Site icon Vistara News

ಆನೆ ಹಂತಕರ ರಕ್ಷಣೆಗೆ ಸಂಸದ ಪ್ರಜ್ವಲ್​​ ರೇವಣ್ಣ ಒತ್ತಡ: ಸಂಸದೆ ಮೇನಕಾ ಗಾಂಧಿ ಆರೋಪ

prajwal revanna 1

ಹಾಸನ: ಆನೆಯನ್ನು ಕೊಂದ ತಮ್ಮ ಪಕ್ಷದ ಕಾರ್ಯಕರ್ತರನ್ನು ರಕ್ಷಿಸಲು ಹಾಸನ ಸಂಸದ ಪ್ರಜ್ವಲ್​​ ರೇವಣ್ಣ ಅರಣ್ಯ ಇಲಾಖೆ ಅಧಿಕಾರಿಗಳ ಮೇಲೆ ಒತ್ತಡ ಹೇರಿದ್ದಾರೆ ಎಂದು ಬಿಜೆಪಿ ಸಂಸದೆ ಹಾಗೂ ಪ್ರಾಣಿ ಹಕ್ಕುಗಳ ಹೋರಾಟಗಾರ್ತಿ ಮೇನಕಾ ಗಾಂಧಿ ಆರೋಪಿಸಿದ್ದಾರೆ.

ಈ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮೇನಕಾ ಗಾಂಧಿ ಎರಡು ಪುಟಗಳ ಪತ್ರ ಬರೆದಿದ್ದಾರೆ. ಪ್ರಕರಣದಲ್ಲಿ ತಪ್ಪಿತಸ್ಥರಾದ ಅಧಿಕಾರಿಗಳು ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ಪ್ರಕರಣವನ್ನು ಜಾಗೃತ ಸಮಿತಿಗೆ ವಹಿಸಬೇಕು ಎಂದು ಆಗ್ರಹಿಸಿದ್ದಾರೆ.

ಹಾಸನ ತಾಲೂಕಿನ ವೀರಾಪುರ ಗ್ರಾಮದಲ್ಲಿ ಕಳೆದ ವರ್ಷ ಚಂದ್ರೇಗೌಡ ಎಂಬವರು ಅಕ್ರಮವಾಗಿ ವಿದ್ಯುತ್​​​ ಹರಿಸಿ ಆನೆಯನ್ನು ಹತ್ಯೆ ಮಾಡಿದ್ದರು. ಜೆಸಿಬಿ ಯಂತ್ರಗಳ ಸಹಾಯದಿಂದ ಗುಂಡಿ ಅಗೆದು ಆನೆಯನ್ನು ಹೂತಿದ್ದರು. ಅದಕ್ಕೂ ಮುನ್ನ ಆನೆಯ ದಂತಗಳನ್ನು ಕತ್ತರಿಸಿಕೊಂಡಿದ್ದ ಆರೋಪಿಗಳು ಬೆಂಗಳೂರಿನಲ್ಲಿ ಮಾರಾಟ ಮಾಡಲು ಯತ್ನಿಸಿದ್ದರು.

ಇದನ್ನೂ ಓದಿ | Elephant attack | ರಾತ್ರಿ ಹೊಲ ಕಾಯುವಾಗ ಒಂಟಿ ಸಲಗ ತುಳಿದು ರೈತನ ಸಾವು

ಮಾರಾಟ ಮಾಡುವ ಪ್ರಯತ್ನದಲ್ಲಿದ್ದಾಗ ಅರಣ್ಯಾಧಿಕಾರಿ ಶರತ್​​ ಬಾಬು ಹಾಗೂ ಬೆಂಗಳೂರಿನ ಚನ್ನಮ್ಮನ ಕೆರೆ ಅಚ್ಚುಕಟ್ಟು ಪ್ರದೇಶದ ಪೊಲೀಸರ ಬಲೆಗೆ ಬಿದ್ದಿದ್ದರು. ಬಳಿಕ ಆರೋಪಿಗಳು ತಪ್ಪೊಪ್ಪಿಕೊಂಡಿದ್ದರು. ನ್ಯಾಯಾಲಯದ ನಿರ್ದೇಶನದ ಮೇರೆಗೆ ಆನೆಯ ದೇಹವನ್ನು ಹೊರತೆಗೆದು ಪ್ರಯೋಗಾಲಯದಿಂದ ಪ್ರಮಾಣೀಕರಿಸಲಾಯಿತು. ನಂತರ ಆನೆಯ ಕಳೇಬರವನ್ನು ಹಾಸನ ಅರಣ್ಯ ಅಧಿಕಾರಿಗೆ ಹಸ್ತಾಂತರಿಸಲಾಯಿತು.

ಬೆಂಗಳೂರಿನಲ್ಲಿ ದಾಖಲಾಗಿದ್ದ ಪ್ರಕರಣವನ್ನು ತಮ್ಮ ಸ್ಥಳೀಯ ಹಾಸನ ಅರಣ್ಯ ಇಲಾಖೆಗೆ ವರ್ಗಾವಣೆ ಮಾಡುವಂತೆ ಸಂಸದ ಪ್ರಜ್ವಲ್​ ರೇವಣ್ಣ ಅವರು ಅನಧಿಕೃತವಾಗಿ ಒತ್ತಡ ಹೇರಿದರು. ಈ ಮೂಲಕ ಪ್ರಕರಣವನ್ನು ಮುಚ್ಚಿಹಾಕುವ ಪ್ರಯತ್ನ ಮಾಡಿದರು. ಆದರೆ ಇದಕ್ಕೆ ಡಿಸಿಪಿ ಹರೀಶ್​​ ಪಾಂಡೆ ನಿರಾಕರಿಸಿದರು.

ಈ ವೇಳೆ ಹಾಸನ ಅರಣ್ಯ ಇಲಾಖೆ ಅಧಿಕಾರಿಗಳು ಅದೇ ವನ್ಯಜೀವಿ ಪ್ರಕರಣದಲ್ಲಿ ಮತ್ತೊಂದು ಪ್ರಕರಣವನ್ನು ದಾಖಲಿಸಿಕೊಳ್ಳುತ್ತಾರೆ. ಪ್ರಮುಖ ಆರೋಪಿಗಳನ್ನು ಕೈಬಿಟ್ಟು ಇಬ್ಬರನ್ನು ಮಾತ್ರ ಬಂಧಿಸಿ, ಚನ್ನಮ್ಮನ ಕೆರೆ ಅಚ್ಚುಕಟ್ಟು ಪೊಲೀಸರು ಮುಖ್ಯ ಆರೋಪಿಗಳನ್ನು ಬಂಧಿಸದಂತೆ ತಡೆಯುವ ಪ್ರಯತ್ನ ಮಾಡುತ್ತಾರೆ.

ಇದರ ನಂತರ ಆರೋಪಿಗಳು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ, ಒಂದೇ ವಿಚಾರದಲ್ಲಿ ಎರಡು ಕಡೆ ಪ್ರಕರಣ ದಾಖಲಾಗಿದೆ, ಎಂದು ಅರ್ಜಿ ಸಲ್ಲಿಸುತ್ತಾರೆ. ಈ ಮೂಲಕ ಬೆಂಗಳೂರಿನ ಪ್ರಕರಣವನ್ನು ರದ್ದುಗೊಳಿಸಿ, ನಂತರ ಹಾಸನ ಅರಣ್ಯ ಅಧಿಕಾರಿಗಳು ಬೆಂಬಲದಿಂದ ಜಾಮೀನು ಪಡೆದು ಹೊರಬರುವ ಉಪಾಯ ಮಾಡಿದ್ದರು.

ಕಾನೂನು ದುರುಪಯೋಗಪಡಿಸಿಕೊಂಡ ಹಾಸನ ಅರಣ್ಯ ಅಧಿಕಾರಿ (ಆರ್​​ಎಫ್​​ಒ) ಮುಖ್ಯ ತಪ್ಪಿತಸ್ಥ. ಈ ವಿಚಾರದಲ್ಲಿ ಪಾತ್ರದ ಕುರಿತು ಜಾಗೃತ ವಿಭಾಗದಿಂದ ನೋಟಿಸ್​​ ನೀಡಲಾಗಿದೆ. ಡಿಸಿಪಿ ಹರೀಶ್​​ ಪಾಂಡೆ ವರ್ಗಾವಣೆ ಆದ ಕೂಡಲೆ, ನಂತರ ಆ ಸ್ಥಾನಕ್ಕೆ ಬಂದ ಡಿಸಿಪಿ ಕೃಷ್ಣಕಾಂತ್​​ ನೆರವಿನೊಂದಿಗೆ ಹಾಸನ ಅರಣ್ಯ ಇಲಾಖೆಗೆ ವರ್ಗಾವಣೆ ಮಾಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ಪ್ರಕರಣವನ್ನು ಮುಚ್ಚಿ ಹಾಕಿ ಸ್ಥಳೀಯ ಸಂಸದ ಪ್ರಜ್ವಲ್​ ರೇವಣ್ಣ ಅವರನ್ನು ಸಂತೋಷಪಡಿಸುವ ಹಾಗೂ ಆರೋಪಿಗಳನ್ನು ಖುಲಾಸೆಗೊಳಿಸುವ ಉದ್ದೇಶ ಹೊಂದಿದ್ದರು.

ಅಳಿವಿನ ಅಂಚಿನಲ್ಲಿರುವ ಪ್ರಾಣಿಯನ್ನು ಹತ್ಯೆ ಮಾಡುವುದು ಗಂಭೀರ ಅಪರಾಧ. ಅರಣ್ಯ ಅಧಿಕಾರಿಗಳೇ ರಾಜಕಾರಣಿಗಳ ಒತ್ತಡಕ್ಕೆ ಮಣಿದು ಈ ಪ್ರಕರಣದಲ್ಲಿ ಶಾಮೀಲಾಗಿದ್ದಾರೆ. ಈ ಸಂಪೂರ್ಣ ಪ್ರರಕಣವನ್ನು ಹಾಸನ ಅರಣ್ಯ ಇಲಾಖೆಯಿಂದ ಜಾಗೃತ ಇಲಾಖೆಗೆ ವರ್ಗಾವಣೆ ಮಾಡಬೇಕು. ಭ್ರಷ್ಟಾಚಾರಕ್ಕೆ ಸಂಬಂಧಿಸಿದ ಹಾಸನ ಆರ್​ಎಫ್​​​​ಒ ಅವರನ್ನು ವಿಚಾರಣೆಗೆ ಒಳಪಡಿಸಬೇಕು ಎಂದು ಮೇನಕಾ ಗಾಂಧಿ ಆಗ್ರಹಿಸಿದ್ದಾರೆ.

ಇದನ್ನೂ ಓದಿ | ಕಬ್ಬಿನ ಲಾರಿ ಅಡ್ಡಗಟ್ಟಿದ ಆನೆ-ಆನೆಮರಿ; ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದ್ದ ಜನ!

Exit mobile version