Site icon Vistara News

Umesh Katti | ಸಚಿವ ಉಮೇಶ್‌ ಕತ್ತಿ ನಿಧನಕ್ಕೆ ಸಿಎಂ ಬೊಮ್ಮಾಯಿ ಸೇರಿ ಗಣ್ಯರ ಸಂತಾಪ

ಉಮೇಶ್‌ ಕತ್ತಿ

ಬೆಂಗಳೂರು: ಆಹಾರ ಹಾಗೂ ಅರಣ್ಯ ಸಚಿವ ಉಮೇಶ್‌ ಕತ್ತಿ(Umesh Katti) ಅವರ ಅಕಾಲಿಕ ನಿಧನಕ್ಕೆ ಸಿಎಂ ಬಸವರಾಜ ಬೊಮ್ಮಾಯಿ, ಆರೋಗ್ಯ ಸಚಿವ ಡಾ.ಸುಧಾಕರ್ ಸೇರಿ ಪ್ರಮುಖ ರಾಜಕಾರಣಿಗಳು, ಗಣ್ಯರು ಸಂತಾಪ ಸೂಚಿಸಿದ್ದಾರೆ.

ಈ ಬಗ್ಗೆ ಮುಖ್ಯಮಂತ್ರಿ ಬೊಮ್ಮಾಯಿ ಟ್ವೀಟ್‌ ಮಾಡಿ, ಅರಣ್ಯ ಸಚಿವ, ನನ್ನ ಆಪ್ತ ಸಹೋದ್ಯೋಗಿ ಶ್ರೀ ಉಮೇಶ್ ಕತ್ತಿ ಅವರ ಅಕಾಲಿಕ ನಿಧನದಿಂದ ತೀವ್ರ ದುಃಖಿತನಾಗಿದ್ದೇನೆ. ಅವರ ನಿಧನದಿಂದ ರಾಜ್ಯ ಓರ್ವ ನುರಿತ ಮುತ್ಸದ್ದಿ, ಕ್ರಿಯಾಶೀಲ ಮುಖಂಡ ಹಾಗೂ ನಿಷ್ಠಾವಂತ ಜನಸೇವಕನನ್ನು ಕಳೆದುಕೊಂಡಿದೆ. ಅವರ ಅಗಲಿಕೆಯ ದುಃಖವನ್ನು ಸಹಿಸುವ ಶಕ್ತಿಯನ್ನು ಆ ಭಗವಂತ ಅವರ ಕುಟುಂಬಕ್ಕೆ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ತಿಳಿಸಿದ್ದಾರೆ.

ಸಚಿವ ಆರ್‌.ಅಶೋಕ್‌ ಮಾತನಾಡಿ, ಉಮೇಶ್‌ ಕತ್ತಿ ಅವರು ಮೊದಲ ಬಾರಿ ಶಾಸಕರಾಗಿದ್ದಾಗಲೇ ಲೋಕೋಪಯೋಗಿ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ವಿಶೇಷವಾಗಿ ಬೆಳಗಾವಿ ಭಾಗದ ಹಿರಿಯ ಹಾಗೂ ಪ್ರಮುಖ ನಾಯಕರನ್ನು ಪಕ್ಷ ಹಾಗೂ ರಾಜ್ಯ ಕಳೆದುಕೊಂಡಿದೆ. ಇತ್ತೀಚೆಗೆ ಅವರನ್ನು ನಾನು ಮಾತನಾಡಿದ್ದೆ. ಬಹಳ ಕ್ರಿಯಾಶೀಲವಾಗಿದ್ದ ಅವರು, ಎಲ್ಲರ ಜತೆ ಆತ್ಮೀಯವಾಗಿ ಬೆರೆಯುತ್ತಿದ್ದರು ಎಂದು ತಿಳಿಸಿದ್ದಾರೆ.

ಮಾಜಿ ಸಿಎಂ ಸಿದ್ದರಾಮಯ್ಯ ಟ್ವೀಟ್‌ ಮಾಡಿ, ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಶ್ರೀ ಉಮೇಶ್ ಕತ್ತಿಯವರ ನಿಧನದ ಸುದ್ದಿ ಕೇಳಿ ಅತೀವ ದುಃಖವಾಗಿದೆ. ಅವರ ಕುಟುಂಬಕ್ಕೆ ಆಳವಾದ ಸಂತಾಪ ಸೂಚಿಸುವೆ, ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ತಿಳಿಸಿದ್ದಾರೆ.

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಟ್ವೀಟ್‌ ಮಾಡಿ, ರಾಜ್ಯ ಸಂಪುಟ‌ ಸಚಿವ, ಆಹಾರ ಮತ್ತು ಅರಣ್ಯ ಖಾತೆ ಸಚಿವ ಶ್ರೀ ಉಮೇಶ್ ಕತ್ತಿಯವರ ಅಕಾಲಿಕ ನಿಧನ ಆಘಾತವನ್ನುಂಟುಮಾಡಿದೆ. ಶ್ರೀಯುತರ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ಭಗವಂತ ಅವರ ಕುಟುಂಬ, ಅಭಿಮಾನಿ ವರ್ಗಕ್ಕೆ ಹಾಗೂ ಕಾರ್ಯಕರ್ತ ಬಂಧುಗಳಿಗೆ ನೀಡಲಿ ಮತ್ತು ಅವರ ಆತ್ಮಕ್ಕೆ ಮೋಕ್ಷ ಪ್ರಾಪ್ತಿಯಾಗಲಿ ಎಂದಿದ್ದಾರೆ.

ಇದನ್ನೂ ಓದಿ | Umesh Katti | 8 ಬಾರಿ ಶಾಸಕರಾಗಿದ್ದ ಉಮೇಶ್‌ ಕತ್ತಿ ಅಪರೂಪದ ರಾಜಕಾರಣಿ

Exit mobile version