ಮಂಡ್ಯ : ಮಂಡ್ಯದ ಬಿಸಿಲು ಮಾರಮ್ಮ ದೇವಿಗೆ ಬಲಿ ಕೊಡಲು ತಂದಿದ್ದ ಕೋಳಿ (ಹುಂಜ) ಇದ್ದಕ್ಕಿದ್ದಂತೆ ಎಸ್ಕೇಪ್ ಆಗಿ ಮರ ಏರಿ ಕುಳಿತು ಭಕ್ತರ ಎದೆ ಬಡಿತ ಹೆಚ್ಚಿಸಿತು! ಈ ಘಟನೆ ನಡೆದಿದ್ದು ಮಾರಮ್ಮ ಉತ್ಸವದ ವೇಳೆ.
ಗ್ರಾಮ ದೇವರ ಹಬ್ಬಗಳಲ್ಲಿ ಕೋಳಿ, ಕುರಿಗಳನ್ನ ಬಲಿ ಕೋಡೋದು ಇಲ್ಲಿ ಕಾಮನ್. ಬಿಸಿಲು ಮಾರಮ್ಮ ಉತ್ಸವ ಜೋರಾಗಿ ನಡೆಯುತ್ತಿತ್ತು. ನೂರಾರು ಭಕ್ತರು ಕೈಯಲ್ಲಿ ಕೋಳಿಗಳನ್ನು ಹಿಡಿದುಕೊಂಡು ಬಲಿ ಕೊಡಲು ಸಜ್ಜಾಗಿದ್ದರು. ಹೀಗೆ ದೇವಿಗೆ ಬಲಿ ಕೊಡಲು ತಂದಿದ್ದ ಹುಂಜವೊಂದು ಭಕ್ತೆಯೊಬ್ಬರ ಕೈಯಿಂದ ಚಾಣಾಕ್ಷತನದಿಂದ ತಪ್ಪಿಸಿಕೊಂಡು ಅಲ್ಲಿನ ಮರ ಏರಿ ಕುಳಿತು ಬಿಟ್ಟಿತು.
ದೇವಿಗೆ ಬಲಿ ಸಮರ್ಪಣೆಯ ಗುಂಗಿನಲ್ಲಿದ್ದ ಮಹಿಳೆ ಮುಂದೇನು ಮಾಡಬೇಕೆಂದು ತೋಚದೆ ಕಕ್ಕಾಬಿಕ್ಕಿಯಾದರು. ದೇವಿಗೆ ಅರ್ಪಿಸಬೇಕಿದ್ದ ಹುಂಜ ಈ ರೀತಿ ತಪ್ಪಿಸಿಕೊಂಡು ಹೋಗುವುದು ಮಹಾ ಕಳಂಕ, ಆಪತ್ತಿನ ಸಂಕೇತ ಎಂದು ಗೊಣಗುವ ಮೂಲಕ ಇತರ ಭಕ್ತರು ಆಕೆಯ ಆತಂಕವನ್ನು ಮತ್ತಷ್ಟು ಹೆಚ್ಚಿಸಿದರು! ಭಕ್ತರೆಲ್ಲ ದೇವಿಯನ್ನು ಮರೆತು ಆ ಮರವನ್ನು ಸುತ್ತುವರಿದು ಅದನ್ನು ಸೆರೆ ಹಿಡಿಯುವ ಕಾರ್ಯಾಚರಣೆಯಲ್ಲಿ ಮಗ್ನರಾದರು. ಆದರೆ ಹುಂಜ ಮಾತ್ರ ರೆಂಬೆಯಿಂದ ರೆಂಬೆಗೆ ಹಾರುತ್ತ ಜನರನ್ನು ಯಾಮಾರಿಸತೊಡಗಿತು.
ಇದನ್ನೂ ಓದಿ 😐 ಕೋಲಾರ, ಮಂಡ್ಯ ಭಾಗದಿಂದ ಬಿಜೆಪಿ ಹೆಚ್ಚು ಜನ ಬರುತ್ತಿದ್ದಾರೆ: ಅಚ್ಚರಿ ಮೂಡಿಸಿದ CM ಬೊಮ್ಮಾಯಿ
ಹೀಗೆ ಕೋಳಿ ಸೆರೆ ಕಾರ್ಯಾಚರಣೆ ಒಂದಲ್ಲ, ಎರಡಲ್ಲ ಸುಮಾರು ನಾಲ್ಕು ಗಂಟೆ ಕಾಲ ನಡೆಯಿತು. ಉತ್ಸವದ ನಡುವೆಯೇ ಕೋಳಿ ಹಿಡಿಯುವ ಹರಸಾಹಸ ಮುಂದುವರಿಯಿತು. ಊರ ಹಬ್ಬಕ್ಕಾಗಿ ನೆರೆದಿದ್ದ ಗ್ರಾಮಸ್ಥರಿಗೆ ಟೆನ್ಶನ್ನೋ ಟೆನ್ಶನ್ನು. ಕೋಳಿ ಕೈಗೆ ಸಿಗದೆ ತಪ್ಪಿಸಿಕೊಂಡು ಹೋಗಿ ಊರಿಗೆ ಕಂಟಕ ಎದುರಾದರೆ ಏನು ಮಾಡೋದು ಎಂಬ ಭಯ.
ಅಂತೂ ಇಂತೂ ಆ ಹುಂಜವನ್ನು ಹಿಡಿದು ಮರದಿಂದ ಕೆಳಗಿಳಿಸಿದಾಗ ಭಕ್ತರೆಲ್ಲ ನಿರಾಳಗೊಂಡರು. ಭಕ್ತೆಯಿಂದ ತಪ್ಪಿಸಿಕೊಂಡು ಸುಮಾರು ನಾಲ್ಕು ಗಂಟೆ ಕಾಲ ಜೀವದಾನ ಪಡೆದಿದ್ದ ಹುಂಜ ಕೊನೆಗೂ ದೇವಿಗೆ ಬಲಿ ಆಯಿತು. ಹುಂಜದ ಕತ್ತಿನಿಂದ ರಕ್ತ ಇಳಿದರೆ, ಭಕ್ತರ ಮುಖದಲ್ಲಿ ಬೆವರಿಳಿದಿತ್ತು!
”ಆ ಕೋಳಿ ತಪ್ಪಿಸಿಕೊಂಡು ಹೋದರೂ ಏನೂ ಆಗುತ್ತಿರಲಿಲ್ಲ. ಬಲಿ ಕೊಡಲು ತಂದಿದ್ದ ಕೋಳಿ ಪರಾರಿಯಾದರೆ ಊರಿಗೆ ಆಪತ್ತು, ಕೇಡು ಅನ್ನೋದರಲ್ಲಿ ಅರ್ಥವಿಲ್ಲ. ಈ ರೀತಿ ಮೂಢನಂಬಿಕೆಯ ಮಾತನಾಡಿ ಗ್ರಾಮಸ್ಥರನ್ನು ಹೆದರಿಸುವುದು ಸರಿಯಲ್ಲ” ಎಂದೂ ಕೆಲವರು ಮಾತನಾಡಿಕೊಂಡರು.
ಇದನ್ನೂ ಓದಿ | ಈ ಗ್ರಾಮದ ಮಹಿಳೆಯರು ಮದುವೆಯಾಗಿ ಮೂರೇ ದಿನಕ್ಕೆ ಓಡಿ ಹೋಗುತ್ತಾರೆ !