ಮಂಗಳೂರು: ದುಷ್ಕರ್ಮಿಗಳಿಂದ ಕೊಲೆಯಾದ ಬಿಜೆಪಿ ಯುವಮೋರ್ಚಾ ಪದಾಧಿಕಾರಿ ಪ್ರವೀಣ್ ನೆಟ್ಟಾರು (praveen nettaru) ಅವರ ಕನಸಿನ ಮನೆಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಬುಧವಾರ ಶಂಕುಸ್ಥಾಪನೆ ನೆರವೇರಿಸಿದರು. ಭಾರತೀಯ ಜನತಾ ಪಕ್ಷದ ವತಿಯಿಂದಲೇ ಈ ಮನೆಯನ್ನು ಕಟ್ಟಿಕೊಡಲು ನಿರ್ಧರಿಸಲಾಗಿದೆ. ಸರಕಾರವೂ ಸಹಾಯಧನ ನೀಡಿದೆ ಎಂದು ನಳಿನ್ ಕುಮಾರ್ ಕಟೀಲ್ ತಿಳಿಸಿದರು.
ಪ್ರವೀಣ್ ಅವರ ಹಳೆಯ ಮನೆ ಕೆಡವಿ ಹೊಸ ಮನೆಗೆ ಗುದ್ದಲಿ ಪೂಜೆ ಮಾಡಿದ್ದೇವೆ. 60 ಲಕ್ಷ ರೂ. ವೆಚ್ಚದಲ್ಲಿ 2700 ಚದರ ಅಡಿಯ ಮನೆ ನಿರ್ಮಾಣ ಆಗಲಿದೆ. ಮುಗ್ರೋಡಿ ಕನ್‌ಸ್ಟ್ರಕ್ಷನ್ ಕಂಪೆನಿ ಮನೆ ನಿರ್ಮಾಣ ಮಾಡಲಿದ್ದು, ಮೇ ಅಂತ್ಯದ ಒಳಗೆ ಮನೆ ಪೂರ್ಣಗೊಳ್ಳಲಿದೆ ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದರು.
ʻʻಮನೆ ನಿರ್ಮಾಣದ ವೆಚ್ಚವನ್ನು ಪಕ್ಷ, ಸರಕಾರ ಮತ್ತು ಯುವಮೋರ್ಚಾ ಭರಿಸಲಿದೆ. ಬಿಜೆಪಿಯಿಂದ 25 ಲಕ್ಷ ರೂ., ಸರ್ಕಾರದಿಂದ 25 ಲಕ್ಷ ರೂ. ಹಾಗೂ ಯುವಮೋರ್ಚಾದಿಂದ 15 ಲಕ್ಷ ರೂ. ಭರಿಸಲಾಗುತ್ತದೆ. ಮನೆಯವರೇ ಕೊಟ್ಟ ನಕ್ಷೆಯ ಪ್ರಕಾರ ಈ ಮನೆ ನಿರ್ಮಾಣ ಆಗಲಿದೆʼʼ ಎಂದು ಅವರು ಹೇಳಿದರು. ಅನೇಕರು ಮನೆ ಕಟ್ಟಿ ಕೊಡಲು ಮುಂದೆ ಬಂದಿದ್ದರು. ಆದರೆ, ಮನೆಯವರ ಅಭಿಪ್ರಾಯದಂತೆ ಪಕ್ಷವೇ ಮನೆ ಕಟ್ಟಿ ಕೊಡುತ್ತಿದೆʼʼ ಎಂದರು ನಳಿನ್.
ʻʻಪ್ರವೀಣ್ ನಮ್ಮ ಪಕ್ಷ ಅಮೂಲ್ಯ ಕಾರ್ಯಕರ್ತ. ಅವರ ಕುಟುಂಬದ ಜೊತೆ ನಾವು ನಿಂತಿದ್ದೇವೆ. ಪ್ರವೀಣ್ ಕೆಲಸಕ್ಕೆ ಮೌಲ್ಯ ಕಟ್ಟಲು ಸಾಧ್ಯವೇ ಇಲ್ಲ, ಹಾಗಾಗಿ ಇಲ್ಲಿ ಹಣ ಮುಖ್ಯವಲ್ಲ. ಬಿಜೆಪಿ ಪಕ್ಷ ಕಾರ್ಯಕರ್ತನ ಕುಟುಂಬದ ಪರ ಯಾವತ್ತೂ ನಿಲ್ಲಲಿದೆ. ಈ ವಿಚಾರವನ್ನು ನಾವು ಹತ್ಯೆಯ ಸಂದರ್ಭದಲ್ಲೇ ಹೇಳಿದ್ದೆವುʼʼ ಎಂದು ನಳಿನ್ ನೆನಪಿಸಿದರು.
ಸಂಚಿನ ಸೂತ್ರಧಾರರಿಗೆ ಶೋಧ
ಪ್ರವೀಣ್ ನೆಟ್ಟಾರು ಅವರನ್ನು ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಎಲ್ಲರನ್ನೂ ಬಂಧಿಸಲಾಗಿದೆ. ಆರ್ಥಿಕ ಸಹಕಾರ ನೀಡಿದವರಿಗೆ ಲುಕ್ ಔಟ್ ನೋಟಿಸ್ ಜಾರಿ ಮಾಡಲಾಗಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರ ಸರಿಯಾದ ರೀತಿಯಲ್ಲಿ ತನಿಖೆ ಮಾಡುತ್ತಿದೆ. ಇದರ ಹಿಂದೆ ಇರುವ ಎಲ್ಲಾ ಶಕ್ತಿಗಳನ್ನು ಬಂಧಿಸುವ ಕೆಲಸ ನಡೆಯುತ್ತಿದೆ ಎಂದ ನಳಿನ್ ಕುಮಾರ್ ಕಟೀಲ್, ʻʻಪ್ರಮುಖ ಆರೋಪಿಗಳು ಜೈಲಿನ ಒಳಗೆ ಇದ್ದಾರೆ. ಆರ್ಥಿಕ ಸಹಾಯ ಮಾಡಿದವರು, ವಾಹನ ಕೊಟ್ಟವರು, ಮಾನಸಿಕವಾಗಿ ಆರೋಪಿಗಳ ಜೊತೆ ನಿಂತವರನ್ನೂ ಬಿಡಲ್ಲ. ಇದಕ್ಕಾಗಿ ಎನ್ಐಎ ತಪ್ಪಿಸಿಕೊಂಡವರ ಪತ್ತೆಗೆ ಬಹುಮಾನ ಘೋಷಿಸಿದೆ ಎಂದರು.
ʻʻಈಗಾಗಲೇ ಪ್ರವೀಣ್ ಹತ್ಯೆ ಬಳಿಕ ಪಿಎಫ್ಐ ನಿಷೇಧ ಆಗಿದೆ. ಸದ್ಯ ಹತ್ಯೆ ಕೇಸ್ ಆರೋಪಿಗಳು ಯಾವ ಕೋರ್ಟ್ ನಲ್ಲೂ ಹೊರ ಬರದ ಹಾಗೆ ಪ್ರಕರಣ ದಾಖಲಿಸಲಾಗಿದೆ. ಎನ್ ಐಎ ಇದಕ್ಕೆ ಸಂಬಂಧಿಸಿ ಎಲ್ಲಾ ರೀತಿಯ ಕೆಲಸ ಮಾಡುತ್ತಿದೆʼʼ ಎಂದು ನಳಿನ್ ತಿಳಿಸಿದರು.
ಧನ್ಯವಾದ ಹೇಳಿದ ಪ್ರವೀಣ್ ಪತ್ನಿ
ಕೊಲೆಯಾದ ಪ್ರವೀಣ್ ಅವರ ಪತ್ನಿ ನೂತನ ಅವರಿಗೆ ಈಗಾಗಲೇ ಜಿಲ್ಲಾಧಿಕಾರಿ ಕಚೇರಿಯಲ್ಲಿ ಉದ್ಯೋಗ ನೀಡಲಾಗಿದೆ. ಮನೆ ಗುದ್ದಲಿ ಪೂಜೆ ಬಳಿಕ ಮಾತನಾಡಿದ ಅವರು, ʻʻಸಂಸದರು, ಸಚಿವರು ಮತ್ತು ಬಿಜೆಪಿ ಮುಖಂಡರು ಪ್ರವೀಣ್ ಅವರ ಕನಸು ನನಸು ಮಾಡುವ ಕಡೆಗೆ ಹೆಜ್ಜೆ ಇಟ್ಟಿದ್ದಾರೆ. ನಮ್ಮ ಮನೆಯವರ ಪರವಾಗಿ ಎಲ್ಲರಿಗೂ ಧನ್ಯವಾದ ಸಲ್ಲಿಸುತ್ತೇನೆ. ಎಲ್ಲಾ ಪಕ್ಷದ ನಾಯಕರು ನಮ್ಮ ಜೊತೆಗೆ ನಿಂತಿದ್ದಾರೆ. ಆರೋಪಿಗಳನ್ನು ಹಿಡಿಯುವಲ್ಲೂ ಸಹಕಾರ ಮುಂದೆಯೂ ಸಿಗಲಿ. ಇನ್ನೂ ಆರು ಜನರ ಪತ್ತೆ ಆಗಬೇಕು, ಅವರನ್ನೂ ಹಿಡಿಯಲು ಎಲ್ಲರೂ ಸಹಕರಿಸಲಿʼʼ ಎಂದು ಹೇಳಿದರು.
ಸಚಿವರಾದ ಕೋಟಾ ಶ್ರೀನಿವಾಸ ಪೂಜಾರಿ, ಎಸ್.ಅಂಗಾರ, ಶಾಸಕ ಸಂಜೀವ ಮಠಂದೂರು ಉಪಸ್ಥಿತರಿದ್ದರು.
ಅಂದು ಆಕ್ರೋಶ ವ್ಯಕ್ತವಾಗಿತ್ತು
ಜುಲೈ 26 ರಂದು ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ನಡೆದಿತ್ತು. ಅದರ ಮರುದಿನ ನಡೆದ ಅಂತ್ಯಕ್ರಿಯೆಯ ವೇಳೆ ನಳಿನ್ ಕುಮಾರ್ ಕಟೀಲ್ ಸೇರಿದಂತೆ ಬಿಜೆಪಿ ನಾಯಕರನ್ನು ಅರ್ಧ ದಾರಿಯಲ್ಲೇ ತಡೆಯಲಾಗಿತ್ತು. ನಳಿನ್ ಕಟೀಲ್ ಮತ್ತು ಸುನೀಲ್ ಕುಮಾರ್ ಕಾರನ್ನು ಅಲುಗಾಡಿಸಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದರು. ಆದರೆ, ಬಿಜೆಪಿ ನಾಯಕರು ಮಾತ್ರ ಮನೆಯವರನ್ನು ಸಮಾಧಾನ ಮಾಡಿ ಈಗ ಮನೆ ಕಟ್ಟಿಕೊಡಲು ಮುಂದಾಗಿದ್ದಾರೆ.
ಇದನ್ನೂ ಓದಿ | ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ; ಆರೋಪಿಗಳ ಸುಳಿವು ನೀಡಿದರೆ ಲಕ್ಷಾಂತರ ರೂಪಾಯಿ ಬಹುಮಾನ