ದೋಹಾ: ದೋಹಾದ ಐಡಿಯಲ್ ಇಂಡಿಯನ್ ಸ್ಕೂಲ್‌ನ ನಿರ್ಗಮಿತ ಪ್ರಾಂಶುಪಾಲರಾದ ಸೈಯದ್ ಶೌಕತ್ ಅಲಿ ಅವರಿಗೆ ಭಾರತೀಯ ಸಾಂಸ್ಕೃತಿಕ ಕೇಂದ್ರವು ಆತ್ಮೀಯ ಬೀಳ್ಕೊಡುಗೆ ಸಮಾರಂಭ ನೆರವೇರಿಸಿದೆ. ಕತಾರ್‌ನಲ್ಲಿ ಕನ್ನಡದ ಅಲೆ ಹೆಚ್ಚಿಸಿದ ಅಲಿ ಅವರಿಗೆ ಈ ಸಮಾರಂಭದಲ್ಲಿ ಕರ್ನಾಟಕ ಸಂಘ ಕತಾರ್ ವತಿಯಿಂದ ಸನ್ಮಾನವನ್ನೂ ಮಾಡಲಾಯಿತು.
ಸೈಯದ್ ಶೌಕತ್ ಅಲಿ ಅವರು ಬೆಂಗಳೂರಿನವರಾಗಿದ್ದು, ಕಳೆದ ಹತ್ತು ವರ್ಷಗಳಿಂದ ಕತಾರ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಹತ್ತು ವರ್ಷದ ಅಧಿಕಾರದವಧಿಯಲ್ಲಿ ಅವರು ಅನೇಕ ಕನ್ನಡಪರ ಚಟುವಟಿಕೆಯನ್ನು ಹಮ್ಮಿಕೊಂಡಿದ್ದರು. ಕತಾರ್‌ನಲ್ಲಿ ಕನ್ನಡ ಸಮುದಾಯದ ಬೆಳವಣಿಗೆ ಹಾಗೂ ಅಲ್ಲಿಯ ಶಾಲೆಗಳಲ್ಲಿ ಕನ್ನಡ ಭಾಷೆಯನ್ನು ಅಭಿವೃದ್ಧಿಗೊಳಿಸಲು ಶ್ರಮಿಸಿದ್ದಾರೆ. ಈ ಪರಿಶ್ರಮವನ್ನು ಗುರತಿಸಿ ಕತಾರ್‌ನ ಕನ್ನಡ ಸಂಘದ ವತಿಯಿಂದ ಸನ್ಮಾನಿಸಿ, ಗೌರವಿಸಲಾಗಿದೆ.
ಕಾರ್ಯಕ್ರಮದಲ್ಲಿ ಭಾರತದ ರಾಯಭಾರ ಕಚೇರಿಯ ಮೊದಲನೇ ಕಾರ್ಯದರ್ಶಿ ಶಂಕಪಾಲ್, ಭಾರತೀಯ ಸಂಸ್ಕೃತಿ ಕೇಂದ್ರದ ಅಧ್ಯಕ್ಷ ಪಿ.ಎನ್. ಬಾಬುರಾಜನ್, ಭಾರತೀಯ ಸಾಂಸ್ಕೃತಿಕ ಕೇಂದ್ರದ ಉಪಾಧ್ಯಕ್ಷರು ಸುಬ್ರಹ್ಮಣ್ಯ ಹೆಬ್ಬಾಗಿಲು, ಕತಾರ್‌ನ ವಿವಿಧ ಶಾಲೆಗಳ ಪ್ರಾಂಶುಪಾಲರು, ಭಾರತೀಯ ಸಾಂಸ್ಕೃತಿಕ ಕೇಂದ್ರದ ಪ್ರಧಾನ ಕಾರ್ಯದರ್ಶಿ ಕೃಷ್ಣ ಕುಮಾರ್, ಸಲಹಾ ಸಮಿತಿ ಸದಸ್ಯ ಪ್ರಸಾದ್ ಮತ್ತು ಕರ್ನಾಟಕ ಸಂಘ ಕತಾರ್‌ನ ಅಧ್ಯಕ್ಷ ಮಹೇಶ್ ಗೌಡ ಪಾಲ್ಗೊಂಡಿದ್ದರು.