ಮಂಗಳೂರು: ಬಿಜೆಪಿ ಯುವ ಮೋರ್ಚಾ ಸದಸ್ಯನಾಗಿದ್ದ, ದಕ್ಷಿಣ ಕನ್ನಡದ ಸುಳ್ಯ ತಾಲೂಕಿನ ಬೆಳ್ಳಾರೆಯ ಪ್ರವೀಣ್ ನೆಟ್ಟಾರು (Praveen Nettaru) ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಈಗ ನಿಷೇಧಕ್ಕೊಳಪಟ್ಟಿರುವ ಪಿಎಫ್‌ಐ ಸಂಘಟನೆ ಕೈವಾಡ ಇರುವುದು ತನಿಖೆ ವೇಳೆ ಈಗಾಗಲೇ ಬಹಿರಂಗವಾಗಿದೆ. ಈಗ ಈ ಪ್ರಕರಣ ಸಂಬಂಧ ಭಯೋತ್ಪಾದಕ ಚಟುವಟಿಕೆಗೆ ಬಳಸಲಾಗುತ್ತಿದ್ದ ಸುಳ್ಯ ಪಿಎಫ್ಐ (PFI) ಕಚೇರಿಯನ್ನು ಎನ್‌ಐಎ (NIA) ಸಂಪೂರ್ಣ ವಶಕ್ಕೆ ಪಡೆದುಕೊಂಡಿದೆ.
ಸುಳ್ಯದ ಗಾಂಧಿನಗರದಲ್ಲಿದ್ದ ಪಿಎಫ್‌ಐ ಕಚೇರಿಯನ್ನು ಎನ್‌ಐಎ ಸಂಪೂರ್ಣ ಜಪ್ತಿ ಮಾಡಿದೆ. ಅಲೆಟ್ಟಿ ರಸ್ತೆಯ ತಾಹಿರಾ ಕಾಂಪ್ಲೆಕ್ಸ್‌ನ ಮೊದಲ ಮಹಡಿಯಲ್ಲಿ ಈ ಕಚೇರಿ ಇತ್ತು. ಈ ಕಟ್ಟಡ ಮಾಲೀಕರಿಗೆ, ದಕ್ಷಿಣ ಕನ್ನಡ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿಗೆ ಜಪ್ತಿ ಮಾಡಿಕೊಳ್ಳಲಾದ ಆದೇಶ ಪ್ರತಿಯನ್ನು ರವಾನೆ ಮಾಡಲಾಗಿದೆ.
ಇದನ್ನೂ ಓದಿ: CRPF Recruitment 2023 : ಸಿಆರ್‌ಪಿಎಫ್‌ನಲ್ಲಿ 9,212 ಕಾನ್ಸ್‌ಟೇಬಲ್ ಹುದ್ದೆಗಳಿಗೆ ನೇಮಕ; ಇಂದಿನಿಂದ ಅರ್ಜಿ ಸಲ್ಲಿಕೆ ಶುರು
ಸದ್ಯ ಎನ್‌ಐಎ ವಶದಲ್ಲಿರುವ ಈ ಜಾಗವನ್ನು ಪರಭಾರೆ ಮಾಡುವಂತಿಲ್ಲ. ಜತೆಗೆ ಯಾರಿಗೂ ಬಾಡಿಗೆ, ಲೀಜ್ ಕೊಡುವಂತಿಲ್ಲ. ಅಲ್ಲಿರುವ ಯಾವುದೇ ವಸ್ತುಗಳು, ಸಾಮಗ್ರಿಗಳನ್ನು ಸಾಗಿಸುವುದು ಇಲ್ಲವೇ ನವೀಕರಣ ಮಾಡುವುದು ಸೇರಿದಂತೆ ಯಾವುದೇ ಚಟುವಟಿಕೆಯನ್ನು ನಡೆಸುವಂತಿಲ್ಲ. ಪ್ರವೀಣ್ ನೆಟ್ಟಾರು ಕೊಲೆ ಸಂಚನ್ನು ಸಹ ಇದೇ ಕಚೇರಿಯಲ್ಲಿ ಮಾಡಲಾಗಿತ್ತು ಎಂದು ಎನ್‌ಐಎ ತನಿಖೆ ವೇಳೆ ತಿಳಿದು ಬಂದಿತ್ತು.
20 ಆರೋಪಿಗಳ ವಿರುದ್ಧ ಚಾರ್ಜ್ಶೀಟ್ ಸಲ್ಲಿಸಿದ್ದ ಎನ್‌ಐಎ
ಪ್ರವೀಣ್ ನೆಟ್ಟಾರು (Praveen Nettaru) ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಅಧಿಕಾರಿಗಳು 20 ಆರೋಪಿಗಳ ವಿರುದ್ಧ ಜನವರಿಯಲ್ಲಿ ಚಾರ್ಜ್ಶೀಟ್ ಸಲ್ಲಿಸಿತ್ತು. ಪ್ರವೀಣ್ ನೆಟ್ಟಾರು ಅವರನ್ನು ಕೊಂದಿದ್ದು ಪಿಎಫ್ಐ ಸದಸ್ಯರೇ ಎಂಬುದು ಸಾಬೀತಾಗಿದೆ. 2022ರ ಜುಲೈ 26ರಂದು ನಡೆದಿದ್ದ ಈ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎನ್‌ಐಎ ಈಗಾಗಲೇ 16 ಆರೋಪಿಗಳನ್ನು ವಶಕ್ಕೆ ಪಡೆದಿದೆ.
ಇದನ್ನೂ ಓದಿ: Viral video: ಕಿಡ್ನಾಪರ್ ಕೈಯಿಂದ ಚಾಣಾಕ್ಷತೆಯಿಂದ ಪಾರಾದ ಪೋರ! ಸಿಸಿಟಿವಿಯಲ್ಲಿ ದಾಖಲಾಯ್ತು ಘಟನೆ
ಈ ಮಧ್ಯೆ ಒಟ್ಟು 20 ಆರೋಪಿಗಳ ವಿರುದ್ಧ ಬೆಂಗಳೂರಿನ ಎನ್‌ಐಎ ವಿಶೇಷ ನ್ಯಾಯಾಲಯದಲ್ಲಿ ಸುಮಾರು 1500 ಪುಟಗಳ ಚಾರ್ಜ್ಶೀಟ್ ಸಲ್ಲಿಸಿರುವ ಎನ್‌ಐಎ, ‘ಸಮಾಜದಲ್ಲಿ-ಜನರಲ್ಲಿ ಭಯ ಹುಟ್ಟಿಸುವ ಸಲುವಾಗಿ ಪ್ರವೀಣ್ ನೆಟ್ಟಾರು ಅವರನ್ನು ಪಿಎಫ್ಐ ಹತ್ಯೆ ಮಾಡಿದೆ. ಭಯೋತ್ಪಾದನೆ, ಕೋಮು ದ್ವೇಷ ಮತ್ತು ಅಶಾಂತಿ ಸೃಷ್ಟಿಸುವುದು ಆ ಸಂಘಟನೆ ಮುಖಂಡರ ಪ್ರಮುಖ ಉದ್ದೇಶ. 2047ರ ಹೊತ್ತಿಗೆ ಇಸ್ಲಾಮಿಕ್ ಆಳ್ವಿಕೆ ಸ್ಥಾಪಿಸುವ ನಿಟ್ಟಿನಲ್ಲಿ ಪಿಎಫ್ಐ ಕಾರ್ಯಕರ್ತರು ಕಾರ್ಯಾಚರಣೆ ನಡೆಸುತ್ತಿದ್ದರು. ವಿವಿಧ ಹಿಂದು ಮುಖಂಡರ ಹತ್ಯೆಗಳನ್ನು ನಡೆಸಲು ಸೇವಾ ತಂಡಗಳು, ಕಿಲ್ಲರ್ ಸ್ಕ್ವಾಡ್ಗಳು ಎಂಬ ರಹಸ್ಯ ತಂಡಗಳನ್ನು ಪಿಎಫ್ಐ ರಚನೆ ಮಾಡಿಕೊಂಡಿತ್ತು. ಒಬ್ಬ ವ್ಯಕ್ತಿಯನ್ನು ಟಾರ್ಗೆಟ್ ಮಾಡಿ, ಆತನನ್ನು ಕೊಲ್ಲಲು ಯೋಜನೆ ರೂಪಿಸುತ್ತಿದ್ದರು. ಅದಕ್ಕಾಗಿ ಸದಸ್ಯರಿಗೆ ತರಬೇತಿ ನೀಡುತ್ತಿದ್ದರು. ಬಳಿಕ ಆಯಾ ಜಿಲ್ಲಾ ಮುಖ್ಯಸ್ಥನಿಗೆ ಸೂಚನೆ ನೀಡುತ್ತಿದ್ದರು. ಹೀಗೆ ಟಾರ್ಗೆಟ್ ಆದ ವ್ಯಕ್ತಿಗಳಲ್ಲಿ ಪ್ರವೀಣ್ ನೆಟ್ಟಾರು ಕೂಡ ಒಬ್ಬನಾಗಿದ್ದ’ ಎಂಬ ಅಂಶಗಳನ್ನು ಎನ್‌ಐಎ ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಿತ್ತು.
ಮಹಮ್ಮದ್ ಶಿಯಾಬ್, ಅಬ್ದುಲ್ ಬಶೀರ, ರಿಯಾಝ್, ಮುಸ್ತಫಾ ಪೈಚಾರ್, ಮಸೂದ್ ಕೆ ಎ, ಕೊಡಾಜೆ ಮೊಹಮ್ಮದ್ ಶರೀಫ್, ಅಬೂಬಕ್ಕರ್ ಸಿದ್ದಿಕ್, ನೌಫಲ್ ಎಂ., ಇಸ್ಮಾಯಿಲ್ ಶಾಫಿ.ಕೆ., ಕೆ ಮಹಮ್ಮದ್ ಇಕ್ಬಾಲ್, ಶಹೀದ್ ಎಂ., ಮಹಮ್ಮದ್ ಶಫೀಕ್ ಜಿ., ಉಮ್ಮರ್ ಫಾರೂಕ್ ಎಂ.ಆರ್., ಅಬ್ದುಲ್ ಕಬೀರ್ ಸಿ.ಎ., ಮುಹಮ್ಮದ್ ಇಬ್ರಾಹಿಂ ಶಾ., ಸೈನುಲ್ ಅಬಿದ್ ವೈ., ಶೇಖ್ ಸದ್ದಾಂ ಹುಸೇನ್., ಜಾಕಿಯಾರ್ ಎ., ಎನ್.ಅಬ್ದುಲ್ ಹಾರಿಸ್., ತುಫೈಲ್ ಎಂ. ಎಚ್. ಎಂಬುವರ ಹೆಸರು ಚಾರ್ಜ್ಶೀಟ್ನಲ್ಲಿ ಉಲ್ಲೇಖವಾಗಿದೆ.
ತಲೆ ಮರೆಸಿಕೊಂಡಿದ್ದ ಪಿಎಫ್‌ಐ ಮುಖಂಡ ತುಫೈಲ್ ಸೆರೆ
ರಾಜಧಾನಿ ಬೆಂಗಳೂರಿನಲ್ಲಿ ತಲೆಮರೆಸಿಕೊಂಡಿದ್ದ ನಿಷೇಧಿತ ಪಿಎಫ್‌ಐ ಸಂಘಟನೆಯ ಮೋಸ್ಟ್ ವಾಂಟೆಡ್ ಕ್ರಿಮಿನಲ್, ಪ್ರವೀಣ್ ನೆಟ್ಟಾರು ಕೊಲೆ ಆರೋಪಿಗಳಲ್ಲಿ ಒಬ್ಬನಾಗಿದ್ದ ಮಡಿಕೇರಿ ಮೂಲದ ತುಫೈಲ್‌ನನ್ನು ಮಾ.5ರಂದು ಎನ್‌ಐಎ ಅಧಿಕಾರಿಗಳು ಬೆಂಗಳೂರಿನಲ್ಲಿ ಬಂಧಿಸಿದ್ದರು.
ಹಲವು ತಿಂಗಳಿನಿಂದ ಈ ಕೊಲೆ ಪ್ರಕರಣದ ಆರೋಪಿಗಾಗಿ ತೀವ್ರ ಶೋಧ ನಡೆಸಲಾಗುತ್ತಿದ್ದು, ಎನ್‌ಐಐ ಹಾಗೂ ಪೊಲೀಸರ ಕಣ್ಣು ತಪ್ಪಿಸಿಕೊಂಡು ಈತ ತಲೆಮರೆಸಿಕೊಂಡಿದ್ದ. ಮಾ. 4ರ ತಡರಾತ್ರಿ ರಹಸ್ಯವಾಗಿ ಕಾರ್ಯಾಚರಣೆ ನಡೆಸಿದ ಎನ್‌ಐಎ ತುಫೈಲ್‌ನನ್ನು ವಶಕ್ಕೆ ಪಡೆದುಕೊಂಡಿತ್ತು. ಕೇಸ್ ನಂಬರ್ 26/2022ರ ಪ್ರಕರಣದ ಆರೋಪಿಯಾಗಿದ್ದ ಈತನಿಗಾಗಿ ಹುಡುಕಾಟ ನಡೆಸಿದ್ದ ಎನ್‌ಐಎ, ಸುಳಿವು ನೀಡಲು ಪಬ್ಲಿಕ್ ನೋಟಿಸ್ ಕೂಡ ನೀಡಿತ್ತು. ತುಫೈಲ್ ಬಗ್ಗೆ ಮಾಹಿತಿ ನೀಡಿದವರಿಗೆ ಐದು ಲಕ್ಷ ಬಹುಮಾನ ಘೋಷಣೆ ಮಾಡಲಾಗಿತ್ತು. ನಗರದ ಅಮೃತಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಈತ ಸಿಕ್ಕಿಬಿದ್ದಿದ್ದ.