ಬೆಂಗಳೂರು: ಯುವತಿಯರು ಸರ್ಕಾರಿ ಕೆಲಸ ಪಡೆಯಲು ಮಂಚ ಹತ್ತಬೇಕು ಎಂದು ವಿವಾದಾತ್ಮಕ ಹೇಳಿಕೆ ನೀಡಿರುವ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಆಮ್ ಆದ್ಮಿ ಪಕ್ಷದ ಮಹಿಳಾ ಘಟಕವು ರಾಜ್ಯ ಮಹಿಳಾ ಆಯೋಗಕ್ಕೆ ದೂರು ನೀಡಿದೆ.
ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಎಎಪಿಯ ಬೆಂಗಳೂರು ನಗರ ಮಹಿಳಾ ಘಟಕದ ಅಧ್ಯಕ್ಷೆ ಕುಶಲ ಸ್ವಾಮಿ, ಮಾಜಿ ಸಚಿವರಾದ ಪ್ರಿಯಾಂಕ್ ಖರ್ಗೆ ಆಗಸ್ಟ್ 12, 2022ರಂದು ಕಲಬುರಗಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುವಾಗ ಮಹಿಳೆಯರ ವಿರುದ್ಧ ನಾಲಿಗೆ ಹರಿಬಿಟ್ಟಿದ್ದಾರೆ. ಇದು ಲಂಚ-ಮಂಚದ ಸರ್ಕಾರ, ಯುವಕರಿಗೆ ನೌಕರಿ ಬೇಕೆಂದರೆ ಲಂಚ ಕೊಡಬೇಕು. ಯುವತಿಯರಿಗೆ ನೌಕರಿ ಬೇಕೆಂದರೆ ಮಂಚ ಹತ್ತಬೇಕು ಎನ್ನುವ ಕೀಳು ಹೇಳಿಕೆಯನ್ನು ನೀಡಿದ್ದಾರೆ. ಇದು ಉದ್ಯೋಗಸ್ಥ ಹಾಗೂ ಉದ್ಯೋಗಾಕಾಂಕ್ಷಿ ಮಹಿಳೆಯರಿಗೆ ಮಾಡಿರುವ ಅವಮಾನವಾಗಿದ್ದು, ಮಹಿಳಾ ಆಯೋಗವು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ ಎಂದು ತಿಳಿಸಿದರು.
ರಾಜಕೀಯವಾಗಿ ತಮ್ಮ ಬೇಳೆ ಬೇಯಿಸಿಕೊಳ್ಳುವ ನಿಟ್ಟಿನಲ್ಲಿ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ಕೀಳು ಹೇಳಿಕೆ ನೀಡುವುದು ಹೊಸತೇನಲ್ಲ. ಆದರೆ, ರಾಜ್ಯದ ರಾಜಕೀಯ ಇತಿಹಾಸದಲ್ಲಿ ಪ್ರಮುಖ ಪಾತ್ರವಹಿಸಿರುವ ರಾಜಕೀಯ ಕುಟುಂಬದ ಕುಡಿಯಾಗಿರುವ ಪ್ರಿಯಾಂಕ್ ಅವರು ಸರ್ಕಾರಿ ಕೆಲಸ ಪಡೆಯುವ ಎಲ್ಲ ಮಹಿಳಾ ಅಭ್ಯರ್ಥಿಗಳ ಮೇಲೆ ಕಪ್ಪು ಚುಕ್ಕೆ ಬರುವಂತಹ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆಯ ತೀವ್ರತೆಯನ್ನು ಗಮನಿಸಿ ರಾಜ್ಯ ಮಹಿಳಾ ಆಯೋಗವು ಸ್ವಯಂಪ್ರೇರಿತ ದೂರು ದಾಖಲಿಸಿಕೊಳ್ಳಬೇಕು ಎಂದು ಎಎಪಿ ಮಾಧ್ಯಮ ವಕ್ತಾರೆ ಉಷಾ ಮೋಹನ್ ಒತ್ತಾಯಿಸಿದರು. ಈ ವೇಳೆ ಪಕ್ಷದ ಮಹಿಳಾ ಮುಖಂಡರು ಭಾಗವಹಿಸಿದ್ದರು.
ಇದನ್ನೂ ಓದಿ | ಪ್ರಿಯಾಂಕ್ ಖರ್ಗೆಗೆ ತಿರುಗೇಟು: ಕಾಂಗ್ರೆಸ್ ನಾಯಕರ ಲಂಚ-ಮಂಚದ ಕತೆ ತೆರೆದಿಟ್ಟ ಬಿಜೆಪಿ