Site icon Vistara News

ಸಮಾರಂಭಗಳಲ್ಲಿ ಮಂಗಳಮುಖಿಯರಿಂದ ಮುಜುಗರ: ವಿಧಾನ ಪರಿಷತ್‌ನಲ್ಲಿ ಸಚಿವರು ನೀಡಿದ ಉತ್ತರವೇನು?

kota srinivasa poojari

ವಿಧಾನಪರಿಷತ್‌: ನಗರದ ಸಿಗ್ನಲ್‌ಗಳಲ್ಲಿ ಭಿಕ್ಷುಕರು ಹಾಗೂ ಸಮಾರಂಭಗಳಲ್ಲಿ ಮಂಗಳಮುಖಿಯರು ಮುಜುಗರ ಉಂಟುಮಾಡುವ ಪ್ರಸಂಗಗಳು ಕಂಡುಬಂದಿದ್ದು, ಎರಡು ಮೂರು ತಿಂಗಳಲ್ಲಿ ಸಮಸ್ಯೆ ಬಗೆಹರಿಸಲಾಗುತ್ತದೆ ಎಂದು ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

ನಗರದಲ್ಲಿ ವಾಹನ ದಟ್ಟಣೆ ಇರುವ ಸಿಗ್ನಲ್‌ಗಳಲ್ಲಿ ಭಿಕ್ಷುಕರ ಹಾವಳಿ ಹೆಚ್ಚಾಗಿರುವ ಕುರಿತು ಬಿಜೆಪಿ ಸದಸ್ಯ ಅ. ದೇವೇಗೌಡ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಸಚಿವರು ಉತ್ತರ ನೀಡಿದ್ದಾರೆ.

ಭಿಕ್ಷುಕರ ಹಾವಳಿ ಹೆಚ್ಚಾಗಿರುವುದನ್ನು ಸಚಿವರು ಉತ್ತರದಲ್ಲಿ ಒಪ್ಪಿದ್ದಾರೆ. ಈ ಕುರಿತು ಕ್ರಮ ಕೈಗೊಂಡಿರುವುದನ್ನು ವಿವರಿಸಿರುವ ಸಚಿವರು, ಕರ್ನಾಟಕ ಭಿಕ್ಷಾಟನಾ ನಿಷೇಧ ಅಧಿನಿಯಮ 1975ರ ಪ್ರಕಾರ ಭಿಕ್ಷಾಟನೆಯನ್ನು ನಿಷೇಧಿಸಲಾಗಿದೆ. ಭಿಕ್ಷಾಟನೆಯಲ್ಲಿ ತೊಡಗಿರುವ 18 ವರ್ಷ ಮೇಲ್ಪಟ್ಟ ಮಹಿಳೆಯರು ಹಾಗೂ 16 ವರ್ಷ ಮೇಲ್ಪಟ್ಟ ಪುರುಷರನ್ನು ಬಂಧಿಸಲು ಅವಕಾಶವಿದೆ. 16 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಹಿಳೆಯರು ಹಾಗೂ 16 ವರ್ಷಕ್ಕಿಂತ ಕಡಿಮೆ ವಯಸ್ಸಿನ ಪುರುಷರನ್ನು ಬಂಧಿಸಲು ಅವಕಾಶವಿಲ್ಲ. ಅಂಥವರನ್ನು ಮಹಿಳಾ ಮತ್ತು ಮಕ್ಕಳ ಹಿತರಕ್ಷಣಾ ಸಮಿತಿಗೆ ಒಪ್ಪಿಸಲಾಗುತ್ತದೆ.

ಇದನ್ನೂ ಓದಿ | ಭಿಕ್ಷೆ ಬೇಡುತ್ತಿದ್ದ ಅನಾಥ ಬಾಲಕಿಗೆ SSLCಯಲ್ಲಿ 96% ಅಂಕ

ಸಾರ್ವಜನಿಕ ಸ್ಥಳಗಳಲ್ಲಿ ಭಿಕ್ಷೆ ಬೇಡುತ್ತಿರುವುದು ಕಂಡುಬಂದರೆ ಸಾರ್ವಜನಿಕರು 10581 ಅಥವಾ 9482300400 ಸಂಖ್ಯೆಗೆ ಕರೆ ಮಾಡಬಹುದು. ಭಿಕ್ಷಾಟನೆ ಮಾಡುತ್ತಿರುವವರನ್ನು ಬಂಧಿಸಲು ಹಾಗೂ ರಕ್ಷಿಸಲು 8 ಟಾಸ್ಕ್‌ ಫೋರ್ಸ್‌ ರಚನೆ ಮಾಡಲಾಗಿದೆ. ಆಗಸ್ಟ್‌ ಅಂತ್ಯಕ್ಕೆ 1565 ಪುರುಷರು ಹಾಗೂ 272 ಮಹಿಳಾ ಭಿಕ್ಷುಕರುಗಳನ್ನು ಬಂಧಿಸಲಾಗಿದೆ. ಇವರಲ್ಲಿ 15 ಮಂಗಳಮುಖಿಯರು, 9 ಮಕ್ಕಳನ್ನೂ ರಕ್ಷಣೆ ಮಾಡಲಾಗಿದೆ. ಪುನಃ ಭಿಕ್ಷಾಟನೆಯಲ್ಲಿ ತೊಡಗದಂತೆ ಎಚ್ಚರಿಕೆ ನೀಡಿ, ಮುಚ್ಚಳಿಕೆ ಬರೆಸಿಕೊಂಡು ಮಂಗಳಮುಖಿಯರನ್ನು ಬಿಡುಗಡೆ ಮಾಡಲಾಗಿದೆ.

ಈ ಕುರಿತು ಚರ್ಚಿಸಲು ವಿಶೇಷ ಸಭೆ ಕರೆಯಾಲಾಗಿದೆ. ಮೂರ್ನಾಲ್ಕು ರೀತಿಯ ಭಿಕ್ಷುಕರಿದ್ದಾರೆ. ಮಕ್ಕಳನ್ನು ಬಾಡಿಗೆ ತೆಗೆದುಕೊಂಡು, ಮತ್ತು ಬರುವ ಔಷಧಿ ಕೊಟ್ಟು ಭಿಕ್ಷಾಟನೆ ಮಾಡಲಾಗುತ್ತಿತ್ತು. ಇದೀಗ ಪ್ರಥಮ‌ ಹಂತದ ಕಾರ್ಯಕ್ರಮ ಮಾಡಿ ನಿಯಂತ್ರಣಕ್ಕೆ ತರಲಾಗಿದೆ. ಮಂಗಳ ಮುಖಿಯರು ಸಮಾರಂಭಗಳಲ್ಲಿ ಮುಜುಗರ ಉಂಟು ಮಾಡುತ್ತಿದ್ದಾರೆ. ಕಾನೂನು ಮಂತ್ರಿಗಳ ಜತೆ ಮಾತನಾಡಿ, ಅವರ ರಕ್ಷಣೆ ಮಾಡಲು ನಿರ್ಧಾರ ಮಾಡಲಾಗಿದೆ. ಎರಡ್ಮೂರು ತಿಂಗಳ ಕಾಲದಲ್ಲಿ ಈ ಸಮಸ್ಯೆ ಬಗೆಹರಿಸಲು ಪ್ರಯತ್ನ ಮಾಡುತ್ತೇವೆ ಎಂದು ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

ಇದನ್ನೂ ಓದಿ | ಸಚಿವ ಕೋಟ ಶ್ರೀನಿವಾಸ ಪೂಜಾರಿ ಎಸ್ಕಾರ್ಟ್ ವಾಹನ ಅಪಘಾತ: ಕಾರಿನಲ್ಲಿದ್ದವರು ಸೇಫ್‌

Exit mobile version