ಬೆಳಗಾವಿ: ಅಗ್ನಿಪಥ್(Agnipath) ಯೋಜನೆ ವಿರೋಧಿಸಿ ಇಂದು ʼಬೆಳಗಾವಿ ಚಲೋʼ ಹಾಗೂ ಬೆಳಗಾವಿ ಬಂದ್‌ಗೆ ಕರೆ ನೀಡಿರುವುದರಿಂದ ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದಾರೆ. ಜಿಲ್ಲೆಯಾದ್ಯಂತ ಖಾಕಿ ಪಡೆ ಅಲರ್ಟ್ ಆಗಿದ್ದು, ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಬಂದ್‌ಗೆ ಕರೆ ನೀಡಿರುವುದಲ್ಲದೆ ಪ್ರತಿಭಟನೆ ನಡೆಸುವಂತೆ ಸಂದೇಶಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಇದು ಯಾವುದೇ ನಿರ್ಧಿಷ್ಟ ಸಂಘಟನೆಯಿಂದ ಬಂದ ಕರೆಯಲ್ಲ, ಬದಲಿಗೆ ವಾಟ್ಸಾಪ್‌ನಲ್ಲಿ ಹರಿದಾಡಿದ ಸಂದೇಶ. ಹಾಗಾಗಿ ಅಮಾಯಕರು ಈ ಸಂದೇಶಗಳ ಬಲೆಗೆ ಬಿದ್ದು ಪ್ರತಿಭಟನೆ ನಡೆಸಲು ಮುಂದಾಗಬಾರದು ಎಂದು ಪೊಲೀಸರು ಸೂಚನೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಮುನ್ನೆಚರಿಕಾ ಕ್ರಮವಾಗಿ ಬೆಳಗಾವಿ ನಗರ ಹಾಗೂ ಜಿಲ್ಲಾ ಪೊಲೀಸರಿಂದ ‘ಹೈ’ ಅಲರ್ಟ್ ಘೋಷಿಸಲಾಗಿದೆ. ಅಲ್ಲದೆ, ಸಂದೇಶ ರವಾನೆ ಮಾಡಿದ ಯುವಕರಿಗೆ ಈಗಾಗಲೇ ಖಡಕ್ ವಾರ್ನಿಂಗ್ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ನಗರ ಪೊಲೀಸ್ ಆಯುಕ್ತ ಡಾ.ಬೋರಲಿಂಗಯ್ಯ ʻಪ್ರತಿಭಟನೆಗೆ ಯಾರು ಸಹ ನಮ್ಮ ಬಳಿ ಅನುಮತಿ ಪಡೆದಿಲ್ಲ. ಆದರೂ ಯಾವುದೇ ಅಹಿತಕರ ನಡೆಯದಂತೆ ತೀವ್ರ ಮುಂಜಾಗ್ರತೆ ಕ್ರಮ ಕೈಗೊಳ್ಳಲಾಗಿದೆ. ನಗರದಲ್ಲಿ ಸಿಸಿ ಕ್ಯಾಮರಾ, ಸ್ಟಿಲ್ ಕ್ಯಾಮರಾಗಳು ಹಾಗೂ 5 ಡ್ರೋನ್ ಕ್ಯಾಮರಾಗಳ ಕಣ್ಗಾವಲಿದೆʼ ಎಂದು ಹೇಳಿದ್ದಾರೆ
ಬೆಳಗಾವಿಯ ಹಲವು ಪ್ರದೇಶಗಳಲ್ಲಿ ಪೊಲೀಸರು ಬಿಗಿ ಬಂದೋಬಸ್ತ್ ಮಾಡಿದ್ದಾರೆ. ಡಿಸಿಪಿ ರವೀಂದ್ರ ಗಡಾದಿ ನೇತೃತ್ವದಲ್ಲಿ ಪೊಲೀಸ್ ಭದ್ರತೆ ಮಾಡಲಾಗಿದೆ. ಬೆಳಗಾವಿ ಕೋಟೆ, ಹಿರೇಬಾಗೇವಾಡಿ ಟೋಲ್ ಗೇಟ್, ಕುಂದಾನಗರಿ, ನಗರದ ಚೆನ್ನಮ್ಮ ವೃತ್ತ, ಬಳಿ ಪೊಲೀಸ್ ಇಲಾಖೆ ಬಿಗಿ ಬಂದೋಬಸ್ತ್ ಮಾಡಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಕ್ರಮ ಕೈಗೊಂಡೊದ್ದಾರೆ. ಹೆಚ್ಚಿನ ಭದ್ರತೆಗಾಗಿ ನಗದಲ್ಲಿ ಹಲವೆಡೆ ಕೆಎಸ್‌ಆರ್‌ಪಿ ತುಕಡಿ, ರ‍್ಯಾಪಿಡ್ ಫೋರ್ಸ್‌ನ ಒಂದು ತುಕಡಿ ನಿಯೋಜಿಸಲಾಗಿದೆ.
ಬೆಳಗಾವಿಗೆ ಬರುತ್ತಿರುವ ಯವಕರ ಮೇಲೆ ನಗರ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ. ಬೆಳಗಾವಿಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದ್ದಾರೆ. ಅನುಮತಿ ಇಲ್ಲದೇ ಪ್ರತಿಭಟನೆ ನಡೆಸಿದ್ದು ಕಂಡುಬಂದಲ್ಲಿ ಅವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸುವುದಾಗಿ ನಗರ ಪೊಲೀಸ್ ಆಯುಕ್ತ ಡಾ.ಬೋರಲಿಂಗಯ್ಯ, ಎಸ್‌ಪಿ ಲಕ್ಷ್ಮಣ ನಿಂಬರಗಿ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: Agnipath | ಅಗ್ನಿಪಥ್ ವಿರುದ್ಧ ಕರ್ನಾಟಕದಲ್ಲೂ ಪ್ರತಿಭಟನೆ ಜೋರು, ಬೆಳಗಾವಿ, ಧಾರವಾಡದಲ್ಲಿ ಲಾಠಿ ಚಾರ್ಜ್