Site icon Vistara News

PSI Scam | ಕಾನೂನು ಸಚಿವರ Law ಪಾಯಿಂಟ್‌ಗೆ ತಲೆಯಾಡಿಸಿ ಸುಮ್ಮನಾದ ಲಾಯರ್‌ ಸಿದ್ದರಾಮಯ್ಯ !

Madhuswamy siddaramaiah

ವಿಧಾನಸಭೆ: ವಿಧಾನಮಂಡಲದಲ್ಲಿ ಪ್ರತಿಪಕ್ಷಗಳನ್ನು ತಮ್ಮ ಮೊನಚಿನ ಮಾತುಗಳ ಮೂಲಕ, ಕಾನೂನು ತಿಳುವಳಿಕೆ ಮೂಲಕ ಕಟ್ಟಿಹಾಕುವಲ್ಲಿ ಕಾನೂನು ಮತ್ತು ಸಂಸದೀಯ ಸಚಿವ ಜೆ.ಸಿ. ಮಾಧುಸ್ವಾಮಿ ಸಿದ್ಧಹಸ್ತರು. ಈ ಬಾರಿ ವಿಧಾನಸಭೆಯಲ್ಲಿ ಪಿಎಸ್‌ಐ ಹಗರಣ ಕುರಿತಂತೆ, ಸ್ವತಃ ಲಾಯರ್‌ ಆದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರೇ ಒಪ್ಪುವಂತಹ ಪರಿಸ್ಥಿತಿಯನ್ನು ಗುರುವಾರ ತಂದಿಟ್ಟರು ಮಾಧುಸ್ವಾಮಿ.

ರಾಜ್ಯದಲ್ಲಿ 545 ಪೊಲೀಸ್‌ ಸಬ್‌ ಇನ್ಸ್‌ಪೆಕ್ಟರ್‌ ನೇಮಕಾತಿಯಲ್ಲಿ ನಡೆದಿರುವ ಹಗರಣದ ಕುರಿತು ಸದನದಲ್ಲಿ ಚರ್ಚೆಗೆ ಅವಕಾಶ ನೀಡಬೇಕು ಎಂದು ಸಿದ್ದರಾಮಯ್ಯ ಬಯಸಿದರು. ನಿಯಮ 60ರ ಅಡಿಯಲ್ಲಿ ನಿಲುವಳಿ ಸೂಚನೆ ಮಂಡನೆಗೆ ಅವಕಾಶ ನೀಡುವಂತೆ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಗುರುವಾರ ಬೆಳಗ್ಗೆ ಪತ್ರ ಬರೆದಿದ್ದರು.

ಆದರೆ ಇದನ್ನು ನಿಯಮ 60ರಲ್ಲಿ ಚರ್ಚೆಗೆ ತೆಗೆದುಕೊಳ್ಳುವುದು ಬೇಡ ಎನ್ನುವುದು ಸರ್ಕಾರದ ನಿಲುವಾಗಿತ್ತು. ಈ ಕುರಿತು ಮಾತನಾಡಿದ ಕಾಗೇರಿ ಅವರು, ಈ ವಿಚಾರ ನ್ಯಾಯಾಲಯದಲ್ಲಿ ವಿಚಾರಣೆಯನ್ನೂ ಎದುರಿಸುತ್ತಿದೆ. ಆದ್ಧರಿಂದ ಏಕೆ ಈ 60ನೇ ನಿಯಮದಲ್ಲಿ ಚರ್ಚೆಗೆ ಎತ್ತಿಕೊಳ್ಳಬೇಕು ಎಂದು ವಿವರಿಸುವಂತೆ ಸಿದ್ದರಾಮಯ್ಯ ಅವರಲ್ಲಿ ಕೇಳಿದರು.

ಇದನ್ನೂ ಓದಿ | ಕನ್ನಡ ಕಡ್ಡಾಯ ಅನುಷ್ಠಾನಕ್ಕೆ ಈ ಅಧಿವೇಶನದಲ್ಲೇ ಸಿಹಿ ಸುದ್ದಿ: ಸಿಎಂ ಬೊಮ್ಮಾಯಿ ಹೇಳಿದ್ದೇನು?

ಮಾತನಾಡಿದ ಸಿದ್ದರಾಮಯ್ಯ, ರಾಜ್ಯಾದ್ಯಂತ ಈ ಹಗರಣ ಸುದ್ದಿಯಾಗಿದೆ. ಸಾಮಾನ್ಯ ಜನರು ಇದರ ಕುರಿತು ಮಾತನಾಡುತ್ತಿದ್ದಾರೆ. ಅನೇಕ ಪತ್ರಿಕೆಗಳು ನಿರಂತರ ಸರಣಿ ಲೇಖನಗಳನ್ನು ಈ ಕುರಿತು ಪ್ರಕಟಿಸಿವೆ. ಇಷ್ಟೆಲ್ಲ ಬಿಸಿಬಿಸಿ ವಿಚಾರವನ್ನು ಸದನದಲ್ಲಿ ನಾವು ಚರ್ಚೆ ಮಾಡಲಿಲ್ಲ ಎಂದರೆ ತಪ್ಪಾಗುತ್ತದೆ ಎಂದರು. ಇದಕ್ಕೆ ದನಿಗೂಡಿಸಿದ ಕಾಂಗ್ರೆಸ್‌ನ ಪ್ರಿಯಾಂಕ್‌ ಖರ್ಗೆ, ಈ ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿಲ್ಲ. ಅಲ್ಲಿರುವುದು, ಆರ್‌ಡಿ ಪಾಟೀಲ್‌ ಎನ್ನುವವರ ಜಾಮೀನು ಹಾಗೂ ಎಲ್ಲ ಪ್ರಕರಣಗಳನ್ನೂ ಒಂದೇ ಕಡೆ ವಿಚಾರಣೆ ನಡೆಸಬೇಕೆಂಬ ಮನವಿಗಳು. ತಮಗೆ ಅನ್ಯಾಯವಾಗಿದೆ ಎಂದು ನೊಂದ ಅಭ್ಯರ್ಥಿಗಳ ಮತ್ತೊಂದು ಪ್ರಕರಣವಿದೆ. ಆದರೆ ಪ್ರಕರಣದ ನೇರ ವಿಚಾರಣೆ ಯಾವ ನ್ಯಾಯಾಲಯದಲ್ಲೂ ನಡೆಯುತ್ತಿಲ್ಲ, ಆದ್ಧರಿಂದ ಚರ್ಚೆಗೆ ಎತ್ತಿಕೊಳ್ಳಲು ತೊಂದರೆ ಇಲ್ಲ ಎಂದರು.

ಈ ಸಮಯದಲ್ಲಿ ಮಾಧುಸ್ವಾಮಿ ಮಾತನಾಡಲು ಮುಂದಾದಾಗ ಪ್ರತಿಪಕ್ಷಗಳ ಸದಸ್ಯರು ಗದ್ದಲ ಎಬ್ಬಿಸಿದರು. ಒಂದು ಹಂತದಲ್ಲಿ ಕೋಪಗೊಂಡ ಮಾಧುಸ್ವಾಮಿ, ನೀವು ಹೀಗೆಲ್ಲ ಮಾತನಾಡುತ್ತಿದ್ದರೆ ನಾವೇನು ಕತ್ತೆ ಕಾಯೋದಕ್ಕೆ ಇದ್ದೀವ? ನಿಮಗೆಲ್ಲ ಮಾನ ಮರ್ಯಾದೆ ಇಲ್ಲವ? ಸಚಿವರೊಬ್ಬರು ಮಾತನಾಡಲು ಬಿಡುವುದಿಲ್ಲ ಎಂದರೆ ಏನರ್ಥ? ನಿಮಗೆ ನಾನು ಒಪ್ಪಿಸಬೇಕಿಲ್ಲ. ನಾನು ಸ್ಪೀಕರ್‌ಗೆ ಒಪ್ಪಿಸುತ್ತೇನೆ ಎಂದರು.

ಈ ಸಮಯದಲ್ಲಿ ಮಾತನಾಡಲು ಮುಂದಾದ ಶಾಸಕ ಜಮೀರ್‌ ಅಹ್ಮದ್‌ ಕುರಿತು, ಜಮೀರ್‌ ಇದೆಲ್ಲ ಕಾನೂನಿಗೆ ಸಂಬಂಧಿಸಿದ ವಿಚಾರ. ನಿನಗೇನು ಅರ್ಥ ಆಗುತ್ತೆ ಇದೆಲ್ಲ? ಎಂದರು. ಸ್ಪೀಕರ್‌ ಕಾಗೇರಿ ಸಹ ಇದೇ ಮಾತನ್ನು ಹೇಳಿದ ನಂತರ ಕುಳಿತುಕೊಂಡರು.

ಮಾತು ಮುಂದುವರಿಸಿದ ಮಾಧುಸ್ವಾಮಿ, ನಿಯಮ 60 ರಲ್ಲಿ ತೆಗೆದುಕೊಳ್ಳಲು ಈ ವಿಚಾರ ಇತ್ತೀಚೆಗೆ ನಡೆದಿರಬೇಕು. ಎರಡನೆಯದು, ಅನೇಕ ಸಚಿವರು ಈ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂದು ನಿಲುವಳಿ ಸೂಚನೆಗೆ ನೀಡಿರುವ ಪತ್ರದಲ್ಲಿ ತಿಳಿಸಿದ್ದೀರಿ. ಇದು ಹಕ್ಕುಬಾಧ್ಯತೆಗೆ ಒಳಪಟ್ಟಿದ್ದು, ಸದಸ್ಯರಿಗೆ ನೋಟಿಸ್‌ ನೀಡಬೇಕಾಗುತ್ತದೆ. ಮೂರನೆಯದು ನ್ಯಾಯಾಲಯಗಳಲ್ಲಿರುವ ವಿಚಾರವನ್ನು ಇಲ್ಲಿ ಚರ್ಚೆ ಮಾಡುವಂತಿಲ್ಲ ಎಂದರು. ಅಷ್ಟಕ್ಕೂ ಈ ಚರ್ಚೆಯನ್ನು ಬೇರೆ ನಿಯಮದಲ್ಲಿ ನಡೆಸಲು ನಮ್ಮ ತಕರಾರಿಲ್ಲ, ಆದರೆ 60ರ ಅಡಿಯಲ್ಲಿ ಬೇಡ ಎಂದರು.

ಆದರೆ, ಈಗಿನ ಪೊಲೀಸ್‌ ಹಗರಣವಷ್ಟೆ ಅಲ್ಲದೆ ಈ ಹಿಂದಿನ ಎಲ್ಲ ಪೊಲೀಸ್‌ ನೇಮಕಾತಿಯನ್ನೂ ಚರ್ಚೆ ಮಾಡಬೇಕು ಎಂದು ಬದಲಾವಣೆ ಮಾಡಿಕೊಳ್ಳಬೇಕು ಎಂದರು. ಈ ಸಮಯದಲ್ಲಿ ಸಿಟ್ಟಿಗೆದ್ದ ಸಿದ್ದರಾಮಯ್ಯ, ನಾವು ಇದಕ್ಕೆಲ್ಲ ಹೆದರುವುದಿಲ್ಲ. 2006 ರಿಂದಲೂ ಚರ್ಚೆ ಮಾಡೋಣ. ಎಲ್ಲ ನೇಮಕಾತಿಯೂ ಚರ್ಚೆಯಾಗಲಿ ಎಂದರು.

ಅಂತಿಮವಾಗಿ, ನಿಯಮ 69ರ ಅಡಿಯಲ್ಲಿ ಚರ್ಚೆಗೆ ಎತ್ತಿಕೊಳ್ಳಲು ಸ್ಪೀಕರ್‌ ಕಾಗೇರಿ ತೀರ್ಮಾನಿಸಿದರು. ಸದ್ಯ ನೆರೆ ಕುರಿತು ನಡೆಯುತ್ತಿರುವ ಚರ್ಚೆ ಮುಕ್ತಾಯದ ನಂತರ ಕೈಗೆತ್ತಿಕೊಳ್ಳುವುದಾಗಿ ಹೇಳಿದರು.

ಇದನ್ನೂ ಓದಿ }| ವಿಮ್ಸ್‌ ಆಸ್ಪತ್ರೆ ಸಾವಿನ ಹೊಣೆ ಹೊರದ ಸರ್ಕಾರ: ಆಕಸ್ಮಿಕವಲ್ಲ, ಕೊಲೆ ಎಂದ ಸಿದ್ದರಾಮಯ್ಯ

Exit mobile version