Site icon Vistara News

Mysore Dasara 2022 | ದಸರಾ ಕುಸ್ತಿಗೆ ಅಖಾಡ ಸಜ್ಜು, ಈ ಬಾರಿ ಅದ್ಧೂರಿ ಪಂದ್ಯಾವಳಿ ಆಯೋಜನೆಗೆ ಸಿದ್ಧತೆ

Mysore Dasara 2022

| ರಂಗಸ್ವಾಮಿ ಎಂ. ಮಾದಾಪುರ, ಮೈಸೂರು
ನವರಾತ್ರಿ ಉತ್ಸವಕ್ಕೂ ನಾಡ ಕುಸ್ತಿ ಪಂದ್ಯಾವಳಿಗಳಿಗೂ (Mysore Dasara 2022) ಶತಮಾನದ ನಂಟು. ವರ್ಷ ಪೂರ್ತಿ ಕುಸ್ತಿ ಪಂದ್ಯಾವಳಿಗಳು ನಡೆದರೂ ದಸರಾ ಕುಸ್ತಿ ಪಂದ್ಯಾವಳಿಗಳಿಗೆ ಇರುವ ಘನತೆ-ಗೌರವವೇ ಬೇರೆ. ಈ ಬಾರಿ ಅದ್ಧೂರಿ ದಸರಾ ಆಯೋಜನೆಯ ಜತೆಯಲ್ಲಿ ಕುಸ್ತಿ ಪಂದ್ಯಾವಳಿಯನ್ನೂ ಅದ್ಧೂರಿಯಾಗಿ ಸಂಘಟಿಸಲು ಸಿದ್ಧತೆಗಳು ನಡೆಯುತ್ತಿವೆ.

ಹೊರ ರಾಜ್ಯ, ಜಿಲ್ಲೆಗಳ ಕುಸ್ತಿ ಪೈಲ್ವಾನರನ್ನು ಆಕರ್ಷಿಸುವ ಸಲುವಾಗಿ ಪ್ರತಿ ವರ್ಷದಂತೆ ಪೋಸ್ಟರ್‌ ವಿನ್ಯಾಸಗೊಳಿಸಲಾಗಿದ್ದು, ಸೆಪ್ಟೆಂಬರ್ 19ರಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಪೋಸ್ಟರ್ ಬಿಡುಗಡೆ ಮಾಡಲಿದ್ದಾರೆ. 18ರಂದು ಜೋಡಿ ಕಟ್ಟುವ ಕಾರ್ಯ ನಡೆಯಲಿದೆ. ಅಂದರೆ ದಸರಾ ಕುಸ್ತಿ ಸ್ಪರ್ಧೆಗಳಲ್ಲಿ ಯಾರೊಂದಿಗೆ ಸೆಣಸಾಡಬೇಕು ಎಂಬುದು ಅಂದೇ ನಿಗದಿಯಾಗಲಿದೆ.

ಇದನ್ನೂ ಓದಿ | ಮೈಸೂರು ದಸರಾ ಉದ್ಘಾಟನೆಗೆ ಬರ್ತಾರೆ ರಾಷ್ಟ್ರಪತಿ ದ್ರೌಪದಿ ಮುರ್ಮು: ಮುಖ್ಯಮಂತ್ರಿ ಬೊಮ್ಮಾಯಿ ಘೋಷಣೆ

ವಯಸ್ಸು, ತೂಕ, ದೇಹದಾರ್ಢ್ಯತೆ, ವೈಯಕ್ತಿಕ ಮಾಹಿತಿಗಳ ಆಧಾರದ ಮೇಲೆ ಹಿರಿಯ ಉಸ್ತಾದ್​ಗಳು ಜೋಡಿ ಕಟ್ಟಲಿದ್ದಾರೆ. ಪ್ರಸಕ್ತ ಸಾಲಿನ ಕುಸ್ತಿ ಪಂದ್ಯಾವಳಿಗಳನ್ನು ಸೆಪ್ಟೆಂಬರ್ 26ರಿಂದ ಅಕ್ಟೋಬರ್ 2ರವರೆಗೆ ಆಯೋಜಿಸಲು ತೀರ್ಮಾನಿಸಲಾಗಿದೆ. ಸೆ.26ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ನಾಡಹಬ್ಬವನ್ನು ಉದ್ಘಾಟಿಸಲಿದ್ದಾರೆ. ಅಂದು ಸಂಜೆ ವಸ್ತು ಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿರುವ ಡಿ. ದೇವರಾಜ ಅರಸು ವಿವಿಧೋದ್ದೇಶ ಕ್ರೀಡಾಂಗಣದಲ್ಲಿ ನಾಡ ಕುಸ್ತಿ ಪಂದ್ಯಾವಳಿಗೆ ಚಾಲನೆ ನೀಡಲಾಗುವುದು.

ಸಂಜೆ ಹೊತ್ತಿಗೆ ಕುಸ್ತಿ ಪಂದ್ಯಾವಳಿಗೆ ಚಾಲನೆ ನೀಡಲಾಗುವುದು. ಅಂದು ಅರಮನೆ ಅಂಗಳದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮುಖ್ಯಮಂತ್ರಿ ಉದ್ಘಾಟಿಸಿ, ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಅದಕ್ಕೂ ಮುನ್ನ ಮುಖ್ಯಮಂತ್ರಿಗಳೇ ಕುಸ್ತಿ ಅಖಾಡಕ್ಕೆ ಬಂದು ಪೈಲ್ವಾನ್​ಗಳ ಬೆನ್ನು ತಟ್ಟಬಹುದು. ಅವರ ಅನುಪಸ್ಥಿತಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಕ್ರೀಡಾ ಸಚಿವ ನಾರಾಯಣಗೌಡ ಅವರೂ ಉದ್ಘಾಟಿಸಬಹುದು.

ಅಖಾಡ ಸಜ್ಜು
ದೇಹವನ್ನು ಹುರಿಗೊಳಿಸಿದ ಪೈಲ್ವಾನರು ಲಂಗೋಟಿ ಧರಿಸಿ ಮಟ್ಟಿ ಮಣ್ಣಿನ ಮೇಲೆ ಜಗಜಟ್ಟಿಗಳಂತೆ ಬಿಗಿಪಟ್ಟುಗಳನ್ನು ಹಾಕುವುದನ್ನು ನೋಡುವುದೇ ಹಬ್ಬ. ಇದಕ್ಕಾಗಿ ಅಖಾಡವನ್ನು ಸಜ್ಜುಗೊಳಿಸುವುದೂ ಅತ್ಯಂತ ಶ್ರದ್ಧಾಭಕ್ತಿಯ ಕಾರ್ಯ. ಪ್ರತಿ ವರ್ಷ ಗರಡಿ ಮನೆಗಳಲ್ಲಿ ಮಹಾಲಕ್ಷ್ಮಿ ಹಬ್ಬದಂದು ಹೊಸ ಮಣ್ಣು ತರಲಾಗುತ್ತದೆ. ಕಸರತ್ತಿಗೆ ಬಳಸುವ ಕಲ್ಲು, ಗುಂಡು, ಬಳೆ, ಗದೆ, ಕೊಂತ ಮುಂತಾದವುಗಳನ್ನು ಶುಚಿಗೊಳಿಸಿ ಪೂಜೆ ಸಲ್ಲಿಸಲಾಗುತ್ತದೆ. ಪ್ರತಿ ವರ್ಷವೂ ದಸರಾ ಕುಸ್ತಿ ನಡೆಯುವ ಡಿ.ದೇವರಾಜ ಅರಸು ವಿವಿಧೋದ್ದೇಶ ಕ್ರೀಡಾಂಗಣದ ಕುಸ್ತಿ ಅಖಾಡಕ್ಕೆ ಈಗಾಗಲೇ ಹೊಸ ಮಟ್ಟಿ ಹಾಕಲಾಗಿದೆ. ಹಳೆಯ ಮಟ್ಟಿಯನ್ನು ಟ್ರ್ಯಾಕ್ಟರ್​ನಿಂದ ಉಳುಮೆ ಮಾಡಿ ಹೊಸ ಮಣ್ಣು ಸೇರಿಸಿ ಕರ್ಪೂರ ಬೆರೆಸಿ ಅಖಾಡ ಸಿದ್ಧಪಡಿಸಲಾಗುತ್ತಿದೆ.

ಗರಿಗೆದರಿದ ಗರಡಿಗಳು
ಕುಸ್ತಿ ಪಂದ್ಯಾವಳಿ ಎಂದರೆ ದೈಹಿಕ ಸಾಮರ್ಥ್ಯ ಹಾಗೂ ನೈಪುಣ್ಯತೆ ಸಮಾಗಮ. ಕೋವಿಡ್ ನಿಯಂತ್ರಿಸಲು ದೈಹಿಕ ಅಂತರ ಕಾಯ್ದುಕೊಳ್ಳುವುದು ಅನಿವಾರ್ಯವಾಗಿದ್ದರಿಂದ ಎರಡು ವರ್ಷಗಳಿಂದ ಕುಸ್ತಿ ಪೈಲ್ವಾನರ ತಾಲೀಮು ನಿಲ್ಲಿಸಿದ್ದರು. ಗರಡಿ ಮನೆಗಳು ಬಾಗಿಲು ಹಾಕಿದ್ದವು. ಪಂದ್ಯಾವಳಿ ನಡೆಸಲು ಅನುಮತಿ ಸಿಗುತ್ತಿರಲಿಲ್ಲ. ಹೀಗಾಗಿ ಪ್ರಸಕ್ತ ಸಾಲಿನ ದಸರಾ ಮಹೋತ್ಸವವನ್ನು ಅದ್ಧೂರಿಯಾಗಿ ಆಚರಿಸಲು ತೀರ್ಮಾನಿಸಿರುವುದರಿಂದ ಗರಡಿ ಮನೆಗಳಲ್ಲಿ ಚಟುವಟಿಕೆಗಳು ಗರಿಗೆದರಿವೆ. ಉಸ್ತಾದ್​ಗಳು ತಮ್ಮ ಶಿಷ್ಯರನ್ನು ದಸರಾಕ್ಕೆ ಸಜ್ಜುಗೊಳಿಸುತ್ತಿದ್ದಾರೆ. ಪೈಲ್ವಾನರು ಬಿಡುವಿಲ್ಲದ ತಾಲೀಮು ನಡೆಸುತ್ತಿದ್ದಾರೆ. ಹುಲಿ ಹೆಜ್ಜೆ, ಡೇಕ್ನಿ, ಕಟಾಪ್, ಹನುಮಾನ್ ದಂಡೆ, ಚಪ್ಪಡಿ ದಂಡೆ, ಬಸ್ಕಿ ಹೀಗೆ ಹಲವಾರು ರೀತಿಯ ಕಸರತ್ತುಗಳಲ್ಲಿ ತಲ್ಲೀನರಾಗಿದ್ದಾರೆ.

ದಸರಾ ಕುಸ್ತಿ ಪಂದ್ಯಾವಳಿಗಳನ್ನು ವ್ಯವಸ್ಥಿತವಾಗಿ ಸಂಘಟಿಸಲು ಎಲ್ಲ ರೀತಿಯ ತಯಾರಿ ಮಾಡಿಕೊಳ್ಳುತ್ತಿದ್ದೇವೆ. ಸೆಪ್ಟೆಂಬರ್ 26ರಿಂದ ಸ್ಪರ್ಧೆಗಳು ನಡೆಯಲಿದ್ದು, ಒಂದು ದಿನ ರಜೆ ಇರಲಿದೆ. ನಾಡ ಕುಸ್ತಿ ಹಾಗೂ ಮ್ಯಾಟ್‌ ಕುಸ್ತಿ ಎರಡೂ ಸ್ಪರ್ಧೆಗಳನ್ನೂ ಅಚ್ಚುಕಟ್ಟಾಗಿ ಆಯೋಜಿಲಾಗುವುದು.
ಹರ್ಷವರ್ಧನ್, ಭೂ ಸ್ವಾಧೀನ ಅಧಿಕಾರಿ, ಕುಸ್ತಿ ಪಂದ್ಯಾವಳಿ ಉಪ ಸಮಿತಿ ಕಾರ್ಯದರ್ಶಿ

ಮೈಸೂರು ನಗರದಲ್ಲಿ ಈ ಹಿಂದೆ 74 ಗರಡಿಗಳು ಇದ್ದವು. ಈಗ 35 ಇವೆ. ದಸರಾ ಕಿಶೋರ, ದಸರಾ ಕುಮಾರ, ದಸರಾ ಕಂಠೀರವ ಪ್ರಶಸ್ತಿಗಳಿಗೆ ನಡೆಯುವ ಸೆಣಸಾಟ ದಸರಾ ಕುಸ್ತಿ ಪಂದ್ಯಾವಳಿಯ ಆಕರ್ಷಣೆಯಾಗಿದೆ. ನಾಡ ಕುಸ್ತಿಯೊಂದಿಗೆ ರಾಜ್ಯಮಟ್ಟದ ಮ್ಯಾಟ್‌ ಕುಸ್ತಿ ಪಂದ್ಯಾವಳಿ ಆಯೋಜನೆ ಮಾಡಲಾಗುತ್ತದೆ. ಮಹಿಳೆಯರಿಗಾಗಿ ಕಳೆದ ವರ್ಷ ದಸರಾ ಕಿಶೋರಿ ಪ್ರಶಸ್ತಿ ಸ್ಥಾಪಿಸಿದ್ದು, ಈ ಬಾರಿಯೂ ಮುಂದುವರಿಸಲಾಗುತ್ತದೆ.

ಇದನ್ನೂ ಓದಿ | Dasara Holiday | ಶಾಲೆಗಳಿಗೆ ದಸರಾ ರಜೆ ಯಾವಾಗ? ಯಾವ ಜಿಲ್ಲೆಯಲ್ಲಿ ರಜೆ ಮಾರ್ಪಾಡು?

Exit mobile version