ಹುಬ್ಬಳ್ಳಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಇಂದು ಹುಬ್ಬಳ್ಳಿಗೆ ಭೇಟಿ ನೀಡಲಿದ್ದು, ಅಲ್ಲಿ ಪೌರ ಸನ್ಮಾನ ಸ್ವೀಕರಿಸಲಿದ್ದಾರೆ. ನಂತರ ಧಾರವಾಡಕ್ಕೆ ಭೇಟಿ ನೀಡಿ ಐಐಐಟಿ ಉದ್ಘಾಟಿಸಲಿದ್ದಾರೆ.
ಪೌರ ಸನ್ಮಾನದ ಹಿನ್ನೆಲೆಯಲ್ಲಿ ಹುಬ್ಬಳ್ಳಿಗೆ ಆಗಮಿಸುತ್ತಿರುವ ದ್ರೌಪದಿ ಮುರ್ಮು, ಮೈಸೂರಿನಿಂದ ವಿಶೇಷ ವಿಮಾನದ ಮೂಲಕ ಹುಬ್ಬಳ್ಳಿಗೆ ಬರಲಿದ್ದಾರೆ. ಹುಬ್ಬಳ್ಳಿಯ ಜಿಮ್‌ಖಾನಾ ಮೈದಾನದಲ್ಲಿ ಮಧ್ಯಾಹ್ನ 12.45ಕ್ಕೆ ನಡೆಯಲಿರುವ ಕಾರ್ಯಕ್ರಮದಲ್ಲಿ ಪಾಲಿಕೆಯಿಂದ ಪೌರ ಸನ್ಮಾನ ನಡೆಯಲಿದೆ. ಮುರ್ಮು ಕಾರ್ಯಕ್ರಮಕ್ಕೆ ಸಿದ್ಧತೆಗಳು ಪೂರ್ಣವಾಗಿದ್ದು, 5 ಸಾವಿರ ಆಸನಗಳ ವ್ಯವಸ್ಥೆ ಮಾಡಲಾಗಿದೆ.
ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್, ಸಿಎಂ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ಸಚಿವರಾದ ಅಶ್ವತ್ಥನಾರಾಯಣ, ಭೈರತಿ ಬಸವರಾಜ, ಹಾಲಪ್ಪ ಆಚಾರ್, ಶಂಕರ ಪಾಟೀಲ ಮುನೇನಕೊಪ್ಪ, ಮೇಯರ್ ಈರೇಶ ಅಂಚಟಗೇರಿ ಅವರಿಗೆ ವೇದಿಕೆ ಮೇಲೆ ಅವಕಾಶ ಕಲ್ಪಿಸಲಾಗಿದೆ. ಸೆಂಟ್ರಲ್ ಕ್ಷೇತ್ರದ ಶಾಸಕ, ಮಾಜಿ ಸಿಎಂ ಜಗದೀಶ್ ಶೆಟ್ಟರ್‌ಗೆ ವೇದಿಕೆ ಮೇಲೆ ಅವಕಾಶ ನೀಡಿಲ್ಲ. ವೇದಿಕೆಯ ಮೇಲೆ ಕೇವಲ ಒಂಬತ್ತು ಗಣ್ಯರಿಗೆ ಮಾತ್ರ ಅವಕಾಶವಿದೆ.
ಕಾರ್ಯಕ್ರಮಕ್ಕೂ ಮುನ್ನ ಪಾಲಿಕೆ ಸದಸ್ಯರ ಜೊತೆ ರಾಷ್ಟ್ರಪತಿಗಳ ಫೋಟೋ ಸೆಷನ್ ನಡೆಯಲಿದ್ದು, 900 ಗ್ರಾಮ್ ತೂಕದ ಬೆಳ್ಳಿಯ ಸಿದ್ಧಾರೂಢ ಸ್ವಾಮೀಜಿಗಳ ಮೂರ್ತಿಯನ್ನು ಪಾಲಿಕೆ ನೆನಪಿನ ಕಾಣಿಕೆಯಾಗಿ ನೀಡಲಿದೆ. ಹುಬ್ಬಳ್ಳಿ ಕಾರ್ಯಕ್ರಮದ ನಂತರ ಧಾರವಾಡ ಐಐಐಟಿ ಉದ್ಘಾಟನೆಗೆ ತೆರಳಲಿದ್ದಾರೆ.
ರಾಷ್ಟ್ರಪತಿಗಳ ಭೇಟಿ ಹಿನ್ನೆಲೆಯಲ್ಲಿ ಜಿಮ್‌ಖಾನಾ ಮೈದಾನದ ಬಳಿ ಬಿಗಿ ಪೊಲೀಸ್ ಬದೋಬಸ್ತ್ ಏರ್ಪಡಿಸಲಾಗಿದ್ದು, ಬಾಂಬ್ ನಿಷ್ಕ್ರಿಯ ದಳ ಮತ್ತು ಶ್ವಾನ ದಳಗಳಿಂದ ಪರಿಶೀಲನೆ ನಡೆಸಲಾಗಿದೆ. ನಗರದ ವಿವಿಧೆಡೆ ವಾಹನ ಸಂಚಾರ ಮಾರ್ಗ ಬದಲಾವಣೆ ಮಾಡಲಾಗಿದೆ.