Site icon Vistara News

Priyanka Gandhi: ಬಿಜೆಪಿ ಲೂಟಿ ಮಾಡಿದ್ದು ₹1.5 ಲಕ್ಷ ಕೋಟಿ: 100 ಏಮ್ಸ್‌ ಕಟ್ಟಬಹುದಿತ್ತು ಎಂದ ಪ್ರಿಯಾಂಕಾ ಗಾಂಧಿ

Priyanka Gandhi talks in an Election rally in T Narasipura.

ತಿ. ನರಸೀಪುರ: ಕರ್ನಾಟಕದಲ್ಲಿರುವ 40% ಕಮಿಷನ್‌ ಸರ್ಕಾರವು ಒಟ್ಟು 1.5 ಲಕ್ಷ ಕೋಟಿ ರೂ. ಲೂಟಿ ಮಾಡಿದೆ ಎಂದು ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ (Priyanka Gandhi) ಆರೋಪ ಮಾಡಿದ್ದಾರೆ. ಹಾಗೂ ಈ ಹಣದಲ್ಲಿ ಏನೇನು ಮಾಡಬಹುದಾಗಿತ್ತು ಎಂಬ ಲೆಕ್ಕವನ್ನು ತಿ. ನರಸೀಪುರದಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮದಲ್ಲಿ ನೀಡಿದ್ದಾರೆ.

ನಮ್ಮ ದೇಶದ ಮೇಲೆ ನಮಗೆ ಏಕೆ ಅಭಿಮಾನ ಉಂಟಾಗುತ್ತದೆ? ಏಕೆಂದರೆ ಅದನ್ನು ನಾವು ಮಾಡುತ್ತೇವೆ. ನಾವು ಕಬ್ಬಿನ ಜಮೀನಿನಲ್ಲಿ ಬೆವರು ಸುರಿಸಿ, ಬೆಳೆ ಹಸಿರಾಗಿ ಬೆಳೆದರೆ ಸಂತಸ ಆಗುತ್ತದೆ. ಅದು ನಮ್ಮದು ಎಂಬ ಭಾವನೆ ಬರುತ್ತದೆ.

ಅದೇ ರೀತಿ, ನಮ್ಮ ಸಮಸ್ಯೆಗಳನ್ನು ಅರಿತು ಕೆಲಸ ಮಾಡುವ ಸರ್ಕಾರ ನಮ್ಮದು ಎನ್ನಿಸುತ್ತದೆ. ದೇಶದ ಒಳಿತನ್ನು ಮಾಡುವುದು, ಇಲ್ಲಿನ ಎಲ್ಲ ಭಿನ್ನಭಿನ್ನ ಸಂಸ್ಕೃತಿಗಳನ್ನು ಕಾಪಾಡುವುದು ಸರ್ಕಾರದ ಕೆಲಸ. ಸೇವೆ ಮಾಡುವುದು ಹಾಗೂ ಪ್ರಾಮಾಣಿಕತೆಯೇ ಸರ್ಕಾರದ ತತ್ವ.

ಕರ್ನಾಟಕದಲ್ಲಿ ಇಂದು ಸ್ಥಿತಿ ಏನಿದೆ? ಕರ್ನಾಟಕದಲ್ಲಿ ಸರ್ಕಾರ ಆರಂಭದಿಂದಲೂ ನಿಮ್ಮ ವಿಶ್ವಾಸ ಗಳಿಸಿಕೊಳ್ಳಲು ಆಗಲಿಲ್ಲ. ತಪ್ಪು ಮಾರ್ಗದಿಂದ, ಹಣವನ್ನು ಬಳಸಿ ಈ ಸರ್ಕಾರವನ್ನು ರಚಿಸಿದೆ. ಹಾಗಾಗಿ ಪ್ರಾರಂಭದಿಂದಲೂ ಈ ಸರ್ಕಾರದ ಆಧಾರವೇ ತಪ್ಪಾಗಿದೆ. ದುರಾಸೆ ಹಾಗೂ ಆಮಿಷದ ಆಧಾರದಲ್ಲಿ ರಚನೆಯಾದ ಸರ್ಕಾರ ಅದರ ಹಿಂದೆಯೇ ಬೀಳುತ್ತಿದೆ. ಇದರ ಪರಿಣಾಮವಾಗಿ ಈ ಸರ್ಕಾರ ಯಾವ ಕೆಲಸವನ್ನೂ ಮಾಡಲು ಆಗಿಲ್ಲ.

ಕಳೆದ ಮೂರು ವರ್ಷದಲ್ಲಿ ಕೇಂದ್ರದಿಂದ ಕರ್ನಾಟಕಕ್ಕೆ ಆಗಮಿಸಬೇಕಾದ ಹಣದ ಪ್ರಮಾಣ ಕಡಿಮೆ ಆಗುತ್ತಿದೆ. ಕರ್ನಾಟಕದ ಪ್ರತ್ಯೇಕ ಧ್ವಜವಿದೆ, ಅದು ನಮಗೆಲ್ಲ ಅಭಿಮಾನದ ಸಂಕೇತ. ಆದರೆ ಈ ಸರ್ಕಾರ ಅದನ್ನು ಒಪ್ಪಿಗೆ ನೀಡಿಲ್ಲ. ನಿಮಗೆ ದುರ್ಬಲ ನಾಯಕರು ಸಿಕ್ಕರು, ಪದೇಪದೆ ನಾಯಕರನ್ನು ಬದಲಾಯಿಸಿದರು. ಸಚಿವ ಸಂಪುಟದ ವಿಸ್ತರಣೆಯೂ ಆಗದೆ, ಆಡಳಿತವು ಸ್ಥಗಿವಾಗಿದೆ.

ಎಲ್ಲಕ್ಕಿಂತ ದುಃಖದ ಸಂಗತಿ ಎಂದರೆ ಈ 40% ಸರ್ಕಾರ ಎಲ್ಲರನ್ನೂ ಲೂಟಿ ಮಾಡಿದೆ. ಇದು ನಾಚಿಕೆಯಿಲ್ಲದೆ, ನಿರ್ದಯವಾಗಿ ಲೂಟಿ ಮಾಡಿದೆ. ಎಷ್ಟು ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಂಡರು, ಗುತ್ತಿಗೆದಾರರ ಸಂಘದವರು ದೂರು ನೀಡಿದರು, ಶಾಲಾ ಮಂಡಳಿಯವರು ಪ್ರಧಾನಿಗೆ ತಿಳಿಸಿದರೂ ಅದು ಬಗೆಹರಿದಿಲ್ಲ. ಎಲ್ಲಿ ಹಗರಣ ನಡೆದರೂ ಅದರಲ್ಲಿ ಆರೋಪಿಗಳನ್ನು ಬಂಧಿಸುವ ಕೆಲಸ ಆಗಲಿಲ್ಲ.

ಒಬ್ಬ ಶಾಸಕರ ಪುತ್ರನ ಬಳಿ ಐದು ಕೋಟಿ ರೂ. ಸಿಕ್ಕಿತು. ಅದರ ತನಿಖೆ ಮಾಡುವ ಬದಲು ಅವರ ತಂದೆ ಮೆರವಣಿಗೆ ಮಾಡಿದರು. ಕೋವಿಡ್‌ ರೋಗಿಗಳು, ಶಾಲಾ ಮಕ್ಕಳ ಮೊಟೆಯನ್ನೂ ಬಿಡದೆ ಸಿಕ್ಕಲ್ಲಿ ಲೂಟಿ ಮಾಡಿದ್ದಾರೆ. ಒಂದೂವರೆ ಲಕ್ಷ ಕೋಟಿ ರೂ. ಕರ್ನಾಟಕದಿಂದ ಲೂಟಿ ಮಾಡಲಾಗಿದೆ ಎಂಬ ಆರೋಪವಿದೆ. ಈ ಒಂದೂವರೆ ಲಕ್ಷ ಕೋಟಿ ರೂ. ಮೊತ್ತದಿಂದ 100 ಏಮ್ಸ್‌ ರೀತಿ ಆಸ್ಪತ್ರೆ ಆಗುತ್ತಿತ್ತು, 4 ಲೇನ್‌ನ 2,200 ಕಿಲೋಮೀಟರ್‌ ಎಕ್ಸ್‌ಪ್ರೆಸ್‌ ವೇ, 30 ಸಾವಿರ ಸ್ಮಾರ್ಟ್‌ ಕ್ಲಾಸ್‌, 750 ಕಿಲೋಮೀಟರ್‌ ಮೆಟ್ರೋ ಲೈನ್‌, 30 ಲಕ್ಷ ಮನೆ ನಿರ್ಮಾಣ ಮಾಡ ಬಹುದಿತ್ತು ಎಂದರು.

ಸರ್ಕಾರ ಈ ರೀತಿ ಇದ್ದಾಗ ಅದರ ಪ್ರಭಾವ ಯುವಕರ ಮೇಲೆ ಆಗುತ್ತದೆ. ಲಕ್ಷಾಂತರ ಸರ್ಕಾರಿ ಹುದ್ದೆಗಳು ಖಾಲಿ ಬಿದ್ದಿವೆ. ಒಂದೆಡೆ ಹುದ್ದೆ ಖಾಲಿ ಇವೆ, ಇನ್ನೊಂದೆಡೆ ಇಷ್ಟೊಂದು ದೊಡ್ಡ ಸಂಖ್ಯೆಯ ನಿರುದ್ಯೋಗಿಗಳಿದ್ದಾರೆ. ನಿಮ್ಮದೇ ಉದ್ಯೋಗವನ್ನು ಸರ್ಕಾರ ನೀಡುತ್ತಿಲ್ಲ. ಸರ್ಕಾರ ನೀಡಿದ ಎಲ್ಲ ಭರವಸೆಗಳನ್ನೂ ಮುರಿದಿದೆ. ನಮ್ಮ ಕರ್ನಾಟಕಕ್ಕೆ ನಮ್ಮ ವಚನ ಎಂಬ ಮಾತನ್ನು ಈಡೇರಿಸಿಲ್ಲ. ಇಷ್ಟು ಉದ್ಯೋಗ ಎಲ್ಲಿ ಹೋದವು? ಇಷ್ಟು ಹಣ ಎಲ್ಲಿ ಹೋಯಿತು? ಎಂದು ಪ್ರಶ್ನೆ ಕೇಳುತ್ತಿದ್ದೇವೆ.

ಬಿಜೆಪಿಯವರು ಮೀಸಲಾತಿಯಲ್ಲೂ ಮೋಸ ಮಾಡಿದರು. ಮೀಸಲಾತಿಯನ್ನು ಸದೃಢಗೊಳಿಸಲು 9ನೇ ಪರಿಚ್ಛೇದಕ್ಕೆ ಸೇರಿಸುತ್ತಿಲ್ಲ. ಮೀಸಲಾತಿ ಹೆಚ್ಚಳ ಮಾಡುತ್ತೇವೆ ಎಂದು ಇಲ್ಲಿ ಹೇಳುತ್ತಾರೆ, ಆದರೆ ಅಲ್ಲಿ ಮೀಸಲಾತಿ ಕೊಟ್ಟಿಲ್ಲ ಎಂದರು.

ಇದನ್ನೂ ಓದಿ: Karnataka Election 2023: ಮೈಸೂರು ಜಿಲ್ಲೆಯಲ್ಲಿ ಇಂದು ಪ್ರಿಯಾಂಕಾ ಗಾಂಧಿ, ದೇವೇಗೌಡರ ಪ್ರಚಾರ

Exit mobile version