Site icon Vistara News

ಸಚಿವ ಅಶೋಕ್‌ ಹೇಳಿದ್ದು ಅಸತ್ಯ: ಪಠ್ಯ ಪರಿಷ್ಕರಣೆ ಕುರಿತು ಬರಗೂರು ರಾಮಚಂದ್ರಪ್ಪ ಉತ್ತರ

baraguru ramachandrappa

ಬೆಂಗಳೂರು: ಪಠ್ಯಪುಸ್ತಕ ಪರಿಷ್ಕರಣೆ ಕುರಿತು ಕಂದಾಯ ಸಚಿವ ಆರ್‌. ಅಶೋಕ್‌ ಅವರ ಹೇಳಿಕೆಗೆ, ಸಿದ್ದರಾಮಯ್ಯ ಸರ್ಕಾರದ ಅವಧಿಯ ಪಠುಪುಸ್ತಕ ಪರಿಷ್ಕರಣೆ ಸಮಿತಿ ಸರ್ವಾಧ್ಯಕ್ಷರಾಗಿದ್ದ ಪ್ರೊ. ಬರಗೂರು ರಾಮಚಂದ್ರಪ್ಪ ವಿಸ್ತೃತ ಉತ್ತರ ನೀಡಿದ್ದಾರೆ. ತಮ್ಮ ಸಮಿತಿ ಕುರಿತು ಅಶೋಕ್‌ ಅವರು ಅಸತ್ಯವನ್ನು ನುಡಿದಿದ್ದಾರೆ ಎಂದು ಬರಗೂರು ಆರೋಪಿಸಿದ್ದಾರೆ.

ಬರಗೂರು ರಾಮಚಂದ್ರಪ್ಪ ಸಮಿತಿ ಕಮ್ಯುನಿಸ್ಟ್‌ ಸಿದ್ಧಾಂತವನ್ನು ತುರುಕಿದೆ ಎಂದ ಅಶೋಕ್‌ ಆರೋಪಕ್ಕೆ ಉತ್ತರಿಸಿರುವ ಬರಗೂರು, ನಾವು ಕಮ್ಯುನಿಸ್ಟ್‌ ಸಿದ್ಧಾಂತವನ್ನು ತುರುಕಿಲ್ಲ. ಹಾಗೆ ಮಾಡುವುದಾಗಿದ್ದರೆ, ಜನಸಂಘದಿಂದ ಸ್ಪರ್ಧೆ ಮಾಡಿದ ಗೋಪಾಲ ಕೃಷ್ಣ ಅಡಿಗರ ಪಾಠವನ್ನು ಸೇರಿಸದೇ ಇರಬಹುದಿತ್ತು. ಆದರೆ ಅವರು ಬರೆದ ಕಟ್ಟುವೆವು ನಾವು ಹೊಸ ನಾಡೊಂದನು ಎಂಬುದನ್ನು ಸೇರಿಸಿದ್ದೇವೆ ಎಂದು ಸಮರ್ಥನೆ ಮಾಡಿಕೊಂಡಿದ್ದಾರೆ.

ಬರಗೂರು ರಾಮಚಂದ್ರಪ್ಪ ಅವರ ಸಮರ್ಥನೆ

೧. ಯಾರೇ ಪಠ್ಯ ಪುಸ್ತಕ ಪರಿಷ್ಕರಣೆ ಮಾಡಿದರೂ ಕೆಲವು ಪಠ್ಯಗಳನ್ನು ಬಿಡುವ ಮತ್ತು ಸೇರಿಸುವ ಪ್ರಕ್ರಿಯೆ ಇರುತ್ತದೆ. ಸಕಾರಣ ಮತ್ತು ಮಾನದಂಡಗಳನ್ನು ಪಾಲನೆ ಮಾಡಿ ಈ ಪ್ರಕ್ರಿಯೆ ನಡೆಸಬೇಕು. ನಮ್ಮ ಪರಿಷ್ಕರಣೆಗೆ ಸೂಕ್ತ ಕಾರಣಗಳನ್ನು ದಾಖಲಿಸಿ ಪರಿಷ್ಕರಣೆ ಮಾಡಿದ್ದೇವೆ.‌ ರಾಷ್ಟ್ರೀಯ ಹಾಗೂ ರಾಜ್ಯ ಪಠ್ಯಕ್ರಮ ಚೌಕಟ್ಟು ಮತ್ತು ಸಂವಿಧಾನಾತ್ಮಕ ಆಶಯಗಳನ್ನು ಪಾಲಿಸಿದ್ದೆವೆ

೨. ಮೈಸೂರು ಒಡೆಯರ್ ವಿವರಗಳನ್ನು ಬಿಟ್ಟಿದ್ದೇವೆಂದು ಸಚಿವರು ಹೇಳಿದ್ದಾರೆ. ವಾಸ್ತವವಾಗಿ 6ನೇ ತರಗತಿ ಸಮಾಜ ವಿಜ್ಞಾನದಲ್ಲಿದ್ದ ಪಾಠವನ್ನು ವರ್ಗಾಯಿಸಿದ್ದೆವು. 7 ನೇ ತರಗತಿ ಪಠ್ಯಕ್ಕೆ ವರ್ಗಾವಣೆ ಮಾಡಲಾಗಿತ್ತು. ಆದರೆ ಈಗಿನ ಸಮಿತಿ 7ನೇ ತರಗತಿಯಿಂದ ತೆಗೆದು 10 ನೇ ತರಗತಿಗೆ ಮುಕ್ಕಾಲು ಪುಟದ ವಿವರ ಕೊಟ್ಟು ಅನ್ಯಾಯ ಮಾಡಿದೆ.

೩. ನಾಡಪ್ರಭು ಕೆಂಪೇಗೌಡರ ಪಾಠ ಪರಿಷ್ಕರಣೆ ಮಾಡಿಲ್ಲ ಎಂಬುದು ಸಚಿವರ ಆರೋಪ. 7ನೇ ತರಗತಿಯ ಸಮಾಜ ವಿಜ್ಞಾನ ಪಠ್ಯದಲ್ಲಿ ಕೆಂಪೇಗೌಡರ 2 ಪುಟ ವಿವರ ಕೊಟ್ಟಿದ್ದೇವೆ. ಆದರೆ ಮರು ಪರಿಷ್ಕರಣೆಯಲ್ಲಿ ಒಂದು ಪುಟಕ್ಕೆ ಇಳಿಸಿದ್ದಾರೆ. ಕೆಂಪೇಗೌಡರ ಮಹತ್ವವನ್ನು ಇವರೇ ಕುಗ್ಗಿಸಿದ್ದಾರೆ.

೪. ಪೋರ್ಚುಗೀಸರ ವಿರುದ್ಧ ಹೋರಾಡಿದ ಚೆನ್ನಭೈರಾದೇವಿ ಪಾಠ ಸೇರ್ಪಡೆ ಸ್ವಾಗತಿಸುತ್ತೇನೆ. ಆದರೆ ಪೋರ್ಚುಗೀಸ್ ವಿರುದ್ಧ ಹೋರಾಡಿದ್ದ ರಾಣಿ ಅಬ್ಬಕ್ಕರ ಪಾಠ ತೆಗೆದಿರುವುದು ಯಾಕೆ? 7ನೇ ತರಗತಿ ಸಮಾಜ ವಿಜ್ಞಾನ ಪಠ್ಯದಲ್ಲಿ ಮಹಿಳಾ ಸ್ವಾತಂತ್ರ್ಯ ಹೋರಾಟಗಾರರ ಇಡೀ ಅಧ್ಯಾಯವನ್ನು ಕೈ ಬಿಡಲಾಗಿದೆ. ಯಶೋಧರಮ್ಮ ದಾಸಪ್ಪ, ಬಳ್ಳಾರಿ ಸಿದ್ಧಮ್ಮ, ಉಮಾ ಬಾಯಿ ಕುಂದಾಪುರ, ಕಮಲಾದೇವಿ ಚಟ್ಟೋಪಾಧ್ಯಾಯ ಇವರ ಎಲ್ಲಾ ವಿವರಗಳನ್ನು ತೆಗೆದಿದ್ದಾರೆ.

೫. 7ನೇ ತರಗತಿ ಸಮಾಜ ವಿಜ್ಞಾನ ಭಾಗ-1 ರಲ್ಲಿ ಭಕ್ತಿಪಂಥ ಮತ್ತು ಸೂಫಿಪಂಥಗಳು ಎಂಬ ಅಧ್ಯಾಯಗಳಿದ್ದವು. ಈ ಅಧ್ಯಾಯದಲ್ಲಿದ್ದ ಶಿಶುನಾಳ ಶರೀಫರು, ಪುರಂದರದಾಸರು, ಕನಕದಾಸರು ಇವರ ಎಲ್ಲ ವಿವರ ತೆಗೆದು ಹಾಕಿದ್ದಾರೆ. ಕೇವಲ ಉತ್ತರ ಭಾರತದವರನ್ನು ಮಾತ್ರ ಸೇರಿಸಿಕೊಂಡಿದ್ದಾರೆ. ಇದು ಕರ್ನಾಟಕದ ಅಸ್ಮಿತೆಗೆ ಮಾಡಿದ ಅನ್ಯಾಯ.

೬. ಸಮಾಜ ವಿಜ್ಞಾನದ ೭ನೇ ತರಗತಿಯ ಭಾಗ -೨ರಲ್ಲಿ ಇದ್ದ ಸಾವಿತ್ರಿ ಬಾ ಪುಲೆಯಾದಿಯಿಂದ ನಾವು ಹೊಸದಾಗಿ ಸೇರಿಸಿದ್ದ ಎಲ್ಲ ಮಹಿಳೆಯರ ವಿವರಗಳನ್ನ ತೆಗೆದುಹಾಕಿದ್ದಾರೆ‌.

೭. ಕನ್ನಡ ಭಾಷಾ ಪಠ್ಯಗಳಲ್ಲಿದ್ದ ದಲಿತ ಸಾಹಿತಿಗಳು, ಮಹಿಳಾ ಸಾಹಿತಿಗಳ ಬರಹ ಕೈ ಬಿಟ್ಟಿದ್ದಾರೆ. ಆ ಜಾಗದಲ್ಲಿ ಒಂದೇ ಸಮುದಾಯದವರ ಬರಹಗಳನ್ನು ಹಾಕಿದ್ದಾರೆ. ಅಪಚಾರಗಳನ್ನು ಮರೆಮಾಚಲು ಕುವೆಂಪು ಅವರ 10 ಪಾಠಗಳನ್ನು ಸೇರಿಸಿದ್ದೇವೆಂದು ಹೇಳುತ್ತಾರೆ. ಕುವೆಂಪು ಅವರ ಹತ್ತು ಪಾಠದ ವಿಷಯಗಳನ್ನು ಮತ್ತೆ ಮತ್ತೆ ಹೇಳುವ ಇವರು ಕುವೆಂಪು ಅವರ ಪೋಟೋವನ್ನೇ ತೆಗೆದುಹಾಕಿದ್ದಾರೆ.

8. ಹುಯಿಲಗೋಳ ನಾರಾಯಣರಾಯರ ಭಾವಚಿತ್ರ ತೆಗೆದದಲ್ಲದೇ ಕಯ್ಯಾರ ಕಿಞ್ಞಣ್ಣ ರೈ ಅವರ ವಿವರ ಬಿಟ್ಟಿದ್ದಾರೆ

9. ಮಾಜಿ ಪ್ರಧಾನಿ ದೇವೇಗೌಡರ ಭಾವಚಿತ್ರದಿಂದ ಹಿಡಿದು ದೇವನೂರು ಮಹಾದೇವ ಅವರ ಭಾವಚಿತ್ರದವರೆಗೂ ತೆಗೆದಿದ್ದಾರೆ. ನಮ್ಮ ಪಠ್ಯದಲ್ಲಿ ಇದ್ದ ಸಿದ್ಧಗಂಗೆ ಮತ್ತು ಆದಿಚುಂಚನಗಿರಿ ಮಠಗಳ ವಿವರಗಳನ್ನು ಒಂದೇ ಸಾಲಿಗೆ ಇಳಿಸಿದ್ದಾರೆ

10.ಅಂಬೇಡ್ಕರ್ ವಿಚಾರಧಾರೆಗೆ ಸಾಕಷ್ಟು ಕತ್ತರಿ ಹಾಕಿದ್ದಾರೆ.

Exit mobile version