Site icon Vistara News

PSI Parashuram Case: ನಾನು ಯಾವ ಪೊಲೀಸ್‌ ಬಳಿಯೂ ದುಡ್ಡು ಕೇಳಿಲ್ಲ: ಶಾಸಕ ಚನ್ನಾರೆಡ್ಡಿ ಪಾಟೀಲ

PSI Parashuram Case

ಬೆಂಗಳೂರು: ಪಿಎಸ್‌ಐ ಪರಶುರಾಮ ಸಾವು ಪ್ರಕರಣದಲ್ಲಿ (PSI Parashuram Case) ಎಫ್‌ಐಆರ್‌ ದಾಖಲಾದ ಬಳಿಕ ಎಲ್ಲೂ ಕಾಣಿಸಿಕೊಳ್ಳದಿದ್ದ ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು ಅವರು ಮೊದಲ ಬಾರಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಪ್ರಕರಣ ದಾಖಲಾದ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದ ಶಾಸಕ, ಇದೀಗ ತಮ್ಮ ವಿರುದ್ಧ ಕೇಳಿಬಂದಿರುವ ಆರೋಪಗಳಲ್ಲಿ ಯಾವುದೇ ಸತ್ಯಾಂಶವಿಲ್ಲ. ನಾನು ಯಾವ ಪೊಲೀಸ್‌ ಬಳಿಯೂ ದುಡ್ಡು ಕೇಳಿಲ್ಲ ಎಂದು ತಿಳಿಸಿದ್ದಾರೆ.

ನಗರದಲ್ಲಿ ವಿಸ್ತಾರ ನ್ಯೂಸ್‌ನೊಂದಿಗೆ ಪ್ರತಿಕ್ರಿಸಿರುವ ಯಾದಗಿರಿ ಶಾಸಕ, ನನ್ನ ವಿರುದ್ಧದ ಆರೋಪಗಳು ಸತ್ಯಕ್ಕೆ ದೂರವಾಗಿವೆ. ನಾನು ಯಾವ ಪೊಲೀಸ್‌ಗೂ ದುಡ್ಡು ಕೇಳಿಲ್ಲ. ದುಡ್ಡಿನ ಬಗ್ಗೆ ಮಾತಾಡಿಲ್ಲ, ಕ್ಷೇತ್ರದ ಕುಂದು ಕೊರತೆಗಳ ಬಗ್ಗೆ ಮಾತಾಡಿದ್ದೇನೆ. ಬೇರೆ ಯಾವ ವಿಷಯವೂ ನಾನು ಮಾತಾಡಿಲ್ಲ. ಪ್ರಕರಣವನ್ನು ನಮ್ಮ ಸರ್ಕಾರ ಸಿಐಡಿಗೆ ವಹಿಸಿದೆ. ತನಿಖಾ ವರದಿ ಬಂದ ಮೇಲೆ ನಾನು ಸೇರಿ ಸತ್ಯಾಂಶ ತಿಳಿಯುತ್ತದೆ ಎಂದು ಹೇಳಿದ್ದಾರೆ.

ಎಫ್ಐಆರ್ ದಾಖಲಾಗಲು ವಿಳಂಬದ ವಿಚಾರ ಬಗ್ಗೆ ಪ್ರತಿಕ್ರಿಯಿಸಿ, ಅದು ಪೊಲೀಸರಿಗೆ ಬಿಟ್ಟಿದ್ದು, ಅದರಲ್ಲಿ ನಾನು ಭಾಗಿಯಾಗಿಲ್ಲ, ಆ ಕುರಿತು ಯಾರ ಜೊತೆಗೆ ಮಾತನಾಡಿಲ್ಲ. ತಂದೆ ಜತೆ ಮಗ ಇದ್ದೆ ಇರುತ್ತಾನೆ, ಆದರೂ ಸುಮ್ಮನೆ ಆ ಹುಡುಗನ ಮೇಲೆ ಜನ ಆಪಾದನೆ ಮಾಡುತ್ತಾರೆ ಎಂದರೆ ನಾನು ಒಪ್ಪುವುದಿಲ್ಲ. ಇದು ಸುಳ್ಳು, ಕಟ್ಟು ಕಥೆ, ಇದೊಂದು ಷಡ್ಯಂತ್ರ. ತಂದೆ ಮಕ್ಕಳನ್ನು ಸಿಕ್ಕಿ ಹಾಕಿಸಲು ವಿಪಕ್ಷದವರು ಷಡ್ಯಂತ್ರ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಸಿಐಡಿ ವರದಿ ಬಂದ ಮೇಲೆ ಇದು ಷಡ್ಯಂತ್ರವೋ, ಅಲ್ಲವೋ ಎಂಬುವುದು ಹೊರಗಡೆ ಬರಲಿದೆ. ಕಾನೂನಿಗೆ ನಾನು ತಲೆ ಬಾಗುತ್ತೇನೆ, ಸಿಐಡಿ ಅವರು ಕರೆ ಮಾಡಿದ ತಕ್ಷಣ ಹೋಗಿ ವಿಚಾರಣೆಗೆ ಸಹಕಾರ ಕೊಡುತ್ತೇನೆ. ಸಿಎಂ ಅವರು ನಮ್ಮ ನಾಯಕರು, ಪಕ್ಷದ ಸಭೆಗೆ ಬರಲು ಹೇಳಿದ್ದರು. ಅದಕ್ಕೆ ಹೋಗಿದ್ದೆ. ಚನ್ನಾರೆಡ್ಡಿ ಧೈರ್ಯವಾಗಿ ಇರು, ನಾವೆಲ್ಲ ಇದ್ದೇವೆ ಎಂದು ಹೇಳಿರುವುದಾಗಿ ತಿಳಿಸಿದರು.

ಸಿಎಂಗೆ ನಾನು ಯಾವ ವಿಚಾರವೂ ತಿಳಿಸಲು ಹೋಗಿಲ್ಲ. ಅವರಿಗೆ ಗುಪ್ತಚರ ಇಲಾಖೆಯಿಂದ ಮಾಹಿತಿ ಹೋಗಿರುತ್ತದೆ. ಗೃಹ ಸಚಿವರು ಸೇರಿ ಎಲ್ಲಾ ಸಚಿವರು ನನ್ನ ಜೊತೆ ಮಾತನಾಡಿದ್ದಾರೆ ಎಂದು ತಿಳಿಸಿದರು.

ಇದನ್ನೂ ಓದಿ | PSI Parashuram Case: ಸರ್ಕಾರಿ ಯೋಜನೆ ಹಣ ಬಿಡುಗಡೆಗೂ ಕಮಿಷನ್‌ಗೆ ಬೇಡಿಕೆ; ಎ2 ಪಂಪನಗೌಡ ವಿರುದ್ಧ ಮತ್ತೊಂದು ಆರೋಪ

ಏನಿದು ಪ್ರಕರಣ?

ಯಾದಗಿರಿ ನಗರ ಠಾಣೆಯಲ್ಲಿ ಪಿಎಸ್ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಪರಶುರಾಮ (34) ಅವರು ಹೃದಯಾಘಾತದಿಂದ ಶುಕ್ರವಾರ(ಆ.2) ನಿಧನರಾಗಿದ್ದರು. ಇತ್ತೀಚೆಗೆ ಸೈಬರ್ ಕ್ರೈಮ್ (Cyber Crime) ಪಿಎಸ್ಐ ಆಗಿ ವರ್ಗಾವಣೆಗೊಂಡಿದ್ದ ಪರಶುರಾಮ, ಮೊನ್ನೆಯಷ್ಟೇ ನಗರ ಠಾಣೆಯಲ್ಲಿ ಅಭಿಮಾನದ ಬೀಳ್ಕೊಡುಗೆ ಪಡೆದಿದ್ದರು. ಪೊಲೀಸ್ ಕ್ವಾರ್ಟರ್ಸ್‌ ನಿವಾಸದಲ್ಲಿ ಶುಕ್ರವಾರ ಹಠಾತ್ ಹೃದಯಾಘಾತದಿಂದ ಸಾವಿಗೀಡಾಗಿದ್ದರು.

ಸ್ಥಳೀಯ ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರು ಲಂಚದ ಹಣಕ್ಕಾಗಿ ಹೇರುತ್ತಿದ್ದ ಒತ್ತಡದಿಂದಲೇ ಪತಿಗೆ ಹೃದಯಾಘಾತ ಉಂಟಾಗಿದೆ ಎಂದು ಪಿಎಸ್‌ಐ ಪತ್ನಿ ಶ್ವೇತಾ ಗಂಭೀರ ಆರೋಪ ಮಾಡಿ, ಸ್ಥಳೀಯ ದಲಿತ ಸಂಘಟನೆಗಳೊಂದಿಗೆ ಪ್ರತಿಭಟನೆ ನಡೆಸಿ ಶಾಸಕ, ಪುತ್ರನ ವಿರುದ್ಧ ದೂರು ನೀಡಿದ್ದರು.

ಇದನ್ನೂ ಓದಿ | Physical Abuse : ಬಸ್‌ ಸ್ಟಾಪ್‌ನಲ್ಲಿ ನಿಂತಿದ್ದ ಮಹಿಳೆಗೆ ಕಣ್ಣು ಹೊಡೆದು ಚುಡಾಯಿಸಿದವನಿಗೆ ಚಪ್ಪಲಿ ಏಟು

ಯಾದಗಿರಿ ನಗರ ಠಾಣೆಯಲ್ಲಿ ಉಳಿದುಕೊಳ್ಳಲು ಶಾಸಕ ಚನ್ನಾರೆಡ್ಡಿ ಪಾಟೀಲ ಅವರು 30 ಲಕ್ಷ ರೂ. ಹಣ ಲಂಚ ನೀಡುವಂತೆ ಒತ್ತಾಯಿಸಿದ್ದರು. ಕಳೆದ ಏಳು ತಿಂಗಳ ಹಿಂದಷ್ಟೇ 30 ಲಕ್ಷ ರೂ. ಹಣ ನೀಡಿ ನಗರ ಠಾಣೆಗೆ ಪೋಸ್ಟಿಂಗ್ ಪಡೆದುಕೊಂಡಿದ್ದರು. ಇದರಿಂದ ಸಾಲದ ಸುಳಿಗೆ ಸಿಲುಕಿದ್ದರು. ಇದೀಗ ‌ಮತ್ತೆ ನಿಯಮಬಾಹಿರವಾಗಿ ವರ್ಗಾವಣೆ ಮಾಡಲಾಗಿದೆ. ಒಂದು ವರ್ಷ ಪೂರೈಸುವ ಮೊದಲೇ ವರ್ಗಾವಣೆ ಮಾಡಿದ್ದರಿಂದ ಒತ್ತಡಕ್ಕೆ ಒಳಗಾಗಿ ಪತಿ ಪರಶುರಾಮ ಮೃತಪಟ್ಟಿದ್ದಾರೆ ಎಂದು ಶ್ವೇತಾ ಆರೋಪಿಸಿದ್ದರು. ಹೀಗಾಗಿ ಶಾಸಕ ಹಾಗೂ ಪುತ್ರನ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.

Exit mobile version