Site icon Vistara News

Mysore Dasara | ಯೋಗ ಸರಪಳಿ ಮೂಲಕ ವಿವಿಧ ಕಾರ್ಯಕ್ರಮಗಳಿಗೆ ಮುನ್ನುಡಿ

Mysore Dasara

ಮೈಸೂರು: ನಾಡಹಬ್ಬ ದಸರಾ ಮಹೋತ್ಸವದ (Mysore Dasara) ಐದನೇ ದಿನದ ಕಾರ್ಯಕ್ರಮಗಳಿಗೆ ಶುಕ್ರವಾರ ಯೋಗ ಸರಪಳಿ ಮೂಲಕ ಮುನ್ನುಡಿ ಬರೆಯಲಾಯಿತು. ಯೋಗ ದಸರಾ ಸಮಿತಿ ವತಿಯಿಂದ ನೂರಾರು ಯೋಗಪಟುಗಳಿಂದ ತ್ರಿಭುಜಾಕಾರದಲ್ಲಿ ಯೋಗ ಸರಪಳಿ ನಿರ್ಮಾಣ ಮಾಡಿದ್ದು ಗಮನ ಸೆಳೆಯಿತು. ಸಂಸದ ಪ್ರತಾಪ್‌ ಸಿಂಹ ಯೋಗ ಸರಪಳಿ ನಿರ್ಮಾಣ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ವಿದ್ಯೆ ಜೀವನಕ್ಕೆ ಎಷ್ಟು ಅಗತ್ಯವೋ ಆರೋಗ್ಯಯುತವಾದ ಯೋಗವೂ ಬದುಕಿಗೆ ತುಂಬಾ ಮುಖ್ಯವಾದದ್ದು. ಇದನ್ನು ವರ್ಷಪೂರ್ತಿ ನಾವು ರೂಢಿಯಲ್ಲಿಟ್ಟುಕೊಳ್ಳಬೇಕು ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದರು.

ರೈತ ದಸರಾ ಕಾರ್ಯಕ್ರಮದನ್ನು ನಂದಿಧ್ವಜಕ್ಕೆ ಪುಷ್ಪಾರ್ಚನೆ ಹಾಗೂ ನಗಾರಿ ಭಾರಿಸುವ ಮೂಲಕ ಸಚಿವರಾದ ಬಿ.ಸಿ.ಪಾಟೀಲ್ ಹಾಗೂ ಎಸ್.ಟಿ.ಸೋಮಶೇಖರ್ ಉದ್ಘಾಟಿಸಿದರು. ಮೆರವಣಿಗೆಯಲ್ಲಿ ಭಾಗವಹಿಸಿದ್ದ ವಿವಿಧ ಜನಪದ ಕಲಾತಂಡಗಳು ಹಾಗೂ ಜೋಡೆತ್ತುಗಳು, ಟಗರುಗಳು ಗಮನ ಸೆಳೆದವು. ಹಾವೇರಿ ಜಿಲ್ಲೆಯಿಂದ ಬಂದಿದ್ದ ಟಗರು ಪ್ರಮುಖ ಆಕರ್ಷಣೆಯಾಗಿತ್ತು. ಮೈಸೂರಿನ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಬಳಿಯಿಂದ ಮೆರವಣಿಗೆ ಆರಂಭಿಸಲಾಯಿತು. ನಗರದ ಪ್ರಮುಖ ರಸ್ತೆಯಲ್ಲಿ ಸಾಗಿ ಜೆ.ಕೆ.ಮೈದಾನಕ್ಕೆ ತಲುಪಿತು.

ಇದನ್ನೂ ಓದಿ | Navaratri 2022 | ಸರಸ್ವತಿ ಪೂಜೆ ಎಂದು? ಪೂಜೆ ಹೇಗೆ ಮಾಡಬೇಕು?

ಟಾಂಗಾ ಸವಾರಿ ಶುರು
ಅರಮನೆ ಕೋಟೆ ಆಂಜನೇಯಸ್ವಾಮಿ ದೇವಾಲಯ ಆವರಣದಲ್ಲಿ ಟಾಂಗಾ ಸವಾರಿಗೆ ಚಾಲನೆ ನೀಡಲಾಯಿತು. ಸಾಂಸ್ಕೃತಿಕ ಉಡುಪುಗಳಲ್ಲಿ ಆಗಮಿಸಿದ್ದ 43 ದಂಪತಿ ಟಾಂಗಾ ಸವಾರಿ ಮಾಡಿದರು. ಅರಮನೆ, ಕೆ.ಆರ್.ವೃತ್ತ, ಜಗನ್‌ಮೋಹನ ಅರಮನೆ, ಪರಕಾಲ ಮಠ ಸೇರಿದಂತೆ ನೂರಾರು ಪಾರಂಪರಿಕ ತಾಣಗಳ ಬಗ್ಗೆ ಈ ವೇಳೆ ಮಾಹಿತಿ ನೀಡಲಾಯಿತು.

ನಾಡಹಬ್ಬಕ್ಕೆ ಜಲಕ್ರೀಡೆಗಳ ಸೊಗಸು
ದಸರಾ ಕ್ರೀಡಾ ಸಮಿತಿಯಿಂದ ಮೈಸೂರು ತಾಲೂಕಿನ ಉಂಡವಾಡಿ‌ ಗ್ರಾಮದಲ್ಲಿ ಆಯೋಜಿಸಿದ್ದ ರೋಮಾಂಚನಕಾರಿ ಅನುಭವ ನೀಡುವ ಸಾಹಸ ಕ್ರೀಡೆಗಳಿಗೆ ಶಾಸಕ ಜಿ.ಟಿ.ದೇವೇಗೌಡ ಚಾಲನೆ ನೀಡಿದರು. ಸ್ಪೀಡ್ ಬೋಟ್, ಜೆಟ್‌ಸ್ಕಿ, ಕಯಾಕಿಂಗ್, ಬನಾನಾ ರೈಡ್, ಬಂಪರ್ ರೈಡ್ ಸೇರಿ ಹತ್ತಾರು ಕ್ರೀಡೆಗಳನ್ನು ಆಯೋಜಿಸಲಾಗಿತ್ತು. ಕಾವೇರಿ ಹಿನ್ನೀರಿನ ವಿಹಂಗಮ ನೋಟ ಕಣ್ತುಂಬಿಕೊಳ್ಳಲು ಹಾಗೂ ರಿಯಾಯಿತಿ ದರದಲ್ಲಿ ಸಾರ್ವಜನಿಕರಿಗೆ ಸಾಹಸ ಕ್ರೀಡೆಗಳನ್ನು ಪರಿಚಯಿಸಲು ಕಾರ್ಯಕ್ರಮ ಆಯೋಜಿಸಲಾಗಿತ್ತು.

ಬ್ಲಾಕ್‌ನಲ್ಲಿ ದಸರಾ ಗೋಲ್ಡ್ ಕಾರ್ಡ್‌ ಮಾರಾಟ; ಎಫ್‌ಐಆರ್‌ ದಾಖಲು
ದಸರಾ ಗೋಲ್ಡ್ ಕಾರ್ಡ್‌ಗಳನ್ನು ಬ್ಲಾಕ್‌ನಲ್ಲಿ ಮಾರಿದವರ ವಿರುದ್ಧ ಎಫ್‌ಐಆರ್ ದಾಖಲು ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ತಿಳಿಸಿದ್ದಾರೆ. ಕಾಳ ಸಂತೆಯಲ್ಲಿ ದಸರಾ ಗೋಲ್ಡ್ ಕಾರ್ಡ್‌ ಮಾರಾಟ ಮಾಡುತ್ತಿರುವ ಬಗ್ಗೆ ನನಗೆ ಮಾಹಿತಿ ಬಂದಿದೆ. ಹೀಗಾಗಿ ಅಧಿಕೃತ ವೆಬ್‌ಸೈಟ್‌ನಲ್ಲೇ ಗೋಲ್ಡ್ ಕಾರ್ಡ್ ಖರೀದಿಸಬೇಕು ಎಂದು ಮನವಿ ಮಾಡಿದ್ದಾರೆ. ದಸರಾ ವೀಕ್ಷಣೆಗೆ ಬರುವ ದೇಶ-ವಿದೇಶದ ಪ್ರವಾಸಿಗರು ಮತ್ತು ಸಾರ್ವಜನಿಕರ ಅನುಕೂಲಕ್ಕಾಗಿ ಜಿಲ್ಲಾಡಳಿತ ಬಿಡುಗಡೆ ಮಾಡಿರುವ ದಸರಾ ಗೋಲ್ಡ್‌ ಕಾರ್ಡ್‌ನ್ನು ಕಾಳಸಂತೆಯಲ್ಲಿ ಡಬಲ್‌ ರೇಟಿಗೆ ಮಾರಾಟ ಮಾಡಲಾಗುತ್ತಿತ್ತು. ಹೀಗಾಗಿ ಸಾರ್ವಜನಿಕರಿಂದ ಅಸಮಾಧಾನ ವ್ಯಕ್ತವಾದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಕ್ರಮ ಕೈಗೊಂಡಿದೆ. 5000 ರೂ.ಗಳಿಗೆ ಸಿಗುವ ಗೋಲ್ಡ್‌ ಕಾರ್ಡ್‌, 7ರಿಂದ 10 ಸಾವಿರ ರೂ.ಗಳಿಗೆ ಮಾರಾಟ ಮಾಡಲಾಗುತ್ತಿದೆ.

ಇದನ್ನೂ ಓದಿ | ಧವಳ ಧಾರಿಣಿ ಅಂಕಣ | ವರ್ಷಕ್ಕೆ ಒಂದಲ್ಲ, ನಾಲ್ಕು ನವರಾತ್ರಿ ಹಬ್ಬಗಳು!

Exit mobile version