ರಾಮನಗರ/ನೆಲಮಂಗಲ: ಮಾಗಡಿ ತಾಲೂಕಿನ ಕಂಚುಗಲ್ ಬಂಡೇಮಠದ ಶ್ರೀ ಬಸವಲಿಂಗ ಸ್ವಾಮೀಜಿ (೪೫) ಅವರ ಆತ್ಮಹತ್ಯೆಗೆ ಒಂದು ಖಾಸಗಿ ವಿಡಿಯೊ ಕಾರಣ. ಅದನ್ನು ಹಿಡಿದುಕೊಂಡು ಒಬ್ಬ ಮಹಿಳೆ ಮತ್ತು ಗ್ಯಾಂಗ್ ಅವರನ್ನು ಬ್ಲ್ಯಾಕ್ ಮೇಲ್ ಮಾಡುತ್ತಿತ್ತು ಎಂದು ತಿಳಿದುಬಂದಿದೆ. ಸ್ವಾಮೀಜಿ ಅವರು ಬರೆದಿರುವ ಎರಡು ಪುಟಗಳ ಡೆತ್ ನೋಟದಲ್ಲಿ ಈ ಬಗ್ಗೆ ಉಲ್ಲೇಖ ಮಾಡಿದ್ದಾರೆ ಎಂದು ಹೇಳಲಾಗಿದೆ.
ಒಬ್ಬ ಮಹಿಳೆ ಮತ್ತು ಗ್ಯಾಂಗ್ ತನಗೆ ಕಿರುಕುಳ ಕೊಡುತ್ತಿದ್ದಾರೆ ಎಂದು ಡೆತ್ ನೋಟ್‌ನಲ್ಲಿ ಸ್ವಾಮೀಜಿ ಬರೆದಿದ್ದಾರೆ ಎನ್ನಲಾಗಿದೆ. ಆದರೆ, ಸ್ವಾಮೀಜಿ ಆ ಮಹಿಳೆಯ ಹೆಸರನ್ನು ಹೇಳಿಲ್ಲ. ಕಿರುಕುಳ ನೀಡುತ್ತಿದ್ದ ಗ್ಯಾಂಗ್‌ನವರ ಹೆಸರು ಬರೆದಿದ್ದಾರೆ ಎಂದು ವಿಸ್ತಾರ ನ್ಯೂಸ್‌ಗೆ ಬಲ್ಲ ಮೂಲಗಳಿಂದ ಮಾಹಿತಿ ದೊರಕಿದೆ.
ಸ್ವಾಮೀಜಿಯವರೂ ಭಾಗಿಯಾಗಿರುವ ಒಂದು ಖಾಸಗಿ ವಿಡಿಯೊವನ್ನು ಹಿಡಿದುಕೊಂಡು ಈ ತಂಡ ಕಿರುಕುಳ ನೀಡುತ್ತಿದೆ ಎನ್ನಲಾಗಿದೆ. ಜತೆಗೆ ಆಡಿಯೊ ರೆಕಾರ್ಡಿಂಗ್ ಕೂಡಾ ಇದೆ ಎನ್ನಲಾಗಿದೆ.
ಸೋಮವಾರವೇ ಏಕೆ ಆತ್ಮಹತ್ಯೆ?
ಬಂಡೇ ಮಠ ಅತ್ಯಂತ ಪ್ರಭಾವಿ ಮತ್ತು ಜನಪ್ರಿಯ ಮಠಗಳಲ್ಲಿ ಒಂದು. ಬಹುದೊಡ್ಡ ಭಕ್ತ ವೃಂದವನ್ನು ಹೊಂದಿದೆ. ಇಂಥ ಮಠದಲ್ಲಿ ಈ ರೀತಿಯ ವಿದ್ಯಮಾನಗಳು ನಡೆದಿವೆ ಎನ್ನುವುದು ಪ್ರಚಾರವಾದರೆ ಮಠ ಮತ್ತು ತಮ್ಮ ಮರ್ಯಾದೆಗೆ ಕುಂದುಂಟಾಗುತ್ತದೆ ಎಂದು ಭಾವಿಸಿ ಶ್ರೀಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ.
ಇದು ಸಿದ್ದಗಂಗಾ ಮಠದ ಶಾಖಾ ಮಠವಾಗಿದ್ದು, ಈ ವಿಡಿಯೊದ ವಿಷಯ ಸಿದ್ದಗಂಗಾ ಶ್ರೀಗಳಿಗೆ ತಲುಪಿದರೆ ತುಂಬ ಅಪಮಾನವಾಗುತ್ತದೆ, ಅವರ ಮುಂದೆ ಮುಖ ತೋರಿಸುವುದು ಭಾರಿ ಕಷ್ಟ ಎಂದು ಭಾವಿಸಿ ಪ್ರಾಣ ಕಳೆದುಕೊಂಡರು ಎನ್ನಲಾಗಿದೆ.
ಸಿದ್ದಗಂಗಾ ಶ್ರೀಗಳು ವಿದೇಶ ಪ್ರವಾಸದಲ್ಲಿದ್ದರು. ಸೋಮವಾರ ಅವರು ಮರಳಿ ಬರುತ್ತಾರೆ ಎಂಬುದನ್ನು ಖಚಿತಪಡಿಸಿಕೊಂಡಿದ್ದ ಶ್ರೀಗಳು ಅಂದೇ ಜೀವನ ಅಂತ್ಯಗೊಳಿಸಲು ನಿರ್ಧರಿಸಿದರು ಎಂಬ ಮಾಹಿತಿ ಇದೆ. ಅದಲ್ಲದೆ, ಸಿದ್ದಗಂಗಾ ಶ್ರೀಗಳು ತಮ್ಮ ಮೇಲೆ ತುಂಬಾ ನಂಬಿಕೆ ಇಟ್ಟಿದ್ದಾರೆ, ಅದಕ್ಕೆ ದ್ರೋಹ ಬಗೆದು ಬದುಕುವುದು ಹೇಗೆ ಎಂದು ಆತಂಕಗೊಂಡಿದ್ದರು ಎಂದು ಹೇಳಲಾಗಿದೆ.
ಮುಂದೇನು?
ಸ್ವಾಮೀಜಿಗಳು ಉಲ್ಲೇಖಿಸಿರುವ ಮಹಿಳೆ ಯಾರು, ವಿಡಿಯೊದಲ್ಲಿ ಏನಿದೆ ಎನ್ನುವುದರ ಬಗ್ಗೆ ಸ್ಪಷ್ಟತೆ ಇಲ್ಲ. ಪೊಲೀಸರು ಈ ವಿಚಾರವನ್ನು ತನಿಖೆ ಮೂಲಕ ಬೆಳಕಿಗೆ ತರಬೇಕಾಗಿದೆ.
ಇತ್ತೀಚೆಗೆ ಖಿನ್ನತೆ ಆವರಿಸಿತ್ತು?
ದೇಹ ತೂಕದ ಬಗ್ಗೆ ಸಾಕಷ್ಟು ತಲೆ ಕೆಡಿಸಿಕೊಂಡಿದ್ದ ಸ್ವಾಮೀಜಿ ಅವರಿಗೆ ಇತ್ತೀಚಿನ ದಿನಗಳಲ್ಲಿ ಖಿನ್ನತೆ ಆವರಿಸಿತ್ತು ಎಂದು ಹೇಳಲಾಗುತ್ತಿತ್ತು. ಅವರು ಹೆಚ್ಚು ಅಂತರ್ಮುಖಿಯಾಗಿದ್ದರು. ಯಾರೊಂದಿಗೂ ಹೆಚ್ಚು ಮಾತನಾಡುತ್ತಿರಲಿಲ್ಲ ಎನ್ನಲಾಗಿದೆ. ಆದರೆ, ಅವರಿಗೆ ಇಷ್ಟು ನೋವು ತಂದ ಸಂಗತಿ ಯಾವುದು ಎನ್ನುವುದು ಅವರು ಆತ್ಮಹತ್ಯೆ ಮಾಡಿಕೊಂಡು, ಡೆತ್ ನೋಟ್ ಸಿಗುವ ವರೆಗೂ ಯಾರಿಗೂ ಗೊತ್ತಿರಲಿಲ್ಲ.
ಇದನ್ನು ಓಡಿ | ಬಂಡೇ ಮಠದ ಶ್ರೀಗಳ ಆತ್ಮಹತ್ಯೆ | 3 ಪುಟಗಳ ಡೆತ್ ನೋಟ್‌ನಲ್ಲಿ ಏನಿದೆ? ಸಾವಿನ ಕಡೆಗೆ ತಳ್ಳಿದ ನೋವೇನು?