ಹುಬ್ಬಳ್ಳಿ: ನೀವು ಪೌರ ಸನ್ಮಾನ ಮಾಡುವ ಮೂಲಕ ಕೇವಲ ಒಬ್ಬ ರಾಷ್ಟ್ರಪತಿಯನ್ನು ಗೌರವಿಸಿದ್ದಲ್ಲ. ಒಡಿಶಾದ ಬಡ ಕುಟುಂಬದ ಹೆಣ್ಣುಮಗಳನ್ನು ಸನ್ಮಾನಿಸಿದ್ದಲ್ಲ. ಇಡಿ ಭಾರತದ ಎಲ್ಲಾ ಹೆಣ್ಣುಮಕ್ಕಳನ್ನು ಗೌರವಿಸಿದ್ದೀರಿ: ಹೀಗೆಂದು ಅಭಿಮಾನದಿಂದ ಹೇಳಿದರು ರಾಷ್ಟ್ರಪತಿ ದ್ರೌಪದಿ ಮುರ್ಮು.
ಹುಬ್ಬಳ್ಳಿಯ ಜಿಮ್‌ಖಾನಾ ಮೈದಾನದಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವತಿಯಿಂದ ನಡೆದ ಮಾಡಲಾದ ಪೌರ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ʻʻಅವಳಿ ನಗರದಕ್ಕೆ ಆಗಮಿಸಿ ನನಗೆ ಬಹಳ ಸಂತೋಷವಾಗಿದೆ. ಭಾರತದ ಗೌರವಾನ್ವಿತ ಅವಳಿ ನಗರ ಹುಬ್ಬಳ್ಳಿ- ಧಾರವಾಡ. ಐತಿಹಾಸಿಕ ನಗರದ ಭಾಗವಾಗಿರುವ ನಿಮಗೆಲ್ಲ ಶುಭಾಶಯಗಳುʼʼ ಎಂದು ಮಾತು ಆರಂಭಿಸಿದ ಅವರು, ʻʻಕನ್ನಡ, ಮರಾಠಿ ಭಾಷೆಗಳ ಅತ್ಯುತ್ತಮ ಸಂಗಮ ಇಲ್ಲಿದೆ. ಎಲ್ಲಾ ಜಾತಿ ಧರ್ಮದ ಜನರು ಇಲ್ಲಿ ಸೌಹಾರ್ದತೆಯಿಂದ ಬದುಕುತ್ತಿದ್ದೀರಿʼʼ ಎಂದು ಕೊಂಡಾಡಿದರು.
ʻʻವಿದ್ಯಾಕಾಶಿ ಎಂದು ಕರೆಸಿಕೊಳ್ಳುವ ಇಲ್ಲಿ ದ.ರಾ. ಬೇಂದ್ರೆ, ವಿ.ಕೃ ಗೋಕಾಕ್ ರಂತಹ ಮಹಾನ್ ಸಾಹಿತಿಗಳು ಇಲ್ಲಿಯವರು ಎಂದು ತಿಳಿದು ಖುಷಿಯಾಯಿತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಕೇಂದ್ರ ಸಚಿವರಾ ಪ್ರಲ್ಹಾದ್ ಜೋಶಿ ನಿಮ್ಮ ನಡುವೆ ಹುಟ್ಟಿ ಬೆಳೆದವರು. ಇಂತಹ ಉತ್ತಮ ನಾಯಕರನ್ನು ನೀವು ನಾಡಿಗೆ ಕೊಟ್ಟಿದ್ದೀರಿʼʼ ಎಂದರು ದ್ರೌಪದಿ ಮುರ್ಮು.
ʻʻಇಡೀ ದೇಶ ಬಸವೇಶ್ವರರ ಸಾಮಾಜಿಕ ಶಿಕ್ಷಣ, ಸಿದ್ಧಾರೂಢರ ಆಧ್ಯಾತ್ಮಿಕ ಸಂದೇಶದಿಂದ ಪ್ರೇರಿತವಾಗಿದೆ. ಗಂಗೂಬಾಯಿ ಹಾನಗಲ್, ಬಸವರಾಜ್ ರಾಜಗುರು ಹಿಂದೂಸ್ತಾನಿ ಸಂಗೀತಕ್ಕೆ ಹೊಸ ಆಯಾಮ ಕೊಟ್ಟಿದ್ದಾರೆ. ಕಿತ್ತೂರು ಚೆನ್ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ತ್ಯಾಗ ಮಾಡಿದ ಮಹಾಮಹಿಳೆʼʼ ಎಂದು ಅಭಿಮಾನದಿಂದ ಹೇಳಿದರು.
ಸನ್ಮಾನ ಮಾಡಿದ್ದೇ ಹೆಮ್ಮೆ
ಪೌರ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು, ʻʻಹು-ಧಾ ಮಹಾನಗರ ಸ್ವಾತಂತ್ರ್ಯ ಹೋರಾಟಕ್ಕೂ ಬಹುದೊಡ್ಡ ಕೊಡುಗೆ ಕೊಟ್ಟಿದೆ. ಸಾಹಿತ್ಯ, ಕಲೆಗಳ ಬೀಡು ಇದಾಗಿದೆ. ಗಂಗೂಬಾಯಿ ಹಾನಗಲ್, ಪಂಡಿತ್ ರಾಜಗುರು, ಭೀಮಸೇನ ಜೋಶಿ ಅವರಂಥ ಮಹಾನ್ ಕಲಾವಿದರು ಧಾರವಾಡದವರು ಎಂದು ಖುಷಿಯಿಂದ ಹೇಳಿದರು.
ʻʻದ್ರೌಪದಿ ಮುರ್ಮು ಅವರು ಸಾಮಾನ್ಯ ಕುಟುಂಬದಲ್ಲಿ ಜನಿಸಿ, ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡಿದವರು. ತಮ್ಮ 18ನೇ ವಯಸ್ಸಿನಲ್ಲೇ ರಾಜಕೀಯಕ್ಕೆ ಧುಮುಕಿ ಅನೇಕ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಅವರ ಸರಳ ನಡೆನುಡಿ, ಜೀವನ ಶೈಲಿ ನಮಗೆ ಮಾದರಿ ಆಗಬೇಕುʼʼ ಎಂದರು. ಇಂಥ ಸಾಧಕರು ನಮ್ಮ ಪಾಲಿಕೆ ವತಿಯಿಂದ ಪೌರ ಸನ್ಮಾನ ಸ್ವೀಕರಿಸಿರೋದು ನಮಗೆ ಹೆಮ್ಮೆಯ ವಿಷಯ ಎಂದರು ಪ್ರಲ್ಹಾದ್ ಜೋಶಿ.
ಗೌರವದ ಸನ್ಮಾನ
ಹುಬ್ಬಳ್ಳಿ -ಧಾರವಾಡ ಮಹಾನಗರ ಪಾಲಿಕೆ ವತಿಯಿಂದ ನಡೆದ ಸನ್ಮಾನದ ವೇಳೆ ರಾಷ್ಟ್ರಪತಿಗಳಿಗೆ ನೆನಪಿನ ಕಾಣಿಕೆಯಾಗಿ ೯೦೦ ಗ್ರಾಂ ತೂಕದ ಶ್ರೀ ಸಿದ್ದಾರೂಢರ ಬೆಳ್ಳಿಯ ವಿಗ್ರಹ ಸಮರ್ಪಣೆ ಮಾಡಲಾಯಿತು. ಏಲಕ್ಕಿ ಹಾರ, ಶಾಲು ಹೊದಿಸಿ ಗೌರವಿಸಲಾಯಿತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಿದ್ಧಾರೂಢರ ಚರಿತ್ರೆ ಪುಸ್ತಕವನ್ನು ನೀಡಿದರು.
ರಾಜ್ಯಪಾಲ ಥಾವರ್ ಚಂದ್ರ ಗೆಹ್ಲೋಟ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ, ಸಚಿವರಾದ ಅಶ್ವತ್ಥ್ ನಾರಾಯಣ, ಶಂಕರ್ ಪಾಟೀಲ್ ಮುನೇನಕೊಪ್ಪ, ಬೈರತಿ ಬಸವರಾಜ್, ಹಾಲಪ್ಪ ಆಚಾರ್, ಹುಬ್ಬಳ್ಳಿ-ಧಾರವಾಡ ಮೇಯರ್ ಈರೇಶ್ ಅಂಚಟಗೇರಿ ವೇದಿಕೆಯಲ್ಲಿದ್ದರು.