ಮೈಸೂರು: ರಾಜ್ಯ ವಿಧಾನಸಭಾ ಚುನಾವಣೆ (Karnataka Election 2023) ಹಿನ್ನೆಲೆಯಲ್ಲಿ ಕಳೆದೆರಡು ದಿನಗಳಿಂದ ರಾಜ್ಯ ಪ್ರವಾಸದಲ್ಲಿರುವ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ, ಬುಧವಾರವಷ್ಟೇ ಮೈಸೂರು ಜಿಲ್ಲೆಯಲ್ಲಿ ಪ್ರಚಾರ ನಡೆಸಿದ್ದಾರೆ. ಈ ವೇಳೆ ಗುರುವಾರ (ಏಪ್ರಿಲ್ 26) ಮೈಸೂರಿನ ಖ್ಯಾತ ಮೈಲಾರಿ ಹೋಟೆಲ್‌ನಲ್ಲಿ ದೋಸೆ ಸವಿದಿದ್ದಲ್ಲದೆ, ಅವರೇ ಸ್ವತಃ ದೋಸೆ ಎರೆದಿದ್ದಾರೆ. ಜತೆಗೆ ಮನೆಯಲ್ಲಿಯೂ ಇದರ ರೆಸಿಪಿಯನ್ನು ಟ್ರೈ ಮಾಡುತ್ತೇನೆ ಎಂದೂ ಹೇಳಿಕೊಂಡಿದ್ದಾರೆ.
ಮೈಸೂರಿನಲ್ಲಿ ದಶಕಗಳ ಇತಿಹಾಸ ಹೊಂದಿರುವ ಅಗ್ರಹಾರ ರಸ್ತೆಯಲ್ಲಿರುವ ಮೈಲಾರಿ ಹೋಟೆಲ್‌ಗೆ ಪ್ರಿಯಾಂಕಾ ಗಾಂಧಿ, ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರು ಭೇಟಿ ನೀಡಿದ್ದರು. ಈ ವೇಳೆ ಪ್ರಿಯಾಂಕಾ ಗಾಂಧಿ ಮಸಾಲೆ ದೋಸೆ ಸವಿದಿದ್ದಾರೆ.
ಇದನ್ನೂ ಓದಿ: Karnataka Election 2023: ಡಿಕೆಶಿ, ಸಿದ್ದು ಜಾತಿವಾದಿ; ರಾಷ್ಟ್ರವಾದಿ ಸಿ ಟಿ ರವಿ ಸಿಎಂ ಆಗಲಿ! ಈಶ್ವರಪ್ಪ ಪುನರುಚ್ಚಾರ
ದೋಸೆ ಎರೆದ ಪ್ರಿಯಾಂಕಾ
ಮಸಾಲೆ ದೋಸೆ ರುಚಿಗೆ ಮಾರುಹೋದ ಪ್ರಿಯಾಂಕಾ, ಬಳಿಕ ಇಡ್ಲಿಯನ್ನೂ ಹಾಕಿಸಿಕೊಂಡು ರುಚಿ ನೋಡಿದ್ದಾರೆ. ಇದಾದ ಬಳಿಕ ಹೋಟೆಲ್‌ನ ಅಡುಗೆ ಕೋಣೆಗೆ ಹೋದ ಅವರು, ಅಡುಗೆ ಭಟ್ಟರ ಬಳಿ ತಾವೇ ದೋಸೆ ಮಾಡುವುದಾಗಿ ಹೇಳಿದ್ದಾರೆ. ಆದರೆ, ತಮಗೆ ತಿಳಿಸಿಕೊಡಿ ಎಂದೂ ಕೇಳಿದ್ದಾರೆ. ಅದಕ್ಕೆ ಅಡುಗೆ ಭಟ್ಟರು ಸಹ ಖುಷಿಯಿಂದ ದೋಸೆ ಹಿಟ್ಟು ಹಾಕುವುದರಿಂದ ಹಿಡಿದು ಎರೆದು ಕಾವಲಿಯಿಂದ ತೆಗೆಯುವವರೆಗೂ ಹೇಳಿಕೊಟ್ಟಿದ್ದಾರೆ.
ದೋಸೆ ಸೀದಿದ್ದಕ್ಕೆ ಬೇಸರ
ಅದರಂತೆ ಪ್ರಿಯಾಂಕಾ ಸಹ ದೋಸೆ ಹಿಟ್ಟನ್ನು ತೆಗೆದುಕೊಂಡು ಕಾವಲಿ ಮೇಲೆ ಹಾಕಿ ದೋಸೆಯನ್ನು ತಯಾರಿಸಿದ್ದಾರೆ. ಈ ವೇಳೆ ದೋಸೆಯನ್ನು ಕಾವಲಿಯಿಂದ ಮಗಚುವಾಗ ಒಂದು ದೋಸೆ ಸೀದು ಹೋಗಿದ್ದು, ಅದಕ್ಕಾಗಿ ಸ್ವಲ್ಪ ಬೇಸರವನ್ನೂ ವ್ಯಕ್ತಪಡಿಸಿದ್ದಾರೆ. ಆದರೆ, ತಾವೇ ಸ್ವತಃ ದೋಸೆ ಎರೆದಿದ್ದಕ್ಕೆ ಬಹಳವೇ ಖುಷಿಪಟ್ಟಿದ್ದಾರೆ. ಅಲ್ಲದೆ, ಇವುಗಳನ್ನು ಯಾವ ರೀತಿಯಾಗಿ ತಯಾರು ಮಾಡಲಾಗುತ್ತದೆ ಎಂಬ ಬಗ್ಗೆ ರೆಸಿಪಿಯನ್ನು ಪಡೆದುಕೊಂಡಿದ್ದಾರೆ.
ತುಂಬಾ ಚೆನ್ನಾಗಿತ್ತು- ಪ್ರಿಯಾಂಕಾ ಗಾಂಧಿ
ಮೈಲಾರಿ ಹೋಟೆಲ್‌ನಲ್ಲಿ ತಿಂಡಿ ಸವಿದು ಬಹಳ ಖುಷಿಯಾಗಿದೆ. ಇಡ್ಲಿ, ದೋಸೆಯನ್ನು ತಿಂದೆ. ಎಲ್ಲವೂ ತುಂಬಾ ಚೆನ್ನಾಗಿತ್ತು. ಮನೆಯಲ್ಲಿ ಈ ತಿಂಡಿಯನ್ನು ಹೇಗೆ ಮಾಡಬೇಕು ಅನ್ನೋದನ್ನು ಸಹ ತಿಳಿದುಕೊಂಡಿದ್ದೀನಿ. ನಾನು ಕೂಡ ಇದನ್ನು ಮನೆಯಲ್ಲಿ ಟ್ರೈ ಮಾಡ್ತೀನಿ ಎಂದು ಹೇಳಿದ್ದಾರೆ.
ಮಸಾಲೆ ದೋಸೆಗೆ ಪ್ರಿಯಾಂಕಾ ಫಿದಾ
ಈ ಬಗ್ಗೆ ಹೋಟೆಲ್ ಸಿಬ್ಬಂದಿ ಸಹ ಖುಷಿಗೊಂಡಿದ್ದು, ಅಷ್ಟು ದೊಡ್ಡ ಮಟ್ಟದ ನಾಯಕಿಯಾದವರು ನಮ್ಮ ಪುಟ್ಟ ಹೋಟೆಲ್‌ಗೆ ಬಂದು ದೋಸೆ, ಇಡ್ಲಿ ಸವಿದಿದ್ದಾರೆ. ಅಲ್ಲದೆ, ತುಂಬಾ ಸರಳತೆಯಿಂದ ಎಲ್ಲವನ್ನೂ ಕೇಳಿ ತಿಳಿದುಕೊಂಡಿದ್ದಾರೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ದೋಸೆ ತಿರುವಿ ಹಾಕುವುದನ್ನು ಕಲಿತ ಪ್ರಿಯಾಂಕಾ ಗಾಂಧಿ; ಇಲ್ಲಿದೆ ವಿಡಿಯೊ
ಶೃಂಗೇರಿಗೆ ಭೇಟಿ
ಚಿಕ್ಕಮಗಳೂರು: ಮಾತೆ ಶಾರದಾಂಬಾ ದೇವಿ ದರ್ಶನಕ್ಕಾಗಿ ಪ್ರಿಯಾಂಕಾ ಗಾಂಧಿ ಶೃಂಗೇರಿಗೆ ತೆರಳಿದ್ದಾರೆ. ಅಲ್ಲಿ ಶೃಂಗೇರಿ ಶಾರದಾಂಬೆ ದರ್ಶನ ಪಡೆದು, ಭಾರತಿ ತೀರ್ಥ ಸ್ವಾಮೀಜಿಗಳ ಆಶೀರ್ವಾದವನ್ನು ಪಡೆಯಲಿದ್ದಾರೆ.
ಇದನ್ನೂ ಓದಿ: Karnataka Election 2023: ಮತಬೇಟೆಗೆ ಮದಕರಿ! ಇಂದು ಅಖಾಡಕ್ಕೆ ನಟ ಸುದೀಪ್, ಇಂದಿನಿಂದ ಮೆಗಾ ಪ್ರಚಾರ ಎಂದ ಕಿಚ್ಚ
ಮಧ್ಯಾಹ್ನ 12:30ರ ವೇಳೆಗೆ ಬಾಳೆಹೊನ್ನೂರು ಶ್ರೀ ರಂಭಾಪುರಿ ಪೀಠಕ್ಕೆ ಭೇಟಿ ನೀಡಿ, ಶ್ರೀ ರಂಭಾಪುರಿ ವೀರಸೋಮೇಶ್ವರ ಜಗದ್ಗುರುಗಳ ಆಶೀರ್ವಾದವನ್ನು ಪಡೆಯಲಿದ್ದಾರೆ. ಬಳಿಕ ಬಾಳೆಹೊನ್ನೂರಿನಲ್ಲಿ ನಡೆಯುವ ಬಹಿರಂಗ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ಮಧ್ಯಾಹ್ನ 3.15ಕ್ಕೆ ಹಿರಿಯೂರಿನಲ್ಲಿ ಗೊಲ್ಲ ಸಮುದಾಯದ ನಾಯಕರೊಂದಿಗೆ ಸಂವಾದ ನಡೆಸಲಿರುವ ಪ್ರಿಯಾಂಕಾ, ಬಳಿಕ ರೋಡ್ ಶೋ ನಡೆಸಲಿದ್ದಾರೆ.