Site icon Vistara News

Karnataka CM: ಸಿದ್ದು, ಡಿಕೆಶಿ ಪ್ರಮಾಣವಚನ ಸಮಾರಂಭಕ್ಕೆ 1 ಲಕ್ಷ ಜನ ನಿರೀಕ್ಷೆ; ಕಂಠೀರವದಲ್ಲಿ ಸಿದ್ಧತೆ

preparations are on in Kanteerava stadium for the sworn in ceremony

preparations are on in Kanteerava stadium for the sworn in ceremony

ಬೆಂಗಳೂರು: ರಾಜ್ಯದ 24ನೇ ಮುಖ್ಯಮಂತ್ರಿಯಾಗಿ (karnataka CM) ಹಿರಿಯ ಕಾಂಗ್ರೆಸ್‌ ನಾಯಕ ಸಿದ್ದರಾಮಯ್ಯ (Siddaramaiah) ಅವರು ಅಧಿಕಾರ ಸ್ವೀಕರಿಸುವ ಸಮಾರಂಭ ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ (Kanteerava stadium) ಮೇ 20ರಂದು ಮಧ್ಯಾಹ್ನ 12.30ಕ್ಕೆ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿಯಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ (DK Shivakumar) ಕೂಡಾ ಅಧಿಕಾರ ಮತ್ತು ಗೌಪ್ಯತೆಯ ಪ್ರತಿಜ್ಞೆ ಸ್ವೀಕರಿಸಲಿದ್ದಾರೆ. ಇದರ ಜತೆಗೆ ಕೆಲವು ಮಂತ್ರಿಗಳು ಕೂಡಾ ಅಧಿಕಾರ ಸ್ವೀಕರಿಸುವ ಸಾಧ್ಯತೆ ಇದೆ.

ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕಾಗಿ ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ಸಿದ್ಧತೆಗಳು ಆರಂಭಗೊಂಡಿವೆ. ನಿಜವೆಂದರೆ, ಬುಧವಾರ ಒಂದು ಹಂತದಲ್ಲಿ ಗುರುವಾರವೇ ಪ್ರಮಾಣವಚನ ಎಂಬ ಸುದ್ದಿ ಹರಡಿತ್ತು. ಅದಕ್ಕೆ ಪೂರಕವಾಗಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸೂಚನೆಯಂತೆ ಕಂಠೀರವ ಸ್ಟೇಡಿಯಂನಲ್ಲಿ ಕಾರ್ಯಕ್ರಮಕ್ಕೆ ಸಿದ್ಧತೆ ಆರಂಭಿಸಲಾಗಿತ್ತು. ಆದರೆ, ಕೆಲವೇ ಹೊತ್ತಿನಲ್ಲಿ ಗುರುವಾರ ಪ್ರಮಾಣವಚನ ನಡೆಯುವುದಿಲ್ಲ ಎಂದು ತಿಳಿಯುತ್ತಿದ್ದಂತೆಯೇ ಸಿದ್ಧತೆಗಳನ್ನು ವಾಪಸ್‌ ಪಡೆಯಲಾಗಿತ್ತು.

ಆದರೆ, ಗುರುವಾರ (ಮೇ 18) ಅಧಿಕೃತವಾಗಿ ಪ್ರಮಾಣವಚನ ಸಮಾರಂಭದ ಘೋಷಣೆ ಮಾಡಲಾಗಿದ್ದು, ಮೇ 20ರಂದು ಮಧ್ಯಾಹ್ನ 12.30ಕ್ಕೆ ಕಾರ್ಯಕ್ರಮ ಆಯೋಜಿಸಲಾಗಿರುವುದರಿಂದ ಸಿದ್ಧತೆಗಳನ್ನು ಆರಂಭಿಸಲಾಗಿದೆ.

ಈಗಾಗಲೇ ಕಂಠೀರವ ಸ್ಟುಡಿಯೋಗೆ ಕುರ್ಚಿಗಳು ಮತ್ತು ವೇದಿಕೆಯ ಪರಿಕರಗಳನ್ನು ತಂದು ಇಡಲಾಗಿದೆ. ಶುಕ್ರವಾರಿಂದಲೇ ಅವುಗಳನ್ನು ಜೋಡಿಸುವ ಕಾರ್ಯಗಳು ನಡೆಯುವ ಸಾಧ್ಯತೆ ಇದೆ. ಪ್ರಮಾಣ ವಚನದ ದಿನ ಸುಮಾರು ಒಂದು ಲಕ್ಷ ಜನರು ಭಾಗಿಯಾಗುವ ನಿರೀಕ್ಷೆ ಇದೆ.

ಕ್ರೀಡಾಂಗಣದಲ್ಲಿ ಸುಮಾರು 35000 ಸೀಟುಗಳ ವ್ಯವಸ್ಥೆ ಇದೆ. ಇದರಲ್ಲಿ ಪ್ರಮುಖರು, ಜನಪ್ರತಿನಿಧಿಗಳು, ಆಹ್ವಾನಿತರಿಗೆ ಅವಕಾಶ ನೀಡಿ, ಉಳಿದುದನ್ನು ಸಾರ್ವಜನಿಕರಿಗೆ ಬಿಡಲಾಗುತ್ತದೆ. ಉಳಿದಂತೆ ಮೈದಾನಕ್ಕೆ ಮ್ಯಾಟ್‌ ಹಾಕಲಾಗುತ್ತಿದ್ದು, ಅಲ್ಲೂ ದೊಡ್ಡ ಪ್ರಮಾಣದಲ್ಲಿ ಜನರಿಗೆ ಅವಕಾಶ ಸಿಗಲಿದೆ.

3,000ಕ್ಕೂ ಅಧಿಕ ಪೊಲೀಸರ ನಿಯೋಜನೆ

ಲಕ್ಷಾಂತರ ಮಂದಿ ಭಾಗವಹಿಸುತ್ತಿರುವ ಹಿನ್ನೆಲೆಯಲ್ಲಿ ಭದ್ರತೆಗಾಗಿ 3 ಸಾವಿರಕ್ಕೂ ಹೆಚ್ಚು ಪೊಲೀಸರ ನಿಯೋಜನೆ ಮಾಡಲಾಗಿದೆ. ಕೆ ಎಸ್ ಆರ್ ಪಿ , ಹೋಂಗಾರ್ಡ್, ಟ್ರಾಫಿಕ್ ಸಿಬ್ಬಂದಿ ಸೇರಿ 3000ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ಈಗಾಗಲೇ ಗೊತ್ತು ಮಾಡಲಾಗಿದೆ. ವಿಶೇಷ ಪೊಲೀಸ್ ಆಯುಕ್ತ ಸಲೀಂ, ಡಿಸಿಪಿ ಸೆಂಟ್ರಲ್ ಶ್ರೀನಿವಾಸ್ ಗೌಡ ನೇತೃತ್ವದಲ್ಲಿ ಭದ್ರತೆ ಒದಗಿಸಲಾಗುತ್ತಿದೆ. ಪ್ರತಿಯೊಬ್ಬರನ್ನೂ ಮೆಟಲ್ ಡಿಟೆಕ್ಟರ್ ನಲ್ಲಿ ಪರಿಶೀಲನೆ ನಡೆಸಿದ ಬಳಿಕವೇ ಒಳಗೆ ಪ್ರವೇಶ ನೀಡಲಾಗುತ್ತಿದೆ.

ನಾನಾ ರಾಜ್ಯಗಳ ನಾಯಕರ ಆಗಮನ ನಿರೀಕ್ಷೆ

ಕಾರ್ಯಕ್ರಮದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ ಮತ್ತಿತರ ಕಾಂಗ್ರೆಸ್‌ ಹೈಕಮಾಂಡ್‌ ನಾಯಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಇದರ ಜತೆಗೆ ಕಾಂಗ್ರೆಸ್‌ ಅಡಳಿತ ಇರುವ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು ಆಗಮಿಸಲಿದ್ದಾರೆ. ಸಮಾರಂಭದಲ್ಲಿ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ತೆಲಂಗಾಣ ಸಿಎಂ ಟಿ.ಎಸ್.‌ ಚಂದ್ರಶೇಖರ ರಾವ್‌, ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್‌ ಭಾಗವಹಿಸುವುದು ಬಹುತೇಕ ಖಚಿತವಾಗಿದೆ. ಮಮತಾ ಹಾಗೂ ಸ್ಟಾಲಿನ್‌ ಇಬ್ಬರೂ ಕರ್ನಾಟಕದ ಸಿಎಂ ಆಗುವ ವಿಚಾರದಲ್ಲಿ ಸಿದ್ದರಾಮಯ್ಯ ಪರ ಬ್ಯಾಟಿಂಗ್‌ ಮಾಡಿದ್ದರು. ಇವರ ಜತೆಗೆ ಉತ್ತರಪ್ರದೇಶದ ಎಸ್‌ಪಿ ನಾಯಕ ಅಖಿಲೇಶ್‌ ಯಾದವ್‌ ಕೂಡ ಭಾಗವಹಿಸಲಿದ್ದಾರೆ.

ಈ ನಡುವೆ ಸಮಾರಂಭದಲ್ಲಿ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಭಾಗವಹಿಸುವುದರಿಂದ ಅಲ್ಲಿನ ಅಧಿಕಾರಿಗಳು ಆಗಮಿಸಿ ಪರಿಶೀಲನೆ ನಡೆಸಿದರು.

ಕಾರ್ಯಕ್ರಮ ಆಯೋಜನೆಗೆ ಅಧಿಕೃತ ಮನವಿ

ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮವನ್ನು ಆಯೋಜಿಸುವಂತೆ ಕಾಂಗ್ರೆಸ್‌ ಪಕ್ಷದ ಪರವಾಗಿ ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ಅವರಿಗೆ ಮನವಿ ಸಲ್ಲಿಸಲಾಗಿದೆ. ಕಾಂಗ್ರೆಸ್‌ ಪರವಾಗಿ ಮಾಜಿ ಡಿಸಿಎಂ ಜಿ. ಪರಮೇಶ್ವರ್‌ ಅವರು ಮನವಿ ಸಲ್ಲಿಸಿದರು.

ಇದನ್ನೂ ಓದಿ : Karnataka CM: ಸಿದ್ದರಾಮಯ್ಯ 24ನೇ ಮುಖ್ಯಮಂತ್ರಿ; ಇಲ್ಲಿದೆ ಇದುವರೆಗೆ ರಾಜ್ಯವನ್ನಾಳಿದ ಸಿಎಂಗಳ ಪಟ್ಟಿ

Exit mobile version