ಬೆಂಗಳೂರು: ಪಿಎಸ್‌ಐ ಪರೀಕ್ಷೆ ಅಕ್ರಮ ಪ್ರಕರಣ ಸಂಬಂಧ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಬಿಜೆಪಿ ಸರ್ಕಾರದ ವಿರುದ್ಧ ಗುಡುಗಿದ್ದು, ಕಲಬುರಗಿಯಲ್ಲೇ ಕೇಸ್ ಮುಗಿಸುವ ಕೆಲಸ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ.
ಬುಧವಾರ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಕಲಬುರಗಿ ಜಿಲ್ಲೆಯ ಚೌಕ್ ಪೊಲೀಸ್ ಠಾಣೆಯಲ್ಲಿ ಪಿಎಸ್‌ಐ ಅಕ್ರಮದ ಸಂಬಂಧ ಎಫ್ಐಆರ್ ದಾಖಲಾಗಿ, ಚಾರ್ಜ್‌ಶೀಟ್ ಸಹ ಸಲ್ಲಿಕೆಯಾಗಿದೆ. ಅಕ್ರಮ ನಡೆದಿದ್ದು ಹೇಗೆ? ಯಾರ್ಯಾರು ಇದರಲ್ಲಿ ಭಾಗಿಯಾಗಿದ್ದಾರೆ ಎನ್ನುವುದು ಸಹ ಉಲ್ಲೇಖ ಆಗಿದೆ. 100ಕ್ಕೆ 100 ಪ್ರಶ್ನೆಗಳಿಗೆ ಉತ್ತರಿಸಿದೆ ಎಂದು ಟಿಕ್ ಮಾಡಿದ್ದು, ಅವರು ಬರೆದ ಉತ್ತರ ಪತ್ರಿಕೆಯ ಪ್ರತಿ ಫೋಟೋ ಕಾಪಿ ಕಳಿಸಿದ್ದಾರೆ. ಹೊರಗಡೆ ಬಂದ ಬಳಿಕ ದಿವ್ಯ ಹಾಗರಗಿ ಪ್ರಶ್ನೆಪತ್ರಿಕೆ ತುಂಬುತ್ತಾರೆ. ಇದಕ್ಕೆ ಸಹಕಾರ ಕೊಟ್ಟ ಇನ್ವಿಜಿಲೇಟರ್‌ಗೆ 4000 ರೂಪಾಯಿ ಕೊಟ್ಟಿದ್ದಾರೆ. ಈ ಮಧ್ಯೆ ಅಕ್ರಮ ನಡೆದಿಲ್ಲ ಎಂದು ಗೃಹ ಸಚಿವರೇ ಹೇಳಿಕೆ ನೀಡಿದ್ದಾರೆ. ರಾಜಕಾರಣಿ, ಅಧಿಕಾರಿಗಳ ಬೆಂಬಲವಿಲ್ಲದೇ ಇದು ಸಾಧ್ಯವೇ? ಎಂದು ಪ್ರಶ್ನೆ ಮಾಡಿದ್ದಾರೆ.
ಒಂದು ಸೆಂಟರ್‌ನಲ್ಲಿ ಮೂರು ಕೋಟಿ ರೂಪಾಯಿ ವ್ಯವಹಾರ ನಡೆದಿದೆ. ಆದರೆ ಬೇರೆ ಕೇಂದ್ರಗಳ ಮಾಹಿತಿಯನ್ನು ಏಕೆ ನೀಡುತ್ತಿಲ್ಲ. ವಿಧಾನಸೌಧವು ವ್ಯಾಪಾರ ಸೌಧ ಆಗಿದೆ ಎಂಬುದು ಗೊತ್ತಾಗಲಿದೆ ಎಂಬ ಕಾರಣಕ್ಕೆ ಇಲ್ಲಿಯವರೆಗೂ ತನಿಖೆಗೆ ಬರಲು ಬಿಡುತ್ತಿಲ್ಲ. ಕಲಬುರಗಿಯಲ್ಲಿಯೇ ಕೇಸ್ ಮುಗಿಸುವ ಕೆಲಸ ನಡೆಯುತ್ತಿದೆ ಎಂದು ಸರ್ಕಾರದ ವಿರುದ್ಧ ಪ್ರಿಯಾಂಕ್ ಖರ್ಗೆ ಆಕ್ರೋಶ ಹೊರಹಾಕಿದರು.
ಇದನ್ನೂ ಓದಿ | ಮಳೆ ಲೆಕ್ಕಿಸದೇ ಪಿಎಸ್‌ಐ ಅಭ್ಯರ್ಥಿಗಳ ಪ್ರತಿಭಟನೆ: ಮರುಪರೀಕ್ಷೆ ದಿನಾಂಕ ಘೋಷಣೆಗೆ ಪಟ್ಟು
ಅಮೃತ ಪಾಲ್ ಹೇಳಿಕೆ ಭಯವೇಕೆ?
ನನ್ನನ್ನು ಮ್ಯಾಜಿಸ್ಟ್ರೇಟ್ ಮುಂದೆ ಹೇಳಿಕೆ ಕೊಡಲು ಅವಕಾಶ ಕೊಡಿ ಎಂದು ಅಮೃತ ಪಾಲ್ ಕೇಳಿದ್ದಾರೆ. ಅವರು ಸರ್ವಿಸ್ ರೂಲ್ ಪ್ರಕಾರ ಕೇಳಿದ್ದು, ಪಾಲ್ ಹೇಳಿಕೆಗೆ ಏಕೆ ಹೆದರಿಕೊಳ್ಳುತ್ತಿದ್ದೀರಿ? ಎಸ್‌ಡಿಎ, ಎಫ್‌ಡಿ, ಪಿಡಿಓ, ಜೆಇ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂದು ಹೇಳಿದ್ದಾರೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದ ಎಲ್ಲ ನೇಮಕಾತಿ ಬಗ್ಗೆ ತನಿಖೆ ಆಗಬೇಕು. ಎಲ್ಲ ತನಿಖೆ ನಡೆದರೆ ಅಕ್ರಮ ಮತ್ತಷ್ಟು ಹೊರಗಡೆ ಬರಲಿದೆ ಎಂದು ಪ್ರಿಯಾಂಕ್ ಹೇಳಿದ್ದಾರೆ.
ಬಿಜೆಪಿ ಕಟ್ಟಾಳು ಯತ್ನಾಳ್ ಆರೋಪ
ಆರ್‌ಎಸ್‌ಎಸ್ ಮತ್ತು ಬಿಜೆಪಿ ಕಟ್ಟಾಳು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಮಾಜಿ ಮುಖ್ಯಮಂತ್ರಿ ಮಗ ಪಿಎಸ್‌ಐ ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎಂದು ಹೇಳುತ್ತಿದ್ದಾರೆ. ನಾನು ಮಾತನಾಡಿದರೆ ನನ್ನನ್ನು ಹೇಳಿಕೆ ಕೊಡಿ ಎಂದು ಗೃಹ ಸಚಿವರು ಕರೆದರು. ಈಗ ಯತ್ನಾಳ್ ಅವರನ್ನು ಯಾವಾಗ ಕರೆದು, ಹೇಳಿಕೆ ದಾಖಲು ಮಾಡಿಕೊಳ್ಳುತ್ತೀರಿ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್‌ಗೆ ಪ್ರಶ್ನೆ ಮಾಡಿದರು.
ಇದನ್ನೂ ಓದಿ | ಪಿಎಸ್‌ಐ ನೇಮಕಾತಿ ಅಕ್ರಮ | ಇಡಿ ತನಿಖೆ ಇಲ್ಲವೆಂದ ಗೃಹ ಸಚಿವ