ಬೆಂಗಳೂರು: ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಹೊಣೆ ಹೊರಬೇಕಾಗಿದ್ದ ಪೊಲೀಸ್ ಸಬ್ ಇನ್ಸ್‌ಪೆಕ್ಟರ್(ಪಿಎಸ್‌ಐ) ನೇಮಕಾತಿ ಹಗರಣದಲ್ಲಿ ಇದೀಗ ಕರ್ನಾಟಕದ ಇತಿಹಾಸದಲ್ಲೆ ಎಡಿಜಿಪಿ ಹಂತದ ಅಧಿಕಾರಿಯೊಬ್ಬರು ಬಂಧನಕ್ಕೊಳಗಾಗಿದ್ದಾರೆ. ಇಡೀ ನೇಮಕಾತಿ ಪ್ರಕ್ರಿಯೆಯ ಹೊಣೆಯನ್ನು ಅಮೃತ್ ಪಾಲ್ ಹೊಂದಿದ್ದರು.
ಪ್ರಕರಣದಲ್ಲಿ ಬಂಧಿತರಾದ ಅನೇಕ ಆರೋಪಿಗಳು ಹಾಗೂ ವಿಚಾರಣೆಗೆ ಒಳಪಟ್ಟ ಪೊಲೀಸ್ ಅಧಿಕಾರಿಗಳೂ ಅಮೃತ್ ಪಾಲ್ ಹೆಸರನ್ನು ಹೇಳಿದ್ದರಿಂದ ಈಗ ಬಂಧಿಸಲಾಗಿದೆ. ಇಡೀ ಪಿಎಸ್‌ಐ ಹಗರಣ ಎರಡು ರೀತಿಯಲ್ಲಿ ನಡೆದಿತ್ತು.
ಅಕ್ರಮ ವಿಧಾನ 1: ಬ್ಲೂಟೂತ್ ಬಳಕೆ
ಪಿಎಸ್‌ಐ ಹಗರಣದಲ್ಲಿ ಮೊದಲನೆಯದು ತಂತ್ರಜ್ಞಾನ ಬಳಸಿ ನಡೆಸುತ್ತಿದ್ದ ಮೋಸ. ಈ ವಿಧಾನದಲ್ಲಿ, ಈಗಾಗಲೆ ಬಂಧಿತನಾಗಿರುವ ರುದ್ರಗೌಡ ದೇವೇಂದ್ರಪ್ಪ ಪಾಟೀಲ್ ಅಲಿಯಾಸ್ ಆರ್.ಡಿ. ಪಾಟೀಲನದ್ದು ಪ್ರಮುಖ ಪಾತ್ರ. ಪಿಎಸ್‌ಐ ಆಗಿ ನೇಮಕವಾಗಬೇಕು ಎನ್ನುವವರು ರುದ್ರಗೌಡನನ್ನು ಸಂಪರ್ಕಿಸುತ್ತಿದ್ದರು. ಈತ 30 ರಿಂದ 50 ಲಕ್ಷ ರೂ.ವರೆಗೆ ಲಂಚ ಪಡೆಯುತ್ತಿದ್ದ.
ನಂತರ ಸಣ್ಣ ಬ್ಲೂಟೂತ್ ಉಪಕರಣಗಳನ್ನು ಅಭ್ಯರ್ಥಿಗಳಿಗೆ ನೀಡುತ್ತಿದ್ದ. ಅಭ್ಯರ್ಥಿಗಳು ಅದನ್ನು ಕಿವಿಯಲ್ಲಿ ಧರಿಸಿ ಪರೀಕ್ಷಾ ಕೇಂದ್ರಕ್ಕೆ ತೆರಳುತ್ತಿದ್ದರು. ಪರೀಕ್ಷೆ ಆರಂಭವಾದ ಕೂಡಲೆ ರುದ್ರಗೌಡನಿಗೆ ಪ್ರಶ್ನೆಪತ್ರಿಕೆ ಲಭಿಸುತ್ತಿತ್ತು. ಆತ ತನ್ನ ಬಳಿಯಿರುವವರಿಗೆ ಅದನ್ನು ನೀಡುತ್ತಿದ್ದ. ಯಾರು ಹಣ ನೀಡಿದ್ದಾರೆ ಹಾಗೂ ಬ್ಲೂಟೂತ್ ಉಪಕರಣ ಧರಿಸಿದ್ದಾರೆ ಅವರಿಗೆ ಕರೆ ಮಾಡುತ್ತಿದ್ದ. ಅಭ್ಯರ್ಥಿಗೆ ದೊರೆತಿರುವ ಸೀರಿಯಲ್ ಪ್ರಶ್ನೆಪತ್ರಕೆಗೆ ಅನುಗುಣವಾಗಿ ಉತ್ತರಗಳನ್ನು ಹೇಳುತ್ತಿದ್ದ. ಅಭ್ಯರ್ಥಿ ಅದರಂತೆ ಒಎಂಆರ್ ಶೀಟ್‌ನಲ್ಲಿ ಭರ್ತಿ ಮಾಡಿ ಹೊರಬರುತ್ತಿದ್ದ.
ಉದಾಹರಣೆ: ಕಲಬುರಗಿಯ ಆಡಿಟರ್ ಚಂದ್ರಕಾಂತ ಪಾಟೀಲ ಎಂಬವರು ರುದ್ರಗೌಡ ಪಾಟೀಲನ ಲೆಕ್ಕಪತ್ರ ನೋಡಿಕೊಳ್ಳುತ್ತಿದ್ದ ಆಡಿಟರ್. ಇವರಿಗೆ ಪರಿಚಿತ ಶರಣಪ್ಪ ಎಂಬವರ ಪುತ್ರ ಪ್ರಭು ಎಂಬಾತ ಪಿಎಸ್‌ಐ ಆಗಿ ಆಯ್ಕೆ ಆಗಬೇಕಿತ್ತು. ಾಡಿಟರ್ ಮೂಲಕ ರುದ್ರಗೌಡನನ್ನು ಸಂಪರ್ಕಿಸಲಾಯಿತು. ಕಲಬುರಗಿಯ ಎಂ.ಎಸ್. ಇರಾನಿ ಕಾಲೇಜು ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಇತ್ತು. ಪರೀಕ್ಷೆಗೆ 2-3 ದಿನ ಮುನ್ನವೇ ಎರಡು ಸಿಮ್ ಕಾರ್ಡ್, ಬ್ಲೂಟೂತ್ ಉಪಕರಣಗಳನ್ನು ರುದ್ರಗೌಡ ನೀಡಿದ್ದ. ಈ ಸಮಯದಲ್ಲಿ ಉಪಕರಣಗಳು ಸರಿಯಾಗಿ ಕೆಲಸ ಮಾಡುತ್ತಿವೆಯೇ ಇಲ್ಲವೇ ಎಂಬುದನ್ನು ಪರಿಶೀಲಿಸಲು ಕರೆ ಮಾಡಿದ್ದರು. ನಂತರ ಪರೀಕ್ಷಾ ಕೊಠಡಿಯಲ್ಲಿ ಕುಳಿತು, ಬ್ಲೂಟೂತ್ ಮೂಲಕ ಉತ್ತರವನ್ನು ಕೇಳಿಸಿಕೊಂಡು ಒಎಂಆರ್ ಶೀಟ್ ಭರ್ತಿ ಮಾಡಿದ್ದ. 2022ರ ಜನವರಿ 19ರಂದು ಪ್ರಕಟವಾಗಿದ್ದ ಪಿಎಸ್‌ಐ ಆಯ್ಕೆ ಪಟ್ಟಿಯಲ್ಲಿ ಪ್ರಭು ಹೆಸರಿತ್ತು. ಈ ಕೆಲಸಕ್ಕಾಗಿ ರುದ್ರಗೌಡನಿಗೆ ಒಮ್ಮೆ 30 ಲಕ್ಷ ರೂ., ಇನ್ನೊಮ್ಮೆ 20 ಲಕ್ಷ ರೂ. ಸೇರಿ ಒಟ್ಟು 50 ಲಕ್ಷ ರೂ. ನೀಡಿದ್ದಾಗಿ ತನಿಖೆ ವೇಳೆ ತಿಳಿದುಬಂದಿತ್ತು. ಈ ಆರೋಪದಲ್ಲಿ ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ಸೇರಿ ಅನೇಕರು ಬಂಧಿತರಾಗಿದ್ದಾರೆ.
ಅಕ್ರಮ ವಿಧಾನ 2: ಒಎಂಆರ್ ಶೀಟ್ ತಿದ್ದುವಿಕೆ
ಪಿಎಸ್‌ಐ ಪರೀಕ್ಷೆಯಲ್ಲಿ ಉತ್ತರಗಳನ್ನು ಒಎಂಆರ್ ಶೀಟ್‌ನಲ್ಲಿ ಭರ್ತಿ ಮಾಡಬೇಕು. ಒಂದು ಪ್ರಶ್ನೆಗೆ ನಾಲ್ಕು ಉತ್ತರಗಳಿರುತ್ತವೆ, ಅವುಗಳಲ್ಲಿ ಒಂದನ್ನು ಭರ್ತಿ ಮಾಡಬೇಕು. ಇಂಜಿನಿಯರಿಂಗ್ ಪ್ರವೇಶಕ್ಕೆ ನೆಡಯುವ ಸಿಇಟಿ ಮಾದರಿಯಲ್ಲಿ ಇರುತ್ತವೆ. ಈ ರೀತಿ ಅಭ್ಯರ್ಥಿಗಳು ಒಎಂಆರ್ ಶೀಟ್ ಭರ್ತಿ ಮಾಡುತ್ತಾರೆ. ಅವರಿಗೆ ಇಷ್ಟ ಬಂದಷ್ಟು ಪ್ರಶ್ನೆಗಳಿಗೆ ಉತ್ತರಿಸಿ, ಉಳಿದದ್ದನ್ನು ಹಾಗೆಯೇ ಬಿಟ್ಟು ಹೊರಡುತ್ತಾರೆ. ನಂತರ ಈ ಪತ್ರಿಕೆಗಳನ್ನು ಪಡೆದುಕೊಳ್ಳುವ ಹಗರಣಕೋರರು, ತಮಗೆ ಹಣ ನೀಡಿರುವ ಅಭ್ಯರ್ಥಿಗಳ ಉತ್ತರ ಪತ್ರಿಕೆಗಳಲ್ಲಿ ಸರಿಯಾದ ಉತ್ತರಗಳನ್ನು ಭರ್ತಿ ಮಾಡುತ್ತಾರೆ. ಈ ಮೂಲಕ ಹೆಚ್ಚಿನ ಅಂಕ ಪಡೆದು ಅಭ್ಯರ್ಥಿ ಪಿಎಸ್‌ಐ ಆಗಿ ಆಯ್ಕೆ ಆಗುತ್ತಾರೆ.
ಉದಾಹರಣೆ: ವೀರೇಶ್ ಎಂಬ ಅಭ್ಯರ್ಥಿ ಕಲಬುರಗಿಯ ಜ್ಞಾನಜ್ಯೋತಿ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ ಪರೀಖ್ಷೆ ಬರೆದಿದ್ದ. ಈ ಶಾಲೆಯು ಬಿಜೆಪಿ ನಾಯಕಿ ದಿವ್ಯಾ ಹಾಗರಗಿಗೆ ಸೇರಿದ್ದು. ಪರೀಕ್ಷೆಯಲ್ಲಿ ವೀರೇಶ್ 21 ಪ್ರಶ್ನೆಗಳಿಗೆ ಮಾತ್ರ ಉತ್ತರ ನೀಡಿದ್ದ. ನಂತರ ಈ ಪತ್ರಿಕೆಗಳನ್ನು ಬೆಂಗಳೂರಿನ ಸಿಐಡಿ ಕಚೇರಿಗೆ ವರ್ಗಾವಣೆ ಮಾಡಲಾಯಿತು. ಅಲ್ಲಿ ಮೌಲ್ಯಮಾಪನ ಮಾತ್ರ ನಡೆಯಬೇಕಿತ್ತು. ಆದರೆ ಅಲ್ಲಿನ ಮೇಲ್ವಿಚಾರಣೆಯನ್ನು ಎಡಿಜಿಪಿ ಅಮೃತ್ ಪಾಲ್ ಹೊತ್ತಿದ್ದರು. ಆರೋಪಿಗಳು ಹೇಳಿರುವ ಪ್ರಕಾರ, ಅಮೃತ್ ಪಾಲ್ ನಿಗಾದಲ್ಲಿ, ಈಗಾಗಲೆ ಹಣ ನೀಡಿರುವ ಅಭ್ಯರ್ಥಿಗಳ ಒಎಂಆರ್ ಪತ್ರಿಕೆಗಳನ್ನು ಹೊರತೆಗೆಯಲಾಗುತ್ತಿತ್ತು. ವೀರೇಶ್ 21 ಕ್ಕೆ ಮಾತ್ರ ಸರಿಯುತ್ತರ ನೀಡಿದ್ದ. ಆದರೆ ಪಿಎಸ್‌ಐ ಅಂತಿಮ ಆಯ್ಕೆ ಪಟ್ಟಿ ಹೊರಬಿದ್ದಾಗ ಆತ 121 ಅಂಕ ಪಡೆದಿದ್ದ. ಅಂದರೆ ಸಿಐಡಿ ಕಚೇರಿ ಆವರಣದಲ್ಲಿರುವ ನೇಮಕಾತಿ ವಿಭಾಗದಲ್ಲಿ ಒಎಂಆರ್ ಹಾಳೆಗಳನ್ನು ತಿದ್ದಿ ಸರಿಯುತ್ತರ ಬರೆಯಲಾಗಿತ್ತು. ಈ ಮೂಲಕ ಪ್ರಕರಣ ಖಾತ್ರಿಯಾಗಿತ್ತು.
ನಕಲು ಪ್ರತಿ ಒಎಂಆರ್ ಮೂಲಕ ಪತ್ತೆ
ಪಿಎಸ್‌ಐ ಪರೀಕ್ಷೆಯಲ್ಲಿ ಒಂದು ಒಎಂಆರ್ ಹಾಳೆಯಲ್ಲಿ ಅಭ್ಯರ್ಥಿ ಉತ್ತರ ಬರೆಯುತ್ತಿದ್ದ. ಪೆನ್ನಿನ ಮೂಲಕ ಭರ್ತಿ ಮಾಡಿದ ಮೊದಲ ಹಾಳೆಯನ್ನು ಪರೀಕ್ಷಾ ಮೇಲ್ವಿಚಾರಕರೇ ಇಟ್ಟುಕೊಂಡು ಮೌಲ್ಯಮಾಪನಕ್ಕೆ ಕಳಿಸುತ್ತಾರೆ. ಕಾರ್ಬನ್ ಮೂಲಕ ಇನ್ನೊಂದು ಒಎಂಆರ್ ಪ್ರತಿ ಅಲ್ಲೇ ಸಿದ್ಧವಾಗುತ್ತಿತ್ತು. ಇದನ್ನು ಅಭ್ಯರ್ಥಿ ಕೊಂಡೊಯ್ಯುತ್ತಿದ್ದ. ಹಗರಣ ಬೆಳಕಿಗೆ ಬಂದಾಗ ಪೊಲೀಸ್ ಅಧಿಕಾರಿಗಳು ಅಭ್ಯರ್ಥಿಗಳ ಬಳಿ ಇದ್ದ ಒಎಂಆರ್ ಹಾಳೆ ಹಾಗೂ ಮೌಲ್ಯಮಾಪನಕ್ಕೆ ಬಂದ ಒಎಂಆರ್ ಹಾಳೆಗಳನ್ನು ತಾಲೆ ನೋಡಿದ್ದರು. ಆಗ, ಅಭ್ಯರ್ಥಿ ಬರೆದ ಉತ್ತರಗಳೆಷ್ಟು? ನಂತರ ತಿದ್ದಿದ ಉತ್ತರಗಳೆಷ್ಟು? ಎನ್ನುವುದು ತಿಳಿದುಬಂದಿದೆ. ಕೆಲ ಅಭ್ಯರ್ಥಿಗಳು ತಮ್ಮ ಬಳಿಯಿದ್ದ ಒಎಂಆರ್ ಹಾಲೆಗಳನ್ನು ಸಲ್ಲಿಸಿಲ್ಲ. ಇಂತಹ ಸಂದರ್ಭದಲ್ಲಿ ಉತ್ತರ ಪತ್ರಿಕೆಗಳನ್ನು ಫಾರೆನ್ಸಿಕ್ ಪ್ರಯೋಗಾಲಯಕ್ಕೆ ಕಳಿಸಲಾಗಿತ್ತು. ಅಭ್ಯರ್ಥಿ ಉತ್ತರ ಬರೆಯುವಾಗ ಬಳಸಿದ ಪೆನ್ ಹಾಗೂ ನಂತರ ತಿದ್ದುವಾಗ ಬಳಸಿದ ಪೆನ್, ಬರೆಯುವಾಗ ಹಾಕಿದ ಒತ್ತಡ ಸೇರಿ ಇನ್ನಿತರೆ ವ್ಯತ್ಯಾಸಗಳ ಮೂಲಕ ಹಗರಣ ಖಾತ್ರಿಯಾಗಿದೆ.
ಇದನ್ನೂ ಓದಿ | ಪಿಎಸ್‌ಐ ಅಕ್ರಮ ನೇಮಕಾತಿ ಪ್ರಕರಣ; ಎಡಿಜಿಪಿ ಅಮೃತ್ ಪಾಲ್ ಬಂಧನ