Site icon Vistara News

ಕೀನ್ಯಾದಲ್ಲಿ ಮೊಳಗಲಿದೆ ಕನ್ನಡ ಡಿಂಡಿಮ: ನಾವಿಕೋತ್ಸವ ವಿಶ್ವ ಕನ್ನಡ ಸಮ್ಮೇಳನಕ್ಕೆ ಭರದ ಸಿದ್ಧತೆ

navikotsava 2022 kenya

ಬೆಂಕಿ ಬಸಣ್ಣ, ನ್ಯೂಯಾರ್ಕ್
“ಎಲ್ಲಾದರು ಇರು, ಎಂತಾದರು ಇರು, ಎಂದೆಂದಿಗೂ ನೀ ಕನ್ನಡವಾಗಿರು” ಎಂಬ ಕುವೆಂಪು ಅವರ ಮಾತಿನಂತೆ ಸಾಗರದಾಚೆ ಅಮೆರಿಕ ದೇಶದಲ್ಲಿ ಮೂವತ್ತು, ನಲವತ್ತು ವರ್ಷಗಳಿಂದ ನೆಲೆಸಿದರೂ ಇಲ್ಲಿಯ ಅನಿವಾಸಿ ಕನ್ನಡಿಗರು ತಮ್ಮ ಕನ್ನಡತನವನ್ನು ಬಿಟ್ಟಿಲ್ಲ.

ಇದಕ್ಕೆ ಸಾಕ್ಷಿ ಎನ್ನುವಂತೆ ಅಮೆರಿಗನ್ನಡಿಗರು ನಾವಿಕ (ನಾವು ವಿಶ್ವ ಕನ್ನಡಿಗರು) ಸಂಸ್ಥೆಯ ಮೂಲಕ ವಿಶ್ವ ಕನ್ನಡ ಸಮ್ಮೇಳನಗಳನ್ನು ಏರ್ಪಡಿಸುತ್ತಾ ಬಂದಿದ್ದಾರೆ. ಅಮೆರಿಕದಲ್ಲಿರುವ ನಾವಿಕ (ನಾವು ವಿಶ್ವ ಕನ್ನಡಿಗರು) ಸಂಸ್ಥೆ ಹಾಗೂ ಕೀನ್ಯಾ ದೇಶದ ಕನ್ನಡ ಸಾಂಸ್ಕೃತಿಕ ಸಂಘ ಜಂಟಿಯಾಗಿ ಆಯೋಜಿಸುತ್ತಿರುವ 6ನೇ ನಾವಿಕೋತ್ಸವ ವಿಶ್ವ ಕನ್ನಡ ಸಮ್ಮೇಳನವು ಆಫ್ರಿಕಾ ಖಂಡದ ಕೀನ್ಯಾ ದೇಶದ ರಾಜಧಾನಿಯಾದ ನೈರೋಬಿಯಲ್ಲಿ ಸೆಪ್ಟೆಂಬರ್ 9 ಮತ್ತು 10ನೇ ತಾರೀಕು ನಡೆಯಲಿದೆ.

“ನಾವಿಕ ಸಂಸ್ಥೆಯು ಬೆಸ ವರ್ಷಗಳಲ್ಲಿ  ಅಮೆರಿಕದಲ್ಲಿ ಮತ್ತು ಸಮ ವರ್ಷಗಳಲ್ಲಿ ಕರ್ನಾಟಕದಲ್ಲಿ ಸಮ್ಮೇಳನಗಳನ್ನು ನಡೆಸುತ್ತಾ ಬಂದಿದೆ. ಆದರೆ ಇದೇ ಮೊಟ್ಟ ಮೊದಲ ಬಾರಿಗೆ ಆಫ್ರಿಕಾ ಖಂಡದಲ್ಲಿ ನಾವಿಕೋತ್ಸವ   ಸಮ್ಮೇಳನವನ್ನು  ಆಯೋಜಿಸಲಾಗುತ್ತಿದೆ. ಕೋವಿಡ್ ಕಾರಣದಿಂದ ಕಳೆದ ಎರಡು ನಾವಿಕ ಸಮ್ಮೇಳನಗಳನ್ನು ವರ್ಚುಯಲ್ ಆಗಿ ಮಾಡಲಾಗಿತ್ತು. ಮೂರು ವರ್ಷಗಳ ನಂತರ ಕನ್ನಡಾಭಿಮಾನಿಗಳೆಲ್ಲ ಒಂದೇ ಸೂರಿನಡಿ ಸೇರಿ ಭೌತಿಕವಾಗಿ ಬೃಹತ್ ಸಮಾವೇಶವನ್ನು ಮಾಡುತ್ತಿರುವುದು ರೋಮಾಂಚನ ತರಿಸುತ್ತಿದೆ “ ಎಂದು ನಾವಿಕ ಸಂಸ್ಥೆಯ ಅಧ್ಯಕ್ಷರಾದ  ಮಂಜುನಾಥ್ ರಾವ್ ತಿಳಿಸಿದ್ದಾರೆ.

“ಸೆಪ್ಟೆಂಬರ್ ನಾಲ್ಕನೇ ತಾರೀಕಿನ ಸಂಜೆ ನಮ್ಮ ಅತಿಥಿಗಳಿಗಾಗಿ “ಕರೋಗ” ಎಂಬ ಭರ್ಜರಿ ಔತಣಕೂಟವನ್ನು ಏರ್ಪಡಿಸಲಾಗುವುದು. ನಾವಿಕೋತ್ಸವ ಸಮ್ಮೇಳನವನ್ನು ನೈರೋಬಿಯ ಜೈನ್ ಭವನದಲ್ಲಿ ಸೆಪ್ಟೆಂಬರ್ 9 ಮತ್ತು 10ನೇ ತಾರೀಕು ನಡೆಸಲಾಗುತ್ತಿದ್ದು, ವಿವಿಧ ದೇಶಗಳಿಂದ ಆಗಮಿಸುತ್ತಿರುವ ಕನ್ನಡಿಗರಿಗೆ ವಸತಿ, ಊಟ, ವಿಹಾರ, ಮನರಂಜನೆ ಸೇರಿ ಸಕಲ ವ್ಯವಸ್ಥೆಗಳನ್ನು ಮಾಡಲಾಗುತ್ತಲಿದೆ” ಎಂದು ಕೀನ್ಯಾ ಕನ್ನಡ ಸಾಂಸ್ಕೃತಿಕ ಸಂಘದ ಚೇರ್ಮನ್ನರಾದ ರವಿಕಿರಣ್ ಬೆಳವಾಡಿ ತಿಳಿಸಿದ್ದಾರೆ.

ಈ ನಾವಿಕೋತ್ಸವದ ಸಹ -ಸಂಚಾಲಕರಾಗಿ ಶಿವಕುಮಾರ್, ಡಾ।। ಅನು ಭಟ್, ಕಿನ್ಯಾದ ಶ್ರೀವತ್ಸ ಪ್ರಸಾದ್ ಮತ್ತು ಸಲಹೆಗಾರರಾಗಿ ನಾವಿಕದ ಮಾಜಿ ಅಧ್ಯಕ್ಷರಾದ ವಲ್ಲೀಶ ಶಾಸ್ತ್ರಿ ಸೇವೆ ಸಲ್ಲಿಸುತಿದ್ದಾರೆ. ಸಮ್ಮೇಳನದ ಸಾಂಸ್ಕೃತಿಕ ಕಾರ್ಯಕ್ರಮಗಳ ನೇತೃತ್ವವನ್ನು ರಾಮರಾವ್ ಮತ್ತು ಕನ್ನಡ-ಕಲಿ ಕಾರ್ಯಕ್ರಮಗಳ ಜವಾಬ್ದಾರಿಯನ್ನು ರಜನಿ ಮಹೇಶ್ ವಹಿಸಿಕೊಂಡಿದ್ದಾರೆ.  

ಈ ನಾವಿಕೋತ್ಸವ ಸಮ್ಮೇಳನದಲ್ಲಿ ವುಮೆನ್ಸ್ ಫೋರಮ್, ಎಜುಕೇಶನ್‌ ಫೋರಮ್ , ಯೂಥ್ ಫೋರಮ್, ಮೆಡಿಕಲ್ ಫೋರಮ್ ಮುಂತಾದವುಗಳನ್ನು ಆಯೋಜಿಸಲಾಗುತ್ತಿದೆ. CME (Continued Medical Education ) ಫೋರಮ್‌ನ ಚೇರ್ಮನ್ ಆಗಿ ಡಾಕ್ಟರ್ ನವೀನ್ ಉಲಿ ಸೇವೆ ಸಲ್ಲಿಸುತ್ತಿದ್ದಾರೆ. ಸ್ಮರಣ ಸಂಚಿಕೆಯ ಮುಂದಾಳತ್ವವನ್ನು ಪುಷ್ಪಲತಾ ಮತ್ತು ಸಂಜೋತಾ ಪುರೋಹಿತ ವಹಿಸಿದ್ದಾರೆ.

ಬಿಸಿನೆಸ್ ಫೋರಮ್
ಆಫ್ರಿಕಾದಲ್ಲಿ ಹಣ ಹೂಡಿಕೆ ಮತ್ತು ಔದ್ಯೋಗಿಕ ಕ್ಷೇತ್ರದಲ್ಲಿಯ ಅವಕಾಶಗಳನ್ನು ಕೇಂದ್ರವಾಗಿಸಿರಿಕೊಂಡು ತಜ್ಞರಿಂದ ಸಂವಾದ ಕಾರ್ಯಕ್ರಮ ನಡೆಸಲಾಗುವುದೆಂದು ಬಿಸಿನೆಸ್-ಫೋರಮ್ ಚೇರ್ಮನ್ ಬೆಂಕಿ ಬಸಣ್ಣ ತಿಳಿಸಿದ್ದಾರೆ. ಈ ಬಿಸಿನೆಸ್ ಫೋರಮ್ ಕಮಿಟಿಯಲ್ಲಿ ಕೀನ್ಯಾ ದೇಶದ ಜಯತೀರ್ಥ ಕರ್ಜಗಿ, ಬಾಲಾಜಿ ಬೆಂಗಳೂರು ಮತ್ತು ಆಲ್‌ಫ್ರೆಡ್‌ ಹಾಗೂ ಅಮೆರಿಕದ ಶಿವಕುಮಾರ್, ಅಶೋಕ್ ಕಟ್ಟಿಮನಿ, ಡಾ. ಅನು ಭಟ್ ಸೇವೆ ಸಲ್ಲಿಸುತ್ತಿದ್ದಾರೆ.

“ವಿನೋದ- ವಿಹಾರ- ವಿನಿಮಯ” ಎಂಬ ಘೋಷಣೆಯೊಂದಿಗೆ ನಡೆಯಲಿರುವ ಎರಡು ದಿವಸಗಳ ಈ ವಿಶ್ವ ಕನ್ನಡ   ಸಮ್ಮೇಳನದಲ್ಲಿ ಸಂಗೀತ, ನೃತ್ಯ, ನಾಟಕ, ಕನ್ನಡ ಕಲಿ, ಯಕ್ಷಗಾನ ಹೀಗೆ ಅನೇಕ ಕಾರ್ಯಕ್ರಮಗಳ ರಸದೌತಣವನ್ನು ಉಣಬಡಿಸಲಾಗುವುದು. ಜತೆಗೆ ನಮ್ಮ ಕರ್ನಾಟಕದ ಚರಿತ್ರೆ, ಪರಂಪರೆ, ಇತಿಹಾಸ ಮತ್ತು ಸಂಸ್ಕೃತಿಯನ್ನು ಬಿಂಬಿಸುವ ಅಮೋಘ ಮೆರವಣಿಗೆಯನ್ನು ಆಯೋಜಿಸಲಾಗಿದೆ.

ವಿಶೇಷ ಆಕರ್ಷಣೆಗಳು
ಈ ಕಾರ್ಯಕ್ರಮದ ಒಂದು ವಿಶೇಷವೆಂದರೆ ಕೀನ್ಯಾದ ಆದಿವಾಸಿ ಜನರು ಕನ್ನಡ ಹಾಡುಗಳಿಗೆ ತಮ್ಮ ಆಫ್ರಿಕನ್ ಶೈಲಿಯಲ್ಲಿ ನೃತ್ಯ ಮಾಡಲಿದ್ದಾರೆ. ಸಿಹಿ ಕಹಿ ಚಂದ್ರು ಅವರ ನೇತೃತ್ವದಲ್ಲಿ ಬೆಂಗಳೂರಿನಿಂದ ಬರುತ್ತಿರುವ ಅಡುಗೆ ಭಟ್ಟರಿಂದ “ಬೊಂಬಾಟ್ ಭೋಜನ” ನಡೆಯಲಿದೆ.

ಈ ನಾವೀಕೋತ್ಸವದಲ್ಲಿ ಮನೋಮೂರ್ತಿ ಅವರ ಮ್ಯೂಸಿಕಲ್ ನೈಟ್, ನಡೆದಾಡುವ ವಯೋಲಿನಿಸ್ಟ್ ಅನೀಶ್,   ಜಗತ್ ಪ್ರಸಿದ್ಧ ಮಾಂತ್ರಿಕ ಕುದ್ರೋಳಿ ಗಣೇಶ ಅವರಿಂದ ಮ್ಯಾಜಿಕ್ ಶೋ, ರಂಗಧ್ವನಿ ತಂಡದಿಂದ ನಾಟಕ ಜತೆಗೆ ಕೀನ್ಯಾ ಮತ್ತು ಅಮೆರಿಕ ಕನ್ನಡಿಗರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

ಮನೋಮೂರ್ತಿಯವರ ಸಾರಥ್ಯದಲ್ಲಿ ನಡೆಯುತ್ತಿರುವ ಮ್ಯೂಸಿಕಲ್ ನೈಟ್‌ನಲ್ಲಿ ಪ್ರಖ್ಯಾತ ಗಾಯಕರಾದ ಹೇಮಂತ್ ಕುಮಾರ್, ಚಿನ್ಮಯ್ ಅತ್ರೆಯಸ್, ಮಾನಸಾ ಹೊಳ್ಳ, ಅನುರಾಧ ಭಟ್ ಮತ್ತು ಚೇತನ್ ಸೊಸ್ಕಾ ಅವರುಗಳು ಪ್ರೇಕ್ಷಕರನ್ನು ರಂಜಿಸಲಿದ್ದಾರೆ.

ಆಫ್ರಿಕನ್ ಸಫಾರಿ
ಹೊರದೇಶಗಳಿಂದ ಬರುವ ಅತಿಥಿಗಳಿಗಾಗಿ ಸಪ್ಟೆಂಬರ್ 5 ರಿಂದ 9ನೇ ತಾರೀಖಿನವರೆಗೆ ಆಫ್ರಿಕನ್ ಸಫಾರಿ ಟೂರ್ ಪ್ಯಾಕೇಜ್ ವ್ಯವಸ್ಥೆ ಮಾಡಲಾಗಿದೆ. ಈ ಆಫ್ರಿಕನ್ ಸಫಾರಿಯಲ್ಲಿ ಮಸೈಮಾರ, ಒಲ್ಪಜೇಟ, ನೈವಾಷ ಸರೋವರ ಪ್ರದೇಶಗಳಲ್ಲಿರುವ ಸಾವಿರಾರು ಕಾಡು ಪ್ರಾಣಿಗಳನ್ನು ಅತಿ ಸಮೀಪದಿಂದ ನೋಡುವ ಸುವರ್ಣ ಅವಕಾಶವನ್ನು ಒದಗಿಸಲಾಗಿದೆ

ಸ್ಮರಣ ಸಂಚಿಕೆ
ನಾವಿಕೋತ್ಸವದ ಪ್ರಯುಕ್ತ ಸ್ಮರಣ ಸಂಚಿಕೆಯನ್ನು ಹೊರ ತರುತ್ತಲಿದ್ದು, ಕನ್ನಡ ಅಭಿಮಾನಿಗಳಿಂದ ಲೇಖನ, ಸಣ್ಣ ಕಥೆ, ಕವನ, ಪ್ರಬಂಧ, ನಗೆಹನಿ, ವ್ಯಂಗ್ಯ ಚಿತ್ರಗಳನ್ನು ಆಹ್ವಾನಿಸಲಾಗಿದೆ. ಆಸಕ್ತರು ತಮ್ಮ ಲೇಖನಗಳನ್ನು NVKS.22.Souvenir@gmail.com ಗೆ ಕಳಿಸಬೇಕಾಗಿ ವಿನಂತಿ.

Exit mobile version