ಬೆಂಗಳೂರು: ಬೆಂಗಳೂರಿನ ಆಸ್ತಿ ತೆರಿಗೆದಾರರಿಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಸಿಹಿಸುದ್ದಿ ನೀಡಿದ್ದಾರೆ. ಅನೇಕ ದಿನಗಳಿಂದ ಬೆಂಗಳೂರಿನ ಆಸ್ತಿ ಮಾಲೀಕರ ಆಗ್ರಹವನ್ನು ಒಪ್ಪಿದ್ದಾರೆ.
ಇಡೀ ವರ್ಷದ ಆಸ್ತಿ ತೆರಿಗೆಯನ್ನು ಪೂರ್ಣ ಪ್ರಮಾಣದಲ್ಲಿ ಕಟ್ಟುವವರಿಗೆ ಶೇ.5 ವಿನಾಯಿತಿಯನ್ನು ಮೇ 31ರವರೆಗೆ ಬಿಬಿಎಂಪಿ ನೀಡಿತ್ತು. ಆದರೆ ಈ ಸಮಯದಲ್ಲಿ ಚುನಾವಣೆ ಕಾವು ಇದ್ದಿದ್ದರಿಂದ ಅನೇಕರು ಆಸ್ತಿ ತೆರಿಗೆ ಪಾವತಿಸಿರಲಿಲ್ಲ.
ಹಾಗಾಗಿ ಮತ್ತೊಂದು ತಿಂಗಳು ಈ ಅವಕಾಶವನ್ನು ವಿಸ್ತರಿಸಬೇಕು ಎಂದು ಅನೇಕರು ಒತ್ತಾಯ ಮಾಡಿದ್ದರು. ಬಿಬಿಎಂಪಿ ಆಡಳಿತದ ಕುರಿತು ಕಾಂಗ್ರೆಸ್‌ನ ಮಾಜಿ ಮೇಯರ್‌ಗಳ ಜತೆಗೆ ಡಿ.ಕೆ. ಶಿವಕುಮಾರ್ ಸಭೆ ನಡೆಸಿದ ನಂತರ ಈ ಕುರಿತು ಘೋಷಣೆ ಮಾಡಿದರು.
ಮೇ 31ರವರೆಗೆ ಇದ್ದ ತೆರಿಗೆ ವಿನಾಯಿತಿ ಅವಕಾಶವನ್ನು ಜೂನ್ 30ರವರೆಗೆ ವಿಸ್ತರಣೆ ಮಾಡಲಾಗಿದೆ. ಎಲ್ಲ ಮಾಜಿ ಮೇಯರ್‌ಗಳು ಹೇಳಿದ್ದರಿಂದ ಈ ಘೋಷಣೆ ಮಾಡುತ್ತಿದ್ದೇನೆ ಎಂದು ತಿಳಿಸಿದರು.
ಬೆಂಗಳೂರಿನ ಮಾಜಿ ಮೇಯರ್ ಸಭೆ ನಡೆಸಿದ್ದೇನೆ. ಬೆಂಗಳೂರನ್ನ ಯಾವ ರೀತಿ ಅಭಿವೃದ್ಧಿ ಮಾಡಬಹುದು ಅಂತ ಸಲಹೆ ಕೇಳಿದ್ದೇನೆ. ರಿಂಗ್‌ರೋಡ್‌ಗಳಲ್ಲಿ ತ್ಯಾಜ್ಯ ರಸ್ತೆ ಬದಿ ಹಾಕುತ್ತಿದ್ದಾರೆ. ಕೆರೆಗಳಿಗೆ, ಚರಂಡಿಗಳಿಗೆ ಕಸ ಸೆಯುತ್ತಿದ್ದಾರೆ. ಸಂಬಂಧ ಅನೇಕ ಸಲಹೆ ಕೇಳಿದ್ದಾರೆ.
ಸೋಮವಾರ ಬೆಂಗಳೂರಿನ ಎಲ್ಲ ಪಕ್ಷದ ಶಾಸಕರ ಸಭೆ ಕರೆಯುತ್ತಿದ್ದೇನೆ. ಆ ಮೇಲೆ ನಮ್ಮ ಪಕ್ಷದ ಶಾಸಕರ ಪ್ರತ್ಯೇಕ ಸಭೆ ಕರೆಯುತ್ತೇನೆ. ಎಲ್ಲರನ್ನ ವಿಶ್ವಾಸಕ್ಕೆ ಪಡೆಯಲು ಅದು ಆಂತರಿಕ ಸಭೆ ನಡೆಸುತ್ತೇನೆ. ಮಾಜಿ ಮೇಯರ್‌ಗಳು, ನಮ್ಮ ಸರ್ಕಾರ ಬಂದಿದೆ, ಬೆಂಗಳೂರಿನ ಜನತೆಗೆ ಏನಾದ್ರೂ ಗಿಫ್ಟ್ ಕೊಡಿ ಅಂದ್ರು. ಅದಕ್ಕಾಗಿ ಮೇ 30 ರವರೆಗೆ ಇದ್ದ ತೆರಿಗೆ ವಿನಾಯ್ತಿಯನ್ನ ಜೂನ್ 30 ರವರೆಗೆ ವಿಸ್ತರಣೆ ಮಾಡಿದ್ದೇವೆ. ಜೂನ್ 30 ರವರೆಗೆ ಟ್ಯಾಕ್ಸ್ ಪೇ 5% ಡಿಸ್ಕೌಂಟ್ ಎಂದರು.
ಇದನ್ನೂ ಓದಿ: BBMP Election: ಬಿಬಿಎಂಪಿ ಎಲೆಕ್ಷನ್‌ಗೆ ಸಿದ್ಧತೆ ಆರಂಭಿಸಿದ ಕಾಂಗ್ರೆಸ್; ಪೂರ್ವತಯಾರಿ ಸಮಿತಿ ರಚನೆ