ಬೆಂಗಳೂರು: ಕಾಂಗ್ರೆಸ್ ಪಕ್ಷವನ್ನು ಸೋಲಿಸಲು ಎಸ್‌ಡಿಪಿಐ ಪಕ್ಷಕ್ಕೆ ಬಿಜೆಪಿಯೇ ಹಣ ನೀಡುತ್ತಿದೆ ಎಂದು ಬಿಜೆಪಿ ಮಾಜಿ ಮುಖಂಡ ಸತ್ಯಜಿತ್ ಸುರತ್ಕಲ್ ಅವರು ಮಾತನಾಡಿರುವ ವಿಡಿಯೊವನ್ನು ಕೆಪಿಸಿಸಿ ಸಂವಹನ ಮತ್ತು ಸಾಮಾಜಿಕ ಜಾಲತಾಣ ವಿಭಾಗದ ಅಧ್ಯಕ್ಷ ಪ್ರಿಯಾಂಕ್ ಖರ್ಗೆ ಬಿಡುಗಡೆ ಮಾಡಿದ್ದಾರೆ.
ಸತ್ಯಜಿತ್ ಸುರತ್ಕಲ್ ಈ ಹಿಂದೆ ಬಿಜೆಪಿಯಲ್ಲಿದ್ದರು. ಬಿಜೆಪಿ ಒಬಿಸಿ ಮೋರ್ಚಾ ಕಾರ್ಯಕರ್ತರಾಗಿದ್ದರು, ಕೆಲ ಸಮಯ ಒಬಿಸಿ ಮೋರ್ಚಾ ಅಧ್ಯಕ್ಷರೂ ಆಗಿದ್ದರು. ಸ್ಥಳೀಯ ಸುದ್ದಿಸಂಸ್ಥೆಯೊಂದಕ್ಕೆ ಸತ್ಯಜಿತ್ ಸಂದರ್ಶನ ನೀಡಿದ್ದು, ಯಾವಾಗ ಸಂದರ್ಶನ ನೀಡಿರುವುದು ಎಂದು ತಿಳಿದುಬಂದಿಲ್ಲ.
ಈ ವಿಡಿಯೊದಲ್ಲಿ ಮಾತನಾಡುತ್ತ, ಬಿಜೆಪಿಯವರು ಎಸ್‌ಡಿಪಿಐ ಪಕ್ಷವನ್ನು ಬೆಳೆಸುತ್ತಿದ್ದಾರೆ. ರಾಜಕೀಯವಾಗಿ ಕಾಂಗ್ರೆಸನ್ನು ಸೋಲಿಸಬೇಕೆಂದರೆ ಎಸ್‌ಡಿಪಿಐ ಬೆಳೆಯಬೇಕು ಎಂದು ಎಸ್‌ಡಿಪಿಐಗೆ ಹಣ ನೀಡಿದ್ದಾರೆ. ಮುಸ್ಲಿಂ ಮತವನ್ನು ಕಾಂಗ್ರೆಸ್‌ನಿಂದ ದೂರಕ್ಕೆ ಸರಿಸಿ, ತಾವು ಗೆಲ್ಲಬೇಕೆಂದು ಬಿಜೆಪಿ ಈ ರೀತಿ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಿಯಾಂಕ್ ಖರ್ಗೆ, ಎಲ್ಲರಿಗೂ ರಕ್ಷಣೆ ನೀಡಲು ಸಾಧ್ಯವೇ ಎಂದು ಸಂಸದ ತೇಜಸ್ವಿ ಸೂರ್ಯ ಅವರು ಅಮಾನವೀಯ ಹೇಳಿಕೆ ನೀಡಿದ್ದಾರೆ. ನಿಜ, ಎಲ್ಲರಿಗೂ ರಕ್ಷಣೆ ನೀಡಲು ಸಾಧ್ಯವಿಲ್ಲ ಆದರೆ ಜನಸಾಮಾನ್ಯರಲ್ಲಿ ಖಾಕಿ ನೋಡಿದರೆ ಎರಡು ರೀತಿಯ ಭಾವನೆ ಬರುತ್ತದೆ. ತಪ್ಪು ಮಾಡಿದವರಿಗೆ ಖಾಕಿ ಕಂಡರೆ ಗೌರವ ಇರುತ್ತದೆ. ಆದರೆ ತಪ್ಪು ಮಾಡಿದವರಿಗೆ ಭಯ ಇರುತ್ತದೆ. ಆದರೆ ನಿಮ್ಮ ಸರ್ಕಾರದಲ್ಲಿ ಖಾಕಿಗೆ ನೀವೇ ಗೌರವ ನೀಡುತ್ತಿಲ್ಲ. ನೀವೇ ಕಳ್ಳರನ್ನು ಸಾಕುತ್ತಿದ್ದೀರಿ ಎಂದರು.
ಇಂತಹ ಪರಿಸ್ಥಿತಿಯಲ್ಲಿ ಎಲ್ಲರಿಗೂ ರಕ್ಷಣೆ ನೀಡಲು ಹೇಗೆ ಸಾಧ್ಯ? ನಿಮ್ಮ ಗುಪ್ತಚರ ಇಲಾಖೆ ಕತ್ತೆ ಕಾಯುತ್ತಿದೆಯೇ? ನಿಮ್ಮ ಕಾರ್ಯಕರ್ತರ ಬಗ್ಗೆ ನೀವೇ ಹೀಗೆ ಮಾತನಾಡುತ್ತಿರುವುದರಿಂದ ನಿಮ್ಮ ಕಾರ್ಯಕರ್ತರು ಈ ರೀತಿ ರೊಚ್ಚಿಗೆದ್ದಿದ್ದಾರೆ.
ತೇಜಸ್ವಿ ಅವರು ಕಾಂಗ್ರೆಸ್ ಸರ್ಕಾರ ಇದ್ದಾಗ ಮತಾಂಧರ 1500 ಪ್ರಕರಣಗಳನ್ನು ಹಿಂಪಡೆದಿದ್ದಾರೆ ಎಂದು ಟೀಕೆ ಮಾಡಿದ್ದಾರೆ. ಈಗ ನಾನು ಅವರಿಗೆ ಒಂದು ಸವಾಲು ಹಾಕುತ್ತೇನೆ. ಕಾಂಗ್ರೆಸ್ ಸರ್ಕಾರದಲ್ಲಿ ಕೋಮು ಗಲಭೆಯಲ್ಲಿ ಬಂಧಿತರಾದ ಯಾವುದೇ ಪ್ರಕರಣ ಹಿಂಪಡೆಯಲಾಗಿಲ್ಲ. ನಮ್ಮ ಸರ್ಕಾರ ಪ್ರಕರಣ ಹಿಂಪಡೆದಿದ್ದು, ಕೇವಲ ಪ್ರಗತಿಪರು, ಹೋರಾಟ ಮಾಡಿದ ರೈತರ ಮೇಲೆ ಹಾಕಿದ ಪ್ರಕರಣಗಳನ್ನು ಮಾತ್ರ. ಒಂದು ವೇಳೆ ನಮ್ಮ ಸರ್ಕಾರ ಕೊಲೆಗಡುಕರು ಪ್ರಕರಣ ಹಿಂಪಡೆದಿದ್ದರೆ, ಕಳೆದ 3 ವರ್ಷಗಳಿಂದ ನಿಮ್ಮ ಸರ್ಕಾರ ಇದ್ದರೂ ಮತ್ತೆ ಏಕೆ ಆ ಪ್ರಕರಣಗಳನ್ನು ಮರು ದಾಖಲಿಸಿಲ್ಲ? ನಾಲ್ಕು ವರ್ಷದಿಂದ ಪರೇಶ್ ಮೆಸ್ತಾ ಅವರ ಪ್ರಕರಣ ಸಿಬಿಐನಲ್ಲಿದೆ. ನಿಮ್ಮ 25 ಸಂಸದರ ಪೈಕಿ ಯಾರಾದರೂ ಒಬ್ಬರು ಈ ಪ್ರಕರಣ ಏನಾಯಿತು ಎಂದು ಕಾಳಜಿ ವಹಿಸಿದ್ದಾರಾ? ಎಂದು ಪ್ರಶ್ನಿಸಿದರು.
ಎಸ್‌ಡಿಪಿಐ ಸಂಘಟನೆಯನ್ನು ನಿಷೇಧಿಸಬೇಕು ಎಂದು ಹೇಳುತ್ತಾರಲ್ಲ, ಏಕೆ ಮಾಡುತ್ತಿಲ್ಲ? ತೇಜಸ್ವಿ ಅವರು ಕಳೆದ ವರ್ಷ ಲೋಕಸಭೆಯಲ್ಲಿ ʻಕೆಜೆ ಹಳ್ಳಿ ಹಾಗೂ ಡಿಜೆ ಹಳ್ಳಿ ಗಲಭೆ ಸಂಬಂಧ ಕೇಂದ್ರ ಸರ್ಕಾರ ಎಸ್‌ಡಿಪಿಐ, ಪಿಎಫ್‌ಐ ಹಾಗೂ ಇತರೆ ಸಂಘಟನೆಗಳನ್ನು ನಿಷೇಧಿಸುವ ಕುರಿತು ಗಂಭೀರವಾಗಿ ಪರಿಗಣಿಸಿದೆಯೇ ಇಲ್ಲವೇ? ಎಂದು ಪ್ರಶ್ನೆ ಕೇಳಿದ್ದಾರೆ. ಅದಕ್ಕೆ ಮೋದಿ ಅವರ ಸರ್ಕಾರ ಕೊಟ್ಟಿರುವ ಉತ್ತರ, ‘ ಈ ಸಂಘಟನೆಗಳು ರಾಷ್ಟ್ರೀಯ ಭದ್ರತೆಗೆ ಧಕ್ಕೆ ತರುವಂತಿದ್ದರೆ ಅವುಗಳ ವಿರುದ್ಧ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುವುದು. ನಿಮ್ಮ ಸರ್ಕಾರದಿಂದ ಈ ಸಂಘಟನೆಗಳ ನಿಷೇಧಕ್ಕೆ ಯಾವುದೇ ರೀತಿಯ ಪ್ರಸ್ತಾವನೆ ಬಂದಿಲ್ಲ’ ಎಂದು ಉತ್ತರ ಬಂದಿತ್ತು.
ಎಸ್‌ಡಿಪಿಐ ಹಾಗೂ ಪಿಎಫ್‌ಐ ಸಂಘಟನೆಗಳಿಗೆ ಕಾಂಗ್ರೆಸ್ ಕುಮ್ಮಕ್ಕು ಇದೆ ಎಂದು ಬಿಜೆಪಿ ಆರೋಪಿಸುತ್ತದೆ. ಆದರೆ ಆರ್‌ಎಸ್‌ಎಸ್ ಮೂಲದ ಸತ್ಯಜಿತ್ ಎಂಬುವರು ಸಂದರ್ಶನವೊಂದರಲ್ಲಿ ಒಂದು ಅಂಶ ಹೇಳಿದ್ದಾರೆ. ಅವರ ಪ್ರಕಾರ, ‘ರಾಜಕೀಯವಾಗಿ ಕಾಂಗ್ರೆಸನ್ನು ಸೋಲಿಸಬೇಕಾದರೆ ಎಸ್‌ಡಿಪಿಐ ಬಲವಾಗಬೇಕು. ಹೀಗಾಗಿ ಬಿಜೆಪಿಯವರು ಎಸ್‌ಡಿಪಿಐಗೆ ಆರ್ಥಿಕ ನೆರವು ನೀಡಿ ಬೆಂಬಲ ನೀಡುತ್ತಿದೆ. ಮುಸಲ್ಮಾನರನ್ನು ಕಾಂಗ್ರೆಸ್ ನಿಂದ ಬೇರ್ಪಡಿಸಲು ಎಸ್‌ಡಿಪಿಐ ಅನ್ನು ಬಿಜೆಪಿ ಬೆಳೆಸುತ್ತಿದೆ. ಇಲ್ಲದಿದ್ದರೆ ಇಷ್ಟು ವರ್ಷಗಳ ಕಾಲ ಇಲ್ಲದ ಹಿಜಾಬ್ ವಿಚಾರ ಈಗ ಏಕೆ ಬರುತ್ತಿತ್ತುʼ ಎಂದು ಹೇಳಿದ್ದಾರೆ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಇದನ್ನೂ ಓದಿ | Terror killing: ಅಮರಾವತಿ- ಉದಯಪುರ ಹತ್ಯೆಯಲ್ಲಿ ಎಸ್‌ಡಿಪಿಐ ಕೈವಾಡ, ತನಿಖೆಯಲ್ಲಿ ಬಯಲು