Site icon Vistara News

Modi in Karnataka | ರಾಜ್ಯದ ಅಭಿವೃದ್ಧಿಗೆ ಸಂಪೂರ್ಣ ಸಹಕಾರ: ಪ್ರಧಾನಿ ನರೇಂದ್ರ ಮೋದಿ ಭರವಸೆ

ನರೇಂದ್ರ ಮೋದಿ

ಮೈಸೂರು: ದೇಶದ ಆರ್ಥಿಕ ಹಾಗೂ ಆಧ್ಯಾತ್ಮಿಕ ಕೇಂದ್ರ ಕರ್ನಾಟಕ. ಮೈಸೂರಿನಲ್ಲಿ ಹಲವು ಐತಿಹಾಸಿಕ ಹಾಗೂ ಪಾರಂಪರಿಕ ಸ್ಥಳಗಳಿವೆ. ರಾಜ್ಯದಲ್ಲಿ ಡಬಲ್‌ ಎಂಜಿನ್‌ ಸರ್ಕಾರವಿದ್ದು, ಸಬ್‌ ಕಾ ಸಾಥ್‌ ಸಬ್‌ ಕಾ ವಿಕಾಸ್‌ ತತ್ವದಡಿ ಅಭಿವೃದ್ಧಿ ಕೆಲಸ ಮಾಡುತ್ತಿದೆ. ರೈತರು, ಮಹಿಳೆಯರು ಹಾಗೂ ಎಲ್ಲ ವರ್ಗಗಳ ಏಳಿಗೆಗೂ ಶ್ರಮಿಸುತ್ತಿದ್ದೇವೆ. ಕರ್ನಾಟಕದ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಸಂಪೂರ್ಣ ಸಹಕಾರ ನೀಡಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಏರ್ಪಡಿಸಿದ್ದ ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳೊಂದಿಗಿನ ಸಂವಾದ ಕಾರ್ಯಕ್ರಮ ಹಾಗೂ ವಿವಿಧ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಕಾರ್ಯಕ್ರಮದಲ್ಲಿ ಸೋಮವಾರ ಮಾತನಾಡಿದರು. ಕಾರ್ಯಕ್ರಮದಲ್ಲಿ ನಾಗನಹಳ್ಳಿ ರೈಲ್ವೆ ನಿಲ್ದಾಣದ ಕೋಚಿಂಗ್‌ ಟರ್ಮಿನಲ್‌ಗೆ ಅಡಿಗಲ್ಲು, ಅಖಿಲ ಭಾರತ ವಾಕ್‌ ಮತ್ತು ಶ್ರವಣ ಸಂಸ್ಥೆಯ ಶ್ರೇಷ್ಟತಾ ಕೇಂದ್ರವನ್ನು ಉದ್ಘಾಟಿಸಿದರು.

ಕನ್ನಡದಲ್ಲೇ ಭಾಷಣ ಆರಂಭಿಸಿದ ಮೋದಿ, ಮೈಸೂರು ಹಾಗೂ ಕರ್ನಾಟಕದ ಜನತೆಗೆ ಪ್ರೀತಿಯ ನಮಸ್ಕಾರಗಳು. ಕೇಂದ್ರದ ಯೋಜನೆಗಳ ಫಲಾನುಭವಿಗಳೊಂದಿಗೆ ಸಂವಾದ ನಡೆಸಲು ಮೈಸೂರಿಗೆ ಬಂದಿದ್ದೇನೆ ಎಂದು ಹೇಳಿ ಮಾತುಗಳನ್ನು ಮುಂದುವರಿಸಿದರು. ರಾಜ್ಯದಲ್ಲಿ ಡಬಲ್‌ ಎಂಜಿನ್‌ ಸರ್ಕಾರವಿದ್ದು, ಹೆಗಲಿಗೆ ಹೆಗಲು ಕೊಟ್ಟು ಅಭಿವೃದ್ಧಿಯತ್ತ ಹೋಗುತ್ತಿದ್ದೇವೆ. ಕಳೆದ 8 ವರ್ಷಗಳಲ್ಲಿ ಗರೀಬ್‌ ಕಲ್ಯಾಣ್‌ ಯೋಜನೆ ವಿಸ್ತರಿಸಲಾಗಿದೆ. ಒನ್‌ ನೇಷನ್‌ ಒನ್‌ ರೇಷನ್‌ ಕಾರ್ಡ್‌ ಯೋಜನೆ ಜಾರಿ ಮಾಡಲಾಗಿದೆ. ಆಯುಷ್ಮಾನ್‌ ಭಾರತ್‌ ಯೋಜನೆಯಿಂದಾಗಿ ಕಡಿಮೆ ವೆಚ್ಚದಲ್ಲಿ ಉತ್ತಮ ಚಿಕಿತ್ಸೆ ಪಡೆಯಲು ಸಾಧ್ಯವಾಗಿದ್ದು, ಸಮಾಜ ಎಲ್ಲ ವರ್ಗದ ಜನರ ಅಭಿವೃದ್ಧಿಗೆ ಕೇಂದ್ರ ಶ್ರಮಿಸುತ್ತಿದೆ. ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ ಯೋಜನೆಯಲ್ಲಿ ರೈತರ ಖಾತೆಗಳಿಗೆ ಸಹಾಯಧನ ವರ್ಗಾವಣೆಯಾಗುತ್ತಿದೆ. ಪಶುಪಾಲನೆ ಮಾಡುವವರಿಗೆ ಬಡ್ಡಿರಹಿತ ಸಾಲ ಸೌಲಭ್ಯ ನೀಡಲಾಗುತ್ತಿದೆ. ಇದರಿಂದ ಬಡವರಿಗೆ ನಮ್ಮ ಮೇಲೆ ವಿಶ್ವಾಸ ಮೂಡಿದೆ ಎಂದರು.

ಕರ್ನಾಟಕ ರಾಜ್ಯದ ಅಭಿವೃದ್ಧಿಗೆ ಸಂಪೂರ್ಣ ಸಹಕಾರ ನೀಡಿದ್ದೇವೆ. 5,000 ಕಿ.ಮೀ ರಸ್ತೆಗಳ ನಿರ್ಮಾಣಕ್ಕೆ 70,000 ಕೋಟಿ ಅನುದಾನ ನೀಡಿದ್ದೇವೆ. ಮೈಸೂರು ಹಾಗೂ ನಾಗನಹಳ್ಳಿ ರೈಲು ನಿಲ್ದಾಣ ಮೇಲ್ದರ್ಜೆಗೆ ಏರಿಸಲಾಗುತ್ತದೆ. ಹಿಂದಿನ ಸರ್ಕಾರಗಳು ರಾಜ್ಯದ ಅಭಿವೃದ್ಧಿಗೆ 800 ಕೋಟಿ ಮೀಸಲಿಟ್ಟಿದ್ದವು. ಆದರೆ ನಾವು 7,000 ಕೋಟಿ ಮೀಸಲಿಟ್ಟಿದ್ದೇವೆ. ಶೀಘ್ರದಲ್ಲೇ ಅನುದಾನ ಬಿಡುಗಡೆ ಮಾಡುತ್ತೇವೆ, ಮೈಸೂರಿನ ಪ್ರವಾಸೋದ್ಯಮ ಅಭಿವೃದ್ಧಿಗೆ ಶ್ರಮಿಸುತ್ತೇವೆ ಎಂದು ಭರವಸೆ ನೀಡಿದರು.

ಇದಕ್ಕೂ ಮುನ್ನ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಸ್ವಾಗತ ಭಾಷಣ ಮಾಡಿ, ಕಳೆದ 8 ವರ್ಷಗಳಿಂದ ನರೇಂದ್ರ ಮೋದಿ ಅವರ ಸರ್ಕಾರದಲ್ಲಿ ಒಂದೇ ಒಂದು ಭ್ರಷ್ಟಾಚಾರ ನಡೆದಿಲ್ಲ. 12 ವರ್ಷ ಗುಜರಾತ್‌ ಸಿಎಂ ಆಗಿ ಉತ್ತಮ ಆಡಳಿತವನ್ನು ನರೇಂದ್ರ ಮೋದಿ ನೀಡಿದ್ದಾರೆ. ಇದೀಗ ಯೋಗ ದಿನಾಚರಣೆಗೆ ಭೇಟಿ ನೀಡಿರುವ ಅವರಿಗೆ ರಾಜ್ಯ ಹಾಗೂ ಮೈಸೂರು ಜನತೆ ಪರವಾಗಿ ಸ್ವಾಗತಿಸುತ್ತೇನೆ ಎಂದು ಹೇಳಿದರು.

ಸಿಎಂ ಬಸವರಾಜ ಬೊಮ್ಮಾಯಿ ಅವರು ಮಾತನಾಡಿ, ರಾಜ್ಯ ಹಾಗೂ ಮೈಸೂರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಹಲವು ಕೊಡುಗೆಗಳನ್ನು ನೀಡಿ ಎಲ್ಲರ ಹೃದಯಗಳನ್ನು ಗೆದ್ದಿದ್ದಾರೆ. ಭಾರತ ಕಂಡ ಅಪರೂಪದ ಹಾಗೂ ದಿಟ್ಟ ರಾಜಕಾರಣಿ ಮೋದಿಜಿಗೆ ಮೈಸೂರು ಎಂದರೆ ಬಹಳ ಪ್ರೀತಿ. ದೇಶ ಹಲವು ಪ್ರಧಾನಿಗಳನ್ನು ಕಂಡಿದೆಮ ಆದರೆ ಅತ್ಯಂತ ಜನಮನ್ನಣೆ ಗಳಿಸಿರುವ ಪ್ರಧಾನಿ ಎಂದರೆ ಅದು ನರೇಂದ್ರ ಮೋದಿ ಅವರು ಮಾತ್ರ. ಇಂದು ಎಲ್ಲೆಡೆ ಅಧಿಕಾರಕ್ಕಾಗಿ ರಾಜಕಾರಣ ನಡೆಯುತ್ತಿದೆ, ಆದರೆ ಮೋದಿ ಅವರು ಅಭಿವೃದ್ಧಿ ರಾಜಕಾರಣ ಮಾಡುತ್ತಿದ್ದಾರೆ. ದೇಶದ ಆರ್ಥಿಕತೆ ಗಾತ್ರವನ್ನು 5 ಟ್ರಿಲಿಯನ್‌ಗೆ ಏರಿಸಲು ಪ್ರಧಾನಿ ಶ್ರಮಿಸುತ್ತಿದ್ದಾರೆ. ಮೈಸೂರಿಗೆ ಟೂರಿಸಂ ಸರ್ಕೀಟ್‌ ಪ್ರಾರಂಭಿಸಲಾಗುತ್ತದೆ ಎಂದರು.

ಇದನ್ನೂ ಓದಿ | ಅಮ್ಮ ಎಂದರೆ ಕೇವಲ ಪದವಲ್ಲ… ಶತಾಯುಷಿ ತಾಯಿಯ ಜನ್ಮದಿನ ಆಚರಿಸಿದ ಪ್ರಧಾನಿ ನರೇಂದ್ರ ಮೋದಿ

Exit mobile version