ಮಂಡ್ಯ: ಜಿಲ್ಲೆಯ ಪಾಂಡವಪುರ ತಾಲೂಕಿನ ಲಕ್ಷ್ಮೀಪುರ ಗ್ರಾಮದ ಜನರನ್ನು ಕಳೆದ ನಾಲ್ಕೈದು ದಿನಗಳಿಂದ ನಿರಂತರವಾಗಿ ಕಾಡಿದ (Monkey menace) ಒಂಟಿ ಕೋತಿಯನ್ನು ಕೊನೆಗೂ ಸೆರೆ ಹಿಡಿಯಲಾಗಿದೆ.
ಲಕ್ಷ್ಮೀಪುರ ಎನ್ನುವುದು ಮೇಲುಕೋಟೆ ಸಮೀಪದ ಒಂದು ಊರು. ಕೆಲವು ದಿನಗಳ ಹಿಂದೆ ಈ ಗ್ರಾಮಕ್ಕೆ ಎಲ್ಲಿಂದಲೋ ನುಗ್ಗಿ ಬಂದ ಒಂದು ಕೋತಿ ದೊಡ್ಡ ಪ್ರಮಾಣದಲ್ಲಿ ಊರಿಗೆ ಕಿರಿಕಿರಿ ಮಾಡುತ್ತಿದೆ. ಗ್ರಾಮದ ಹಲವರ ಮೇಲೆ ಕಂಡ ಕಂಡಲ್ಲಿ ದಾಳಿ ಮಾಡಿದ್ದು, ಸುಮಾರು ಏಳೆಂಟು ಜನರಿಗೆ ಕಡಿದಿದೆ.
ಕೋತಿಯ ಹುಚ್ಚಾಟಕ್ಕೆ ಬೆಚ್ಚಿಬಿದ್ದ ಜನರು ಯಾವ ರೀತಿಯಲ್ಲಿ ಸಮಸ್ಯೆಗಳನ್ನು ಎದುರಿಸಿದ್ದರೆಂದರೆ ಕೆಲವರಂತೂ ಊರೇ ಬಿಟ್ಟಿದ್ದರು. ಕೆಲವು ಮಂದಿ ಮನೆಗಳ ಬಾಗಿಲನ್ನೇ ಮುಚ್ಚಿ ಒಳಗೇ ಕುಳಿತುಕೊಳ್ಳುತ್ತಿದ್ದರು. ಕೆಲವು ಜನರು ರಸ್ತೆಯಲ್ಲಿ ಎಲ್ಲೇ ಕೋತಿ ಕಾಣಿಸಿದರೂ ಪಕ್ಕದಲ್ಲಿರುವ ಮನೆಯೊಳಗೆ ನುಗುತ್ತಿದ್ದರು. ಮಕ್ಕಳನ್ನಂತೂ ಹೊರಗೆ ಬಿಡುವಂತೆಯೇ ಇರಲಿಲ್ಲ. ಈ ರೀತಿ ಕೆಲವು ದಿನಗಳ ಕಾಲ ಇಡೀ ಊರಿನ ಚಟುವಟಿಕೆಗಳನ್ನು ಒಂದು ಕೋತಿ ನಿಯಂತ್ರಿಸಿತ್ತು.
ಅರಣ್ಯಾಧಿಕಾರಿಗಳಿಗೆ ಮನವಿ
ಈ ನಡುವೆ, ಗ್ರಾಮಸ್ಥರು ಈ ಕೋತಿಯನ್ನು ಹೇಗಾದರೂ ಮಾಡಿ ಹಿಡಿಯಿರಿ ತಮ್ಮನ್ನು ಬದುಕಿಸಿ ಎಂದು ಮನವಿ ಮಾಡಿಕೊಂಡಿದ್ದರು. ಈ ಕೋತಿಯಿಂದ ಕಾಲು ಕೈ ಕಡಿತಕ್ಕೆ ಒಳಗಾದವರ ಕಥೆಗಳನ್ನು ಕೇಳಿಸಿದ್ದರು.
ಅರಣ್ಯ ಇಲಾಖೆ ಅಧಿಕಾರಿಗಳು ಶಿಕಾರಿಪುರದರಿಂದ ಕೋತಿ ಹಿಡಿಯುವಲ್ಲಿ ನಿಪುಣವಾಗಿರುವ ತಂಡವನ್ನು ಕರೆಸಿಕೊಂಡಿದ್ದಾರೆ. ಶುಕ್ರವಾರ ಈ ತಂಡ ಆಗಮಿಸಿ ಸುಮಾರು ಮೂರು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಕೋತಿಯನ್ನು ಸೆರೆ ಹಿಡಿದಿದ್ದಾರೆ. ಪಂಜರ ಸೇರಿದ ಬಳಿಕವೂ ಕೋತಿ ತನ್ನ ವ್ಯಗ್ರತನವನ್ನು ಬಿಟ್ಟಿಲ್ಲ.
ಮಂಗನ ಸೆರೆಯಿಂದ ಲಕ್ಷ್ಮೀಪುರದ ಜನರು ನಿಟ್ಟುಸಿರು ಬಿಟ್ಟಿದ್ದಾರೆ. ಇದರ ಜತೆಗೇ ಕೋತಿ ಕಾಟ ತಾಳಲಾರದೆ ಊರು ಬಿಟ್ಟಿದ್ದವರು ಕೂಡಾ ಮರಳಿ ಬರುತ್ತಿದ್ದಾರೆ.
ಇದನ್ನೂ ಓದಿ | ಕೋತಿ ಇದೆ ಎಚ್ಚರಿಕೆ! ನಮ್ಮ ಮೆಟ್ರೋದಲ್ಲಿ ಕಂಡು ಬಂತು ಹೊಸ ನೋಟಿಸ್ ಬೋರ್ಡ್!