ಮಂಗಳೂರು: ಸುಳ್ಯ ತಾಲೂಕು ಬೆಳ್ಳಾರೆಯಲ್ಲಿ ವ್ಯಾಪಾರ ಮಾಡಿಕೊಂಡಿದ್ದ, ಬಿಜೆಪಿ ಯುವ ಮೋರ್ಚಾ ಪದಾಧಿಕಾರಿ ಪ್ರವೀಣ್ ನೆಟ್ಟಾರು ಅವರ ಹತ್ಯೆಯ ಬಗ್ಗೆ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಈ ಕೃತ್ಯದ ಹಿಂದೆ ಪಿಎಫ್‌ಐ ಸಂಘಟನೆಯ ಕೈವಾಡದ ಬಗ್ಗೆ ಬೊಟ್ಟು ಮಾಡಿದೆ.
ಪ್ರಕರಣದ ತನಿಖೆ ನಡೆಸುತ್ತಿರುವ ಎನ್‌ಐಎ ಈ ಬಗ್ಗೆ ಆರಂಭಿಕ ತನಿಖೆಯ ಬಗ್ಗೆ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಆರೋಪಿಗಳು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯನ್ನು ಸಕ್ರಿಯರಾಗಿದ್ದರು ಎಂದು ಹೇಳಿದೆ. ಹೀಗಾಗಿ ಹತ್ಯೆಯಲ್ಲೂ ಪಿಎಫ್‌ಐ ಸಂಘಟನೆ ಕೈವಾಡವನ್ನು ಬೊಟ್ಟು ಮಾಡಲಾಗಿದೆ.
ಆರೋಪಿಗಳು ಸಮಾಜದ ಒಂದು ವರ್ಗದಲ್ಲಿ ಭಯೋತ್ಪಾದನೆಯನ್ನು ಉಂಟುಮಾಡುವ ಪಿತೂರಿ ನಡೆಸಿದ್ದರು. ಈ ದೊಡ್ಡ ಪಿತೂರಿಯ ಭಾಗವಾಗಿ ಪ್ರವೀಣ್ ನೆಟ್ಟಾರು ಹತ್ಯೆ ಮಾಡಲಾಗಿದೆ. ಹತ್ಯೆಯಲ್ಲಿ ಪಿಎಫ್ಐ ಕೈವಾಡ ಇದೆ ಎಂದು ತನಿಖೆಗಳು ಬಹಿರಂಗಪಡಿಸಿವೆ ಅಂತ ಅಧಿಕೃತ ಹೇಳಿಕೆಯಲ್ಲಿ ತಿಳಿಸಿವೆ.
ಮುಂದುವರಿದ ಎನ್‌ಐಎ ದಾಳಿ
ಏಳು ಮಂದಿ ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಬಳಿಕ ಪ್ರಕರಣವನ್ನು ಎನ್‌ಐಎಗೆ ಹಸ್ತಾಂತರ ಮಾಡಿದ್ದರು. ಇದೀಗ ಎನ್‌ಐಎ ಬಂಧಿತ ಆರೋಪಿಗಳು ಹಾಗೂ ಶಂಕಿತರ ಮನೆಗಳಿಗೆ ದಾಳಿ ನಡೆಸುತ್ತಿವೆ. ದಾಳಿಯ ವೇಳೆ ಡಿಜಿಟಲ್ ಸಾಧನಗಳು, ಸುಧಾರಿತ ಶಸ್ತ್ರಾಸ್ತ್ರಗಳು, ನಗದು, ಕೆಲ ದಾಖಲೆಗಳು, ಕರಪತ್ರಗಳು ವಶವಾಗಿವೆ.
ಮೈಸೂರು, ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲೆಯ 33 ಸ್ಥಳಗಳಲ್ಲಿ ಶೋಧ ನಡೆಸಲಾಗಿದೆ. ಪಿಎಫ್‌ಐನ ಹಲವು ಪ್ರಮುಖರ ಮನೆ ಮತ್ತು ಕಚೇರಿಗಳಿಗೆ ಎನ್‌ಐಎ ದಾಳಿ ನಡೆಸಲಾಗಿದೆ ಎಂದು ಹೇಳಿಕೆ ತಿಳಿಸಿದೆ.
ಎನ್‌ಐಎ ವಿಚಾರಣೆಯಲ್ಲಿ ಬಂಧಿತ ಏಳು ಮಂದಿ
ಜುಲೈ ೨೬ರಂದು ರಾತ್ರಿ ೮ ಗಂಟೆಯ ಹೊತ್ತಿಗೆ ಬೆಳ್ಳಾರೆಯ ತಮ್ಮ ಚಿಕನ್ ಸೆಂಟರ್‌ನಲ್ಲಿದ್ದ ಪ್ರವೀಣ್ ನೆಟ್ಟಾರು ಅವರನ್ನು ಬೈಕ್‌ನಲ್ಲಿ ಬಂದ ಮೂವರು ದುಷ್ಕರ್ಮಿಗಳು ಕಡಿದು ಕೊಲೆ ಮಾಡಿದ್ದರು. ಹಿಂದು ಸಂಘಟನೆಗಳಲ್ಲಿ ಸಕ್ರಿಯವಾಗಿದ್ದ, ಜನಾನುರಾಗಿಯಾಗಿದ್ದ ಪ್ರವೀಣ್ ಹತ್ಯೆ ರಾಜ್ಯಾದ್ಯಂತ ಭಾರಿ ಸದ್ದು ಮಾಡಿತ್ತು. ತಕ್ಷಣವೇ ತನಿಖೆಯನ್ನು ಕೈಗೆತ್ತಿಕೊಂಡ ಪೊಲೀಸರು ಜುಲೈ ೨೮ರಂದು ಬೆಳ್ಳಾರೆ ಶಫೀಕ್ ಮತ್ತು ಸವಣೂರಿನ ಮಹಮ್ಮದ್ ಝಾಕಿರ್ ಎಂಬವರನ್ನು ಬಂಧಿಸಿದ್ದರು. ಆಗಸ್ಟ್ ೧ರಂದು ಪಲ್ಲಿಮಜಲು ನಿವಾಸಿಗಳಾದ ಸದ್ದಾಂ ಮತ್ತು ಸುಳ್ಯದ ಹ್ಯಾರಿಸ್ ಎಂಬವರನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿತ್ತು. ಬೆಂಗಳೂರಿನ ಬೇಕರಿಯೊಂದರಲ್ಲಿ ಕೆಲಸಕ್ಕೆ ಇದ್ದ ಇವರು ಕೊಲೆ ನಡೆದ ದಿನ ಬೆಳ್ಳಾರೆಯಲ್ಲಿದ್ದರು ಎಂದು ಹೇಳಲಾಗಿತ್ತು.
ಅಗಸ್ಟ್ ೭ರಂದು ಸುಳ್ಯದ ನಾವೂರು ನಿವಾಸಿ ಅಬೀದ್(22) ಮತ್ತು ಬೆಳ್ಳಾರೆ ನಿವಾಸಿ ನೌಫಲ್(28) ನನ್ನು ಬಂಧಿಸಲಾಗಿತ್ತು. ಇದರಲ್ಲಿ ಅಬೀದ್ ಕೇರಳದ ತಲಶ್ಶೇರಿಯಲ್ಲಿದ್ದ. ಈತ ಮೊದಲು ಬಂಧಿತನಾದ ಶಫೀಕ್ ಜತೆಗೆ ಸಂಪರ್ಕ ಹೊಂದಿದ್ದ ಎನ್ನಲಾಗಿದೆ. ಬಂಧನವಾಗಿರುವ ಏಳನೇ ಆರೋಪಿ ಸುಳ್ಯ ಜಟ್ಟಿಪಳ್ಳದ ಅಬ್ದುಲ್ ಕಬೀರ್.
ಇದನ್ನೂ ಓದಿ | ಪ್ರವೀಣ್ ನೆಟ್ಟಾರು ಕೊಲೆಯ ಹಿಂದಿನ ಅಸಲಿ ಕಾರಣ ಗುರುತಿಸಿದ NIA REPORT: ಏನು ಹೇಳುತ್ತೆ ಅದು?