Site icon Vistara News

Praveen Nettaru | ಸೊಲ್ಯುಷನ್ ನಿಮ್ಮ ಕೈಲೇ ಇದೆ ಸರ್‌‌: ಸಿಎಂ ಮುಂದೆ ಪ್ರವೀಣ್‌ ಪತ್ನಿ ಬೇಸರದ ನುಡಿ

CM At Nettar

ನೆಟ್ಟಾರು (ಸುಳ್ಯ ತಾಲೂಕು, ದಕ್ಷಿಣ ಕನ್ನಡ): ಕೊಲೆಯಾದ ಬಿಜೆಪಿ ಯುವ ಮೋರ್ಚಾ ನಾಯಕ ಪ್ರವೀಣ್‌ ಅವರ ನೆಟ್ಟಾರಿನ ಮನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಗುರುವಾರ ಭೇಟಿ ನೀಡಿದಾಗ ಹೊರಗಡೆ ಒಂದು ರೀತಿಯ ಉದ್ವಿಗ್ನ ಸ್ಥಿತಿ ಇತ್ತು. ಬುಧವಾರ ಬಿಜೆಪಿ ಕಾರ್ಯಕರ್ತರು ಬಿಜೆಪಿಯ ದೊಡ್ಡ ದೊಡ್ಡ ನಾಯಕರೆಲ್ಲರ ವಿರುದ್ಧ ದೊಡ್ಡ ಮಟ್ಟದ ಆಕ್ರೋಶವನ್ನು ಪ್ರದರ್ಶಿಸಿ ನೆಟ್ಟಾರಿನ ಮನೆಗೆ ಬಾರದಂತೆ ತಡೆದಿದ್ದರು. ಗುರುವಾರ ಸಿಎಂ ಬಂದಾಗಲೂ ಇದೇ ಪರಿಸ್ಥಿತಿ ಎದುರಾದೀತಾ ಎಂಬ ಭಯ ಎಲ್ಲರಿಗೂ ಇತ್ತು. ಆದರೆ, ಯಾವುದೇ ಅಂತ ಘಟನೆಗಳು ನಡೆಯದೆ ಸರಾಗವಾಗಿ ನಡೆಯಿತು. ಆದರೆ, ಅಲ್ಲಲ್ಲಿ ಸಣ್ಣ ಮಟ್ಟದ ಆಕ್ರೋಶಗಳು ಸಿಡಿದವು.

ಬಿಜೆಪಿ ಮತ್ತು ಆರೆಸ್ಸೆಸ್‌ನ ಹಿರಿಯ ನಾಯಕರ ಗಡಣದೊಂದಿಗೆ ಸಿಎಂ ಬಸವರಾಜ ಬೊಮ್ಮಾಯಿ ಅವರು ಮನೆಗೆ ತಲುಪಿ ಅಲ್ಲಿ ಪ್ರವೀಣ್‌ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮೂಲಕ ನಮನ ಸಲ್ಲಿಸಿದರು. ಮನೆಯೊಳಗೇ ಕುಳಿತು ಪ್ರವೀಣ್‌ ಅವರ ಪತ್ನಿ ಮತ್ತು ತಾಯಿಯ ಜತೆ ಮಾತನಾಡಿದರು.

ಒಬ್ಬ ಸಾಮಾನ್ಯ ಕಾರ್ಯಕರ್ತನ ಮನೆಗೆ ಬಂದಿದ್ದೀರಿ ಸರ್‌ ಎಂದು ಪ್ರವೀಣ್‌ ಅವರ ಪತ್ನಿ ಮಾತು ಆರಂಭಿಸಿದಾಗ ಬೊಮ್ಮಾಯಿ ಅವರು, ʻʻಆದರೆ ಈ ರೀತಿ ಬರ್ಬಾರ್ದಿತ್ತುʼ ಎಂದರು. ಅದಕ್ಕೆ ತಕ್ಷಣವೇ ಪ್ರತಿಕ್ರಿಯಿಸಿದ ಪ್ರವೀಣ್‌ ಪತ್ನಿ ನೂತನ ಅವರು, ʻʻಈ ರೀತಿ ಬರಬಾರದಿತ್ತು ಅಂತ ಹೇಳುತ್ತೀರಿ. ಆದರೆ, ಸೊಲ್ಯುಷನ್‌ ನಿಮ್ಮ ಕೈಯಲ್ಲೇ ಇದೆ ಸರ್‌. ಇವತ್ತು ನನ್ನ ಗಂಡ, ನಾಳೆ ಯಾರೋ, ನಿನ್ನೆ ಇನ್ಯಾರೋ.. ಇವರಿಗೆ ರಕ್ಷಣೆ ಇಲ್ಲ ಸರ್‌ʼ ಎಂದರು. ದಯವಿಟ್ಟು ರಕ್ಷಿಸಿ ಎಂದು ಮನವಿ ಮಾಡಿದರು.
ಬೊಮ್ಮಾಯಿ ಅವರು ಖಂಡಿತ ಮಾಡೋಣ ಎಂದರು. ನೂತನ ಅವರು ಪ್ರವೀಣ್‌ ಅವರ ಅಂತ್ಯಕ್ರಿಯೆಯ ವೇಳೆ ಸಾವಿರಾರು ಜನ ಸೇರಿದ್ದನ್ನು, ಅವರೆಲ್ಲರೂ ಯಾವತ್ತೂ ಜತೆಗೆ ನಿಲ್ಲುವವರು ಎಂದೂ ಹೇಳಿದರು. ಜತೆಗೆ ಅವರಿಗೆಲ್ಲ ಈಗ ರಕ್ಷಣೆ ಇಲ್ಲದಂತಾಗಿದೆ ಎಂದು ಬೇಸರಿಸಿದರು. ಮುಖ್ಯಮಂತ್ರಿಗಳು ಅವರನ್ನು ಸಂತೈಸಿ, ಪ್ರವೀಣ್‌ ಅವರ ತಾಯಿಯ ನೋವು ಕೇಳಿದರು.

ಅವರಿಗೆ ನಮ್ಮ ನೋವು ಗೊತ್ತಾಗಲಿ
ನೆಟ್ಟಾರಿನ ಮನೆಗೆ ಬಿಗಿ ಬಂದೋಬಸ್ತ್‌ ಏರ್ಪಡಿಸಲಾಗಿತ್ತು. ಅಲ್ಲಿಗೆ ಹೋಗುವ ದಾರಿಯುದ್ದಕ್ಕೂ ಪೊಲೀಸರ ಬೇಲಿಯೇ ಇತ್ತು. ಈ ನಡುವೆ ಕೆಲವು ಕಡೆ ಜನರು ಗುಂಪುಗೂಡಿದ್ದರು. ಮುಖ್ಯಮಂತ್ರಿಗಳ ಮುಂದೆ ತಮ್ಮ ಆಕ್ರೋಶವನ್ನು ಹೇಳಿಕೊಳ್ಳಲೇಬೇಕು ಎಂದು ಮಾತನಾಡಿಕೊಳ್ಳುತ್ತಿದ್ದುದು ಕಂಡುಬಂತು. ʻʻಅವರು ಕೇವಲ ಮಾಧ್ಯಮದ ಜತೆ ಮಾತನಾಡಿ ಹೋದರೆ ಆಗುವುದಿಲ್ಲ. ನಮ್ಮ ನೋವು ಯಾರಲ್ಲಿ ಹೇಳಿಕೊಳ್ಳುವುದುʼʼ ಎಂದು ಹೇಳುತ್ತಿದ್ದರು. ಆದರೆ, ಅವರನ್ನು ಸಮಾಧಾನ ಮಾಡಲಾಯಿತು.
ಈ ನಡುವೆ, ಬುಧವಾರ ಬಿಜೆಪಿ ಕಾರ್ಯಕರ್ತರ ಆಕ್ರೋಶಕ್ಕೆ ಒಳಗಾಗಿ ನೆಟ್ಟಾರಿನ ಮನೆಗೆ ಬಂದು ಮೃತದೇಹಕ್ಕೆ ಅಂತಿಮ ನಮನ ಸಲ್ಲಿಸಲೂ ಅವಕಾಶ ಸಿಗದಿದ್ದ ಹಲವು ಹಿರಿಯ ನಾಯಕರು ಮುಖ್ಯಮಂತ್ರಿಗಳ ಜತೆಗೆ ಮನೆಗೆ ಬಂದು ತರಾಟೆಯಿಂದ ತಪ್ಪಿಸಿಕೊಂಡರು.
ಇದನ್ನೂ ಓದಿ | Praveen Nettaru | ಸಿಎಂ ಮುಂದೆ ದುಃಖ ತೋಡಿಕೊಂಡ ಪ್ರವೀಣ್‌ ಕುಟುಂಬ; ಸರಕಾರದಿಂದ 25 ಲಕ್ಷ ರೂ. ಪರಿಹಾರ

Exit mobile version