Site icon Vistara News

Praveen Nettaru | ಪ್ರವೀಣ್‌ ಹತ್ಯೆಗೆ ಬೆಂಗಳೂರು ಲಿಂಕ್‌, ಇಬ್ಬರು ಪೊಲೀಸ್‌ ವಶಕ್ಕೆ

Praveen Nettaru

ಬೆಂಗಳೂರು: ಬಿಜೆಪಿ ಯುವಮೋರ್ಚಾ ಪದಾಧಿಕಾರಿ ಪ್ರವೀಣ್‌ ನೆಟ್ಟಾರು ಅವರ ಹತ್ಯೆ ಪ್ರಕರಣಕ್ಕೆ ಬೆಂಗಳೂರು ಲಿಂಕ್‌ ಇರುವ ಸಂಶಯ ಮೂಡಿದೆ. ಈ ಹತ್ಯೆಯನ್ನು ಕೇರಳ ಮೂಲದ ಹಂತಕರು ನಡೆಸಿದ್ದಾರೆ ಎಂಬ ಮಾಹಿತಿ ಮೊದಲಿನಿಂದಲೂ ಇದೆ. ಆದರೆ, ಇದಕ್ಕೆ ಸಹಕಾರ ನೀಡಿದವರ ಪಟ್ಟಿಯಲ್ಲಿ ಸ್ಥಳೀಯರು ಮತ್ತು ಇತರರು ಇದ್ದಾರೆ. ಈ ನಡುವೆ, ಸುಳ್ಯ ಪೊಲೀಸರು ಭಾನುವಾರ ಬೆಂಗಳೂರಿಗೆ ಆಗಮಿಸಿ ಇಬ್ಬರು ಶಂಕಿತರನ್ನು ವಶಕ್ಕೆ ಪಡೆದಿದ್ದಾರೆ. ಅವರನ್ನು ಸುಳ್ಯಕ್ಕೆ ಕರೆದೊಯ್ಯಲಾಗಿದ್ದು, ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ.

ಪ್ರವೀಣ್‌ ಹತ್ಯೆಗೆ ಸಂಬಂಧಿಸಿ ಪೊಲೀಸರು ಈಗಾಗಲೇ ಬೆಳ್ಳಾರೆಯ ಶಫೀಕ್‌ ಮತ್ತು ಸವಣೂರಿನ ಝಾಕಿರ್‌ ಎಂಬಿಬ್ಬರನ್ನು ಬಂಧಿಸಿದ್ದಾರೆ. ಈ ನಡುವೆ, ತಲಶ್ಶೇರಿಯಲ್ಲಿ ಅಬೀದ್‌ ಎಂಬಾತನನ್ನು ವಶಕ್ಕೆ ಪಡೆದಿರುವ ಮಾಹಿತಿ ಇದೆ. ಇಷ್ಟಾದರೂ ಮೂಲ ಕೊಲೆಗಾರರು ಯಾರೂ ಸಿಕ್ಕಿಲ್ಲ ಎನ್ನಲಾಗಿದೆ.

ಬೆಂಗಳೂರು ಪೊಲೀಸರು ಸಾಥ್
ಬಂಧಿತ ಆರೋಪಿಗಳು ಮತ್ತು ಇನ್ನೂ ವಶದಲ್ಲಿರುವ ಕೆಲವು ಶಂಕಿತರು ನೀಡಿರುವ ಮಾಹಿತಿಯ ಆಧಾರದಲ್ಲಿ ಸುಳ್ಯ ಪೊಲೀಸರು ಭಾನುವಾರ ರಾಜಧಾನಿಗೆ ಆಗಮಿಸಿದ್ದರು. ಅವರು ಬರುವ ಮೊದಲೇ ಹಿರಿಯ ಐಪಿಎಸ್‌ ಅಧಿಕಾರಿಯೊಬ್ಬರಿಗೆ ಮಾಹಿತಿ ನೀಡಿದ್ದರು ಎನ್ನಲಾಗಿದೆ. ಅ ಹೀಗಾಗಿ ಅವರ ಸಹಾಯದಿಂದ ಇಬ್ಬರು ಆರೋಪಿಗಳನ್ನು ಯಾವುದೇ ಮಾಹಿತಿ ಸೋರಿಕೆ ಆಗದಂತೆ ವಶಕ್ಕೆ ಪಡೆಯಲಾಗಿದೆ.

ಈಗ ಸುಳ್ಯ ಪೊಲೀಸರು ಇಬ್ಬರು ಶಂಕಿತರನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಅವರ ಪಾತ್ರ ಏನು ಎನ್ನುವುದನ್ನು ಪರಿಶೀಲಿಸಲಿದ್ದಾರೆ.

ಗಡಿಯಲ್ಲಿ ಕಟ್ಟೆಚ್ಚರ
ಈ ನಡುವೆ, ಕೇರಳಕ್ಕೆ ಹೊಂದಿಕೊಂಡ ದಕ್ಷಿಣ ಕನ್ನಡ ಜಿಲ್ಲೆಯ ಗಡಿ ಭಾಗಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಗಡಿ ಪ್ರದೇಶದಲ್ಲಿ ಕೆಎಸ್ಆರ್ಪಿ ತುಕಡಿ ನಿಯೋಜನೆ ಮಾಡಲಾಗಿದೆ. ಕೇರಳದಿಂದ ಬರುವ ವಾಹನಗಳ ಬಗ್ಗೆ ನಿಗಾ ವಹಿಸಲಾಗಿದೆ.

ಕೆಲವು ದುಷ್ಕರ್ಮಿಗಳು ಕೇರಳದಿಂದ ಬಂದು ಅಶಾಂತಿ ಮೂಡಿಸುವ ಸಾಧ್ಯತೆ ಇರುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ | ಹತ್ಯೆಗೊಳಗಾದ ಮೂವರ ಮನೆಗೂ ಎಚ್‌ಡಿಕೆ ಭೇಟಿ, ತಲಾ 5 ಲಕ್ಷ ರೂ. ಪರಿಹಾರ,  ಕುಟುಂಬಗಳಿಗೆ ಸಾಂತ್ವನ

Exit mobile version