Site icon Vistara News

Praveen Nettaru| ಪ್ರವೀಣ್‌ ಹತ್ಯೆ ಪ್ರಕರಣ, ಇನ್ನೂ ಇಬ್ಬರ ಬಂಧನ, ಯಾರಿವರು?

Praveen Nettaru

ಮಂಗಳೂರು: ಬಿಜೆಪಿ ಯುವ ಮೋರ್ಚಾ ಪದಾಧಿಕಾರಿಯಾಗಿದ್ದ ಪ್ರವೀಣ್‌ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಇನ್ನೂ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಈ ಮೂಲಕ ಪ್ರಕರಣದಲ್ಲಿ ಬಂಧಿತರ ಸಂಖ್ಯೆ ನಾಲ್ಕಕ್ಕೇರಿದಂತಾಗಿದೆ.

ಬೆಳ್ಳಾರೆ ಪಲ್ಲಿಮಜಲು ನಿವಾಸಿಗಳಾದ ಸದ್ದಾಂ(32) ಮತ್ತು ಹಾರಿಸ್ (42) ಬಂಧಿತ ಆರೋಪಿಗಳು. ಈ ಪ್ರಕರಣದಲ್ಲಿ ಈಗಾಗಲೇ ಇಬ್ಬರು ಆರೋಪಿಗಳಾದ ಶಫೀಕ್ ಮತ್ತು ಜಾಕೀರ್ ಅವರನ್ನು ಜು.28 ರಂದು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿತ್ತು.

ಇವರು ನೀಡಿದ ಮಾಹಿತಿಗಳು, ವಿಚಾರಣೆ ನಡೆಸಿದ ವೇಳೆ ಸಿಕ್ಕಿದ ಲಿಂಕ್‌ಗಳನ್ನು ಆಧರಿಸಿ ಸದ್ದಾಂ ಮತ್ತು ಹಾರಿಸ್‌ ಅವರನ್ನು ಬಂಧಿಸಲಾಗಿದೆ ಎಂದು ದ.ಕ.ಜಿಲ್ಲಾ ಎಸ್ಪಿ ಋಷಿಕೇಶ್ ಸೋನಾವಣೆ ತಿಳಿಸಿದ್ದಾರೆ.

ಜುಲೈ ೨೬ರಂದು ನಡೆದ ಹತ್ಯೆಗೆ ಸಂಬಂಧಿಸಿ ಎಲ್ಲ ಕೋನಗಳಲ್ಲಿ ವಿಚಾರಣೆ ನಡೆಯುತ್ತಿದ್ದು, ತಲಶ್ಶೇರಿಯಲ್ಲಿ ಅಬೀದ್‌ ಎಂಬಾತನನ್ನು ಕೂಡಾ ಪೊಲೀಸರು ವಶದಲ್ಲಿ ಇಟ್ಟುಕೊಂಡಿದ್ದಾರೆ. ಈ ನಡುವೆ, ಇಬ್ಬರು ಆರೋಪಿಗಳನ್ನು ಬೆಂಗಳೂರಿನಲ್ಲಿ ವಶಕ್ಕೆ ಪಡೆದು ಸುಳ್ಯಕ್ಕೆ ಕರೆದೊಯ್ಯಲಾಗಿತ್ತು. ಈಗ ಬಂಧನ ಎಂದು ಪ್ರಕಟಿಸಿರುವವರು ಇದೇ ಆರೋಪಿಗಳು ಎಂದು ಹೇಳಲಾಗುತ್ತಿದೆ.

ಕಸ್ಟಡಿಗೆ ಕೇಳುವ ಸಾಧ್ಯತೆ
ಮೊದಲ ಬಂಧಿತರಾಗಿದ್ದ ಶಫೀಕ್‌ ಮತ್ತು ಜಾಕಿರ್‌ಗೆ ಆರಂಭದಲ್ಲಿ ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿತ್ತು. ಆ ಬಳಿಕ ಐದು ದಿನಗಳ ಪೊಲೀಸ್‌ ಕಸ್ಟಡಿಗೆ ಪಡೆಯಲಾಗಿತ್ತು. ಈಗ ಮೂರು ಮತ್ತು ನಾಲ್ಕನೇ ಆರೋಪಿಗಳನ್ನು ಕೂಡಾ ಕೋರ್ಟ್‌ಗೆ ಹಾಜರುಪಡಿಸಿ ಪೊಲೀಸ್‌ ಕಸ್ಟಡಿಗೆ ಕೇಳುವ ಸಾಧ್ಯತೆ ಇದೆ.

ಜುಲೈ ೨೬ರಂದು ರಾತ್ರಿ ೮.೪೦ರ ಹೊತ್ತಿಗೆ ಮೂವರು ಹಂತಕರು ಬೈಕ್‌ನಲ್ಲಿ ಬಂದು ಪ್ರವೀಣ್‌ ನೆಟ್ಟಾರು ಅವರನ್ನು ಕೊಂದಿದ್ದರು. ಈಗ ಬಂಧನಕ್ಕೆ ಒಳಗಾದವರಲ್ಲಿ ಯಾರೂ ಹಂತಕರಲ್ಲ. ಅವರಿಗೆ ಸಹಕರಿಸಿದವರು ಎಂದು ಹೇಳಲಾಗುತ್ತಿದೆ. ಹೀಗಾಗಿ ನಿಜವಾದ ಕೊಲೆಗಾರರನ್ನು ಹುಡುಕುವ ಕೆಲಸ ಇನ್ನೊಂದು ಕಡೆ ನಡೆಯುತ್ತಲೇ ಇದೆ.

ಇದನ್ನೂ ಓದಿ Praveen Nettaru | ಪ್ರವೀಣ್‌ ಹತ್ಯೆಗೆ ಬೆಂಗಳೂರು ಲಿಂಕ್‌, ಇಬ್ಬರು ಪೊಲೀಸ್‌ ವಶಕ್ಕೆ

Exit mobile version