Site icon Vistara News

ಇದು ಲಂಚ, ಮಂಚದ ಸರಕಾರ ಎಂದ ಪ್ರಿಯಾಂಕ ಖರ್ಗೆ, ಏನಿದು ಗಂಭೀರ ಆರೋಪ

ಪ್ರಿಯಾಂಕ್‌ ಖರ್ಗೆ

ಕಲಬುರಗಿ: ʻಇಂದು ಲಂಚ ಮಂಚದ ಸರಕಾರʼ ಎಂದು ಕಾಂಗ್ರೆಸ್‌ ಶಾಸಕ ಪ್ರಿಯಾಂಕ ಖರ್ಗೆ ಗಂಭೀರ ಆರೋಪ ಮಾಡಿದ್ದಾರೆ. ಮಾಧ್ಯಮದ ಜತೆ ಮಾತನಾಡಿದ ಅವರು ʻʻಬಿಜೆಪಿ ಸರಕಾರ ರಾಷ್ಟ್ರ ಧ್ವಜ ಮತ್ತು ದೇಶ ಭಕ್ತಿಯನ್ನೂ ಮಾರಾಟಕ್ಕಿಟ್ಟಿದೆʼʼ ಎಂದೂ ಹೇಳಿದ್ದಾರೆ.

ಕಲಬುರಗಿಯಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಪ್ರಿಯಾಂಕ ಖರ್ಗೆ ಅವರು, ʻʻಇದು ಲಂಚ ಮಂಚದ ಸರಕಾರ. ಯುವಕರಿಗೆ ನೌಕರಿ ಬೇಕಂದ್ರೆ ಲಂಚ ಕೊಡಬೇಕು. ಯುವತಿಯರಿಗೆ ನೌಕರಿ ಬೇಕಂದ್ರೆ ಮಂಚ ಹತ್ತಬೇಕುʼʼ ಎಂದು ರಾಜ್ಯ ಹಾಗೂ ಕೇಂದ್ರ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ʻʻಸರಕಾರ ಯುವಕರಿಗೆ ಉದ್ಯೋಗ ಕೊಡುವಲ್ಲಿ ಸಂಪೂರ್ಣ ವಿಫಲವಾಗಿದೆ. ಯುವಕರ ಭವಿಷ್ಯದ ಜೊತೆಗೆ ಚೆಲ್ಲಾಟವಾಡಲಾಗುತ್ತಿದೆ. ಈ ಸರಕಾರದಲ್ಲಿ ಪ್ರತಿಯೊಂದು ಹುದ್ದೆಗಳೂ ಮಾರಾಟಕ್ಕಿವೆʼʼ ಎಂದು ಹೇಳಿದರು ಪ್ರಿಯಾಂಕ ಖರ್ಗೆ. ʻʻಜ್ಯೂನಿಯರ್‌ ಎಂಜಿನಿಯರ್‌ ಹುದ್ದೆಗೆ 30 ಲಕ್ಷ ರೂ. ಸಹಾಯಕ ಎಂಜಿನಿಯರ್‌ ಹುದ್ದೆಗೆ 50 ಲಕ್ಷ ರೂ. ತೆಗೆದುಕೊಂಡಿದ್ದಾರೆʼʼ ಎಂದು ನೇರ ಆರೋಪ ಮಾಡಿದ ಅವರು, ಸರಕಾರಿ ಹುದ್ದೆಗಳನ್ನು ಮಾರಾಟ ಮಾಡುತ್ತಿರುವ ಇದು ಅಸಮರ್ಥ ೪೦% ಸರಕಾರ ಎಂದರು.

ವಿಧಾನಸೌಧವನ್ನೂ ಮಾರಬಲ್ಲರು!
ʻʻ40% ಕಮಿಷನ್‌ ಕೊಟ್ರೆ ಸರಕಾರ ವಿಧಾನ ಸೌಧವನ್ನು ಮಾರಾಟ ಮಾಡಲೂ ರೆಡಿ ಇದೆ. ಹಣಕ್ಕಾಗಿ ಏನೂ ಮಾಡಲು ಸಿದ್ಧವಿರುವ ಈ ಸರಕಾರದ ಮೇಲೆ ಯುವಕರು ನಂಬಿಕೆ ಕಳೆದುಕೊಂಡಿದ್ದಾರೆʼʼ ಎಂದು ಖರ್ಗೆ ಹೇಳಿದರು.

ದೇಶಭಕ್ತಿ, ರಾಷ್ಟ್ರ ಧ್ವಜದ ಮಾರಾಟ ಆರೋಪ
ʻʻಬಿಜೆಪಿ ಸರಕಾರದಲ್ಲಿ ರಾಷ್ಟ್ರ ಧ್ವಜ ಮತ್ತು ದೇಶ ಭಕ್ತಿಯನ್ನೂ ಮಾರಾಟಕ್ಕಿಡಲಾಗಿದೆ. ಇವರಿಗೆ ದೇಶ ಭಕ್ತಿ ಮುಖ್ಯವಲ್ಲ.. ರಿಲಯನ್ಸ್‌ ಕಂಪನಿಗೆ ಲಾಭ ಮಾಡಿ ಕೊಡಲು ಧ್ವಜ ಸಂಹಿತೆಯನ್ನೇ ಬದಲಾವಣೆ ಮಾಡಿದ್ದಾರೆ. ಪಾಲಿಸ್ಟರ್ ಧ್ವಜ ತಯಾರಿಕೆಯಿಂದ ರಿಲಯನ್ಸ್‌ ಕಂಪೆನಿಗೆ ನೂರಾರು ಕೋಟಿ ಲಾಭ ಮಾಡಿ ಕೊಡುವ ಹುನ್ನಾರ ಇದೆʼʼ ಎಂದು ಪ್ರಿಯಾಂಕ್‌ ಖರ್ಗೆ ಆರೋಪಿಸಿದರು.

ಅಧಿಕಾರಿಗಳು ಸೇಲ್ಸ್‌ ಏಜೆಂಟ್‌ಗಳು!
ʻʻಇವರು ಅಧಿಕಾರಿಗಳನ್ನೇ ಮಾರಾಟದ ಏಜೆಂಟ್‌ಗಳನ್ನಾಗಿ ಮಾಡಿಕೊಂಡಿದ್ದಾರೆ. ಬಿಬಿಎಂಪಿ ಅಧಿಕಾರಿಗಳಿಗೆ ಒಂದು ವಾರ್ಡ್‌ಗೆ 15 ಸಾವಿರ ಧ್ವಜ ಮಾರಾಟ ಮಾಡುವ ಟಾರ್ಗೆಟ್ ನೀಡಿದ್ದಾರೆ. ಅದೇ ರೀತಿ ಗ್ರಾಮ ಪಂಚಾಯತ್‌ನಿಂದ ಹಿಡಿದು ಎಲ್ಲಾ ಹಂತದಲ್ಲೂ ಟಾರ್ಗೆಟ್ ನೀಡಲಾಗಿದೆ. ರೇಷನ್ ಬೇಕು ಅಂದ್ರೆ, ಸರಕಾರಿ ಸೌಲಭ್ಯ ಬೇಕು ಅಂದ್ರೆ ಧ್ವಜ ಖರೀದಿ ಮಾಡಬೇಕು ಎಂದು ಒತ್ತಾಯಿಸಲಾಗುತ್ತಿದೆʼʼ ಎಂದು ನೇರವಾಗಿ ವಾಗ್ದಾಳಿ ಮಾಡಿದ ಪ್ರಿಯಾಂಕ ಖರ್ಗೆ, ʻʻನಕಲಿ ದೇಶ ಭಕ್ತರು ಇವರು, ಇವರಿಗೆ ಧ್ವಜವನ್ನು ಉಚಿತವಾಗಿ ಕೊಡಲು ಆಗಲ್ವಾ?ʼʼ ಎಂದು ಕೇಳಿದರು.

ಮೋದಿಗೆ ಖಾದಿ ಅಲರ್ಜಿ
ʻʻಖಾದಿ ಬಗ್ಗೆ ಮನ್ ಕಿ ಬಾತ್ ನಲ್ಲಿ ಮಾತಾಡುವ ಪ್ರಧಾನಿ ನರೇಂದ್ರ ಮೋದಿ ಅವರಿಗೆಖಾದಿ ಖಂಡ್ರೆ ಅಲರ್ಜಿ. ಹಾಗಾಗಿಯೇ ಪಾಲಿಸ್ಟರ್ ಧ್ವಜ ತಯಾರಿಕೆಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಧ್ವಜ ನಿಯಮಕ್ಕೆ ತಿದ್ದುಪಡಿ ತಂದು ಅಂಬಾನಿಗೆ ಲಾಭ ಮಾಡಿ ಕೊಡುತ್ತಿದ್ದಾರೆ. ಸ್ವಾತಂತ್ರ್ಯ ದಿನಾಚರಣೆ ಮುಗಿಯುವುದರೊಳಗೆ 3 ಸಾವಿರ ಕೋಟಿ ರೂಪಾಯಿ ಜನರ ದುಡ್ಡು ಒಬ್ಬ ಉದ್ಯಮಿಗೆ ಸಂಗ್ರಹಿಸಿ ಕೊಡ್ತಾರೆʼʼ ಎನ್ನುವುದು ಖರ್ಗೆ ಆರೋಪ.

ಇದನ್ನೂ ಓದಿ| B.C. Nagesh | ರಾಷ್ಟ್ರಧ್ವಜಕ್ಕೆ ಅವಮಾನ: ಶಿಕ್ಷಣ ಸಚಿವರ ವಜಾಗೆ ಕಾಂಗ್ರೆಸ್ ಆಗ್ರಹ

Exit mobile version