜತೆಗಿನ ನಂಟಿನ ಮಾಹಿತಿ ಬಯಲಾಗಿದೆ ಎನ್ನಲಾಗಿದೆ.
ಜುಲೈ ೨೬ರಂದು ಪ್ರವೀಣ್ ನೆಟ್ಟಾರು ಕೊಲೆ ನಡೆದ ದಿನ ಅಬೀದ್ ಕೋಳಿ ಅಂಗಡಿಯ ಕೆಲಸಕ್ಕೆ ಬಂದಿರಲಿಲ್ಲ ಎನ್ನುವುದನ್ನು ಪೊಲೀಸರು ಖಚಿತಪಡಿಸಿಕೊಂಡಿದ್ದಾರೆ. ಅಬೀದ್ ಧಾರ್ಮಿಕ ಭಯೋತ್ಪಾದನೆ ವಿಚಾರಗಳನ್ನು ಸಾಮಾಜಿಕ ತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದ ಎನ್ನಲಾಗಿದೆ.
ಇದೀಗ ಪೊಲೀಸರು ಅಬೀದ್‌ನ ಮೊಬೈಲ್‌ನ್ನು ತಪಾಸಣೆಗೆ ಒಳಪಡಿಸಿದಾಗ ಆತನ ಚಟುವಟಿಕೆಗಳ ಹಲವು ಮುಖಗಳು ಬಯಲಾಗಿದೆ. ಶಫೀಕ್ ಮತ್ತು ಅಬೀದ್ ಕೇರಳ ಮೂಲದ ಸಂಘಟನೆಯ ವಾಟ್ಸ್ ಆ್ಯಪ್ ಗ್ರೂಪ್‌ನ ಸದಸ್ಯರಾಗಿದ್ದರು ಎನ್ನಲಾಗಿದೆ. ಅಲ್ಲಿಂದ ಅವರಿಬ್ಬರು ಸ್ನೇಹಿತರಾಗಿರಬಹುದು ಎನ್ನಲಾಗಿದೆ.
ಶಫೀಕ್ ಮತ್ತು ಅಬೀದ್ ಅವರು ಬೆಳ್ಳಾರೆ ಮಸೂದ್ ಹತ್ಯೆಯ ಬಗ್ಗೆಯೂ ಪರಸ್ಪರ ಚರ್ಚೆ ಮಾಡಿಕೊಂಡಿದ್ದರು ಎನ್ನಲಾಗಿದೆ. ವಾಟ್ಸ್ ಆ್ಯಪ್ ಗ್ರೂಪ್ ಹಾಗೂ ವೈಯಕ್ತಿಕ ಚಾಟ್ ಮೂಲಕ ವಿಚಾರ ವಿನಿಮಯ ಮಾಡಿಕೊಂಡಿದ್ದು ಕಂಡುಬಂದಿದೆ. ಶಫೀಕ್ ಮೊಬೈಲ್ ಮತ್ತು ಲ್ಯಾಪ್ ಟಾಪ್ ತಪಾಸಣೆ ವೇಳೆ ಅಬೀದ್ ನಂಟು ಬಹಿರಂಗ ಬಯಲಾಗಿದೆ ಎನ್ನಲಾಗಿದೆ.
ಶಫೀಕ್ ಮತ್ತು ಅಬೀದ್ ಆತ್ಮೀಯರಂತೆ ಮಾಹಿತಿ ರವಾನೆ ಮಾಡಿದ್ದು ನಿಜವಾದರೂ ಇದರ ಹಿಂದೆ ಕೊಲೆಯ ಸಂಚಿದೆಯೇ ಎನ್ನುವ ಬಗ್ಗೆ ಸ್ಪಷ್ಟತೆ ಇಲ್ಲ. ಆದರೆ, ಅಬೀದ್ ಇದನ್ನು ಕೇರಳದ ಬೇರೆ ಸಂಘಟನೆಗಳಿಗೆ ರವಾನಿಸಿರುವ ಸಾಧ್ಯತೆಗಳು ಹೆಚ್ಚಿವೆ. ಹೀಗಾಗಿ ಇಲ್ಲಿನ ವಿದ್ಯಮಾನಗಳ ಪಿನ್ ಟು ಪಿನ್ ಮಾಹಿತಿ ರವಾನೆಯಾಗಿರಬಹುದು ಎನ್ನುವುದು ಪೊಲೀಸರ ಸಂಶಯ. ಹೀಗಾಗಿ ಅಬೀದ್‌ನ ವಿಚಾರಣೆ ಈ ಕೊಲೆಯಲ್ಲಿ ನೇರವಾಗಿ ಭಾಗಿಯಾಗಿರುವ ಹಂತಕರ ಪತ್ತೆಯಲ್ಲಿ ಮಹತ್ವದ ಪಾತ್ರ ವಹಿಸಬಹುದು ಎಂಬ ಆಶಾವಾದ ಪೊಲೀಸರದ್ದು.
ಶಫೀಕ್ ಮತ್ತು ಝಾಕಿರ್ ತಿಳಿದೇ ಈ ಮಾಹಿತಿ ರವಾನಿಸುತ್ತಿದ್ದರೋ ಅಥವಾ ಸಂಪರ್ಕದ ಹಿನ್ನೆಲೆಯಲ್ಲಿ ಮಾಹಿತಿ ವಿನಿಮಯ ಮಾಡಿಕೊಂಡರೋ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ.
ಅಜ್ಞಾತ ಸ್ಥಳದಲ್ಲಿ ಅಬೀದ್ ವಿಚಾರಣೆ
ಈ ನಡುವೆ, ತಲಶ್ಶೇರಿಯಿಂದ ಕರೆತರಲಾಗಿರುವ ಅಬೀದ್‌ನನ್ನು ಪೊಲೀಸರು ಅಜ್ಞಾತ ಸ್ಥಳದಲ್ಲಿ ವಿಚಾರಣೆಗೆ ಒಳಪಡಿಸುತ್ತಿದ್ದಾರೆ ಎಂಬ ಮಾಹಿತಿ ಲಭಿಸಿದೆ.
ಇದನ್ನೂ ಓದಿ Praveen Nettaru| ಕೇರಳದ ತಲಶ್ಶೇರಿಯಲ್ಲಿ ಮೂರನೇ ಆರೋಪಿ ಬಂಧನ, ಅಲ್ಲೇನು ಮಾಡ್ತಿದ್ದ?