Site icon Vistara News

Praveen Nettaru | ಮುಂದುವರಿದ ಬಿಜೆಪಿ ಆಂತರಿಕ ಆಕ್ರೋಶ, ಸಾವಿರಾರು ಮಂದಿ ರಾಜೀನಾಮೆ!

Continued resignation of BJP workers

ಬೆಂಗಳೂರು: ದಕ್ಷಿಣ ಕನ್ನಡದ ಯುವ ಮೋರ್ಚಾ ಕಾರ್ಯಕರ್ತ ಪ್ರವೀಣ್‌ ನೆಟ್ಟಾರು (Praveen Nettaru) ಹತ್ಯೆ ಪ್ರಕರಣವು ರಾಜ್ಯಾದ್ಯಂತ ಆಕ್ರೋಶದ ಕಿಚ್ಚನ್ನು ಹೊತ್ತಿಸಿದ್ದು, ಬಿಜೆಪಿ ಒಳಗೇ ಕಾರ್ಯಕರ್ತರು ಅಸಮಾಧಾನಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಬುಧವಾರದಿಂದಲೇ ಪಕ್ಷದ ಕಾರ್ಯಕರ್ತರ ಸಹಿತ ವಿವಿಧ ಜವಾಬ್ದಾರಿಯನ್ನು ಹೊಂದಿರುವವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುತ್ತಿದ್ದು, ಗುರುವಾರವೂ ಮುಂದುವರಿದಿದೆ. ಇದುವರೆಗೆ ರಾಜ್ಯಾದ್ಯಂತ ಸುಮಾರು ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ತಮ್ಮ ಜವಾಬ್ದಾರಿಗಳಿಂದ ಹಿಂದೆ ಸರಿದಿದ್ದಾರೆ. ಅಲ್ಲದೆ, ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ಸಹ ಅಗತ್ಯಬಿದ್ದರೆ ರಾಜೀನಾಮೆ ಸಲ್ಲಿಸುವುದಾಗಿ ಹೇಳಿದ್ದಾರೆ.

ಕೊಪ್ಪಳದ ಗಂಗಾವತಿ ಕ್ಷೇತ್ರದ ಬಿಜೆಪಿ ಶಾಸಕ ಪರಣ್ಣ ಮುನವಳ್ಳಿ ಗಂಗಾವತಿಯಲ್ಲಿ ಮಾತನಾಡಿ, ಪ್ರವೀಣ್ ಹತ್ಯೆ ಖಂಡಿಸಿ ಪಕ್ಷದ ವಿವಿಧ ಘಟಕಗಳ ಕಾರ್ಯಕರ್ತರು, ಪದಾಧಿಕಾರಿಗಳು ರಾಜಿನಾಮೆ ನೀಡುತ್ತಿದ್ದಾರೆ. ನಾನೂ ಸಹ ರಾಜೀನಾಮೆ ನೀಡಬಹುದು. ಅದು ದೊಡ್ಡ ವಿಷಯವೇನಲ್ಲ. ಅಧಿಕಾರ ಶಾಶ್ವತವಲ್ಲ. ಅವಶ್ಯಕತೆ ಬಿದ್ದರೆ ನಾನೂ ರಾಜೀನಾಮೆ ನೀಡಲು ಸಿದ್ಧನಿದ್ದೇನೆ‌. ಮೊದಲು ನಮ್ಮ ಕಾರ್ಯಕರ್ತರ, ಜನರ ರಕ್ಷಣೆ ಮುಖ್ಯ ಎಂದು ತಿಳಿಸಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ಯುವ ಮೋರ್ಚಾ ಘಟಕದ 42 ಸದಸ್ಯರು  ಸಾಮೂಹಿಕ ರಾಜೀನಾಮೆ ನೀಡಿದ್ದಾರೆ. ಗದಗ ಜಿಲ್ಲೆ ಹಿಂದುಳಿದ ಮೋರ್ಚಾದಲ್ಲಿ ಐವರು ರಾಜೀನಾಮೆ ನೀಡಿದ್ದರೆ, ಶುಕ್ರವಾರ 21 ಸದಸ್ಯರು ರಾಜೀನಾಮೆ ನೀಡಲಿದ್ದಾರೆನ್ನಲಾಗಿದೆ. ಚಿತ್ರದುರ್ಗ ಜಿಲ್ಲೆಯ ಚಿತ್ರದುರ್ಗ ಜಿಲ್ಲೆಯ 9 ಮಂಡಲಗಳ  ಅಧ್ಯಕ್ಷರು ರಾಜೀನಾಮೆ ಸಲ್ಲಿಸಿದ್ದಾರೆ. ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಬಿಜೆಪಿ 29ನೇ ವಾರ್ಡ್‌ನ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಕಾರ್ಯದರ್ಶಿ ರಾಜೀನಾಮೆ ಸಲ್ಲಿಸಿದ್ದಾರೆ. ವಿಜಯಪುರ ಬಿಜೆಪಿ ಜಿಲ್ಲಾಧ್ಯಕ್ಷ, ಹಾಗೂ ವೈದ್ಯಕೀಯ ಪ್ರಕೋಷ್ಠದ ಜಿಲ್ಲಾ ಸಂಚಾಲಕರು ತಮ್ಮ ಹುದ್ದೆಯನ್ನು ತೊರೆದಿದ್ದಾರೆ. ಇನ್ನು ಧಾರವಾಡ-ಹುಬ್ಬಳ್ಳಿ, ತುಮಕೂರು, ರಾಯಚೂರು, ಮೈಸೂರು ಜಿಲ್ಲೆಗಳಲ್ಲಿಯೂ ಬಿಜೆಪಿ ಪ್ರಮುಖರು, ಕಾರ್ಯಕರ್ತರು ರಾಜೀನಾಮೆ ನೀಡಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ | Praveen Nettaru | ಪ್ರವೀಣ್‌ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಇಬ್ಬರ ಬಂಧನ: ಎಸ್‌ಪಿ ಋಷಿಕೇಶ್‌ ಸೋನಾವಣೆ

Exit mobile version