ಬೆಂಗಳೂರು: ಪಿಎಸ್‌ಐ ನೇಮಕಾತಿ ಹಗರಣದ (PSI recruitment scam) ತನಿಖೆ ಇನ್ನಷ್ಟು ಚುರುಕುಗೊಂಡಿದ್ದು, ನೇಮಕಾತಿ ವಿಭಾಗದ ಹಿಂದಿನ ಮುಖ್ಯಸ್ಥ ಎಡಿಜಿಪಿ ಅಮೃತ್ ಪೌಲ್ ಅವರನ್ನು ಎರಡು ದಿನಗಳ ಕಾಲ ವಿಚಾರಣೆಗೊಳಪಡಿಸಲಾಗಿದೆ. ಆದರೆ ಈ ವಿಚಾರಣೆ ವೇಳೆ ಅಮೃತ್ ಪೌಲ್ ಸರಿಯಾದ ಉತ್ತರ ನೀಡಿಲ್ಲ ಎಂದು ತಿಳಿದುಬಂದಿದೆ.
ಹೀಗಾಗಿ ಅವರನ್ನು ಬಂಧಿಸುವ ಕುರಿತು ತನಿಖಾಧಿಕಾರಿಗಳು ಚಿಂತಿಸುತ್ತಿದ್ದಾರೆ ಎಂದು ಬಲ್ಲ ಮೂಲಗಳು ʼವಿಸ್ತಾರ ನ್ಯೂಸ್ʼ ಗೆ ತಿಳಿಸಿವೆ. ಇವರ ಬಂಧನದೊಂದಿಗೆ ಪಿಎಸ್‌ಐ ನೇಮಕಾತಿ ಹಗರಣದ ಒಂದು ಹಂತದ ತನಿಖೆಯು ಮುಕ್ತಾಯಗೊಂಡಂತಾಗಲಿದೆ.
ಪಿ.ಎಸ್.ಐ ಪರೀಕ್ಷೆ ವೇಳೆ ಕಿರಿಯ ಅಧಿಕಾರಿಗಳ ಜತೆ ಶಾಮೀಲಾಗಿ, ಹಣ ಪಡೆದುಕೊಂಡಿರಬಹುದಾದ ಶಂಕೆಯನ್ನು ತನಿಖಾಧಿಕಾರಿಗಳು ವ್ಯಕ್ತಪಡಿಸಿದ್ದಾರೆ. ಪೋನ್ ಸಂಪರ್ಕ ಮತ್ತು ಕೆಲ ತಾಂತ್ರಿಕ ಸಾಕ್ಷ್ಯಗಳನ್ನು ಇಟ್ಟುಕೊಂಡು ಅಮೃತ್ ಪೌಲ್ ಅವರನ್ನು ಪ್ರಶ್ನಿಸಲಾಗಿದೆ. ಈ ಪ್ರಕರಣದಲ್ಲಿ ಈಗಾಗಲೇ ಬಂಧಿತರಾಗಿರುವ ಆರೋಪಿಗಳ ನೀಡಿರುವ ಹೇಳಿಕೆಯನ್ನು ಆಧರಿಸಿ ಕೂಡ ಪ್ರಶ್ನೆ ಮಾಡಲಾಗಿತ್ತು. ಆದರೆ ಅಮೃತ್ ಪೌಲ್ ಯಾವುದಕ್ಕೂ ಸರಿಯಾದ ಉತ್ತರ ನೀಡಿಲ್ಲ ಎಂದು ಸಿಐಡಿಯ ಮೂಲಗಳು ತಿಳಿಸಿವೆ.
ʼʼನೇಮಕಾತಿ ಸಂದರ್ಭದಲ್ಲಿ ನಡೆದ ಅವ್ಯವಹಾರಗಳಿಗೆ ಮತ್ತು ನನಗೂ ಯಾವುದೇ ಸಂಬಂಧವಿಲ್ಲ, ನಾನು ನಿಯಮಗಳ ಅನುಸಾರ ಕೆಲಸ ಮಾಡಿದ್ದೇನೆ ಅಷ್ಟೇ. ಕೆಳ ಹಂತದ ಅಧಿಕಾರಿಗಳು, ಅಭ್ಯರ್ಥಿಗಳು ಹಾಗೂ ಇತರರ ಬಗ್ಗೆ ನನಗೇನೂ ಗೊತ್ತಿಲ್ಲ. ನೇಮಕಾತಿ ವಿಭಾಗದ ಅಧಿಕಾರಿಗಳು ಹಣ ಪಡೆದುಕೊಂಡ ಮಾಹಿತಿ ಇಲ್ಲ. ಅಕ್ರಮ ನಡೆಯಲು ನಾನು ಯಾವುದೇ ಅವಕಾಶ ಮಾಡಿಕೊಟ್ಟಿಲ್ಲ. ನನ್ನ ಮೇಲೆ ಇಲ್ಲ-ಸಲ್ಲದ ಆರೋಪ ಮಾಡಲಾಗಿದೆ. ಸುಖಾಸುಮ್ಮನೆ ನನಗೆ ಕಿರಕುಳ ಕೊಡಲು ಯತ್ನಿಸಲಾಗುತ್ತಿದೆʼʼ ಎಂದು ಅಮೃತ್ ಪೌಲ್ ವಿಚಾರಣೆ ವೇಳೆ ತಿಳಿಸಿದ್ದಾರೆ ಎನ್ನಲಾಗಿದೆ.
ಕಿಂಗ್‌ಪಿನ್ ಶಾಂತಕುಮಾರ್ ಬಗ್ಗೆ ಇನ್ನಷ್ಟು ಮಾಹಿತಿ
ಪಿ.ಎಸ್.ಐ ಪರೀಕ್ಷೆ ಅಕ್ರಮದ ಕಿಂಗ್‌ಪಿನ್ ಶಾಂತಕುಮಾರ್ ವಿರುದ್ಧ ಹಲವು ಮಹತ್ವದ ಸಾಕ್ಷ್ಯಗಳು ಲಭ್ಯವಾಗಿವೆ. ಸಿಐಡಿ ಅಧಿಕಾರಿಗಳು ತಾಂತ್ರಿಕವಾಗಿ ಹೆಚ್ಚಿನ ಸಾಕ್ಷ್ಯಗಳನ್ನ ಕಲೆ ಹಾಕಿದ್ದಾರೆ. ಕೇವಲ ಕಲಬುರಗಿ ಮತ್ತು ಹೈಗ್ರೌಂಡ್ಸನಲ್ಲಿ ದಾಖಲಾದ ಪ್ರಕಣಗಳಷ್ಟೇ ಅಲ್ಲದೆ, ಈ ಹಿಂದೆ ನಡೆಸಿರುವ ಇಲಾಖೆಯ ಇನ್ನಿತರ ನೇಮಕಾತಿಯಲ್ಲೂ ಶಾಂತಕುಮಾರ್ ಕೈವಾಡ ಇರುವ ಬಗ್ಗೆ ಮಾಹಿತಿ ಸಿಕ್ಕಿದೆ. ವೈರ್‌ಲೆಸ್ ವಿಭಾಗದಲ್ಲೂ ಈ ಹಿಂದೆ ಅಕ್ರಮ ನೇಮಕಾತಿ ನಡೆದಿತ್ತು ಎನ್ನಲಾಗಿದೆ.
ಈ ಹಿಂದೆ ನಡೆದಿದ್ದ ನೇಮಕಾತಿಯ ವೇಳೆ ಮೂರು ಜನರು ಅಕ್ರಮವಾಗಿ ನೇಮಕಗೊಳ್ಳುವಂತೆ ಮಾಡಲಾಗಿತ್ತು ಎನ್ನುವುದು ಆ ಅಭ್ಯರ್ಥಿಗಳು ರಿಪೋರ್ಟ್ ಮಾಡಿಕೊಳ್ಳಲು ಹೋದಾಗ ಬೆಳಕಿಗೆ ಬಂದಿತ್ತು. ರಾಮನಗರ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಈ ಪ್ರಕರಣ ಬೆಳಕಿಗೆ ಬಂದಿತ್ತು ಈ ಸಂಬಂಧ 2018 ರಲ್ಲಿ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಂದು ನಿವೃತ್ತ ಪೊಲೀಸ್ ಅಧಿಕಾರಿ ಚಂದ್ರಶೇಖರ್ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದರು. ಈ ಬೆನ್ನಲ್ಲೇ ಎಸ್ಕೇಪ್ ಆಗಿದ್ದ ಆರೋಪಿ ಚಂದ್ರಶೇಖರ್ ಪೊಲೀಸರಿಗೆ ಸಿಗದೆ ತಲೆಮರಿಸಿಕೊಂಡು ಜಾಮೀನಿಗಾಗಿ ಅರ್ಜಿ ಹಾಕಿದ್ದ. ಆ ಪ್ರಕರಣದಲ್ಲೂ ಶಾಂತಕುಮಾರ್ ಕೈವಾಡ ಇರುವ ಶಂಕೆ ವ್ಯಕ್ತವಾಗಿದೆ.
ಇದನ್ನೂ ಓದಿ| ಉಗ್ರ ಸಂಘಟನೆ ಸೇರುತ್ತೇವೆ: ಪಿಎಸ್‌ಐ ಅಭ್ಯರ್ಥಿಗಳಿಂದ ಪ್ರಧಾನಿಗೆ ರಕ್ತಪತ್ರ!