Site icon Vistara News

PSI Scam | ಸರ್ಕಾರಕ್ಕೆ ಹಣ ಕೊಟ್ಟಿದ್ದೇನೆ ಎಂದ ಬಿಜೆಪಿ ಶಾಸಕ: ಸರ್ಕಾರಕ್ಕೆ ಮತ್ತೊಂದು ಸಂಕಷ್ಟ

basavaraj dadesuguru

ಕೊಪ್ಪಳ: ಅನೇಕ ಸಂದರ್ಭಗಳಲ್ಲಿ ಆಡಿಯೊ, ವಿಡಿಯೋ ವೈರಲ್‌ ಆಗಿ ಸರ್ಕಾರವನ್ನು ಸಂಕಷ್ಟಕ್ಕೆ ಸಿಲುಕಿಸಿರುವಾಗಲೇ ಇದೀಗ ಬಿಜೆಪಿ ಶಾಸಕರೊಬ್ಬರು ಪಿಎಸ್‌ಐ ಹಗರಣದಲ್ಲಿ ಹಣ ಪಡೆದಿದ್ದಾರೆ ಎಂಬುದಕ್ಕೆ ಪುರಾವೆಯಾಗಿ ಆಡಿಯೊ ಬಹಿರಂಗವಾಗಿದೆ. ಕೊಪ್ಪಳ ಜಿಲ್ಲೆಯ ಕನಕಗಿರಿ ವಿಧಾನಸಭಾ ಕ್ಷೇತ್ರದ ಶಾಸಕ ಬಸವರಾಜ ದಡೇಸೂಗೂರು ಮಾತನಾಡಿದ್ದಾರೆ ಎನ್ನಲಾದ ಆಡಿಯೊ ವೈರಲ್‌ ಆಗಿದ್ದು, ಸ್ವತಃ ಶಾಸಕರೂ ಈ ಆಡಿಯೊ ತಮ್ಮದು ಎಂದು ಒಪ್ಪಿದ್ದಾರೆ.

ಆಡಿಯೊದಲ್ಲಿ ಪರಸಪ್ಪ ಮೇಗೂರು ಎಂಬವರು ಶಾಸಕ ಬಸವರಾಜ ದಡೇಸೂಗೂರು ಅವರಿಗೆ ಕರೆ ಮಾಡಿರುವುದು ಮುದ್ರಣವಾಗಿದೆ. ಮಗನ ಪಿಎಸ್‌ಐ ನೇಮಕದ ಸಲುವಾಗಿ ಹಣ ಕೊಟ್ಟಿದ್ದೆವಲ್ಲ ಅದನ್ನು ವಾಪಸ್‌ ಕೊಡಿ ಎಂದು ಶಾಸಕರನ್ನು ಕೇಳಿದ್ದಾರೆ. ಅದಕ್ಕೆ ಪ್ರತಿಕ್ರಿಯೆ ನೀಡಿದ ಶಾಸಕರು ಈ ಬಗ್ಗೆ ದೊಡ್ಡಣಗೌಡರ ಜತೆಗೂ ಮಾತನಾಡುತ್ತೇನೆ. ಇದು ಸರ್ಕಾರಕ್ಕೆ ಕೊಟ್ಟ ದುಡ್ಡು, ಬೆಂಗಳೂರಿನಿಂದ ಬಂದ ಮೇಲೆ ಹಣ ಕೊಡುತ್ತೇನೆ, ಯಾವುದೇ ಅನುಮಾನ ಬೇಡ ಎಂದಿದ್ದಾರೆ. ನಂತರ ಇನ್ನೊಂದು ಬಾರಿ ಶಾಸಕರೇ ಕರೆ ಮಾಡಿ, ಹಣ ಪಡೆದಿರುವುದನ್ನು ಎಲ್ಲರಿಗೂ ಹೇಳಿಕೊಂಡು ಓಡಾಡುತ್ತಿದ್ದೀಯ. ನಿನಗೆ ಯಾವುದೇ ಸೌಜನ್ಯವಿಲ್ಲ, ಹೀಗೆಲ್ಲ ಮಾತನಾಡಿದರೆ ಬಹಳ ನಿಷ್ಠುರವಾಗಿ ಮಾತನಾಡಬೇಕಾಗುತ್ತದೆ. ನಾನೇನು ನಿನ್ನ ಬಳಿ ಸಾಲ ಕೇಳಲು ಬಂದಿಲ್ಲ, ನಿನ್ನ ಕೆಲಸದ ಸಲುವಾಗಿ ಬಂದು ಹಣ ಕೊಟ್ಟಿದ್ದೀಯ. ನಮಗೆ ಕೊಟ್ಟಮೇಲೆ ವಾಪಸ್‌ ಕೊಡುವುದು ನಮ್ಮ ಜವಾಬ್ದಾರಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಧ್ವನಿ ನನ್ನದೇ ಎಂದ ಶಾಸಕ

ಈ ಕುರಿತು ಕೊಪ್ಪಳದಲ್ಲಿ ಮಾತನಾಡಿದ ಶಾಸಕ ಬಸವರಾಜ ದಡೇಸೂಗೂರು, ಮಾಧ್ಯಮಗಳಿಗೆ ನೀಡಬೇಕು ಎಂಬುದಕ್ಕೇ ರೆಕಾರ್ಡ್‌ ಮಾಡಿಕೊಂಡಿದ್ದಾರೆ. ನಾನು ಯಾರಿಂದಲೂ ಹಣ ತೆಗೆದುಕೊಂಡಿಲ್ಲ. ಹಣ ತೆಗೆದುಕೊಳ್ಳಲು ನನಗೆ ಇದರಲ್ಲಿ ಯಾವುದೇ ಜವಾಬ್ದಾರಿ ಇರಲಿಲ್ಲ. ಇಬ್ಬರು ವ್ಯಕ್ತಿಗಳ ನಡುವೆ ಜಗಳ ನಡೆದಿತ್ತು, ದೊಡ್ಡ ಮನುಷ್ಯನಾಗಿ ಬಗೆಹರಿಸಲು ನಾನು ಮುಂದಾಗಿದ್ದೆ. ಇದೀಗ ನನ್ನ ಮೇಲೆಯೇ ಆರೋಪ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಸಚಿವ ಆನಂದ ಸಿಂಗ್‌ ಈ ಕುರಿತು ಪ್ರತಿಕ್ರಿಯೆ ನೀಡಿ, ಇಡೀ ರಾಜ್ಯದ ತುಂಬೆಲ್ಲ ಆಡಿಯೊ, ವಿಡಿಯೊ ದಾಖಲೆಗಳನ್ನು ಹೊರಬಿಡುವ ಕುತಂತ್ರವನ್ನೇ ವಿರೋಧ ಪಕ್ಷಗಳು ನಡೆಸುತ್ತಿವೆ. ಆಡಿಯೊದಲ್ಲಿ ಏನಿದೆಯೋ ನನಗೆ ಗೊತ್ತಿಲ್ಲ. ಹಾಗೆ ಏನಾದರೂ ಮಾಡಿದ್ದರೆ ಸಾಸಕರು ಹೀಗೆ ಮಾಧ್ಯಮಗಳ ಎದುರು ಬರುತ್ತಿರಲಿಲ್ಲ. ಆದರೂ ಈ ಕುರಿತು ತನಿಖೆ ನಡೆಸಿ ಸತ್ಯಾಂಶಗಳು ಹೊರಬಂದರೆ ಕ್ರಮ ಕೈಗೊಳ್ಳಲಿ ಎಂದರು.

ಇದನ್ನೂ ಓದಿ | PSI Scam | ಮಹಾರಾಷ್ಟ್ರದಲ್ಲಿ ಅಡಗಿ ಕುಳಿತಿದ್ದ ಫಸ್ಟ್‌ ರ‍್ಯಾಂಕ್‌ ರಚನಾ ಸೆರೆ!

ಕಾಂಗ್ರೆಸ್‌ನಿಂದ ವಾಗ್ದಾಳಿ

ಆಡಿಯೊ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್‌ ಶಾಸಕ ಪ್ರಿಯಾಂಕ್‌ ಖರ್ಗೆ, ಮರ್ಡರ್ ಮಾಡಿಲ್ಲ, ಹಾಫ್‌ ಮರ್ಡರ್ ಮಾಡಿದ್ದೇನೆ ಎಂದರೆ ಹೇಗೆ? ಅದೇ ರೀತಿ ಇದೂ ಆಗಿದೆ. ಪ್ರಕರಣವನ್ಮೇ ಮುಚ್ಚಿಹಾಕಲು‌ ಕೆಲವರು ಹೊರಟಿದ್ದಾರೆ. ತಮ್ಮದೇ ಧ್ವನಿ ಎಂದು ಶಾಸಕರು ಒಪ್ಪಿಕೊಂಡಿದ್ದಾರೆ, ನಾನೇ ಮಧ್ಯಸ್ಥಿಕೆ ವಹಿಸಿದ್ದೆ ಎಂದಿದ್ದಾರೆ. ಇದಕ್ಕಿಂತ ಹೆಚ್ಚಿನ ಸಾಕ್ಷಿ ಇನ್ನೇನು ಬೇಕು? ಆದರೂ ನ್ಯಾಯವಾಗಿ ತನಿಖೆಯನ್ನು ಯಾಕೆ‌ ಮಾಡುತ್ತಿಲ್ಲ? ಎಂದು ಪ್ರಶ್ನಿಸಿದ್ದಾರೆ.

ಕೊಪ್ಪಳದಲ್ಲಿ ಪ್ರತಿಕ್ರಿಯಿಸಿರುವ ಮಾಜಿ ಸಚಿವ ಎಂ.ಬಿ. ಪಾಟೀಲ್‌, ಪಿಎಸ್‌ಐ ಅಷ್ಟೆ ಅಲ್ಲದೆ ಅನೇಕ ವಿಚಾರದಲ್ಲಿ ಹಗರಣ ನಡೆಯಲಿದೆ. ಈ ಪ್ರಕರಣದಲ್ಲಿ ತಪ್ಪಿತಸ್ಥರಿಗೆ ಕ್ರಮ ಆಗಬೇಕು. ಇದೀಗ ಕನಕಗಿರಿ ಶಾಸಕರ ಆಡಿಯೊದಲ್ಲಿ ತನಿಖೆ ಆಗಬೇಕು, ಅವರು ಭಾಗಿಯಾಗಿದ್ದರೆ ಅವರ ಮೇಲೆಯೂ ಕ್ರಮ ಕೈಗೊಳ್ಳಬೇಕು. ಸರ್ಕಾರಕ್ಕೆ ಹಣ ನೀಡಿದ್ದೇವೆ ಎಂದಾದಮೇಲೆ ಇಡೀ ಸರ್ಕಾರ ಇದರಲ್ಲಿ ಭಾಗಿಯಾಗಿದೆ ಎಂದೇ ಅರ್ಥ ಅಲ್ಲವೇ? ಇದಕ್ಕೆ ಸರ್ಕಾರವೇ ಉತ್ತರ ನೀಡಬೇಕು ಎಂದಿದ್ದಾರೆ.

ಮಾಜಿ ಸಚಿವ ಶಿವರಾಜ ತಂಗಡಗಿ ಮಾತನಾಡಿ, ಬಿಜೆಪಿ ಸರ್ಕಾರ ಹಾಗೂ ಬಿಜೆಪಿ ಶಾಸಕರು ಈ ರೀತಿ ಮೋಸ ಮಾಡುವುದಷ್ಟೆ ಅಲ್ಲದೆ ಧಮ್ಕಿಯನ್ನೂ ಹಾಕುತ್ತಿದ್ದಾರೆ. ಅಂದರೆ ಈ ಹಗರಣದಲ್ಲಿ ಇನ್ನೂ ಎಷ್ಟು ಜನರು ಭಾಗಿಯಾಗಿದ್ದಾರೆಯೋ ಎಂಬ ಅನುಮಾನ ಮೂಡಿದೆ. ಸರ್ಕಾರಕ್ಕೆ ಹಣ ನೀಡಿದ್ದೇನೆ ಎಂದ ಮೇಲೆ ತಕ್ಷಣವೇ ಇವರನ್ನು ಸಿಎಂ ಬೊಮ್ಮಾಯಿ ಬಂಧಿಸಬೇಕು ಹಾಗೂ ತನಿಖೆ ನಡೆಸಬೇಕು. ದೊಡ್ಡನಗೌಡರೂ ಇದರ ಕುರಿತು ತನಿಖೆ ನಡೆಸಲು ಒತ್ತಾಯಿಸಬೇಕು ಎಂದಿದ್ದಾರೆ.

ಇದನ್ನೂ ಓದಿ | PSI Scam | ಕಣ್ಣೀರ ಕಥೆ ಹೇಳಿಕೊಂಡ ಫಸ್ಟ್‌ ರ‍್ಯಾಂಕ್‌ ರಚನಾ; 30 ಲಕ್ಷ ರೂಪಾಯಿ ಕೊಟ್ಟಿದ್ದಾಗಿ ಹೇಳಿಕೆ!

Exit mobile version