Site icon Vistara News

Praveen nettaru | ತಾಲಿಬಾನ್‌ ಮಾದರಿಯಲ್ಲಿ ನಾವು ಗಲ್ಲಿಗೇರಿಸಲಾಗದು: ಗೃಹ ಸಚಿವ ಆರಗ ಹೇಳಿಕೆ

home minister

ಬೆಂಗಳೂರು: ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತ ಪ್ರವೀಣ್‌ ನೆಟ್ಟಾರು (Praveen nettaru) ಕೊಲೆ ಪ್ರಕರಣ ಸಂಬಂಧ ಜನರಿಗೆ ಆಕ್ರೋಶವಿದೆ. ಅಫ್ಘಾನಿಸ್ತಾನದಲ್ಲಿ ಹತ್ಯೆಗೈದವರನ್ನು ಸಾರ್ವಜನಿಕವಾಗಿ ರಸ್ತೆಯಲ್ಲಿ ನೇಣಿಗೆ ಹಾಕುತ್ತಾರೆ. ಆದರೆ ಕರ್ನಾಟಕದಲ್ಲಿ ನಾವು ಹಾಗೆ ಮಾಡಲಾಗದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.

ಈ ಪ್ರಕರಣ ಸಂಬಂಧ ಈಗಾಗಲೇ 15ಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆದು, ವಿಚಾರಣೆ ಮಾಡಲಾಗುತ್ತಿದೆ. ಪ್ರವೀಣ್ ಮನೆಗೆ ಸಮೀಪವೇ ಕೇರಳ ಗಡಿ ಇದೆ. ಅಲ್ಲಿಂದ ಇಲ್ಲಿಗೆ ಬಂದು ಏನೋ ಮಾಡಿ ಹೋಗುವುದೆಲ್ಲ ಬಹಳ ವರ್ಷಗಳಿಂದ ನಡೆಯುತ್ತಾ ಇದೆ. ಕೇರಳ ಹಾಗೂ ಕರ್ನಾಟಕ ಪೊಲೀಸರು ಜಂಟಿ ಕಾರ್ಯಚಾರಣೆ ಮಾಡಿದರೆ ಮಾತ್ರ ಕೊಲೆಗಡುಕರಿಗೆ ಶಿಕ್ಷೆ ಆಗುತ್ತದೆ. ಈ ನಿಟ್ಟಿನಲ್ಲಿ ಕರ್ನಾಟಕ ಪೊಲೀಸರು ಕೆಲಸ ಮಾಡುತ್ತಿರುವುದಾಗಿ ಆರಗ ಜ್ಞಾನೇಂದ್ರ ಹೇಳಿದ್ದಾರೆ.

ಇದನ್ನೂ ಓದಿ | Praveen nettar| ಮುಗ್ಧ ಪ್ರಾಣಿಗಳ ಮೇಲೆ ಅಪಾರ ಪ್ರೀತಿ, ಅನಾಥ ನಾಯಿ ಮರಿಗಳಿಗೆ ಆಸರೆ ಒದಗಿಸಿದ್ದರು ಪ್ರವೀಣ್‌

ಸೂತಕದ ಮನೆಯಲ್ಲಿ ನಾವು ಸಂಭ್ರಮಿಸುವುದಿಲ್ಲ

ಸಿಎಂ ಬಸವರಾಜ ಬೊಮ್ಮಾಯಿ ಸರ್ಕಾರಕ್ಕೆ ಒಂದು ವರ್ಷ ಹಾಗೂ ಬಿಜೆಪಿ ಸರ್ಕಾರಕ್ಕೆ ಮೂರು ವರ್ಷ ತುಂಬಿದ ಹಿನ್ನೆಲೆಯಲ್ಲಿ ಜನೋತ್ಸವ ಕಾರ್ಯಕ್ರಮ ಗುರುವಾರ ನಡೆಯಬೇಕಿತ್ತು. ಆದರೆ ಪ್ರವೀಣ್‌ ಹತ್ಯೆ ಪ್ರಕರಣವು ತೀವ್ರ ಸ್ವರೂಪ ಪಡೆದುಕೊಂಡು ರದ್ದು ಮಾಡಲಾಯಿತು. ಈ ಕುರಿತು ಪ್ರತಿಕ್ರಿಯಿಸಿದ ಗೃಹ ಸಚಿವರು “”ಮುಖ್ಯಮಂತ್ರಿ ನಿರ್ಧಾರ ಸ್ವಾಗತಾರ್ಹ. ಸೂತಕದ ಮನೆಯಲ್ಲಿ ನಾವು ಏನೂ ಮಾಡುವುದಿಲ್ಲ. ಅದೇ ನಿರ್ಣಯವನ್ನು ಸಿಎಂ ಬೊಮ್ಮಾಯಿ ಮಾಡಿದ್ದಾರೆʼʼ ಎಂದಿದ್ದಾರೆ.

ಮಂಗಳೂರಿಗರು ಬುದ್ಧಿವಂತರು

ಈಗ ದಕ್ಷಿಣ ಕನ್ನಡದ ವಾತಾವರಣ ಶಾಂತಿಯುತವಾಗಿದೆ. ಅಲ್ಲಿನ ಜನರು ತುಂಬಾ ಬುದ್ಧಿವಂತರು. ಘಟನೆ ನಡೆದಾಗ ಆಕ್ರೋಶವನ್ನು ಹೊರಗೆ ಹಾಕುತ್ತಾರೆ. ಹಾಗೆಯೇ ವ್ಯವಸ್ಥೆ ಹಾಳು ಮಾಡದ ರೀತಿ ಸಹಕರಿಸುತ್ತಾರೆ. ಇದು ಅವರ ಸಂಸ್ಕೃತಿ. ಇವತ್ತು ಯಾವುದೇ ಗಲಾಟೆ ನಡೆದಿಲ್ಲ. ಮುನ್ನೆಚ್ಚರಿಕೆ ದೃಷ್ಟಿಯಿಂದ ಪೊಲೀಸರು ಕಟ್ಟುನಿಟ್ಟಿನ ಎಚ್ಚರಿಕೆ ವಹಿಸಿದ್ದಾರೆ ಎಂದು ಆರಗ ಹೇಳಿದ್ದಾರೆ.

ಪ್ರಕರಣ ಸಂಬಂಧ ಕೆಲ ಸಂಘಟನೆಗಳ ಮೇಲೆ ಅನುಮಾನ ಇದೆ. ಮತಾಂಧ ಶಕ್ತಿಗಳು ರಕ್ತಪಾತ ಮಾಡುತ್ತಿದ್ದು, ಏಕತೆ ಭದ್ರತೆಗೆ ಭಂಗ ತರುತ್ತಿವೆ. ಆ ಮೂಲಕ ದೇಶದಲ್ಲಿ ಹಿಂಸಾಚಾರ ಸೃಷ್ಟಿಸುವ ಪ್ರಯತ್ನ ಮಾಡುತ್ತಿದ್ದಾರೆ. ಇಂತಹ ಶಕ್ತಿಗಳನ್ನು ಮಟ್ಟ ಹಾಕಲಾಗುವುದು ಎಂದು ಹೇಳಿದರು.

ಇದನ್ನೂ ಓದಿ | praveen Nettaru| ಪ್ರವೀಣ್‌ ಕೊಲೆಯಲ್ಲಿ ನೇರವಾಗಿ ಭಾಗಿಯಾದ ಬೆಳ್ಳಾರೆ ಮೂಲದ ವ್ಯಕ್ತಿ ಬಂಧನ?

Exit mobile version