Site icon Vistara News

PSI Scam | ಗೃಹ ಸಚಿವ ಆರಗ ಪರ ಸಿಎಂ ಬಸವರಾಜ ಬೊಮ್ಮಾಯಿ ಬ್ಯಾಟಿಂಗ್‌

CM basavaraj bommai

ಬೆಂಗಳೂರು: ಪಿಎಸ್‌ಐ ನೇಮಕಾತಿ ಪ್ರಕರಣ ಗಮನಕ್ಕೆ ಬಂದ ತಕ್ಷಣವೇ ಪ್ರಾಥಮಿಕ ತನಿಖೆ ನಡೆಸಿ, ಕೂಡಲೇ ಸಿ.ಐ.ಡಿ ಗೆ ತನಿಖೆಯನ್ನು ವಹಿಸಲಾಯಿತು. ಅತ್ಯಂತ ಪ್ರಾಮಾಣಿಕವಾಗಿ, ದಕ್ಷತೆಯಿಂದ ಗೃಹ ಸಚಿವರು ಕೆಲಸ ಮಾಡಿದ್ದಾರೆ. ಅವರ ಪ್ರಾಮಾಣಿಕತೆ ಮತ್ತು ದಕ್ಷತೆ ಇರುವುದರಿಂದಲೇ ಪ್ರಕರಣ ಹೊರಬಂದಿದೆ ಎಂದು ಗೃಹಸಚಿವ ಆರಗ ಜ್ಞಾನೇಂದ್ರ ಅವರನ್ನು ಸಿಎಂ ಬಸವರಾಜ ಬೊಮ್ಮಾಯಿ ಸಮರ್ಥಿಸಿಕೊಂಡಿದ್ದಾರೆ.

ಇದನ್ನೂ ಓದಿ| PSI Scam | ಸರ್ಕಾರದ ವಿರುದ್ಧ ಮುಗಿಬಿದ್ದ ಪ್ರತಿಪಕ್ಷಗಳು: ಸಿದ್ದರಾಮಯ್ಯ, ಶಿವಕುಮಾರ್‌, ಕುಮಾರಸ್ವಾಮಿ ವಾಗ್ದಾಳಿ

ತಮ್ಮ ನಿವಾಸದ ಬಳಿ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಸಿಎಂ, ಕಾಂಗ್ರೆಸ್‌ನವರ ಕಾಲದಲ್ಲಿ ಪಿಎಸ್‍ಐ ನೇಮಕಾತಿ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆಯಾಗಿತ್ತು. ಪ್ರಕರಣ ದಾಖಲಾಗಿ ಹಿರಿಯ ಪೊಲೀಸ್‌ ಅಧಿಕಾರಿ ಆರೋಪಿಯಾಗಿದ್ದರು. ಮುಂದೆ ಏನಾಯಿತು? ಬಂಧನ ದೂರದ ಮಾತು, ಅವರನ್ನು ವಿಚಾರಣೆಯೂ ಮಾಡಲಿಲ್ಲ. ನಮ್ಮ ಸರ್ಕಾರದ ಅವಧಿಯಲ್ಲಿ ಇಂತಹ ದಿಟ್ಟ ಕ್ರಮವನ್ನು ಗೃಹಸಚಿವರು ತೆಗೆದುಕೊಳ್ಳುತ್ತಾರೆ ಎಂದರೆ, ಯಾವುದೇ ಮುಲಾಜಿಗೆ ಒಳಗಾಗದೆ ತನಿಖೆ ಕೈಗೊಳ್ಳಲು ಅಧಿಕಾರಿಗಳಿಗೆ ಮುಕ್ತ ಅಧಿಕಾರವನ್ನು ನೀಡಲಾಗಿದೆ ಎಂದರ್ಥ ಎಂದರು.

ವ್ಯವಸ್ಥೆ ಸ್ವಚ್ಛ ಮಾಡುವ ಕೆಲಸ ನಿರಂತರ

ನಮಗೆ ಇಂತಹ ಚಟುವಟಿಕೆಗಳ ಬಗ್ಗೆ ಜೀರೋ ಟಾಲರೆನ್ಸ್ ಇದೆ ಹಾಗೂ ವ್ಯವಸ್ಥೆಯನ್ನು ಸ್ವಚ್ಛಗೊಳಿಸಲು  ದೊಡ್ಡವರಾಗಲೀ, ಸಣ್ಣವರಾಗಲಿ ಸ್ವಚ್ಛ ಮಾಡುವ ಕೆಲಸ ನಿರಂತರವಾಗಿ ನಡೆಯಬೇಕೆಂಬ ದೃಷ್ಟಿಯಿಂದ ಈ ಕೆಲಸ ಮಾಡಿದ್ದೇವೆ. ಈ ಸಮಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿ ಇದ್ದಿದ್ದರೆ, ಇದೇ ಪ್ರಕರಣವನ್ನು ವ್ಯವಸ್ಥಿತವಾಗಿ ಮುಚ್ಚಿಹಾಕುತ್ತಿದ್ದರು. ಹಿಂದೆ ಹೀಗೆ ಮಾಡಿದ್ದಾರೆ, ವಿವರಗಳನ್ನು ಕೊಡಲು ನಾನು ಸಿದ್ಧ. ಯಾರ ರಾಜಿನಾಮೆಯನ್ನೂ ಕೇಳುವ ಹಕ್ಕು ಅವರಿಗಿಲ್ಲ ಎಂದರು.

ಪಿಎಸ್‌ಐ ಪ್ರಕರಣದಲ್ಲಿ 50 ಜನರನ್ನು ಬಂಧಿಸಲಾಗಿದ್ದು, 20 ಜನ ಪೊಲೀಸ್ ಅಧಿಕಾರಿಗಳೇ ಇದ್ದಾರೆ. ಯಾರನ್ನೂ ಯಾವುದನ್ನೂ ಮುಚ್ಚಿಡುವ ಪ್ರಯತ್ನ ಮಾಡಿಲ್ಲ. ಬಹಳ ನಿಯತ್ತಿನಿಂದ, ದಕ್ಷತೆಯಿಂದ ಗೃಹ ಸಚಿವರು ಕೆಲಸ ಮಾಡಿದ್ದಾರೆ. ಯಾರೂ ರಾಜಿನಾಮೆ ಕೊಡುವ ಪ್ರಶ್ನೆಯೇ ಇಲ್ಲ. ಅವರು ಇದ್ದದ್ದರಿಂದಲೇ ಇದೊಂದು ಅಂತಿಮ ಘಟ್ಟ ಮುಟ್ಟಿದೆ ಎಂದು ತಮ್ಮ ಸಚಿವರ ಪರವಾಗಿ ಬ್ಯಾಟಿಂಗ್‌ ಮಾಡಿದರು.

ಗಾಳಿಯಲ್ಲಿ ಹೇಳಿಕೆ ನೀಡುವುದಿಲ್ಲ

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಗೃಹ ಸಚಿವರು ಸದನವನ್ನು ತಪ್ಪು ದಾರಿಗೆ ಎಳೆದಿದ್ದರಿಂದ ಗೃಹ ಸಚಿವರು ರಾಜೀನಾಮೆ ನೀಡಬೇಕು ಎಂದಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ, ಆ ಸಂದರ್ಭದಲ್ಲಿ ಪೂರ್ಣ ಮಾಹಿತಿ ಇರಲಿಲ್ಲ. ಎಷ್ಟು ಮಾಹಿತಿ ಇತ್ತೋ ಅದನ್ನು ಹೇಳಿದ್ದರು. ಆಗ ಏನು ಹೇಳಿದರು ಎನ್ನುವುದು ಮುಖ್ಯವಲ್ಲ. ಮಾಹಿತಿ ತಿಳಿದ ಬಳಿಕ ಏನು ಮಾಡಿದರು, ಎಷ್ಟು ದಕ್ಷತೆಯಿಂದ ಮಾಡಿದರು ಎನ್ನುವುದು ಮುಖ್ಯವಾಗುತ್ತದೆ. ವಿರೋಧ ಪಕ್ಷದವರು ಗಾಳಿಯಲ್ಲಿ ಹೇಳಿಕೆ ನೀಡಬಾರದು. ಸರ್ಕಾರ ಗಂಭೀರವಾಗಿ ಪರಿಗಣಿಸಿರದಿದ್ದರೆ, ಈ ಪ್ರಕರಣ ಹೊರಕ್ಕೇ ಬರುತ್ತಿರಲಿಲ್ಲ. ಸಿಐಡಿ, ಎಸಿಬಿ ಒಳ್ಳೆ ಕೆಲಸ ಮಾಡಿದ್ದಾರೆ. ಎಲ್ಲಿ ಪುರಾವೆ ಇದೆಯೋ ಅಲ್ಲಿ ತನಿಖೆ ಮಾಡಲಾಗಿದೆ. ಪುರಾವೆ ಇಲ್ಲದೆ ಏನೂ ಮಾಡಲಾಗುವುದಿಲ್ಲ ಎಂದರು.

ಇದನ್ನೂ ಓದಿ | ಪಿಎಸ್‌ಐ ಅಕ್ರಮ ನೇಮಕಾತಿ ಪ್ರಕರಣ, ಬಂಧಿತ ಎಡಿಜಿಪಿ ಅಮೃತ್‌ ಪಾಲ್‌ ವಿಚಾರಣೆ ಇಂದು

Exit mobile version